Karnataka Rains: ಕರಾವಳಿ, ಒಳನಾಡು ಸೇರಿ 19 ಜಿಲ್ಲೆಗಳಿಗೆ ಭಾರೀ ಮಳೆ ಎಚ್ಚರಿಕೆ, ತುಂಗಾ-ಕೃಷ್ಣೆ ಒಳಹರಿವು ಏರಿಕೆ
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಕರಾವಳಿ ಮಾತ್ರವಲ್ಲದೇ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದೆ. ಮಂಡ್ಯ, ತುಮಕೂರು, ಮೈಸೂರು ಭಾಗದಲ್ಲೂ ಸಾಧಾರಣದಿಂದ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 5 ದಿನಗಳ ಹವಾಮಾನ ವರದಿ ಇಲ್ಲಿದೆ.
ಕಳೆದ ಒಂದು ತಿಂಗಳಿನಿಂದ ಉತ್ತಮ ಮಳೆ ಇಲ್ಲದೇ ಬರಿ ಬರಗಾಲ, ಬಿಸಿಲನ್ನೇ ಕಂಡಿದ್ದ ಉತ್ತರ ಒಳನಾಡಿನ ಭಾಗದಲ್ಲಿ ಇದೀಗ ವರುಣ ಕೃಪೆ ತೋರಿದ್ದಾನೆ. ಇಂದಿನಿಂದ ಜುಲೈ 9 ಕೆಲವೆಡೆ ಜುಲೈ 11ರವರೆಗೆ ಸಾಧಾರಣದಿಂದ ಭಾರೀ ಹಾಗೂ ಅತೀ ಭಾರೀ ಮಳೆ ನಿರೀಕ್ಷೆ ಇದೆ.

19 ಜಿಲ್ಲೆಗಳಲ್ಲಿ ಅತ್ಯಧಿಕ ಭಾರೀ ಮಳೆ
ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ವಿಜಯಪುರ, ರಾಯಚೂರು, ಬೆಳಗಾವಿ, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಸೇರಿ 11 ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಸಂಭವವಿದೆ. ಇಲ್ಲಿ ಮುಂದಿನ 48 ಗಂಟೆ ಕನಿಷ್ಠ 115 ಮಿಲಿ ಮೀಟರ್ ನಿಂದ ಗರಿಷ್ಠ 200 ಮಿಲಿ ಮೀಟರ್‌ವರೆಗೆ ಭಾರೀಯಿಂದ ಅತೀ ಭಾರಿ ಮಳೆ ಸುರಿಯಲಿದ್ದು, 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ.
ಇದೇ ಎರಡು ದಿನದ ಅವಧಿಯಲ್ಲಿ ಹಾವೇರಿ, ಗದಗ, ದಾವಣಗೆರೆ, ಬಳ್ಳಾರಿ, ಮಂಡ್ಯ, ಮೈಸೂರು, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕನಿಷ್ಠ 65 ಮಿಲಿ ಮೀಟರ್‌ನಿಂದ ಗರಿಷ್ಠ 115 ಮಿಲಿ ಮೀಟರ್‌ವರೆಗೆ ಸಾಧಾರಣದಿಂದ ಭಾರೀ ಮಳೆ ಆಗಲಿದ್ದು, ಈ 8 ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ ಎಂದು ಐಎಂಡಿ ವರದಿಯಲ್ಲಿ ತಿಳಿಸಿದೆ.
ಉತ್ತರ ಕರ್ನಾಟಕಕ್ಕೆ ಮಳೆ ಮುಂದುವರಿಕೆ?
ಜುಲೈ 8ರಿಂದ 11ರವರೆಗೆ ಕರಾವಳಿಯ ಮೂರು ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ ಸೇರಿ ಒಂದೆರಡು ಜಿಲ್ಲೆಗಳಲ್ಲಿ ಜೋರು ಮಳೆ ಆಗಲಿದೆ. ಮಳೆ ಸಮಯದಲ್ಲಿ ಗಾಳಿಯ ವೇಗ ಹೆಚ್ಚಿರಲಿದ್ದು, ಗಂಟೆಗೆ 40-60 ಕಿಲೋ ಮೀಟರ್‌ವರೆಗೂ ಬೀಸಲಿದೆ. ಮುಂಗಾರು ಚುರುಕಿಗೆ ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರ ಭಾಗದಲ್ಲಿ ಉಂಟಾಗಿರುವ ಟ್ರಫ್, ವಾಯುಭಾರ ಕುಸಿತು ಹಾಗೂ ವಾಯು ಚಂಡಮಾರುತದ ಪ್ರಸರಣ ಕಾರಣವೆಂದು ತಿಳಿಸಿದೆ.
ತುಂಗಾ ಡ್ಯಾಂ, ಕೃಷ್ಣಾ ನದಿ ಒಳಹರಿವು ಏರಿಕೆ
ಇನ್ನೂ ಪಶ್ಚಿಮ ಘಟ್ಟಗಳಲ್ಲಿ ಉತ್ತಮ ಮಳೆ ಆಗುತ್ತಿರುವ ಕಾರಣ ತುಂಗಾ ಜಲಾಶಯ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಭಾರೀ ಮಳೆ ಆಗುತ್ತಿರುವ ಕಾರಣ ಕೃಷ್ಣೆ ನದಿಯಲ್ಲಿ ಒಳಹರಿವು ಹೆಚ್ಚಾಗಿದ್ದು, ಇವೆರಡು ಡ್ಯಾಂಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗುತ್ತಿದೆ. ಬರ ಬೀತಿಯಲ್ಲಿದ್ದ ನಾಡಿನ ಜನರಿಗೆ ಗುಡ್‌ನ್ಯೂಸ್ ಸಿಕ್ಕಂತಾಗಿದೆ. ತುಂಗಾ ಪ್ರಸ್ತುತ ನೀರಿನ ಮಟ್ಟ 588 ಮೀಟರ್ ತಲುಪಿದೆ. ಘಟಪ್ರಭಾ ನದಿಗೆ 1600ಕ್ಯೂಸೆಕ್ ನೀರು ಹರಿದು ಬಂದಿದೆ. ಭಾನುವಾರ ಕೃಷ್ಣೆಗೆ 55 ಸಾವಿರ ಕ್ಯೂಸೆಕ್ ಒಳಹರಿವು ಏರಿಕೆ ಆಗಿದೆ. ಮಳೆ ಹೀಗೆ ಮುಂದುವರಿದರೆ ಇತರ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗುವ ನಿರೀಕ್ಷೆ ಇದೆ.
ಬೆಂಗಳೂರು ಹವಾಮಾನ ಮುನ್ಸೂಚನೆ
ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಒಂದು ವಾರ ತಂಪು ವಾತಾವರಣ, ಸಾಮಾನ್ಯ ಬಿಸಿಲು ಕಂಡು ಬರಲಿದ್ದು, ನಗರಕ್ಕೆ ಭಾರೀ ಮಳೆ ನಿರೀಕ್ಷೆ ಸದ್ಯಕ್ಕಿಲ್ಲ. ನಗರದ ಕೆಲವೆಡೆ ಹಗುರ ಮಳೆ ಅಲ್ಲಲ್ಲಿ ಕಾಣಬಹುದು. ಉಳಿದಂತೆ ನಗರದ ಗರಿಷ್ಠ ತಾಪಮಾನ 29-31 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20-21 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.














Click it and Unblock the Notifications