'ಅನ್ನಭಾಗ್ಯ' ಯೋಜನೆ ವಿಫಲ? ಸೋಲಿಗರ ಅನ್ನ ಕಿತ್ತುಕೊಂಡ ಕಾಂಗ್ರೆಸ್ ಸರ್ಕಾರ: R ಅಶೋಕ ಕಿಡಿ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರೆಂಟಿಗಳಡಿ ಅರ್ಹರಿಗೆ ಉಚಿತ ಸೌಲಭ್ಯವೆಂದು ಹೇಳಲಾಗಿತ್ತು. ಇದೀಗ ಪರಿಷ್ಕರಣೆ, ಪುನಃ ಅರ್ಜಿ ಕರೆದಿರುವ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಬಡವರಿಗೆ 'ಅನ್ನದ ಭದ್ರತೆ' ನೀಡವುದಾಗಿ ತಿಳಿಸಿತ್ತು. ಆದರೆ ಇಂದು ಕಾಡಂಚಿನ ಸೋಲಿಗರ ಅನ್ನ ಕಿತ್ತುಕೊಂಡಿದೆ ಎಂಬ ಆರೋಪ ಎದುರಿಸಬೇಕಾಗಿದೆ. ಈ ಸಂಬಂಧ ವಿಪಕ್ಷ ನಾಯಕ ಆರ್.ಅಶೋಕ್ ಅವರು ಟೀಕಾಪ್ರಹಾರ ನಡೆಸಿದ್ದಾರೆ.
ರಾಜ್ಯ ಸರ್ಕಾರದ 'ಅನ್ನ ಭಾಗ್ಯ' ಯೋಜನೆಗೆ ಸಂಬಂಧಿಸಿದಂತೆ ಎಕ್ಸ್ ಪೋಸ್ಟ್ ಮಾಡಿರುವ ಆರ್.ಅಶೋಕ್, "ಅನ್ನದ ಭದ್ರತೆ ಕೊಡುತ್ತೇವೆ" ಎಂದು ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಇಂದು ಬುಡಕಟ್ಟು ಸೋಲಿಗ ಸಮುದಾಯದ ಹೊಟ್ಟೆಗೆ ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ಸೇರಿದಂತೆ ಕಾಡಂಚಿನ ಪ್ರದೇಶಗಳಲ್ಲಿ ವಾಸಿಸುವ ಸೋಲಿಗ ಬುಡಕಟ್ಟು ಸಮುದಾಯಕ್ಕೆ ಸರ್ಕಾರ ನೀಡಬೇಕಿದ್ದ ಪೌಷ್ಟಿಕ ಆಹಾರ ಕಿಟ್ ಕಳೆದ ಮೂರು ತಿಂಗಳಿಂದ ಸ್ಥಗಿತಗೊಂಡಿದೆ. ಈ ಕುರಿತು ಬಹಿರಂಗವಾದ ಮಾಧ್ಯಮ ವರದಿಗಳು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯವನ್ನು ಬಯಲಿಗೆಳೆದಿದೆ ಎಂದು ದೂರಿದರು.
