Raj B Shetty: ಸಮಾನತೆ ಬೇಡ ಎನ್ನುವವರು ಮಾನವ ವಿರೋಧಿಗಳು: ನಟ ರಾಜ್ ಬಿ.ಶೆಟ್ಟಿ
ನಟ ರಾಜ್ ಬಿ.ಶೆಟ್ಟಿ ಅಭಿನಯದ ಲ್ಯಾಂಡ್ ಲಾರ್ಡ್ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಬಗ್ಗೆ ಮಾತನಾಡುವ ವೇಳೆ, ಸಮಾನತೆ ವಿರೋಧಿಸುವ ಮನೋಭಾವವೇ ನಿಜಕ್ಕೂ ಮಾನವ ವಿರೋಧಿ ಎಂದು ನಟ ರಾಜ್ ಬಿ.ಶೆಟ್ಟಿ ಖಡಕ್‌ವಾಗಿ ಹೇಳಿದ್ದಾರೆ. ಸಮಾನತೆ ಬರಬಾರದು ಎನ್ನುವ ಯೋಚನೆಯೇ ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದು, ಸಮಾನತೆ ಅಂದರೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯ, ಅದು ಸಮಾಜಕ್ಕೆ ಅತ್ಯಂತ ಅಗತ್ಯವೂ ಹೌದು ಎಂದು ಸ್ಪಷ್ಟಪಡಿಸಿದ್ದಾರೆ.
ರಾಜಕೀಯದ ಬಣ್ಣ ಹಚ್ಚುವ ಅಗತ್ಯವಿಲ್ಲ
ಇಂತಹ ಮಹತ್ವದ ವಿಚಾರಕ್ಕೆ ರಾಜಕೀಯದ ಬಣ್ಣ ಹಚ್ಚುವ ಅಗತ್ಯವೇ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 'ಜೈಭೀಮ್' ಎಂಬ ಘೋಷಣೆಯನ್ನು ರಾಜಕೀಯ ಘೋಷಣೆಯಾಗಿ ಮಾತ್ರ ನೋಡುವ ಪ್ರವೃತ್ತಿ ಹೆಚ್ಚಾಗುತ್ತಿರುವುದರ ಬಗ್ಗೆ ರಾಜ್ ಬಿ. ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ಜೈಭೀಮ್ ಎಂದು ಕರೆಯುವುದು ಅಂಬೇಡ್ಕರ್ ಅವರ ತತ್ವ, ಆಶಯ ಮತ್ತು ಚಿಂತನೆಗಳನ್ನು ನಾವು ಯಾವ ರೀತಿಯಲ್ಲಿ ಅರ್ಥಮಾಡಿಕೊಂಡಿದ್ದೇವೆ ಎನ್ನುವುದನ್ನು ಹೆಮ್ಮೆಯಿಂದ ಒಪ್ಪಿಕೊಂಡು ಹೇಳುವ ಪ್ರತೀಕವೇ ಹೊರತು, ಅದನ್ನು ರಾಜಕೀಯವಾಗಿ ಮುದ್ರಿಸುವುದು ನೋವುಂಟುಮಾಡುತ್ತದೆ ಎಂದು ಹೇಳಿದ್ದಾರೆ.

ಮನುಷ್ಯರು ಎಂದ ಮೇಲೆ ಎಲ್ಲರೂ ಸಮಾನರು ಎಂಬ ತತ್ವವೇ ಅಂಬೇಡ್ಕರ್ ಅವರ ಚಿಂತನೆಯ ಹೃದಯಭಾಗ. ಅದೇ ಚಿಂತನೆ ಇಂದಿಗೂ ನಮ್ಮ ಸಮಾಜಕ್ಕೆ ಅಗತ್ಯವಾಗಿದೆ ಎಂದು ರಾಜ್ ಬಿ.ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಇತ್ತೀಚಿನ ಸಿನಿಮಾ 'ಲ್ಯಾಂಡ್‌ಲಾರ್ಡ್' ಕೂಡ ಸಮಾನತೆಯ ಸಂದೇಶವನ್ನೇ ಹೊತ್ತುಕೊಂಡಿದೆ ಎಂದು ಅವರು ಹೇಳಿದ್ದಾರೆ.
