ಭಾರತ ಟಿ20 ತಂಡದಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟಿದಾರ್.. ಇರ್ಫಾನ್ ಪಠಾಣ್ ಬಿಗ್ ಸ್ಟೇಟ್‌ಮೆಂಟ್
Irfan Pathan: ಇದೀಗ ಸದ್ಯ ಭಾರತ ಹಾಗೂ ಇಂಗ್ಲೆಂಡ್ ನಡುವೆ ಟಿ20 ಸರಣಿ ನಡೆಯುತ್ತಿದೆ. ಈ ನಡುವೆಯೇ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಇರ್ಫಾನ್ ಪಠಾಣ್ ಅವರು ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಸೇರ್ಪಡೆ ಬಗ್ಗೆ ಭಾರತ ತಂಡದ ಮ್ಯಾನೇಜ್‌ಮೆಂಟ್‌ಗೆ ಮಹತ್ವದ ಸಲಹೆಯನ್ನು ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡದ ಬ್ಯಾಟಿಂಗ್ ಸಂಯೋಜನೆ ಮತ್ತು ತಂಡದ ಸಮತೋಲನದ ಕುರಿತು ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆ ಶುರುವಾಗಿದೆ. ಮಾಜಿ ಕ್ರಿಕೆಟರ್ ಇರ್ಫಾನ್ ಪಠಾಣ್ ಅವರು ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಪ್ರಮುಖ ಸಲಹೆಯೊಂದನ್ನು ನೀಡಿದ್ದು, ತಂಡದಲ್ಲಿ ಉತ್ತಮ ಸಮತೋಲನ ತರಲು ಬಲಗೈ ಬ್ಯಾಟರ್ ರಜತ್ ಪಾಟೀದಾರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಯೋಚಿಸಬೇಕು ಎಂದು ಹೇಳಿದ್ದಾರೆ.

ಎಡಗೈ ಬ್ಯಾಟರ್‌ಗಳ ಸಂಖ್ಯೆ ಹೆಚ್ಚಳ
ಶನಿವಾರ (ಜುಲೈ 04) ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು ತನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಬರೋಬ್ಬರಿ ಏಳು ಮಂದಿ ಎಡಗೈ ಬ್ಯಾಟರ್‌ಗಳನ್ನು ಕಣಕ್ಕಿಳಿಸಿತ್ತು. ಇದರಲ್ಲಿ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಕೂಡ ಸೇರಿದ್ದಾರೆ. ಈಗಾಗಲೇ ಎಡಗೈ ಆಟಗಾರರಿಂದ ತುಂಬಿರುವ ಭಾರತದ ಟಾಪ್ ಆರ್ಡರ್‌ಗೆ ಮತ್ತೊಬ್ಬ ಲೆಫ್ಟ್ ಹ್ಯಾಡರ್ ಸೇರ್ಪಡೆ ಆಗಿದ್ದರು.
ರಜತ್ ಪಾಟೀದಾರ್ ಆಯ್ಕೆ ಕುರಿತು ಮಹತ್ವದ ಹೇಳಿಕೆ
ಈ ಬ್ಯಾಟಿಂಗ್ ಲೈನ್‌ಅಪ್ ತಕ್ಷಣದ ಆತಂಕದ ವಿಷಯ ಅಲ್ಲದಿದ್ದರೂ, ಮುಂಬರುವ ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡವನ್ನು ಸಿದ್ಧಪಡಿಸುವ ದೃಷ್ಟಿಯಿಂದ ಬಲಗೈ ಬ್ಯಾಟಿಂಗ್ ಆಯ್ಕೆಗಳ ಕೊರತೆ ಎದ್ದುಕಾಣುತ್ತಿದೆ ಎಂದು ಪಠಾಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದಲೇ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಉತ್ತಮ ಆಯ್ಕೆ ಆಗಬಲ್ಲರು ಎಂದು ಸಲಹೆ ನೀಡಿದ್ದಾರೆ.
'ಪಾಟಿದಾರ್‌ಗೆ ಶೀಘ್ರದಲ್ಲೇ ಅವಕಾಶ ಸಿಗಲಿದೆ'
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಇರ್ಫಾನ್ ಪಠಾಣ್ ಅವರು, 'ಪ್ರಸ್ತುತ ಭಾರತೀಯ ಟಿ20 ತಂಡದಲ್ಲಿರುವ ಎಡಗೈ ಬ್ಯಾಟರ್‌ಗಳ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಟೀಮ್ ಇಂಡಿಯಾ ಮುಂದಿನ ದಿನಗಳಲ್ಲಿ ರಜತ್ ಪಾಟೀದಾರ್ ಅವರತ್ತ ಗಮನ ಹರಿಸಲೇಬೇಕಿದೆ. ಮುಂಬರುವ ಟಿ20 ವಿಶ್ವಕಪ್‌ಗೂ ಮುನ್ನ ಈ ಬದಲಾವಣೆ ತರಲು ಇನ್ನೂ ಸಾಕಷ್ಟು ಸಮಯಾವಕಾಶವಿದೆ. ಪಾಟಿದಾರ್‌ಗೆ ಶೀಘ್ರದಲ್ಲೇ ಅವಕಾಶ ಸಿಗಲಿದೆ,' ಎಂದು ನಾನು ಭಾವಿಸುತ್ತೇನೆ,' ಎಂದು ತಿಳಿಸಿದ್ದಾರೆ.