ಬುಡಕಟ್ಟು ಜನರಿಗೆ ಸಿಗುತ್ತಿಲ್ಲ ಪೌಷ್ಟಿಕ ಆಹಾರ
ರಾಜ್ಯದಲ್ಲಿ ಒಂದೆಡೆ ಭೀಕರ ಬರಗಾಲ ಆವರಿಸಿದೆ. ಮತ್ತೊಂದೆಡೆ ಉದ್ಯೋಗದ ಕೊರತೆ, ಅದರ ನಡುವೆ ಸರ್ಕಾರದ ನಿರ್ಲಕ್ಷ್ಯದಿಂದ ಪೌಷ್ಟಿಕ ಆಹಾರವೂ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಪರಿಣಾಮವಾಗಿ ಸೋಲಿಗ ಕುಟುಂಬಗಳು ಕೂಲಿ ಅರಸಿ ವಲಸೆ ಹೋಗುತ್ತಿದ್ದು, ಮಕ್ಕಳು ಶಾಲೆ ತೊರೆಯುವಂತಹ ದುರಂತ ಪರಿಸ್ಥಿತಿ ಎದುರಾಗಿದೆ. ಅಪೌಷ್ಟಿಕತೆ ಹೆಚ್ಚುತ್ತಿದ್ದು, ಬುಡಕಟ್ಟು ಜನರ ಬದುಕು ದಿನದಿಂದ ದಿನಕ್ಕೆ ಸಂಕಷ್ಟಕ್ಕೆ ಸಿಲುಕುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಸಿಎಂಗೆ ಪ್ರಚಾರ, ಜಾಹೀರಾತಿಗಿದೆ ಸಮಯ
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ರಾಜಕೀಯ ಪ್ರಚಾರ, ಜಾಹೀರಾತು ಮತ್ತು ಅಧಿಕಾರದ ಪ್ರದರ್ಶನಕ್ಕೆ ಸಮಯವಿದೆ. ಆದರೆ ಕಾಡಂಚಿನ ಬಡವರು, ಬುಡಕಟ್ಟು ಜನರು, ಮಹಿಳೆಯರು ಹಾಗೂ ಮಕ್ಕಳ ಬದುಕಿನ ಬಗ್ಗೆ ಕಾಳಜಿಯಿಲ್ಲವೇ? ರಾಜ್ಯದ ಅತ್ಯಂತ ದುರ್ಬಲ ವರ್ಗದ ಜನರಿಗೂ ಸಮಯಕ್ಕೆ ಪೌಷ್ಟಿಕ ಆಹಾರ ತಲುಪಿಸಲು ವಿಫಲವಾದ ಸರ್ಕಾರ ಅಭಿವೃದ್ಧಿಯ ಬಗ್ಗೆ ಮಾತನಾಡುವುದು ಕೇವಲ ಬೂಟಾಟಿಕೆಯಾಗಿದೆ. ಕಾಂಗ್ರೆಸ್ ಸರ್ಕಾರ "ಸರ್ವರ ಅಭಿವೃದ್ಧಿ" ಮತ್ತು ಸಾಮಾಜಿಕ ನ್ಯಾಯ ಇದೇನಾ?. ಇದೇನಾ ಗ್ಯಾರಂಟಿಗಳ ಅಸಲಿ ಮುಖ? ಎಂದು ಪ್ರಶ್ನಿಸಿದರು.
ಗ್ಯಾರಂಟಿಗಳ ಹೆಸರಿನಲ್ಲಿ ಪ್ರಚಾರ ಮಾಡಿಕೊಳ್ಳುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಮೂಲಭೂತ ಪೌಷ್ಟಿಕ ಆಹಾರವನ್ನೂ ಬುಡಕಟ್ಟು ಸಮುದಾಯಕ್ಕೆ ತಲುಪಿಸಲು ವಿಫಲವಾಗಿದೆ. ಈ ಆಡಳಿತ ವೈಫಲ್ಯಕ್ಕೆ ಮುಖ್ಯಮಂತ್ರಿಗಳೇ ನೇರ ಹೊಣೆ ಹೊರಬೇಕು. ಸೋಲಿಗರ ಬದುಕಿನೊಂದಿಗೆ ಚೆಲ್ಲಾಟವಾಡುವುದನ್ನು ನಿಲ್ಲಿಸಿ. ಕಳೆದ ಮೂರು ತಿಂಗಳ ಬಾಕಿ ಉಳಿದಿರುವ ಎಲ್ಲಾ ಪೌಷ್ಟಿಕ ಆಹಾರ ಕಿಟ್‌ಗಳನ್ನು ತಕ್ಷಣ ವಿತರಿಸಿ, ಬುಡಕಟ್ಟು ಸಮುದಾಯಕ್ಕೆ ನ್ಯಾಯ ಒದಗಿಸುವಂತೆ ಅವರು ಆಗ್ರಹಿಸಿದರು.
