ಕನ್ನಡ ಚಿತ್ರರಂಗ ಇದಕ್ಕೇ ಉದ್ಧಾರ ಆಗ್ತಿಲ್ಲ: ನಟ ಪ್ರಜ್ವಲ್‌ ದೇವರಾಜ್‌ಗೆ ಟಾಂಗ್‌ ಕೊಟ್ರಾ ರಾಜ್‌ ಬಿ.ಶೆಟ್ಟಿ?

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾದ 'ಕರಾವಳಿ' (Karavali) ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿರುವ ಬೆನ್ನಲ್ಲೇ ಹೊಸದೊಂದು ವಿವಾದ ಭುಗಿಲೆದ್ದಿದೆ. ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ನಟ ಪ್ರಜ್ವಲ್ ದೇವರಾಜ್ (Prajwal Devaraj) ಅವರ ಅಭಿಮಾನಿಗಳು ಚಿತ್ರತಂಡದ ವಿರುದ್ಧ ಆಕ್ರೋಶ ಹೊರಹಾಕಿ, ಗಲಾಟೆ ನಡೆಸಿರುವುದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಇದೇ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರುವ ರಾಜ್‌ ಬಿ.ಶೆಟ್ಟಿ ಇದೇ ಕಾರಣಕ್ಕೆ ನಮ್ಮ ಇಂಡಸ್ಟ್ರಿ ಉದ್ಧಾರ ಆಗಿಲ್ಲ ಎಂದಿದ್ದಾರೆ.

ಟ್ರೈಲರ್ ರಿಲೀಸ್ ವೇಳೆ ನಡೆದಿದ್ದೇನು?

ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ನಟ ಪ್ರಜ್ವಲ್ ದೇವರಾಜ್ ಹಾಗೂ ನಿರ್ದೇಶಕ ಗುರುದತ್ ಗಾಣಿಗ ನಡುವೆ ಬಿರುಕು ಮೂಡಿದೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಇದಕ್ಕೆ ಪೂರಕವೆಂಬಂತೆ 'ಕರಾವಳಿ' ಚಿತ್ರದ ಟ್ರೈಲರ್ ಪ್ರೀಮಿಯರ್ ಕಾರ್ಯಕ್ರಮಕ್ಕೆ ನುಗ್ಗಿದ ಪ್ರಜ್ವಲ್ ಅಭಿಮಾನಿಗಳು ಚಿತ್ರತಂಡದ ವಿರುದ್ಧ ವಾಗ್ವಾದ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ನಿರ್ದೇಶಕ ಗುರುದತ್, ಅಭಿಮಾನಿಗಳ ಅತಿರೇಕದ ವರ್ತನೆಗೆ ವೇದಿಕೆಯಲ್ಲೇ ಅಸಮಾಧಾನ ಹೊರಹಾಕಿದ್ದಾರೆ.

Raj B Shetty

ರಾಜ್ ಬಿ.ಶೆಟ್ಟಿ ಎಂಟ್ರಿಯಿಂದ ಪ್ರಜ್ವಲ್‌ಗೆ ಇರಿಸುಮುರಿಸು?

