Namma Metro: ಮೆಟ್ರೋ ನಿಲ್ದಾಣದಲ್ಲಿ ಮಹಿಳೆ ಆತ್ಮ*ತ್ಯೆಗೆ ಯತ್ನ, ಮುನ್ನೆಲೆಗೆ ಬಂತು PSD ವ್ಯವಸ್ಥೆ ಅಳವಡಿಕೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಜನತೆಗೆ ಸುರಕ್ಷಿತ ಮತ್ತು ವೇಗದ ಸೇವೆ ಒದಗಿಸುತ್ತಿರುವ ನಮ್ಮ ಮೆಟ್ರೋ (Namma Metro) ನಿಲ್ದಾಣಗಳಲ್ಲಿ ಆತ್ಮ*ತ್ಯೆ ಪ್ರಕ್ರರಣಗಳು ಮೇಲಿಂದ ಮೇಲೆ ವರದಿ ಆಗುತ್ತಿವೆ. ಮಹಿಳಾ ಪ್ರಯಾಣಿಕರೊಬ್ಬರು ಮೆಟ್ರೋ ನಿಲ್ದಾಣಕ್ಕೆ ಬರುತ್ತಿದ್ದ ರೈಲಿನ ಮುಂದೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ಮದ್ಯಾಹ್ನ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಈ ಘಟನೆಯಿಂದ ಮಾರ್ಗದಲ್ಲಿ ಕೆಲ ಕಾಲ ರೈಲುಗಳ ಸಂಚಾರ ವ್ಯತ್ಯಯ ಉಂಟಾಯಿತು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಿಳಿಸಿದೆ. ಇದರ ಬೆನ್ನಲ್ಲೆ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ (PSD) ಅಳವಡಿಕೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಹಾಗಾದ್ರೆ ಈ ಪಿಎಸ್‌ಡಿ ವ್ಯವಸ್ಥೆ ಅಂದ್ರೇನು ಎಂಬ ಮಾಹಿತಿ ಮುಂದಿದೆ.
BMRCL ನೀಡಿರುವ ಮಾಹಿತಿ ಪ್ರಕಾರ, ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಶನಿವಾರ (ಜುಲೈ 4) ಮಧ್ಯಾಹ್ನ ಸುಮಾರು 12:25 ಗಂಟೆಗೆ ಮಹಿಳಾ ಪ್ರಯಾಣಿಕರೊಬ್ಬರು ಮೆಟ್ರೋ ಹಳಿ ಪ್ರದೇಶಕ್ಕೆ ಹಾರಿದ್ದಾರೆ. ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿ ಆಗಿದೆ. ಮಹಿಳೆ ಹಳಿಗೆ ಜಿಗಿಯುತ್ತಿದ್ದಂತೆ ಎಚ್ಚೆತ್ತ ನಮ್ಮ ಮೆಟ್ರೋ ಸಿಬ್ಬಂದಿ ಕೂಡಲೇ ಸ್ಪಂದಿಸಿದ್ದಾರೆ.

ತಕ್ಷಣವೇ ನಿಲ್ದಾಣ ನಿಯಂತ್ರಕರು (Station Controller)ಹಾಗೂ ಭದ್ರತಾ ಸಿಬ್ಬಂದಿ ನಿಗದಿತ ತುರ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸಿದ್ದಾರೆ. ಹಳಿಗೆ ಜಿಗಿದ ಪ್ರಯಾಣಿಕರನ್ನು ಯಾವುದೇ ಗಾಯಗಳಾಗದಂತೆ ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬರುತ್ತಿದ್ದ ಮೆಟ್ರೋ ನೋಡಿಕೊಂಡು ಮಹಿಳೆ ಜಿಗಿದಿರುವುದು ಗೊತ್ತಾಗಿದೆ. ಈ ವೇಳೆ ಮೆಟ್ರೋ ಚಾಲಕ ಸಮಯ ಪ್ರಜ್ಞೆ ಮೆರೆದಿದ್ದಾರೆ. ತಕ್ಷಣವೇ ಬ್ರೇಕ್ ಹಾಕಿದ್ದು, ತುರ್ತು ಟ್ರಿಪ್ ಸಿಸ್ಟಮ್ (ಇಟಿಎಸ್) ಸಕ್ರಿಯಗೊಂಡ ಪರಿಣಾಮ ಮೆಟ್ರೋ ನಿಂತಿದೆ. ಮಹಿಳೆಗೆ ಯಾವುದೇ ಗಾಯಗಳು ಆಗಿಲ್ಲ ಎನ್ನಲಾಗಿದ್ದು, ಅದೃಷ್ಟವಶಾತ್ ಸಂಭವನೀಯ ಭಾರೀ ಅವಘಡವೊಂದು ತಪ್ಪಿತಂದಾಗಿದೆ.
