ತಿಂಗಳಿಗೆ ₹ 2,000 ಹೂಡಿಕೆ ಮಾಡಿದರೆ ಮಗುವಿನ 18ನೇ ವಯಸ್ಸಿಗೆ ₹15 ಲಕ್ಷ! ಏನಿದು NPS ವಾತ್ಸಲ್ಯ ಯೋಜನೆ ?
"ನನ್ನ ಮಗಳು ದೊಡ್ಡವಳಾದಾಗ ಆಕೆಯ ಉನ್ನತ ಶಿಕ್ಷಣಕ್ಕೆ ಹಣದ ಕೊರತೆ ಬರಬಾರದು..." ಎಂಬುದು ಬೆಂಗಳೂರು ನಿವಾಸಿಗಳಾದ 32 ವರ್ಷದ ರಾಘವ್ ಮತ್ತು ಅವರ ಪತ್ನಿ ಸ್ವಾತಿಯ ಕನಸು. ಹೀಗಾಗಿ ತಮ್ಮ ಒಂದು ವರ್ಷದ ಮಗಳು ಅನ್ವಿಗಾಗಿ ಭವಿಷ್ಯದ ಯೋಜನೆ ರೂಪಿಸುತ್ತಿದ್ದಾರೆ. ಶಿಕ್ಷಣ ವೆಚ್ಚ ದಿನದಿಂದ ದಿನಕ್ಕೆ ಏರುತ್ತಿರುವುದನ್ನು ನೋಡಿ, ಈಗಲೇ ಉಳಿತಾಯ ಆರಂಭಿಸಬೇಕೆಂದು ನಿರ್ಧರಿಸಿದ್ದಾರೆ. ಯಾವುದು ಮಾಡೋಣ? ಬ್ಯಾಂಕ್ ಠೇವಣಿ, ಮ್ಯೂಚುವಲ್ ಫಂಡ್, ಚಿನ್ನ... ಹೀಗೆ ಹಲವು ಆಯ್ಕೆಗಳನ್ನು ಪರಿಶೀಲಿಸಿದ ಬಳಿಕ, ಸರ್ಕಾರದ ಬೆಂಬಲ ಹೊಂದಿರುವ ʼಎನ್‌ಪಿಎಸ್ ವಾತ್ಸಲ್ಯʼ (NPS Vatsalya) ಯೋಜನೆಯ ಬಗ್ಗೆ ಅವರಿಗೆ ಮಾಹಿತಿ ಸಿಕ್ಕಿತು.
Vatsalya: ಮಕ್ಕಳಿಗಾಗಿ ವಿಶೇಷ ಯೋಜನೆ
ಎನ್‌ಪಿಎಸ್ ವಾತ್ಸಲ್ಯ ಎನ್ನುವುದು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ರೂಪಿಸಲಾದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ವಿಶೇಷ ಯೋಜನೆ. ಮಗುವಿನ ಪರವಾಗಿ ಪೋಷಕರು ಅಥವಾ ಕಾನೂನುಬದ್ಧ ಪಾಲಕರು ಈ ಖಾತೆಯನ್ನು ತೆರೆಯಬಹುದು. ಖಾತೆ ತೆರೆಯಲು ಕೇವಲ ₹250 ಸಾಕು. ವಾರ್ಷಿಕ ಕನಿಷ್ಠ ಕೊಡುಗೆಯೂ ₹250 ಮಾತ್ರ. ಆದರೆ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇಲ್ಲ. ಅಂದರೆ, ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಪೋಷಕರು ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು.

ತಿಂಗಳಿಗೆ ₹2,000 ಹೂಡಿದರೆ ಎಷ್ಟು ಹಣ ಸಿಗಬಹುದು?
ಉದಾಹರಣೆಗೆ ನೀವು ನಿಮ್ಮ ಮಗ ಅಥವಾ ಮಗಳ ಹೆಸರಿನಲ್ಲಿ ತಿಂಗಳಿಗೆ ₹2,000 ಹೂಡಿಕೆ ಮಾಡಲು ತೀರ್ಮಾನಿಸಿದ್ದೀರಿ ಎಂದಿಟ್ಟುಕೊಳ್ಳಿ. 18 ವರ್ಷಗಳ ಕಾಲ ಈ ಹೂಡಿಕೆ ಮುಂದುವರಿದರೆ, ಮಾರುಕಟ್ಟೆಯ ಲಾಭದ ಆಧಾರದ ಮೇಲೆ ಅಂದಾಜು ಈ ಕೆಳಗಿನ ರೀತಿಯ ಮೊತ್ತ ಸಿಗಬಹುದು.
