ಉಗ್ರರ ಪಟ್ಟಿಗೆ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಸೇರ್ಪಡೆ: 23 ಜನರನ್ನು ಭಯೋತ್ಪಾದಕರು ಎಂದು ಘೋಷಿಸಿದ ಕೇಂದ್ರ
ದೇಶದ ಆಂತರಿಕ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯವು (MHA) ಭಾರಿ ಕಾನೂನು ಕ್ರಮ ಜರುಗಿಸಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಹೊಸದಾಗಿ 23 ಜನರನ್ನು 'ಭಯೋತ್ಪಾದಕರು' ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಈ ಹೊಸ ಪಟ್ಟಿಯೊಂದಿಗೆ ದೇಶದಲ್ಲಿ ಯುಎಪಿಎ ಕಾಯ್ದೆಯಡಿ ನಿಷೇಧಕ್ಕೊಳಗಾದ ಉಗ್ರರ ಒಟ್ಟು ಸಂಖ್ಯೆ 80ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ. ಈ ಕುರಿತು ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, "ಇಂದು ಪ್ರಕಟಿಸಲಾದ ಪಟ್ಟಿಯಲ್ಲಿ 17 ಮಂದಿ ಪಾಕಿಸ್ತಾನಿ ಪ್ರಜೆಗಳಾಗಿದ್ದರೆ, 6 ಜನ ಭಾರತೀಯ ಮೂಲದವರಾಗಿದ್ದಾರೆ. ಸದ್ಯ ಇವರೆಲ್ಲರೂ ಭಾರತದಿಂದ ಪರಾರಿಯಾಗಿದ್ದು, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರದಿಂದ (PoJK) ತಮ್ಮ ಕರಾಳ ಜಾಲವನ್ನು ನಿಯಂತ್ರಿಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ.
ಯುವಕರ ಬ್ರೇನ್‌ವಾಶ್ ಮಾಡುತ್ತಿದ್ದ ಬೆಂಗಳೂರಿನ ಟೆಕ್ಕಿ
ಹೊಸ ಉಗ್ರರ ಪಟ್ಟಿಯಲ್ಲಿ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್, 40 ವರ್ಷದ ಮೊಹಮ್ಮದ್ ಶಹೀದ್ ಫೈಸಲ್ ಎಂಬಾತನ ಹೆಸರು ಮುಂಚೂಣಿಯಲ್ಲಿದೆ. ಪ್ರಸ್ತುತ ಪಾಕಿಸ್ತಾನದ ರಾವಲ್ಪಿಂಡಿಯಲ್ಲಡಗಿರುವ ಈತನ ಕರಾಳ ಮುಖದ ಸಂಪೂರ್ಣ ವಿವರಗಳನ್ನು ಅಧಿಸೂಚನೆಯಲ್ಲಿ ಬಿಚ್ಚಿಡಲಾಗಿದೆ. ಈತ ಲಷ್ಕರ್-ಎ-ತೊಯ್ಬಾ (LeT) ಮತ್ತು ಜೈಶ್-ಎ-ಮೊಹಮ್ಮದ್ (JeM) ಮಾತ್ರವಲ್ಲದೆ ಜಾಗತಿಕ ಭಯೋತ್ಪಾದಕ ಸಂಘಟನೆಗಳಾದ ಅಲ್-ಖೈದಾ ಮತ್ತು ಐಸಿಸ್ (ISIS) ಮಾಡ್ಯೂಲ್‌ಗಳೊಂದಿಗೂ ನಿಕಟ ಸಂಪರ್ಕ ಹೊಂದಿದ್ದಾನೆ.

ಸೋಷಿಯಲ್ ಮೀಡಿಯಾ ಮೂಲಕ ಭಾರತೀಯ ಯುವಕರನ್ನು ಸೆಳೆದು ಉಗ್ರ ಜಾಲಕ್ಕೆ ನೇಮಿಸಿಕೊಳ್ಳುವುದು, ಅವರಿಗೆ ಪಾಕಿಸ್ತಾನದಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡುವುದು ಮತ್ತು ಉಗ್ರ ಕೃತ್ಯಗಳಿಗೆ ಹಣ ಸಂಗ್ರಹಿಸುವುದು ಈತನ ಮುಖ್ಯ ಕೆಲಸವಾಗಿದೆ. ತನಿಖಾ ಸಂಸ್ಥೆಗಳಿಂದ ತಪ್ಪಿಸಿಕೊಳ್ಳಲು ಡೇಟಾ ಎನ್‌ಕ್ರಿಪ್ಶನ್ ಮತ್ತು ನಕಲಿ ಗುರುತಿನ ಚೀಟಿಗಳನ್ನು ಬಳಸುವುದು ಹೇಗೆ ಎಂಬ ಕಠಿಣ ತರಬೇತಿಯನ್ನು ಈತ ಯುವಕರಿಗೆ ನೀಡುತ್ತಿದ್ದ ಎಂದು ತಿಳಿದುಬಂದಿದೆ.
