ಬೆಂಗಳೂರಿನ ಕಸ ಎತ್ತೋಕಾಗಲ್ಲ, ಬೀದಿ ವ್ಯಾಪಾರಿಗಳ ಮೇಲೆ ದಬ್ಬಾಳಿಕೆ ಮಾಡ್ತೀರಾ? ವಾಟಾಳ್ ನಾಗರಾಜ್ ಗರಂ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಜಿಬಿಎ ಹಾಗೂ ಸರ್ಕಾರದ ವತಿಯಿಂದ ನಡೆಯುತ್ತಿರುವ ಬೀದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಯ ವಿರುದ್ಧ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಕೃಷ್ಣ ಬೈರೇಗೌಡರ ವಿರುದ್ಧ ನೇರ ವಾಗ್ದಾಳಿ ನಡೆಸಿರುವ ಅವರು, ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ಸರ್ಕಾರದ ಈ ನೀತಿ ಸರ್ವಾಧಿಕಾರ ಧೋರಣೆ ಎಂದು ಕಿಡಿಕಾರಿದ್ದಾರೆ.
"ನಮ್ಮ ರಾಜ್ಯದಲ್ಲಿ ಪ್ರಜಾಪ್ರಭುತ್ವ ಎಲ್ಲಿದೆ?"
ಬೆಂಗಳೂರಿನ ಬೀದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಖಂಡಿಸಿ ಮಾತನಾಡಿರುವ ವಾಟಾಳ್ ನಾಗರಾಜ್, "ನಮ್ಮ ರಾಜ್ಯದಲ್ಲಿ ಸದ್ಯ ಪ್ರಜಾಪ್ರಭುತ್ವ ಎನ್ನುವುದು ಜೀವಂತವಾಗಿದೆಯೇ? ಇಡೀ ಬೆಂಗಳೂರು ನಗರದಲ್ಲಿ ಬಡವರು, ತರಕಾರಿ ಮಾರುವವರು ಹಾಗೂ ದೈನಂದಿನ ಬದುಕಿಗಾಗಿ ಮಾರುಕಟ್ಟೆಯಲ್ಲಿ ಬಡ್ಡಿಗೆ ಹಣ ತಂದು ವ್ಯಾಪಾರ ಮಾಡುವ ಸಾವಿರಾರು ಜನ ಮೊದಲಿನಿಂದಲೂ ಬೀದಿ ಬದಿಯಲ್ಲೇ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಈಗ ನೀವು ಮಂತ್ರಿಯಾಗುತ್ತಿದ್ದಂತೆಯೇ, ನನ್ನ ದರ್ಪ ನೋಡಿ ಎಂದು ಅಧಿಕಾರದ ಅಹಂ ಪ್ರದರ್ಶಿಸಲು ಹೊರಟಿದ್ದೀರಾ?" ಎಂದು ಸಚಿವ ಕೃಷ್ಣ ಬೈರೇಗೌಡರನ್ನು ಖಾರವಾಗಿ ಪ್ರಶ್ನಿಸಿದ್ದಾರೆ.

