ಕಲಬುರಗಿಯಲ್ಲಿ ರಾತ್ರಿ ವೇಳೆ ಮೊಬೈಲ್ ಟಾರ್ಚ್‌ನಲ್ಲೇ ಹೆಡ್‌ಲೈಟ್ ಇಲ್ಲದ ಸಾರಿಗೆ ಬಸ್ ಚಾಲನೆ, ವಿಡಿಯೋ ವೈರಲ್
KKRTC: ಸಾಮಾನ್ಯವಾಗಿ ಮೊಬೈಲ್ ಟಾರ್ಚ್ ಅನ್ನು ಮನೆಗಳಲ್ಲಿ ರಾತ್ರಿ ವೇಳೆ ಕರೆಂಟ್ ಹೋದಾಗ, ತುರ್ತು ಸಂದರ್ಭಗಳಲ್ಲಿ ಕಳೆದುಹೋದ ವಸ್ತುಗಳನ್ನು ಹುಡುಕಲು, ಫೋಟೋ ಶೂಟ್ ವೇಳೆ ಬೆಳಕಿನ ಕೊರತೆಯನ್ನು ನೀಗಿಸಲು ಬಳಸಲಾಗುತ್ತದೆ. ಆದರೆ ಇದೀಗ ಇದನ್ನು ಸಾರಿಗೆ ಬಸ್ ಚಾಲನೆಗಾಗಿ ಬಳಕೆ ಮಾಡಿದ ಘಟನೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ವೊಂದರ ದುಸ್ಥಿತಿ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಾತ್ರಿ ವೇಳೆಯಲ್ಲಿ ಹೆಡ್‌ಲೈಟ್ ಕೆಲಸ ಮಾಡದ ಕಾರಣ, ಬಸ್ ಚಾಲಕನಿಗೆ ದಾರಿ ಕಾಣಿಸಲು ಕಂಡಕ್ಟರ್ ತನ್ನ ಮೊಬೈಲ್ ಫೋನ್‌ನ ಟಾರ್ಚ್ ಬಳಸಿದ ಘಟನೆ ಬೆಳಕಿಗೆ ಬಂದಿದ್ದು, ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಘಟನೆಯ ಹಿನ್ನೆಲೆ ಏನು?
ಮಾಹಿತಿಯ ಪ್ರಕಾರ ಕಲಬುರಗಿ ನಗರದಿಂದ ಸುಮಾರು 74 ಕಿಲೋ ಮೀಟರ್ ದೂರದಲ್ಲಿರುವ ಚಿಂಚೋಳಿ ಪಟ್ಟಣಕ್ಕೆ ತೆರಳುತ್ತಿದ್ದ ಸಾರಿಗೆ ನಿಗಮದ ಕೊನೆಯ ಬಸ್‌ನಲ್ಲಿ (KA-28 F-1985) ಈ ಘಟನೆ ನಡೆದಿದೆ. ಸಂಪೂರ್ಣ ಕತ್ತಲಾದ ರಸ್ತೆಯಲ್ಲಿ ಬಸ್‌ನ ಹೆಡ್‌ಲೈಟ್‌ಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಇಂತಹ ಅಪಾಯಕಾರಿ ಪರಿಸ್ಥಿತಿಯಲ್ಲೂ ಪ್ರಯಾಣವನ್ನು ಅರ್ಧಕ್ಕೆ ನಿಲ್ಲಿಸದ ಸಿಬ್ಬಂದಿ, ವಿಭಿನ್ನ ಹಾದಿ ಹಿಡಿದಿದ್ದಾರೆ. ನಿರ್ವಾಹಕನು ಚಾಲಕನ ಪಕ್ಕದಲ್ಲಿ ಕುಳಿತು ಮೊಬೈಲ್‌ನ ಟಾರ್ಚ್ ಆನ್ ಮಾಡಿ ಮುಂಭಾಗದ ರಸ್ತೆಗೆ ಬೆಳಕು ತೋರಿದ್ದಾರೆ. ಈ ಬೆಳಕಿನ ನೆರವಿನಿಂದಲೇ ಚಾಲಕ ಬಸ್ಸನ್ನು ಚಾಲನೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ
ಪ್ರಯಾಣದ ಯಾವ ಹಂತದಲ್ಲಿ ಹೆಡ್‌ಲೈಟ್‌ಗಳು ಕೆಟ್ಟುಹೋದವು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ ಬಸ್‌ನಲ್ಲಿದ್ದ ಪ್ರಯಾಣಿಕರು ಜೀವ ಕೈಯಲ್ಲಿಡಿದು ಪ್ರಯಾಣ ಮುಂದುವರಿಸಬೇಕಾಯಿತು. ಬಸ್‌ನಲ್ಲಿದ್ದ ಪ್ರಯಾಣಿಕರೊಬ್ಬರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ಇದೀಗ ಎಲ್ಲೆಡೆ ಭಾರಿ ಚರ್ಚೆಗೆ ಕಾರಣವಾಗಿದೆ.