ರಾಮೇಶ್ವರಂ ಕೆಫೆ ಬ್ಲಾಸ್ಟ್ ಲಿಂಕ್
2024ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ 'ದಿ ರಾಮೇಶ್ವರಂ ಕೆಫೆ' ಐಇಡಿ ಸ್ಫೋಟದ ಪ್ರಮುಖ ಹ್ಯಾಂಡ್ಲರ್ ಇದೇ ಫೈಸಲ್ ಎಂದು ರಾಷ್ಟ್ರೀಯ ತನಿಖಾ ದಳ (NIA) ಗುರುತಿಸಿದೆ. ಕಳೆದ 14 ವರ್ಷಗಳಲ್ಲಿ ಕರ್ನಾಟಕದಲ್ಲಿ ಸಕ್ರಿಯವಾಗಿದ್ದ ಮೂರು ಪ್ರಮುಖ ಉಗ್ರ ಮಾಡ್ಯೂಲ್‌ಗಳನ್ನು ಈತನೇ ಆಪರೇಟ್ ಮಾಡಿದ್ದ ಎನ್ನಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ (2004-2008) ಇಂಜಿನಿಯರಿಂಗ್ ಮುಗಿಸಿದ್ದ ಈತ, ಕೆಲವು ವರ್ಷ ಬೆಂಗಳೂರಿನಲ್ಲೇ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದ. ಆನಂತರ ಸೌದಿ ಅರೇಬಿಯಾಕ್ಕೆ ತೆರಳಿದವನು ಅಲ್ಲಿಂದ ನೇರವಾಗಿ ಪಾಕಿಸ್ತಾನ ಸೇರಿಕೊಂಡಿದ್ದ ಎಂದು ತಿಳಿದುಬಂದಿದೆ. ಎನ್‌ಐಎಗೆ 2012 ರಿಂದಲೇ ಮೋಸ್ಟ್ ವಾಂಟೆಡ್ ಆಗಿರುವ ಈತನ ತಲೆಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ.
ಬೆಂಗಳೂರಿನ ಟೆಕ್ಕಿ ಫೈಸಲ್ ಹೊರತುಪಡಿಸಿ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹೊಸ ಪಟ್ಟಿಯಲ್ಲಿರುವ ಇನ್ನುಳಿದ ಐದು ಜನ ಭಾರತೀಯ ಉಗ್ರರು ಜಮ್ಮು ಮತ್ತು ಕಾಶ್ಮೀರ ಮೂಲದವರಾಗಿದ್ದಾರೆ. ಇವರಲ್ಲಿ ಕುಲ್ಗಾಮ್‌ನ 33 ವರ್ಷದ ಫಿರ್ದೌಸ್ ಅಹ್ಮದ್ ಭಟ್, ಅನಂತನಾಗ್‌ನ 36 ವರ್ಷದ ಹಾರೂನ್ ರಶೀದ್ ಗಣೈ ಅಲಿಯಾಸ್ ಶುನೂ, ಸೋಪೋರ್‌ನ 27 ವರ್ಷದ ಬಿಲಾಲ್ ಅಹ್ಮದ್ ಮೀರ್ ಅಲಿಯಾಸ್ ಅಹ್ಮದ್ ಭಾಯಿ, ಬಾರಾಮುಲ್ಲಾದ 27 ವರ್ಷದ ಆಬಿದ್ ಖುಯೂಮ್ ಲೋನ್ ಮತ್ತು ದೋಡಾ ಮೂಲದ ನಜೀರ್ ಅಹ್ಮದ್ ಗುಜ್ಜರ್ ಅಲಿಯಾಸ್ ಮುನಾಜಿಲ್ ಪ್ರಮುಖರಾಗಿದ್ದಾರೆ. ಕಣಿವೆ ರಾಜ್ಯದಲ್ಲಿ ಯುವಕರನ್ನು ಹಾದಿತಪ್ಪಿಸಿ, ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೇರೇಪಿಸುತ್ತಿದ್ದ ಈ ಐವರೂ ಸದ್ಯ ಭಾರತದಿಂದ ಪರಾರಿಯಾಗಿದ್ದು, ಗಡಿ ಆಚೆಯಿಂದಲೇ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದಾರೆ.