ಚಿತ್ರದ ತಾರಾಗಣಕ್ಕೆ ರಾಜ್ ಬಿ.ಶೆಟ್ಟಿ ಅವರು ಸೇರ್ಪಡೆಯಾದ ಬಳಿಕವೇ ಪ್ರಜ್ವಲ್ ದೇವರಾಜ್ ಅವರಿಗೆ ಅಸಮಾಧಾನ ಶುರುವಾಯ್ತಾ? ಎಂಬ ಮಾಧ್ಯಮಗಳ ನೇರ ಪ್ರಶ್ನೆಗೆ ರಾಜ್ ಶೆಟ್ಟಿ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. "ಇಂತಹ ಬೇಡದ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾ ಕುಳಿತಿರುವುದರಿಂದಲೇ ನಮ್ಮ ಕನ್ನಡ ಚಿತ್ರರಂಗ ಇನ್ನೂ ಉದ್ಧಾರ ಆಗಿಲ್ಲ" ಎಂದು ರಾಜ್ ಶೆಟ್ಟಿ ಖಡಕ್ ಆಗಿ ಹೇಳಿದ್ದಾರೆ. "ಈ ಸಿನಿಮಾದಲ್ಲಿ ನಾನು ಮಾಡುತ್ತಿರುವುದು ಕೇವಲ ಒಂದು ಅತಿಥಿ ಪಾತ್ರ ಅಷ್ಟೇ. ಚಿತ್ರದ ಟೈಟಲ್, ಪೋಸ್ಟರ್ ಎಲ್ಲವೂ ಪ್ರಜ್ವಲ್ ದೇವರಾಜ್ ಅವರ ಹೆಸರಲ್ಲೇ ಇದೆ ಎನ್ನುವುದು ನನಗೂ ಮೊದಲೇ ಗೊತ್ತಿತ್ತು. ಅಷ್ಟಕ್ಕೂ ಈ ಪಾತ್ರಕ್ಕೆ ನಾನು ಮೊದಲ ಆಯ್ಕೆ ಆಗಿರಲಿಲ್ಲ. ನನಗಿಂತ ದೊಡ್ಡ ನಟರೊಬ್ಬರು ಈ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಅವರು ಆಗದಿದ್ದಾಗ ಕೊನೆಯಲ್ಲಿ ನಾನು ಈ ಪಾತ್ರಕ್ಕೆ ಬಂದೆ. ಹೀಗಿರುವಾಗ ನಾನು ಬಂದ ಮೇಲೆ ಇರಿಸುಮುರಿಸು ಆಯ್ತು ಅನ್ನೋದು ತಪ್ಪು" ಎಂದು ರಾಜ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

Raj B Shetty: ಸಮಾನತೆ ಬೇಡ ಎನ್ನುವವರು ಮಾನವ ವಿರೋಧಿಗಳು: ನಟ ರಾಜ್‌ ಬಿ.ಶೆಟ್ಟಿ
Raj B Shetty: ಸಮಾನತೆ ಬೇಡ ಎನ್ನುವವರು ಮಾನವ ವಿರೋಧಿಗಳು: ನಟ ರಾಜ್‌ ಬಿ.ಶೆಟ್ಟಿ

'ಸಿನಿಮಾ ಎಂಬುದು ನನಗಿಂತ ದೊಡ್ಡದು'

ಇಂಡಸ್ಟ್ರಿಯಲ್ಲಿ ನಡೆಯುವ ಪೈಪೋಟಿ ಬಗ್ಗೆ ಮಾತನಾಡಿದ ರಾಜ್ ಬಿ. ಶೆಟ್ಟಿ, "ನಾನು ಇಲ್ಲಿ ಯಾರ ಜೊತೆಗೂ ಕಾಂಪಿಟಿಷನ್ ಮಾಡಲು ಬಂದಿಲ್ಲ. ಎಲ್ಲಕ್ಕಿಂತ ಮೊದಲು ನಾನೊಬ್ಬ ಕಲಾವಿದ. ಸಿನಿಮಾ ಮಾಡೋದರ ಹಿಂದೆ ಎಷ್ಟು ಜನರ ಶ್ರಮ ಇರುತ್ತದೆ ಎಂಬುದು ನನಗೆ ಚೆನ್ನಾಗಿ ಗೊತ್ತು. ನನ್ನೊಬ್ಬನ ಹೆಸರು, ನನ್ನೊಬ್ಬನ ಪೈಪೋಟಿ ಎನ್ನುವ ವ್ಯವಸ್ಥೆಯಲ್ಲಿ ನನಗೆ ನಂಬಿಕೆಯಿಲ್ಲ. ಸಿನಿಮಾ ಎಂಬುದು ನನಗಿಂತ ದೊಡ್ಡದು" ಎಂದಿದ್ದಾರೆ.

