ನಟ ಜೂನಿಯರ್ ಎನ್‌ಟಿಆರ್ ವಿರುದ್ಧ ತಿರುಗಿಬಿದ್ದ ತಮಿಳುನಾಡಿನ ಮುರುಗನ್ ಭಕ್ತರು; ಕಾರಣ ಇಲ್ಲಿದೆ

ಟಾಲಿವುಡ್ ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ ಹಾಗೂ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್‌ನ ಹೊಸ ಸಿನಿಮಾ ಘೋಷಣೆಯಾದ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿವಾದ ಸೃಷ್ಟಿಯಾಗಿದೆ. ಭಗವಾನ್ ಕಾರ್ತಿಕೇಯ (ಸುಬ್ರಹ್ಮಣ್ಯ ಸ್ವಾಮಿ/ಮುರುಗನ್) ಅವರ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಚಿತ್ರದಲ್ಲಿ ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ತಮಿಳುನಾಡಿನ ಮುರುಗನ್ ಭಕ್ತರು ಚಿತ್ರತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿವಾದಕ್ಕೆ ಕಾರಣವಾದ ಆ ಒಂದು ಟ್ಯಾಗ್‌ಲೈನ್

ಸಿನಿಮಾದ ಅಧಿಕೃತ ಪ್ರಕಟಣೆಯ ಸಂದರ್ಭದಲ್ಲಿ ಬಿಡುಗಡೆಯಾದ ಪೋಸ್ಟರ್ ಮತ್ತು ಅದರ ಟ್ಯಾಗ್‌ಲೈನ್ ಈ ವಿವಾದದ ಕಿಡಿ ಹೊತ್ತಿಸಿದೆ. ನಟ ಜೂನಿಯರ್ ಎನ್‌ಟಿಆರ್ ಅವರು, "ಶಿವನ ಪುತ್ರ. ಪಾರ್ವತಿಯ ಹೆಮ್ಮೆ. ಶಾಶ್ವತ ಸೇನಾಧಿಪತಿ" ಎಂದು ಬರೆದು ಪೋಸ್ಟರ್ ಹಂಚಿಕೊಂಡಿದ್ದರು. ಪೋಸ್ಟರ್‌ನಲ್ಲಿರುವ ಭಗವಾನ್ ಮುರುಗನ್ ಅವರ ದಿವ್ಯ ಆಯುಧ 'ವೇಲ್' (ಈಟಿ) ಅನ್ನು ನೋಡಿದರೆ ಈ ಚಿತ್ರದ ಕಥೆ ಪುರಾಣದ ಹಿನ್ನೆಲೆಯನ್ನು ಒಳಗೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಚಿತ್ರದ ನಿರ್ಮಾಪಕ ನಾಗವಂಶಿ ಅವರು ಹಂಚಿಕೊಂಡ ಕ್ಯಾಪ್ಷನ್ ತಮಿಳು ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ. ಅದರಲ್ಲಿ ಅವರು, "ಉತ್ತರದಲ್ಲಿ ಜನಿಸಿದನು. ಮಧ್ಯಭಾಗದಲ್ಲಿ ಪಳಗಿದನು. ದಕ್ಷಿಣದಲ್ಲಿ ಪೂಜಿಸಲ್ಪಟ್ಟನು. ಈಗ... ಈ ಕಥೆ ಇಡೀ ಬ್ರಹ್ಮಾಂಡಕ್ಕೆ ಸೇರಲು ಸಜ್ಜಾಗಿದೆ" ಎಂದು ಬರೆದುಕೊಂಡಿದ್ದರು.

Actor Jr NTR

ತಮಿಳು ಭಕ್ತರ ಆಕ್ಷೇಪ

ಮುರುಗನ್ 'ಉತ್ತರದಲ್ಲಿ ಜನಿಸಿದನು' ಎಂಬ ಸಾಲು ತಮಿಳು ಭಕ್ತರನ್ನು ಕೆರಳಿಸಿದೆ. ಭಗವಾನ್ ಮುರುಗನ್ ದಕ್ಷಿಣ ಭಾರತಕ್ಕೆ, ವಿಶೇಷವಾಗಿ ತಮಿಳು ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಅತ್ಯಂತ ಹತ್ತಿರವಾದ ದೈವವಾಗಿದ್ದಾರೆ. ಹೀಗಿರುವಾಗ ಚಿತ್ರತಂಡ ಇತಿಹಾಸವನ್ನು ತಿರುಚುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಚಿತ್ರತಂಡದ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ನೆಟ್ಟಿಗರು ಎಚ್ಚರಿಕೆ ನೀಡಿದ್ದಾರೆ. ಸಿನಿಮಾ ಲಾಭಕ್ಕಾಗಿ ಇತಿಹಾಸವನ್ನು ಬದಲಾಯಿಸಲು ಪ್ರಯತ್ನಿಸಬೇಡಿ ಎಂದು ಗುಡುಗಿದ್ದಾರೆ.

