ಅಪ್ಪ-ಅಮ್ಮನ ಜೊತೆ ಕೂತು ನೋಡಲಾರದ ಸಿನಿಮಾ ನಾನ್‌ ಮಾಡಲ್ಲ: ಟಾಕ್ಸಿಕ್ ವಿವಾದದ ನಡುವೆ ಯಶ್‌ ಮಾತು ನೆನಪಿಸಿದ ಫ್ಯಾನ್ಸ್‌

ರಾಕಿಂಗ್ ಸ್ಟಾರ್ ಯಶ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' (Toxic) ಬಿಡುಗಡೆಗೆ ಸಜ್ಜಾಗುತ್ತಿದೆ. ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಅವರಂತಹ ನಾಯಕಿಯರ ದಂಡೇ ಇರುವ ಈ ಚಿತ್ರದ ಟೀಸರ್ ಮತ್ತು ಇತ್ತೀಚಿನ ರಿಲೀಸ್ ಡೇಟ್ ಅನೌನ್ಸ್‌ಮೆಂಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದೇ ವೇಳೆ ಚಿತ್ರದಲ್ಲಿನ ಕೆಲವು ಬೋಲ್ಡ್ ಕಂಟೆಂಟ್ ನೋಡಿ ಬೇಸರಗೊಂಡಿರುವ ಕೆಲವರು, ಯಶ್ ಅವರಿಗೆ ಅವರದ್ದೇ ಹಳೆಯ ಸಂದರ್ಶನವೊಂದರಲ್ಲಿ ಆಡಿದ್ದ ಮಾತನ್ನು ನೆನಪಿಸಿ ಟ್ರೋಲ್ ಮಾಡುತ್ತಿದ್ದಾರೆ.

'ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಲು ನಡುಕವಿತ್ತು'

'ಕೆಜಿಎಫ್' ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸುವ ಮುನ್ನವೇ ಯಶ್ ಅವರು ಕರ್ನಾಟಕದಲ್ಲಿ 'ಗೂಗ್ಲಿ', 'ಗಜಕೇಸರಿ', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾಗಳ ಮೂಲಕ ರಾಕಿಂಗ್ ಸ್ಟಾರ್ ಆಗಿ ಮಿಂಚಿದ್ದರು. ಆ ಸಮಯದಲ್ಲಿ ಅವರು ರಮೇಶ್ ಅರವಿಂದ್ ನಡೆಸಿಕೊಡುವ ಜನಪ್ರಿಯ ಟಾಕ್ ಶೋ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ ಶೋನಲ್ಲಿ ಮಾತನಾಡಿದ್ದ ಯಶ್, ತಮಗೆ ಆರಂಭದಲ್ಲಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಲು ತೀವ್ರ ಮುಜುಗರ ಮತ್ತು ನಡುಕವಿತ್ತು ಎಂದಿದ್ದರು. "ನಾನು ಅಂತಹ ದೃಶ್ಯಗಳಲ್ಲಿ ಚೆನ್ನಾಗಿ ನಟಿಸುತ್ತೇನೆ ಎಂದು ಜನರು ಹೇಳಿದಾಗ ನನಗೆ ಆಶ್ಚರ್ಯವಾಗುತ್ತಿತ್ತು. ಯಾಕಂದರೆ ಅಂತಹ ದೃಶ್ಯಗಳ ಶೂಟಿಂಗ್ ವೇಳೆ ನಾನು ಸಿಕ್ಕಾಪಟ್ಟೆ ನರ್ವಸ್ ಆಗುತ್ತಿದ್ದೆ. ನಾನು ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವುದನ್ನು ನೋಡಿ ಸೆಟ್‌ನಲ್ಲಿದ್ದವರು, ಪ್ರಮುಖವಾಗಿ ರಾಧಿಕಾ ಕೂಡ ನಗುತ್ತಿದ್ದರು" ಎಂದು ಯಶ್ ಹೇಳಿದ್ದರು.

Yash

ಯಶ್ ಹಾಕಿಕೊಂಡಿದ್ದ ಆ ಒಂದು ಕಠಿಣ ನಿಯಮ

ಅದೇ ಸಂದರ್ಶನದಲ್ಲಿ ಯಶ್ ಅವರು ತಾವು ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಪಾಲಿಸುವ ಒಂದು ಮುಖ್ಯ ಸೂತ್ರವನ್ನು ಬಿಚ್ಚಿಟ್ಟಿದ್ದರು. "ನಾನು ಇಂದಿಗೂ ಒಂದು ನಿಯಮವನ್ನು ಪಾಲಿಸುತ್ತೇನೆ. ಯಾವುದೇ ಒಂದು ಸಿನಿಮಾದ ದೃಶ್ಯವನ್ನು ನನ್ನ ತಂದೆ-ತಾಯಿಯ ಜೊತೆ ಒಂದೇ ಕೋಣೆಯಲ್ಲಿ ಕುಳಿತು ನೋಡಲು ನನಗೆ ಮುಜುಗರ ಎನಿಸಿದರೆ, ಅಂತಹ ದೃಶ್ಯದಲ್ಲಿ ನಾನು ಖಂಡಿತ ನಟಿಸುವುದಿಲ್ಲ. ಯಾಕಂದರೆ ನನಗೆ ಕಂಫರ್ಟ್ ಇಲ್ಲದ ದೃಶ್ಯಗಳು ಪ್ರೇಕ್ಷಕರಿಗೂ ಮುಜುಗರ ಉಂಟುಮಾಡುತ್ತವೆ" ಎಂದು ಯಶ್ ಹೇಳಿದ್ದರು.