"ಇಲ್ಲಿ ಯಾವ ಪೈಪೋಟಿ ಇದೆ? ಇದು ಕೇವಲ ನನ್ನ ಸಿನಿಮಾನಾ? ಮಿತ್ರ, ಶ್ರೀಧರ್ ಮುಂತಾದ ಹಿರಿಯ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಾನು ಅವರಿಗಿಂತ ದೊಡ್ಡ ನಟನಾ? ಅವರ ಹೆಸರು ಪೋಸ್ಟರ್‌ನಲ್ಲಿದೆಯೇ? ಇಂತಹ ವಿಷಯಗಳ ಬಗ್ಗೆ ನಾವು ಮಾತನಾಡಬೇಕಾಗಿ ಬಂದಿರುವುದೇ ನಮ್ಮ ದುರಾದೃಷ್ಟ. ನಾವು ಒಟ್ಟಾಗಿ, ಒಗ್ಗಟ್ಟಾಗಿ ಕೆಲಸ ಮಾಡದಿರುವುದೇ ನಮ್ಮ ಇಂಡಸ್ಟ್ರಿ ಉದ್ಧಾರ ಆಗದಿರಲು ಅಸಲಿ ಕಾರಣ" ಎಂದು ಬೇಸರ ಹೊರಹಾಕಿದ್ದಾರೆ.

ಹೆಸರಿಗಾಗಿ ಕಿತ್ತಾಡುವ ದಿನ ಬಂದ್ರೆ ಚಿತ್ರರಂಗ ಬಿಡ್ತೀನಿ

"ಈ ಸಿನಿಮಾದಿಂದ ಪ್ರಜ್ವಲ್ ದೇವರಾಜ್ ಅವರಿಗೆ ದೊಡ್ಡ ಹೆಸರು ಬಂದರೆ ನನಗಿಂತ ಖುಷಿಪಡುವವರು ಯಾರೂ ಇಲ್ಲ. ಕನ್ನಡದ ಮತ್ತೊಬ್ಬ ನಟ ದೊಡ್ಡ ಸ್ಟಾರ್ ಆಗಿ ಬೆಳೆದರೆ ನಾವೆಲ್ಲ ಹೆಮ್ಮೆ ಪಡಬೇಕು. ಈ ಹಿಂದೆ ನಾನು ಖಳನಾಯಕನಾಗಿ, ಕಾಮಿಡಿಯನ್ ಆಗಿ ಬೇರೆ ಸಿನಿಮಾಗಳಲ್ಲಿ ನಟಿಸಿದ್ದೇನೆ. ಅಲ್ಲೆಲ್ಲ ನನ್ನ ಕಟೌಟ್ ಹಾಕಿ, ಪೋಸ್ಟರ್‌ನಲ್ಲಿ ನನ್ನ ಹೆಸರು ಹಾಕಿ ಎಂದು ನಾನೆಂದೂ ಕೇಳಿಲ್ಲ, ನನ್ನ ಜೀವನದಲ್ಲಿ ನಾನು ಆ ಕೆಲಸ ಮಾಡುವುದೂ ಇಲ್ಲ. ಒಂದು ವೇಳೆ ಹೆಸರಿಗಾಗಿ ಆ ರೀತಿ ಕಿತ್ತಾಡುವ ದಿನ ಬಂದರೆ, ಆವತ್ತೇ ನಾನು ಚಿತ್ರರಂಗವನ್ನು ಬಿಡುತ್ತೇನೆ" ಎಂದು ರಾಜ್ ಬಿ.ಶೆಟ್ಟಿ ಹೇಳಿದ್ದಾರೆ. 'ಕರಾವಳಿ' ಟ್ರೈಲರ್ ಲಾಂಚ್ ವಿವಾದದ ನೆಪದಲ್ಲಿ ಸ್ಯಾಂಡಲ್‌ವುಡ್‌ನ ಸಮಸ್ಯೆಗಳನ್ನು ರಾಜ್ ಬಿ.ಶೆಟ್ಟಿ ಅವರು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡಿರುವುದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+