KRS ಡ್ಯಾಂನಲ್ಲಿ ನೀರಿಲ್ಲ: ಸರ್ಕಾರದಿಂದ ಒಂದೂ ಸಭೆ ಕರೆದಿಲ್ಲ!
ರಾಜ್ಯದಲ್ಲಿ ಮಳೆ ಕೊರತೆಯಿಂದ KRS ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕಡಿಮೆಯಾದರೂ ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ವಹಿಸಿಲ್ಲ. ಕೂಡಲೇ ಸರ್ಕಾರ ಎಕರೆಗೆ 50,000 ರೂ. ಪರಿಹಾರ ನೀಡಲು ಕ್ರಮ ವಹಿಸಬೇಕು ಎಂದು ಇತ್ತೀಚೆಗೆ ಕೆಆರ್‌ಎಸ್ ಜಲಾಶಯಕ್ಕೆ ಭೇಟಿ ನೀಡಿದ ಬಳಿಕ ಆರ್.ಅಶೋಕ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಒಂದು ತಿಂಗಳಾಗುವ ವೇಳೆಗೆ ರಾಜ್ಯದ ಎಲ್ಲ ಜಲಾಶಯಯಗಳು ಖಾಲಿಯಾಗಿವೆ. ಕೆಆರ್‌ಎಸ್‌ನಲ್ಲಿ 6 ಟಿಎಂಸಿ ನೀರು ಮಾತ್ರ ಇದೆ. ಒಳಹರಿವು 900 ಕ್ಯೂಸೆಕ್ಸ್ ಇದೆ. ಆದರೆ ಹೊರಗೆ ಹೆಚ್ಚು ನೀರು ಬಿಡಲಾಗುತ್ತಿದೆ ಎಂಬ ಅನುಮಾನವಿದೆ. ಪ್ರತಿ ತಿಂಗಳು 3 ಟಿಎಂಸಿಯ ಅಗತ್ಯವಿದೆ. ಇದನ್ನು ಕುಡಿಯುವ ನೀರಿಗೆ ಬಳಸಬಹುದು. 1 ಲಕ್ಷ ಎಕರೆಗಿಂತಲೂ ಅಧಿಕ ಜಮೀನಿನಲ್ಲಿ ರೈತರು ಬೆಳೆ ಬೆಳೆದಿದ್ದಾರೆ. ಆದರೆ ಬೆಳೆ ಬೆಳೆಯಬಾರದು ಎಂದು ಮುಖ್ಯಮಂತ್ರಿ ಕರೆ ನೀಡಿದ್ದಾರೆ.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮಿತವ್ಯಯದ ಕರೆ ನೀಡಿದರೆ ಬಾಯಿ ಬಡಿದುಕೊಂಡು ಕಾಂಗ್ರೆಸ್ ಈಗ ರೈತರಿಗೆ ಅದೇ ರೀತಿ ಕರೆ ನೀಡಿದೆ. ಧೈರ್ಯವಿದ್ದರೆ ತಮಿಳುನಾಡು ರೈತರು ಬೆಳೆ ಬೆಳೆಯಬಾರದು ಎಂದು ಕರೆ ನೀಡಬೇಕಿತ್ತು. ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆ ವಿರುದ್ಧ ನಿರ್ಣಯ ಕೈಗೊಂಡರೂ ಅದರ ವಿರುದ್ಧ ಮಾತಾಡಿಲ್ಲ. ತಮಿಳುನಾಡಲ್ಲಿ ಪಾಲುದಾರ ಪಕ್ಷದ ಒಳಿತಿಗಾಗಿ ನಮ್ಮ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ಅವರು ದೂರಿದರು.













Click it and Unblock the Notifications