ಕೈತುಂಬಾ ಸಿನಿಮಾ ಇದ್ದಾಗಲೇ ನರಕಯಾತನೆ ಅನುಭವಿಸಿದೆ: ಚಿತ್ರರಂಗದಿಂದ ದೂರ ಉಳಿಯಲು ಅಸಲಿ ಕಾರಣ ತಿಳಿಸಿದ ‘ವಜ್ರಕಾಯ’ ಬೆಡಗಿ

ಕನ್ನಡದ 'ವಜ್ರಕಾಯ' ಚಿತ್ರದ ಮೂಲಕ ಸಿನಿಪ್ರಿಯರ ಮನಗೆದ್ದು, ಆನಂತರ ಟಾಲಿವುಡ್‌ನಲ್ಲಿಯೂ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದ ನಭಾ ನಟೇಶ್, ತಮ್ಮ ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೇ ದಿಢೀರನೆ ಚಿತ್ರರಂಗದಿಂದ ಮಾಯವಾಗಿದ್ದರು. ಸುಮಾರು ಎರಡು ವರ್ಷಗಳ ಕಾಲ ಅವರು ಬೆಳ್ಳಿತೆರೆಯಿಂದ ಸಂಪೂರ್ಣವಾಗಿ ದೂರವುಳಿದಿದ್ದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. ಇದೀಗ ತಾವು ಚಿತ್ರರಂಗದಿಂದ ಇಷ್ಟು ದೊಡ್ಡ ಬ್ರೇಕ್ ತೆಗೆದುಕೊಳ್ಳಲು ಕಾರಣವೇನು ಎಂಬುದನ್ನು ನಭಾ ಇತ್ತೀಚಿನ ಸಂದರ್ಶನವೊಂದರಲ್ಲಿ ರಿವೀಲ್‌ ಮಾಡಿದ್ದಾರೆ.

ಆ ಒಂದು ಅಪಘಾತ ತಂದಿಟ್ಟ ಕಹಿ ದಿನಗಳು

ತಮ್ಮ ಜೀವನದ ಆ ಕರಾಳ ದಿನಗಳನ್ನು ನೆನಪಿಸಿಕೊಂಡ ನಭಾ ನಟೇಶ್, ತಾವು ಎದುರಿಸಿದ ಭೀಕರ ಅಪಘಾತದ ಬಗ್ಗೆ ಹೇಳಿಕೊಂಡಿದ್ದಾರೆ. ನಭಾ ಅವರು ಒಮ್ಮೆ ಮೆಟ್ಟಿಲುಗಳಿಂದ ಆಯತಪ್ಪಿ ಕೆಳಗೆ ಬಿದ್ದಿದ್ದರು. ಆ ಕ್ಷಣದಲ್ಲಿ ತಲೆಗೆ ಯಾವುದೇ ಪೆಟ್ಟು ಬೀಳಬಾರದು ಎಂದು ಸ್ವಯಂ ರಕ್ಷಣೆಗಾಗಿ ಪ್ರಯತ್ನಿಸಿದಾಗ, ಅವರ ಇಡೀ ದೇಹದ ಭಾರ ಎಡ ಭುಜದ ಮೇಲೆ ಬಿದ್ದಿದೆ. ಇದು ಕೇವಲ ಸಣ್ಣ ಮುರಿತ (Fracture) ಇರಬಹುದು ಎಂದು ಅವರು ಭಾವಿಸಿದ್ದರು. ಆದರೆ ವೈದ್ಯಕೀಯ ತಪಾಸಣೆಯ ಬಳಿಕ ಭುಜದ ಒಳಗಿನ ಮೂಳೆಗಳು ಮುರಿದಿದ್ದವು ಎನ್ನುವುದು ಗೊತ್ತಾಗಿತ್ತು.

Nabha Natesh

ಪರಿಸ್ಥಿತಿ ಗಂಭೀರವಾಗಿದ್ದರಿಂದ ಅವರಿಗೆ ದೊಡ್ಡ ಆಪರೇಷನ್ ಮಾಡಬೇಕಾಗಿ ಬಂತು. ಚೂರಾಗಿದ್ದ ಭುಜದ ಮೂಳೆಗಳನ್ನು ಮತ್ತೆ ಜೋಡಿಸಲು ವೈದ್ಯರು ಅವರ ಭುಜಕ್ಕೆ ಸ್ಟೀಲ್ ರಾಡ್ ಹಾಗೂ ಹಲವು ಸ್ಕ್ರೂಗಳನ್ನು ಅಳವಡಿಸಿದರು ಎಂದು ಹೇಳಿಕೊಂಡಿದ್ದಾರೆ.