"ಜೆಸಿಬಿ ತಂದು ಬಡವರ ಬದುಕು ಧ್ವಂಸ ಮಾಡ್ತಿದ್ದೀರಿ"
ಸರ್ಕಾರದ ಏಕಪಕ್ಷೀಯ ಕ್ರಮದ ವಿರುದ್ಧ ಆಕ್ರೋಶ ಮುಂದುವರಿಸಿದ ಅವರು, "ಯಾವುದೇ ಮುನ್ಸೂಚನೆ ನೀಡದೆ ಒಮ್ಮೆಗೆ ಜೆಸಿಬಿಗಳನ್ನು ತಂದು ಬಡವರ ಅಂಗಡಿ ಮುಂಗಟ್ಟುಗಳನ್ನು ಹೊಡೆದು ಉರುಳಿಸುತ್ತಿದ್ದೀರಿ. ಆ ಪಾಪದ ಜನರಿಗೆ ತಮ್ಮ ಅಳಲನ್ನು ತೋಡಿಕೊಳ್ಳಲು ಸಹ ನೀವು ಅವಕಾಶ ನೀಡುತ್ತಿಲ್ಲ. ವ್ಯಾಪಾರಿಗಳಿಗೆ ಕನಿಷ್ಠಪಕ್ಷ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕಲ್ಪಿಸದ ನೀವು, ಅವರ ಜೀವನೋಪಾಯದ ವಸ್ತುಗಳನ್ನು ಬಲವಂತವಾಗಿ ಕಿತ್ತು ಬೀದಿಗೆ ಎಸೆಯುತ್ತಿದ್ದೀರಿ. ಇದು ಅಪ್ಪಟ ಸರ್ವಾಧಿಕಾರ ಮತ್ತು ದಬ್ಬಾಳಿಕೆಯಾಗಿದೆ. ಬೆಂಗಳೂರಿನ ಮೂಲೆ ಮೂಲೆಯಲ್ಲಿರುವ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ನಿಮ್ಮ ಕೈಲಾಗುತ್ತಿಲ್ಲ, ಆದರೆ ಹೊಟ್ಟೆಪಾಡಿಗಾಗಿ ದುಡಿಯುವ ಬಡ ಬೀದಿ ವ್ಯಾಪಾರಿಗಳ ಮೇಲೆ ನಿಮ್ಮ ಶಕ್ತಿ ತೋರಿಸುತ್ತಿದ್ದೀರಿ" ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಈ ದೌರ್ಜನ್ಯದ ಹೊಣೆ ಹೊತ್ತು ಬೆಂಗಳೂರು ಮಂತ್ರಿ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸೋಮವಾರ ಬೆಂಗಳೂರಿನಲ್ಲಿ 'ಗುದ್ದಲಿ ಚಳುವಳಿ'
ಸರ್ಕಾರದ ಈ ಜೆಸಿಬಿ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಲು ವಾಟಾಳ್ ನಾಗರಾಜ್ ಅವರು ಈಗ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ. "ಬಡವರ ಮೇಲಿನ ಈ ದೌರ್ಜನ್ಯವನ್ನು ಖಂಡಿಸಿ ಸೋಮವಾರ ಮಧ್ಯಾಹ್ನ ಬೆಂಗಳೂರಿನ ಪ್ರಮುಖ ಕೇಂದ್ರವಾದ ಮೈಸೂರು ಬ್ಯಾಂಕ್ ವೃತ್ತದಲ್ಲಿ 'ಜೆಸಿಬಿ ದೌರ್ಜನ್ಯ ಬೇಡ' ಎಂಬ ಘೋಷಣೆಯೊಂದಿಗೆ ಹಕ್ಕೊತ್ತಾಯ ಮಂಡಿಸಲು ವಿಭಿನ್ನ ಶೈಲಿಯ 'ಗುದ್ದಲಿ ಚಳುವಳಿ'ಯನ್ನು ಹಮ್ಮಿಕೊಂಡಿದ್ದೇವೆ" ಎಂದು ಅವರು ಪ್ರಕಟಿಸಿದ್ದಾರೆ. ಬೆಂಗಳೂರಿನ ಸೌಂದರ್ಯೀಕರಣ ಹಾಗೂ ಒತ್ತುವರಿ ತೆರವು ಹೆಸರಿನಲ್ಲಿ ಬಡವರ ಬದುಕನ್ನು ಬೀದಿಗೆ ತಳ್ಳುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲೂ ಅಸಮಾಧಾನ ವ್ಯಕ್ತವಾಗುತ್ತಿದ್ದು, ಸೋಮವಾರ ನಡೆಯಲಿರುವ ವಾಟಾಳ್ ನಾಗರಾಜ್ ಅವರ ಈ ಪ್ರತಿಭಟನೆ ತೀವ್ರ ಕುತೂಹಲ ಮೂಡಿಸಿದೆ.












Click it and Unblock the Notifications