2028ಕ್ಕೆ ಕರ್ನಾಟಕದಲ್ಲಿ 2029ರಲ್ಲಿ ದೇಶದಲ್ಲಿ ಈ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ: ಡಿ.ಕೆ ಶಿವಕುಮಾರ್
2028 ಹಾಗೂ 2029 ರಲ್ಲೂ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದ ಪಕ್ಕದ ಮೈದಾನದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆ ಉದ್ಘಾಟನೆಯ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಭೆಯನ್ನುದ್ದೇಶಿಸಿ ಮಾತನಾಡಿರುವ ಅವರು, ಎಲ್ಲಾ ಶೋಷಿತರಿಗೂ ಬೆಳಕು ನೀಡಿದವರು ಬಾಬಾ ಸಾಹೇಬರು ಎಂದಿದ್ದಾರೆ.
ಮುಂದುವರಿದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೇವಲ ಒಂದು ವರ್ಗದ ನಾಯಕರಾಗಿ ಹೋರಾಟ ಮಾಡಲಿಲ್ಲ. ಅವರು ಎಲ್ಲಾ ಶೋಷಿತ ವರ್ಗಕ್ಕೂ ಬೆಳಕು ನೀಡಿದರು. ಭಾರತದ ಪ್ರಜೆಗಳು ಸಮಾನತೆಯಿಂದ ಬದುಕಲು ರೂಪುರೇಷೆ ನೀಡಿದ ಧೀಮಂತ ನಾಯಕ ಅವರಾಗಿದ್ದಾರೆ. ಜನರ ಪರವಾಗಿ ಧ್ವನಿ ಎತ್ತುವುದನ್ನು ಅಂಬೇಡ್ಕರ್ ಅವರು ನಮಗೆ ಕಲಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಅಂದಿನ ಕಾಲದಲ್ಲೇ ಅಂಬೇಡ್ಕರ್ ಅವರನ್ನು ಕಾನೂನು ಸಚಿವರನ್ನಾಗಿ ಮಾಡಿ ದೇಶ ಕಟ್ಟುವ ಮುಂದಾಳತ್ವ ನೀಡಿತು. ಅವರ ನೇತೃತ್ವದಲ್ಲಿ ಸಂವಿಧಾನವು ಈ ದೇಶಕ್ಕೆ ಕೊಡುಗೆಯಾಗಿ ಸಿಕ್ಕಿತು. ಭೀಮಾಬಾಯಿಯವರು ಕೇವಲ ಮಗುವಿಗೆ ಜನ್ಮ ನೀಡಲಿಲ್ಲ; ನಮ್ಮ ರಾಷ್ಟ್ರದ ಹಾಗೂ ಜನರ ಏಳಿಗೆಗೆ ಸಂವಿಧಾನವನ್ನು ಕೊಟ್ಟ ಮಹಾ ಶಕ್ತಿಗೆ ಜನ್ಮ ನೀಡಿದರು.

DK Shivakumar: ಮುಂದಿನ ಬಾರಿಯೂ ಕಾಂಗ್ರೆಸ್ ಅಧಿಕಾರಕ್ಕೆ
ನಮಗೆ 136 ಸ್ಥಾನಗಳನ್ನು ನೀಡಿ ಈ ರಾಜ್ಯದ ಆಡಳಿತ ನಡೆಸಲು ಜನ ಅವಕಾಶ ಮಾಡಿಕೊಟ್ಟಿದ್ದಾರೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮೂರು ವರ್ಷ ಕೆಲಸ ಮಾಡಿದ್ದೇವೆ. ಎಲ್ಲರಿಗೂ ಅತ್ಯುತ್ತಮ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ಮುಂದಿನ ಎರಡು ವರ್ಷ ಅಷ್ಟೇ ಅಲ್ಲ, 2028 ಹಾಗೂ 2029 ರಲ್ಲೂ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಸಂವಿಧಾನ ಸೇರಿದಂತೆ ಹಲವಾರು ಕೊಡುಗೆಗಳನ್ನು ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ನೀಡಿದೆ. ಇದರಿಂದಾಗಿ ಸಮಾಜದಲ್ಲಿ ಸಮಾನತೆ ಸಾಧಿಸಲು ಸಾಧ್ಯವಾಗಿದೆ. ಹಿಂದೆ ಮಹಾತ್ಮ ಗಾಂಧಿಯವರು ಕುಳಿತಿದ್ದ ಜಾಗದಲ್ಲಿ, ಇಂದು ಈ ರಾಜ್ಯದ ಹಿಂದುಳಿದ ಪ್ರದೇಶದಿಂದ ಜನಪ್ರತಿನಿಧಿಯಾಗಿ ಆಯ್ಕೆಯಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಕುಳಿತಿದ್ದಾರೆ. 371(ಜೆ) ತಿದ್ದುಪಡಿ ಮೂಲಕ ಕಲ್ಯಾಣ ಕರ್ನಾಟಕದ ಜನತೆಯ ಉದ್ಧಾರಕ್ಕೆ ಮುನ್ನುಡಿ ಬರೆದವರು ಅವರು. ಅಲ್ಲಿನ ಜನರ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದು ಸಾಕ್ಷಿಗುಡ್ಡೆಯಾಗಿ ನಿಂತಿದ್ದಾರೆ.
ಮಹಾತ್ಮ ಗಾಂಧೀಜಿಯವರ ಪುತ್ಥಳಿಯ ಜೊತೆಯಲ್ಲೇ ಇವತ್ತು ಬಾಬಾಸಾಹೇಬರ ಪುತ್ಥಳಿಯನ್ನೂ ನಾವು ಈ ದೇಶದ ಉದ್ದಗಲಕ್ಕೂ ಕಾಣುತ್ತಿದ್ದೇವೆ. ನಾನು ಪ್ರತಿ ಬಾರಿಯೂ ಹೇಳುತ್ತೇನೆ, ಅಂಬೇಡ್ಕರ್ ಅವರನ್ನು ಯಾವುದೇ ಒಂದು ಜಾತಿ ಅಥವಾ ವರ್ಗಕ್ಕೆ ಸೀಮಿತಗೊಳಿಸಬಾರದು. ಇಡೀ ದೇಶಕ್ಕೆ ಸಮಾನತೆಯನ್ನು ಕೊಟ್ಟಂತಹ ನಾಯಕರು ಅವರು. ಎಲ್ಲಾ ವರ್ಗಕ್ಕೂ ನಾಯಕರಾಗಿ ಬೆಳಕು ತಂದವರು ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.












Click it and Unblock the Notifications