ತಮ್ಮ ಕರಿಯರ್‌ನ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದ ಯಶ್, "ಧಾರಾವಾಹಿಯ ಮೊದಲ ಸೀನ್‌ನಲ್ಲೇ ನಾಯಕಿಯ ಸೀರೆ ಎಳೆಯುವ ದೃಶ್ಯವಿತ್ತು. ನಾನು ಗಾಬರಿಯಾಗಿದ್ದೆ. ಆಗ ನಾಯಕಿಯರೇ ಬಂದು ಇದು ಕೇವಲ ನಟನೆ ಅಷ್ಟೇ ಎಂದು ಧೈರ್ಯ ತುಂಬುತ್ತಿದ್ದರು. ನನ್ನ ರೊಮ್ಯಾಂಟಿಕ್ ನಟನೆ ನೋಡಿ ನನ್ನ ತಾಯಿ ಕೂಡ ಬೇಸರ ಮಾಡಿಕೊಂಡು, ನಿನಗೆ ರೊಮ್ಯಾನ್ಸ್ ಮಾಡೋಕೆ ಬರಲ್ಲ ಎನ್ನುತ್ತಿದ್ದರು" ಎಂದು ನಗುತ್ತಾ ಹೇಳಿದ್ದರು.

Toxic ಅಪ್‌ಡೇಟ್ ಕೊಟ್ಟ ಯಶ್‌: ವೈರಲ್‌ ಆಯ್ತು ಪೋಸ್ಟ್, ಅಭಿಮಾನಿಗಳ ಸಂಭ್ರಮಾಚರಣೆ ಶುರು
Toxic ಅಪ್‌ಡೇಟ್ ಕೊಟ್ಟ ಯಶ್‌: ವೈರಲ್‌ ಆಯ್ತು ಪೋಸ್ಟ್, ಅಭಿಮಾನಿಗಳ ಸಂಭ್ರಮಾಚರಣೆ ಶುರು

ನಂತರ ರೊಮ್ಯಾಂಟಿಕ್ ದೃಶ್ಯಗಳನ್ನು ಕಲಿಯಲು ಯಶ್ ವಿಭಿನ್ನ ಕಸರತ್ತು ನಡೆಸಿದ್ದರಂತೆ. "ನಾನು ಪ್ರೇಮಿಗಳು ಹೇಗೆ ಮಾತನಾಡುತ್ತಾರೆ, ಅವರ ಹಾವಭಾವ ಹೇಗಿರುತ್ತದೆ ಎಂದು ತಿಳಿಯಲು ತಲೆಗೆ ಹೆಲ್ಮೆಟ್ ಧರಿಸಿ ಗಂಟೆಗಟ್ಟಲೆ ಪಾರ್ಕ್‌ಗಳಲ್ಲಿ ಕುಳಿತು ಗಮನಿಸುತ್ತಿದ್ದೆ. ಅಷ್ಟೇ ಅಲ್ಲ, ಮನೆಯಲ್ಲಿ ನನ್ನ ತಾಯಿಯ ಎದುರೇ ರೊಮ್ಯಾಂಟಿಕ್ ದೃಶ್ಯಗಳ ಪ್ರಾಕ್ಟೀಸ್ ಮಾಡುತ್ತಿದ್ದೆ, ಆಗ ಅವರು ನನ್ನನ್ನು ಗದರಿಸಿ ಓಡಿಸುತ್ತಿದ್ದರು. ಹೀಗೆ ಕಷ್ಟಪಟ್ಟು ರೋಮ್ಯಾನ್ಸ್ ಕರಗತ ಮಾಡಿಕೊಂಡೆ" ಎಂದು ಯಶ್ ಹಂಚಿಕೊಂಡಿದ್ದರು.

'ಟಾಕ್ಸಿಕ್' ಚಿತ್ರಕ್ಕೆ ಎದುರಾಯ್ತಾ ವಿರೋಧ?

ಅಂದು ಪೋಷಕರ ಜೊತೆ ಕೂತು ನೋಡುವಂತಹ ಸಿನಿಮಾಗಳನ್ನಷ್ಟೇ ಮಾಡುತ್ತೇನೆ ಎಂದಿದ್ದ ಯಶ್, ಈಗ 'ಟಾಕ್ಸಿಕ್' ಚಿತ್ರದಲ್ಲಿ ಅತಿಯಾದ ಬೋಲ್ಡ್ ದೃಶ್ಯಗಳಿಗೆ ಒಪ್ಪಿಗೆ ನೀಡಿರುವುದು ಅವರ ಹಳೆಯ ತತ್ವಕ್ಕೆ ವಿರುದ್ಧವಾಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. 'ಟಾಕ್ಸಿಕ್' ಚಿತ್ರದ ಶೀರ್ಷಿಕೆಗೆ ತಕ್ಕಂತೆ ಇದರಲ್ಲಿ ವಯಸ್ಕರಿಗೆ ಸೀಮಿತವಾದ ಅಂಶಗಳು ಹೆಚ್ಚಾಗಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಹಲವು ಬಾರಿ ಶೂಟಿಂಗ್ ವಿಳಂಬವಾಗಿದ್ದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರವು ಸದ್ಯ ಎಲ್ಲ ವಿವಾದಗಳ ನಡುವೆಯೇ ಆಗಸ್ಟ್ 26ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲು ಸಿದ್ಧವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+