ಕೇಂದ್ರ ಗೃಹ ಸಚಿವಾಲಯವು ನಿಷೇಧಿಸಿರುವ ಪಾಕಿಸ್ತಾನಿ ಪ್ರಜೆಗಳ ಪಟ್ಟಿಯಲ್ಲಿ ಭಾರತದ ರಕ್ಷಣಾ ಪಡೆಗಳ ಮೇಲೆ ದಾಳಿ ನಡೆಸಿದ ಭೀಕರ ಉಗ್ರರ ಹೆಸರುಗಳಿವೆ. ಇವರಲ್ಲಿ ಜೈಶ್-ಎ-ಮೊಹಮ್ಮದ್ (JeM) ಸಂಘಟನೆಯ ಮಸೂದ್ ಇಲ್ಯಾಸ್ ಕಾಶ್ಮೀರಿ ಪ್ರಮುಖನಾಗಿದ್ದು, ಈತ ಏಪ್ರಿಲ್ 2022ರಲ್ಲಿ ಜಮ್ಮುವಿನ 'ಸುಂಜ್ವಾನ್' ಸೇನಾ ನೆಲೆಯ ಮೇಲೆ ನಡೆದಿದ್ದ ಭೀಕರ ದಾಳಿಯ ಮುಖ್ಯ ಸೂತ್ರಧಾರಿಯಾಗಿದ್ದಾನೆ.
ಪಾಕಿಸ್ತಾನದ ನೆಲದಲ್ಲಿ ಕುಳಿತು ಭಾರತದ ವಿರುದ್ಧ ನಿರಂತರವಾಗಿ ಯುದ್ಧ ಸಾರುತ್ತಿರುವ ಅಬ್ದುಲ್ಲಾ ಜಿಹಾದಿ ಮತ್ತು ಹಫೀಜ್ ಅಬ್ದುಲ್ ಶಕೂರ್, ಅಲ್ಲಿನ ಜೈಶ್ ತರಬೇತಿ ಶಿಬಿರಗಳನ್ನು ಮುನ್ನಡೆಸುತ್ತಿದ್ದಾರೆ. ಭಾರತದ ಗಡಿಯೊಳಗೆ ನುಗ್ಗಿ ವಿಧ್ವಂಸಕ ದಾಳಿಗಳನ್ನು ನಡೆಸುವುದು ಹೇಗೆ ಎಂಬ ಬಗ್ಗೆ ಇವರು ಉಗ್ರರಿಗೆ ಕಠಿಣ ತರಬೇತಿ ನೀಡುತ್ತಿದ್ದರು. ಇವರಿಗೆ ಸಾಥ್ ನೀಡುತ್ತಿದ್ದ ಗುಲಾಮ್ ಫರೀದ್, ಅಶ್ಫಾಕ್ ಅಹ್ಮದ್ ಮತ್ತು ಮೌಲಾನಾ ಇಮ್ದಾದ್ ಉಲ್ಲಾ ಮಕ್ಕಿ ಎಂಬ ಉಗ್ರರು, ಈ ಇಡೀ ಭಯೋತ್ಪಾದಕ ಜಾಲಕ್ಕೆ ಅಗತ್ಯವಿರುವ ಅತ್ಯಾಧುನಿಕ ತಾಂತ್ರಿಕ ನೆರವು, ಹವಾಲಾ ಹಣಕಾಸು ಮತ್ತು ಮಾರಕಾಸ್ತ್ರಗಳ ಸರಬರಾಜು ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ವಿವಿಧ ಜೈಶ್ ಬಣಗಳ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದ ಇಮ್ದಾದ್ ಉಲ್ಲಾ ಮಕ್ಕಿ, ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಪ್ಲ್ಯಾನ್ ಮಾಡುತ್ತಿದ್ದ.
ಮುಂಬೈ ಭೀಕರ ದಾಳಿಯ ಮಾಸ್ಟರ್‌ಮೈಂಡ್ ಹಾಗೂ ಲಷ್ಕರ್-ಎ-ತೊಯ್ಬಾ (LeT) ಮುಖ್ಯಸ್ಥ ಹಫೀಜ್ ಸಯೀದ್‌ನ ಅತ್ಯಂತ ಆಪ್ತ ವಲಯಕ್ಕೂ ಕೇಂದ್ರ ಸರ್ಕಾರ ಈ ಬಾರಿ ಚಾಟಿ ಬೀಸಿದೆ. ಹಫೀಜ್ ಸಯೀದ್ ಅಣತಿಯಂತೆ ಲಷ್ಕರ್ ಸಂಘಟನೆಯ ಹಣಕಾಸು ವ್ಯವಹಾರ ಹಾಗೂ ದಾಳಿಗಳ ಯೋಜನೆ ರೂಪಿಸುತ್ತಿದ್ದ ಕೀ ಆಪರೇಟಿವ್ ಅಬ್ದುಲ್ ರೌಫ್ ಮತ್ತು ಹಲವು ಉಗ್ರ ದಾಳಿಗಳ ಮಾಸ್ಟರ್‌ಮೈಂಡ್ ಹಫೀಜ್ ಖಾಲಿದ್ ವಾಲೀದ್‌ನನ್ನು ಭಾರತ ಸರ್ಕಾರ ಅಧಿಕೃತವಾಗಿ ಉಗ್ರರ ಪಟ್ಟಿಗೆ ಸೇರಿಸಿದೆ.












Click it and Unblock the Notifications