ಉತ್ತಮ ಅಂಕಿ-ಅಂಶಗಳನ್ನು ಹೊಂದಿದ ಆರ್‌ಸಿಬಿ ನಾಯಕ
33 ವರ್ಷದ ರಜತ್ ಪಾಟೀದಾರ್ ಇತ್ತೀಚಿನ ಐಪಿಎಲ್ 2026ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಯಶಸ್ವಿ ನಾಯಕರಾಗಿ ಮುನ್ನಡೆಸಿದ ಕೀರ್ತಿ ಹೊಂಡಿದ್ದಾರೆ. ಸತತ ಎರಡನೇ ಬಾರಿಗೆ ತಂಡಕ್ಕೆ ಪ್ರಶಸ್ತಿ ತಂದುಕೊಡುವ ಮೂಲಕ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಅವರು ಸಾಬೀತುಪಡಿಸಿದ್ದಾರೆ. ಆ ಟೂರ್ನಿಯಲ್ಲಿ 14 ಇನ್ನಿಂಗ್ಸ್‌ಗಳಿಂದ 192.69ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 501ರನ್ ಗಳಿಸುವ ಮೂಲಕ ಗಮನಾರ್ಹ ಪ್ರದರ್ಶನ ನೀಡಿದ್ದರು.
ಅಲ್ಲದೆ ಭಾರತದ ಪರ ಈಗಾಗಲೇ 3 ಟೆಸ್ಟ್ ಮತ್ತು ಒಂದು ಏಕದಿನ ಪಂದ್ಯವನ್ನು ಆಡಿರುವ ಅವರಿಗೆ ಇನ್ನೂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಅವಕಾಶ ಸಿಕ್ಕಿಲ್ಲ. ಅವರ ಒಟ್ಟಾರೆ ದೇಶಿ ಟಿ20 ದಾಖಲೆಯೂ ಅದ್ಭುತವಾಗಿದ್ದು, 106 ಇನ್ನಿಂಗ್ಸ್‌ಗಳಿಂದ 160.08 ರ ಸ್ಟ್ರೈಕ್ ರೇಟ್‌ನಲ್ಲಿ 3,389 ರನ್‌ಗಳ ಕಲೆಹಾಕಿದ್ದಾರೆ.
ಇಂಗ್ಲೆಂಡ್ ವಿರುದ್ಧ ಭಾರತ ಸೋಲು
ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್‌ಗಳ ಸೋಲನುಭವಿಸಿದ ಬಳಿಕ ಬ್ಯಾಟಿಂಗ್ ಸಂಯೋಜನೆಯ ಬಗ್ಗೆ ಟೀಕೆಗಳು ಕೇಳಿಬಂದಿವೆ. ಈ ಸೋಲಿನೊಂದಿಗೆ ಇಂಗ್ಲೆಂಡ್ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಅಲ್ಲದೆ ಇದು ಭಾರತ ಆಡಿರುವ ಇತ್ತೀಚಿನ ನಾಲ್ಕು ಟಿ20 ಪಂದ್ಯಗಳಲ್ಲಿ ಅನುಭವಿಸಿದ 3ನೇ ಸೋಲಾಗಿದೆ.
ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ತಂಡವು ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಾಯಕ ಅಯ್ಯರ್ ಮತ್ತು ಕೊನೆಯಲ್ಲಿ ತಿಲಕ್ ವರ್ಮಾ ಅವರ ಉಪಯುಕ್ತ ಕೊಡುಗೆಯಿಂದ 190/7 ರನ್ ಗಳಿಸಿತ್ತು. ಆದರೆ ಇಂಗ್ಲೆಂಡ್ ತಂಡವು ಜೇಕಬ್ ಬೆಥೆಲ್ (ಅಜೇಯ 76) ಮತ್ತು ಹ್ಯಾರಿ ಬ್ರೂಕ್ (39) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಗುರಿಯನ್ನು ತಲುಪಿತು.
ಇಂಗ್ಲೆಂಡ್‌ನ ಬೌಲಿಂಗ್ ವಿಭಾಗದಲ್ಲಿ ಸ್ಯಾಮ್ ಕರನ್, ಜೋಫ್ರಾ ಆರ್ಚರ್ ಮತ್ತು ವಿಲ್ ಜಾಕ್ಸ್ ಅವರ ಶಿಸ್ತುಬದ್ಧ ಬೌಲಿಂಗ್ ದಾಳಿ ಕೂಡ ಭಾರತದ ರನ್ ವೇಗವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಈ ಹಿನ್ನೆಲೆಯಲ್ಲಿ ತಂಡದ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಬದಲಾವಣೆ ತರಲು ಪಠಾಣ್ ಆಗ್ರಹಿಸಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಮ್ಯಾನೇಜ್‌ಮೆಂಟ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ.












Click it and Unblock the Notifications