8% ವಾರ್ಷಿಕ ಲಾಭ ಬಂದರೆ - ಸುಮಾರು ₹9.67 ಲಕ್ಷ
9% ಲಾಭ ಬಂದರೆ- ಸುಮಾರು ₹10.81 ಲಕ್ಷ
10% ಲಾಭ ಬಂದರೆ - ಸುಮಾರು ₹12.11 ಲಕ್ಷ
11% ಲಾಭ ಬಂದರೆ - ಸುಮಾರು ₹13.60 ಲಕ್ಷ
12% ಲಾಭ ಬಂದರೆ - ಸುಮಾರು ₹15.31 ಲಕ್ಷ
ಅದೇ ತಿಂಗಳಿಗೆ ₹10,000 ಹೂಡಿಕೆ ಮಾಡಿದರೆ, 18 ವರ್ಷಗಳ ನಂತರ ಸುಮಾರು ₹48 ಲಕ್ಷದಿಂದ ₹76 ಲಕ್ಷದವರೆಗೆ ನಿಧಿ ಸಂಗ್ರಹವಾಗುವ ಸಾಧ್ಯತೆ ಇದೆ.
ಯಾರು ಖಾತೆ ತೆರೆಯಬಹುದು?
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಭಾರತೀಯ ಮಗು ಈ ಯೋಜನೆಗೆ ಅರ್ಹವಾಗಿದೆ. ವಿದೇಶದಲ್ಲಿ ವಾಸಿಸುವ ಭಾರತೀಯರು (NRI) ಹಾಗೂ OCI ಮಕ್ಕಳಿಗೂ ಈ ಯೋಜನೆ ಲಭ್ಯ. ಖಾತೆಯನ್ನು ಆನ್‌ಲೈನ್ ಅಥವಾ ಅಧಿಕೃತ ಪಾಯಿಂಟ್ ಆಫ್ ಪ್ರೆಸೆನ್ಸ್ (PoP) ಕೇಂದ್ರಗಳ ಮೂಲಕ ತೆರೆಯಬಹುದು.
ಇದಕ್ಕೆ ಯಾವ ಯಾವ ದಾಖಲೆಗಳು ಬೇಕು? ಮಗುವಿನ ಜನನ ಪ್ರಮಾಣಪತ್ರ, ಶಾಲಾ ದಾಖಲೆ, ಪಾಸ್‌ಪೋರ್ಟ್ ಅಥವಾ ಪ್ಯಾನ್ ಕಾರ್ಡ್‌ಗಳಲ್ಲಿ ಯಾವುದಾದರೂ ಒಂದು ದಾಖಲೆಯೊಂದಿಗೆ ಪಾಲಕರ ಆಧಾರ್, ಪ್ಯಾನ್ ಹಾಗೂ ಕೆವೈಸಿ ದಾಖಲೆಗಳು ಅಗತ್ಯ.
ಖಾತೆ ತೆರೆದ ಮೂರು ವರ್ಷಗಳ ನಂತರ ಕೆಲವು ವಿಶೇಷ ಸಂದರ್ಭಗಳಲ್ಲಿ ಭಾಗಶಃ ಹಣ ಹಿಂಪಡೆಯಲು ಅವಕಾಶವಿದೆ.
ಅವುಗಳೆಂದರೆ:
* ಮಗುವಿನ ಶಿಕ್ಷಣಕ್ಕಾಗಿ
* ನಿರ್ದಿಷ್ಟ ಗಂಭೀರ ಕಾಯಿಲೆಯ ಚಿಕಿತ್ಸೆಗೆ
* 75%ಕ್ಕಿಂತ ಹೆಚ್ಚು ಅಂಗವೈಕಲ್ಯ ಉಂಟಾದರೆ
ಈ ಸಂದರ್ಭಗಳಲ್ಲಿ ಪೋಷಕರು ಮಾಡಿದ ಒಟ್ಟು ಹೂಡಿಕೆಯ 25%ವರೆಗೆ ಹಣವನ್ನು ಹಿಂಪಡೆಯಬಹುದು. 18 ವರ್ಷ ತುಂಬುವ ಮೊದಲು ಗರಿಷ್ಠ ಎರಡು ಬಾರಿ ಮಾತ್ರ ಈ ಸೌಲಭ್ಯ ಲಭ್ಯ.
18 ವರ್ಷವಾದ ನಂತರ ಏನಾಗುತ್ತದೆ?