'ಲ್ಯಾಂಡ್‌ಲಾರ್ಡ್' ಸಿನಿಮಾ ಕೇವಲ ಮನರಂಜನೆಯ ಕಥೆಯಾಗಿಲ್ಲ; ಅದು ಸಮಾಜದಲ್ಲಿ ಇರುವ ವರ್ಗಭೇದ, ಅಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಕುರಿತಾಗಿ ಪ್ರಶ್ನೆ ಎತ್ತುತ್ತದೆ. ಸಮಾನತೆ, ಮಾನವ ಗೌರವ ಮತ್ತು ನ್ಯಾಯ ಎಂಬ ಆಶಯಗಳು ಸಿನಿಮಾದಲ್ಲಿ ಚೆನ್ನಾಗಿ ಮೂಡಿಬಂದಿವೆ ಎಂದು ರಾಜ್ ಬಿ. ಶೆಟ್ಟಿ ತಿಳಿಸಿದ್ದಾರೆ. ಈ ವಿಚಾರವನ್ನು ಪ್ರಾಮಾಣಿಕವಾಗಿ ತೆರೆಗೆ ತರುವ ಪ್ರಯತ್ನ ಯಶಸ್ವಿಯಾಗಿರುವುದರಿಂದ ತಮ್ಮಿಗೆ ವಿಶೇಷ ಸಂತೋಷವಾಗಿದೆ ಎಂದೂ ಅವರು ಹೇಳಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾಗಿರುವ ರಾಜ್ ಬಿ. ಶೆಟ್ಟಿ ನಟನೆಯ 'ಲ್ಯಾಂಡ್‌ಲಾರ್ಡ್' ಸಿನಿಮಾ ಸಮಾಜಮುಖಿ ಚಿಂತನೆಗಳ ಕಾರಣದಿಂದಲೇ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು, ಸಮಾನತೆ ಎಂಬ ಅಂಬೇಡ್ಕರ್ ಅವರ ಕನಸಿನ ಪ್ರತಿಧ್ವನಿಯಾಗಿ ಸಿನಿಮಾ ನಿಂತಿದೆ ಎಂಬ ಮಾತುಗಳು ಸಿನಿಪ್ರೇಮಿಗಳ ನಡುವೆ ಕೇಳಿಬರುತ್ತಿವೆ.
ಸಿಎಂ ಕೂಡ ಮೆಚ್ಚುಗೆ
ಈ ಸಿನಿಮಾ ಮೂಲಕ ಸಮಾಜದಲ್ಲಿರುವ ಜಾತಿ ಅಸಮಾನತೆ, ವರ್ಗಭೇದ ಹಾಗೂ ಸಾಂವಿಧಾನಿಕ ಮೌಲ್ಯಗಳ ಕುರಿತು ಬೆಳಕು ಚೆಲ್ಲುವ ದಿಟ್ಟ ಪ್ರಯತ್ನವನ್ನು ಚಿತ್ರತಂಡ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕಳಕಳಿಯನ್ನೊಳಗೊಂಡ ಕಥಾಹಂದರದ ಸಿನಿಮಾಗಳು ವಿರಳವಾಗುತ್ತಿವೆ. ಅಂಥ ಸಂದರ್ಭದಲ್ಲಿ 'ಲ್ಯಾಂಡ್ ಲಾರ್ಡ್' ಚಿತ್ರದಂತಹ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ತೆರೆಗೆ ತರುವ ಧೈರ್ಯಕ್ಕಾಗಿ ಇಡೀ ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿರುವ ಸಿಎಂ ಸಿದ್ದರಾಮಯ್ಯ, ಈ ಸಿನಿಮಾ ಕೇವಲ ಮನರಂಜನೆಗೆ ಸೀಮಿತವಾಗದೆ ಸಮಾಜಕ್ಕೆ ಒಂದು ಸಂದೇಶ ನೀಡುತ್ತದೆ ಎಂದು ಹೇಳಿದ್ದಾರೆ. 'ಲ್ಯಾಂಡ್ ಲಾರ್ಡ್' ಎಲ್ಲರೂ ನೋಡಲೇಬೇಕಾದ ಸಿನಿಮಾ. ನಾನೂ ಖಂಡಿತವಾಗಿ ಚಿತ್ರಮಂದಿರಕ್ಕೆ ತೆರಳಿ ಈ ಚಿತ್ರವನ್ನು ವೀಕ್ಷಿಸುವುದಾಗಿ ತಿಳಿಸಿದ್ದಾರೆ. ಜೊತೆಗೆ ಸಾರ್ವಜನಿಕರೂ ಈ ಸಿನಿಮಾವನ್ನು ನೋಡಿ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.
ದುನಿಯಾ ವಿಜಯ್ ನಾಯಕನಟನಾಗಿ ಅಭಿನಯಿಸಿರುವ 'ಲ್ಯಾಂಡ್ ಲಾರ್ಡ್' ಸಿನಿಮಾ ಶತದಿನೋತ್ಸವವನ್ನು ಪೂರೈಸಲಿ ಎಂದು ಹಾರೈಸಿರುವ ಅವರು, ಇಂತಹ ಇನ್ನಷ್ಟು ಅರ್ಥಪೂರ್ಣ ಮತ್ತು ಸಮಾಜಮುಖಿ ಸಿನಿಮಾಗಳು ಮೂಡಿಬರಲು ಈ ಚಿತ್ರವೇ ಪ್ರೇರಣೆಯಾಗಲಿ ಎಂದು ಆಶಿಸಿದ್ದಾರೆ.












Click it and Unblock the Notifications