ಮಾನಸಿಕವಾಗಿ ಕುಗ್ಗಿದ್ದೆ

ಅಪಘಾತ ಸಂಭವಿಸಿದ ಸಮಯದಲ್ಲಿ ನಭಾ ನಟೇಶ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದರು. ಯಶಸ್ಸಿನ ಉತ್ತುಂಗದಲ್ಲಿದ್ದಾಗ ಎದುರಾದ ಈ ದುರಂತ ಅವರ ದೈಹಿಕ ಆರೋಗ್ಯವನ್ನಷ್ಟೇ ಅಲ್ಲದೆ, ಮಾನಸಿಕ ನೆಮ್ಮದಿಯನ್ನೂ ಕಸಿದುಕೊಂಡಿತ್ತು ಎಂದಿದ್ದಾರೆ. "ಯಾವಾಗಲೂ ಸಿನಿಮಾ ಲೈಫ್‌ನಲ್ಲಿ ಬ್ಯುಸಿಯಾಗಿದ್ದ ನಾನು ದಿಢೀರನೆ ತಿಂಗಳುಗಟ್ಟಲೆ ಹಾಸಿಗೆ ಹಿಡಿಯಬೇಕಾಯಿತು. ಕೇವಲ ಬೆಡ್ ರೆಸ್ಟ್ ಮತ್ತು ಕಠಿಣ ಫಿಸಿಯೋಥೆರಪಿಗೆ ಒಳಪಡಬೇಕಾಯಿತು. ಕೈಯಲ್ಲಿ ಸಿನಿಮಾಗಳಿರುವಾಗಲೇ ಈ ರೀತಿ ಮನೆಯಲ್ಲೇ ಕೂರಬೇಕಾಗಿ ಬಂದದ್ದು ತೀವ್ರ ಮಾನಸಿಕ ಖಿನ್ನತೆ ಮತ್ತು ಒತ್ತಡಕ್ಕೆ ದೂಡಿತ್ತು" ಎಂದಿದ್ದಾರೆ.

ನಾನು ಶೃಂಗೇರಿಯವಳು ಎನ್ನಲು ಈ ಕಾರಣಕ್ಕೆ ಹೆಮ್ಮೆ: 'ವಜ್ರಕಾಯ' ಬೆಡಗಿ ನಭಾ
ನಾನು ಶೃಂಗೇರಿಯವಳು ಎನ್ನಲು ಈ ಕಾರಣಕ್ಕೆ ಹೆಮ್ಮೆ: 'ವಜ್ರಕಾಯ' ಬೆಡಗಿ ನಭಾ

ಆದರೆ, ಕಷ್ಟದ ದಿನಗಳು ಎದುರಾದಾಗ ನಭಾ ನಟೇಶ್ ಧೃತಿಗೆಡಲಿಲ್ಲ. ಶೂಟಿಂಗ್ ಇಲ್ಲದೆ ಮನೆಯಲ್ಲೇ ಇರಬೇಕಾಗಿ ಬಂದ ಆ ಸುದೀರ್ಘ ಬಿಡುವಿನ ಸಮಯವನ್ನು ಅವರು ವ್ಯರ್ಥ ಮಾಡದೆ, ಅತ್ಯಂತ ಸೃಜನಾತ್ಮಕವಾಗಿ ಬಳಸಿಕೊಂಡಿದ್ದಾಗಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟಿ, "ಆ ಕಷ್ಟಕಾಲದಲ್ಲಿ ನಾನು ಸುಮ್ಮನೆ ಕೂರಲಿಲ್ಲ. ಬದಲಿಗೆ ಪೇಂಟಿಂಗ್ ಮಾಡುವುದು, ಹಾಡುಗಳನ್ನು ಹಾಡುವುದು, ಒಳ್ಳೆಯ ಪುಸ್ತಕಗಳನ್ನು ಓದುವುದರಲ್ಲಿ ನನ್ನನ್ನು ನಾನು ತೊಡಗಿಸಿಕೊಂಡೆ. ಪರಿಸ್ಥಿತಿ ಸುಧಾರಿಸಿದ ಬಳಿಕ ಹೊಸ ಹೊಸ ಜಾಗಗಳಿಗೆ ಪ್ರವಾಸ ಕೈಗೊಂಡೆ" ಎಂದು ಹಂಚಿಕೊಂಡಿದ್ದಾರೆ. "ಯಾವಾಗಲೂ ಶೂಟಿಂಗ್ ಅಂತ ಬ್ಯುಸಿಯಾಗಿದ್ದ ನನಗೆ, ಈ ಅಪಘಾತದ ಬ್ರೇಕ್‌ನಿಂದಾಗಿ ನನ್ನ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಯಿತು. ಅವರ ಪ್ರೀತಿ ಮತ್ತು ಬೆಂಬಲದಿಂದಾಗಿ ನಾನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಮತ್ತಷ್ಟು ಬಲಿಷ್ಠಳಾಗಿ ಹೊರಹೊಮ್ಮಲು ಸಹಾಯವಾಯಿತು" ಎಂದು ನಭಾ ಹೇಳಿದ್ದಾರೆ.

ಚಿತ್ರಮಂದಿರಗಳಲ್ಲಿ 'ನಾಗಬಂಧಂ' ಅಬ್ಬರ

ಸದ್ಯ ಎಲ್ಲಾ ನೋವುಗಳನ್ನು ಮರೆತು ಹೊಸ ಉತ್ಸಾಹದೊಂದಿಗೆ ಚಿತ್ರರಂಗಕ್ಕೆ ರೀ-ಎಂಟ್ರಿ ಕೊಟ್ಟಿರುವ ನಭಾ ನಟೇಶ್ ಅವರಿಗೆ ಸಾಲು ಸಾಲು ಸಿನಿಮಾಗಳ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಇದರ ನಡುವೆಯೇ ನಭಾ ನಟೇಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ನಾಗಬಂಧಂ ಸಿನಿಮಾ ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಿದೆ. ಭಾರಿ ಕುತೂಹಲ ಮೂಡಿಸಿದ್ದ ಈ ಚಿತ್ರವು ಬಿಡುಗಡೆಯಾದ ಬೆನ್ನಲ್ಲೇ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಸದ್ಯ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಮೂಲಕ ನಭಾ ನಟೇಶ್ ತಮ್ಮ ಸೆಕೆಂಡ್ ಇನ್ನಿಂಗ್ಸ್ ಅನ್ನು ಭರ್ಜರಿ ಗೆಲುವಿನೊಂದಿಗೆ ಆರಂಭಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+