ಆತ್ಮಹತ್ಯೆ ಯತ್ನದಿಂದ ಮೆಟ್ರೋ ಸಂಚಾರ ವಿಳಂಬ
ಮಹಿಳೆಯ ಆತ್ಮಹತ್ಯೆ ಯತ್ನದಿಂದಾಗಿ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಮಾತ್ರವಲ್ಲದೇ ಇಡೀ ಹಸಿರು ಮಾರ್ಗದಲ್ಲಿ (ರೆಷ್ಮೆ ಸಂಸ್ಥೆ-ಮಾದಾವರ ಮಾರ್ಗ) ರೈಲುಗಳ ಸಂಚಾರದಲ್ಲಿ ಸುಮಾರು 10 ನಿಮಿಷಗಳ ಕಾಲ ವಿಳಂಬವಾಯಿತು. ಘಟನಾ ಸ್ಥಳದಲ್ಲಿ ತೆರವುಗೊಳಿಸಿದ ಬಳಿಕವೇ ಮೆಟ್ರೋ ಸಂಚಾರ ಸುಗಮವಾಗಿ ಸಾಗಿತು. ಅಗತ್ಯ ಎಲ್ಲಾ ಸುರಕ್ಷತಾ ಕ್ರಮಗಳನ್ನು ಪೂರ್ಣಗೊಳಿಸಿದ ನಂತರ ಮಧ್ಯಾಹ್ನ 12:34 ಗಂಟೆಗೆ ಮೆಟ್ರೋ ರೈಲು ಸಂಚಾರವನ್ನು ಎಂದಿನಂತೆ ಪುನರಾರಂಭಿಸಲಾಯಿತು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಮತ್ತೆ ಮುನ್ನೆಲೆಗೆ ಬಂದ PSD ವ್ಯವಸ್ಥೆ
ಪ್ರತಿ ಬಾರಿ ಆತ್ಮಹತ್ಯೆಯಂತಹ ಪ್ರಕರಣಗಳು ವರದಿ ಆದಾಗ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ ವ್ಯವಸ್ಥೆ (PSD) ಮುನ್ನೆಲೆಗೆ ಬರುತ್ತದೆ. ಪ್ಲಾರ್ಟ್ ಫಾರ್ಮ್‌ಗಳಲ್ಲಿ ಯಾರೊಬ್ಬರು ಹಳಿಗೆ ಇಳಿಯದಂತೆ ಅಡ್ಡಲಾಗಿ ಪಿಎಸ್‌ಡಿಯನ್ನು ಅಳವಡಿಸಬೇಕೆಂಬ ಆಗ್ರಹ ಆಗಾಗ ಕೇಳಿ ಬರುತ್ತದೆ. ರೈಲು ಬಂದಾಗ ಮಾತ್ರವೇ ಸ್ವಯಂ ಚಾಲಿತವಾಗಿ ತೆರೆದು ಪ್ಲಾಟ್‌ಫಾರ್ಮ್‌ನಿಂದ ರೈಲು ಹತ್ತಲು ಈ ಪಿಎಸ್‌ಡಿ ವ್ಯವಸ್ಥೆ ಮಾಡಿಕೊಡುತ್ತದೆ. ಇದರಿಂದ ಇಂತಹ ಆತ್ಮಹತ್ಯೆಯ ಘಟನೆಗಳಿಗೆ ಬ್ರೇಕ್ ಬೀಳಿದೆ.
ವಿದೇಶ, ದೆಹಲಿ ಮಹಾನಗರ ಮೆಟ್ರೋ ನಿಲ್ದಾಣಗಳಲ್ಲಿ ಇಂತಹ ಪಿಎಸ್‌ಡಿ ವ್ಯವಸ್ಥೆ ಇದೆ. ಆ ವ್ಯವಸ್ಥೆಯನ್ನು ನಮ್ಮ ಮೆಟ್ರೋ ಎಲ್ಲ ನಿಲ್ದಾಣಗಳಲ್ಲೂ ಅಳವಡಿಸಬೇಕೆಂಬ ಒತ್ತಾಯ ಹಿಂದಿನಿಂದಲೂ ಕೇಳಿ ಬರುತ್ತದೆ. ಆದರೆ ಇದಕ್ಕೆ ಅಧಿಕ ಖರ್ಚಾಗುವ ಹಿನ್ನಲ್ಲೆ ಹಾಗೂ ಹಾಲಿ ನಿಲ್ದಾಣಗಳಲ್ಲಿ ಅಳವಡಿಕೆ ಸವಾಲುಗಳ ಕಾರಣಕ್ಕೆ ಇಲ್ಲಿ ನಿರ್ಮಾಣವಾಗಿಲ್ಲ ಎನ್ನಲಾಗಿದೆ.













Click it and Unblock the Notifications