ದಿನನಿತ್ಯ ಇದೇ ಸಮಸ್ಯೆಯೇ?
ಕೆಲವು ಸ್ಥಳೀಯ ಮೂಲಗಳ ಪ್ರಕಾರ ಈ ಬಸ್‌ನ ಹೆಡ್‌ಲೈಟ್ ಕೆಟ್ಟು ಹಲವು ದಿನಗಳೇ ಕಳೆದಿವೆ. ಈ ಬಗ್ಗೆ ಡಿಪೋದ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಪರಿಣಾಮವಾಗಿ ಪ್ರತಿದಿನ ರಾತ್ರಿ ಇದೇ ರೀತಿ ಮೊಬೈಲ್ ಟಾರ್ಚ್ ಸಹಾಯದಿಂದಲೇ ಈ ಮಾರ್ಗದಲ್ಲಿ ಬಸ್ ಚಲಾಯಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ವಾದ ನಿಜವೇ ಆದಲ್ಲಿ ಇದು ಪ್ರಯಾಣಿಕರ ಪ್ರಾಣದೊಂದಿಗೆ ನಿಗಮವು ಆಟ ಆಡುತ್ತಿದೆ ಎಂದು ಹೇಳಲಾಗುತ್ತದೆ.
ಸಾರ್ವಜನಿಕರ ಆಕ್ರೋಶ
ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದತೆ ನೆಟ್ಟಿಗರು ಮತ್ತು ಸಾರ್ವಜನಿಕರು ಸಾರಿಗೆ ಸಂಸ್ಥೆಯ ನಿರ್ವಹಣೆಯ ಲೋಪಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ರಸ್ತೆಗಳಲ್ಲಿ ಹೆಡ್‌ಲೈಟ್ ಇಲ್ಲದೆ ವಾಹನ ಓಡಿಸುವುದು ದೊಡ್ಡ ಅಪಘಾತಗಳಿಗೆ ಆಹ್ವಾನ ನೀಡಿದಂತೆ ಎಂದು ಸಾರಿಗೆ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಲವರು 'ಚಾಲಕ ಮತ್ತು ನಿರ್ವಾಹಕರ ಈ ಅಪರೂಪದ ಸಹಕಾರಕ್ಕೆ ಪ್ರಶಸ್ತಿ ನೀಡಬೇಕೇ ಅಥವಾ ಶಿಕ್ಷಿಸಬೇಕೇ ಸಾರಿಗೆ ಸಚಿವರೇ?,' ಎಂದು ವ್ಯಂಗ್ಯವಾಡಿದ್ದಾರೆ.
ಮತ್ತೊಂದೆಡೆ ಈ ಘಟನೆಯನ್ನು ಮುಂದಿಟ್ಟುಕೊಂಡು ಹಲವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಕಲಬುರಗಿಯಿಂದ ಚಿಂಚೋಳಿಗೆ ಸಂಚರಿಸುವ ಬಸ್ಸಿನಲ್ಲಿ ಹೆಡ್‌ಲೈಟ್ ಇಲ್ಲದೆ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಪ್ರಯಾಣಿಸುವ ದುಸ್ಥಿತಿ ನಿರ್ಮಾಣ ಆಗಿರುವುದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಆಡಳಿತದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ,' ಎಂದು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಾರಿಗೆ ನಿಗಮದ ಉನ್ನತ ಅಧಿಕಾರಿಗಳಿಂದ ಅಧಿಕೃತ ತನಿಖೆ ಹಾಗೂ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.












Click it and Unblock the Notifications