ಮಗು 18 ವರ್ಷ ಪೂರೈಸಿದ ಬಳಿಕ ಖಾತೆಯು ಸ್ವಯಂಚಾಲಿತವಾಗಿ ಸಾಮಾನ್ಯ ಎನ್‌ಪಿಎಸ್ ಟಯರ್-1 ಖಾತೆಯಾಗಿ ಪರಿವರ್ತನೆಯಾಗುತ್ತದೆ. ಆದರೆ ಅದಕ್ಕೂ ಮೊದಲು ಹೊಸ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು.
ಆ ಬಳಿಕ ಮೂರು ಆಯ್ಕೆಗಳಿವೆ- 1. ಖಾತೆಯನ್ನು ಮುಂದುವರಿಸುವುದು 2. ನಿಯಮಾನುಸಾರ ಹಣ ಹಿಂಪಡೆಯುವುದು. 3. ನಿಗದಿತ ಮಿತಿಯೊಳಗಿನ ನಿಧಿಯಿದ್ದರೆ ಸಂಪೂರ್ಣ ಮೊತ್ತವನ್ನು ಪಡೆಯುವುದು.
ತೆರಿಗೆ ಲಾಭವೂ ಇದೆ
ಈ ಯೋಜನೆಯಲ್ಲಿ ಪೋಷಕರು ಮಾಡಿದ ಹೂಡಿಕೆಗೆ ಹಳೆಯ ತೆರಿಗೆ ಪದ್ಧತಿ (Old Tax Regime) ಅಡಿಯಲ್ಲಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80CCD(1B) ಪ್ರಕಾರ ವರ್ಷಕ್ಕೆ ₹50,000ವರೆಗೆ ಹೆಚ್ಚುವರಿ ತೆರಿಗೆ ವಿನಾಯಿತಿ ದೊರೆಯುತ್ತದೆ. ಇದು ಸೆಕ್ಷನ್ 80C ಅಡಿಯಲ್ಲಿ ಸಿಗುವ ₹1.5 ಲಕ್ಷ ವಿನಾಯಿತಿಗೆ ಹೆಚ್ಚುವರಿಯಾಗಿದೆ.
ಈ ಯೋಜನೆ ಮಾರುಕಟ್ಟೆ ಆಧಾರಿತವಾಗಿದ್ದು, ಲಾಭ ನಿಗದಿಯಾಗಿಯೇ ಇರುತ್ತದೆ ಎಂದೇನಿಲ್ಲ. ಆದಾಯವು ಪಿಂಚಣಿ ನಿಧಿಗಳ ಕಾರ್ಯಕ್ಷಮತೆಯ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ಮೇಲಿನ ಮೊತ್ತಗಳು ಅಂದಾಜು ಮಾತ್ರ, ಖಚಿತ ಲಾಭವಲ್ಲ.
ಮಗುವಿನ ಭವಿಷ್ಯಕ್ಕಾಗಿ ದೊಡ್ಡ ಮೊತ್ತವನ್ನು ಒಮ್ಮೆಗೆ ಉಳಿಸುವುದು ಎಲ್ಲರಿಗೂ ಸಾಧ್ಯವಾಗದೇ ಇರಬಹುದು. ಆದರೆ ತಿಂಗಳಿಗೆ ₹2,000 ಅಥವಾ ₹5,000ರಂತಹ ಸಣ್ಣ ಮೊತ್ತವನ್ನು ಶಿಸ್ತುಬದ್ಧವಾಗಿ ಹೂಡಿಕೆ ಮಾಡಿದರೆ, 18 ವರ್ಷಗಳ ಬಳಿಕ ಉನ್ನತ ಶಿಕ್ಷಣ, ವಿದೇಶ ವ್ಯಾಸಂಗ ಅಥವಾ ಆರ್ಥಿಕ ಸ್ವಾವಲಂಬನೆಗೆ ನೆರವಾಗುವಷ್ಟು ಉತ್ತಮ ನಿಧಿಯನ್ನು ನಿರ್ಮಿಸಬಹುದು. ಎನ್‌ಪಿಎಸ್ ವಾತ್ಸಲ್ಯ ಯೋಜನೆ, ದೀರ್ಘಾವಧಿಯ ಉಳಿತಾಯವನ್ನು ಅಭ್ಯಾಸವಾಗಿಸಲು ಬಯಸುವ ಪೋಷಕರಿಗೆ ಒಂದು ಉತ್ತಮ ಆಯ್ಕೆಯಾಗಿ ಪರಿಗಣಿಸಬಹುದು.
(ಬರಹ - ಭವಾನಿ ಭಟ್)














Click it and Unblock the Notifications