ಮುರುಗನ್ ಅವರನ್ನು ಉತ್ತರ ಭಾರತದವರು ಎಂದು ತೋರಿಸಿ ಸಿನಿಮಾ ಮುಗಿಸಲು ಪ್ರಯತ್ನಿಸಿದರೆ, ಈ ಚಿತ್ರ ಥಿಯೇಟರ್‌ಗೆ ಬರುವುದೇ ಇಲ್ಲ. ಇದು ತಮಿಳು ಇತಿಹಾಸ ಮತ್ತು ಸಂಸ್ಕೃತಿಯನ್ನು ಮರೆಮಾಚುವ ಶುದ್ಧ ಪ್ರಯತ್ನ. ಜೂನಿಯರ್ ಎನ್‌ಟಿಆರ್ ಮತ್ತು ತ್ರಿವಿಕ್ರಮ್ ಸಿನಿಮಾವನ್ನು ಬಹಿಷ್ಕರಿಸಿ ಎಂದು ಕರೆ ನೀಡಿದ್ದಾರೆ. ಮುರುಗನ್ ಬಗ್ಗೆ ನಿಮಗೆ ಸರಿಯಾದ ಜ್ಞಾನವಿಲ್ಲದಿದ್ದರೆ ಅವರನ್ನು ಸಿನಿಮಾದ ಕಂಟೆಂಟ್‌ಗಾಗಿ ಬಳಸಬೇಡಿ. ಅವರು 'ತಮಿಳು ಕಡವುಳ್' (ತಮಿಳು ದೇವರು), ಚಿತ್ರದ ಫ್ಯಾಂಟಸಿಗಾಗಿ ಬಳಸುವ ವಸ್ತುವಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ಕೆಲವು ತಮಿಳು ಅಭಿಮಾನಿಗಳು ಇತಿಹಾಸದ ದಾಖಲೆಗಳನ್ನು ಮುಂದಿಟ್ಟು ವಾದಿಸುತ್ತಿದ್ದಾರೆ. "ಮೊದಲ ಶತಮಾನದ ತಮಿಳು ಸಂಗಮ್ ಸಾಹಿತ್ಯದ 'ತೊಲ್ಕಾಪ್ಪಿಯಂ' ಕೃತಿಯಲ್ಲಿಯೇ ಸೆಯೋನ್ (ಮುರುಗನ್) ಕುರಿಂಜಿ ಮಲೈಗೆ (ಬೆಟ್ಟದ ಪ್ರದೇಶ) ಸೇರಿದವರು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ ಭಗವಾನ್ ಮುರುಗನ್ ಅವರ ಆರು ಪವಿತ್ರ ನಿವಾಸಗಳಾದ 'ಆರುಪದೈ ವೀಡು' ಇರುವುದೂ ತಮಿಳುನಾಡಿನಲ್ಲಿಯೇ" ಎಂದು ಅವರು ನೆನಪಿಸಿದ್ದಾರೆ.

ಇದೇ ಸಮಯದಲ್ಲಿ, ಮತ್ತೊಂದು ವರ್ಗದ ಪ್ರೇಕ್ಷಕರು ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದಾರೆ. ತಮಿಳು ಸಂಸ್ಕೃತಿಯಲ್ಲಿ ಮುರುಗನ್‌ಗೆ ಅತ್ಯುನ್ನತ ಸ್ಥಾನವಿದೆ ನಿಜ. ಆದರೆ ಕಾರ್ತಿಕೇಯ ಅಥವಾ ಸುಬ್ರಹ್ಮಣ್ಯನ ರೂಪದಲ್ಲಿ ಅವರನ್ನು ಇಡೀ ಭಾರತದಾದ್ಯಂತ ಪೂಜಿಸಲಾಗುತ್ತದೆ. ಹಾಗಾಗಿ ಇಡೀ ದೇಶವನ್ನು ಒಳಗೊಳ್ಳುವ ನಿಟ್ಟಿನಲ್ಲಿ ಈ ಕಥೆಯನ್ನು ಹೆಣೆಯಲಾಗುತ್ತಿದೆ ಎಂದು ಅವರು ವಾದಿಸುತ್ತಿದ್ದಾರೆ. ಸದ್ಯಕ್ಕೆ ಚಿತ್ರತಂಡ ಕಥೆಯ ಸಂಪೂರ್ಣ ವಿವರಗಳನ್ನು ಗೌಪ್ಯವಾಗಿಟ್ಟಿದೆ. ಪೋಸ್ಟರ್‌ನಲ್ಲಿ ಉಲ್ಲೇಖಿಸಲಾದ 'ಉತ್ತರ ಭಾರತ' ಎಂಬ ಪದವು ಚಿತ್ರದ ಕಥೆಯ ಪ್ರಮುಖ ಭಾಗವೇ ಅಥವಾ ಕೇವಲ ಸಿನಿಮ್ಯಾಟಿಕ್ ಟಚ್ ನೀಡಲು ಬಳಸಲಾಗಿದೆಯೇ ಎಂಬುದು ಮುಂದಿನ ದಿನಗಳಲ್ಲೇ ತಿಳಿಯಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+