HK ಪಾಟೀಲ್ ಹೆಸರಿನಲ್ಲಿ 3 ವೋಟರ್ ಐಡಿ?; ಕ್ಷಮೆ ಕೇಳಲ್ಲ, ತನಿಖೆ ಮಾಡಿ: ಬೊಮ್ಮಾಯಿ
ಬೆಂಗಳೂರು: ಚುನಾವಣೆ ಆಯೋಗದ ವತಿಯಿಂದ ಮತದಾರರ ಮತಪಟ್ಟಿ ಸಮಗ್ರ ಪರಿಷ್ಕರಣೆ (SIR) ನಡೆಯುತ್ತಿದೆ. ಸಾಮೂಹಿಕವಾಗಿ, ಮಸೀದಿ, ಭವನಗಳಲ್ಲಿ ಗುಂಪುಗೂಡಿಸಿಕೊಂಡು ಅರ್ಜಿ ನಮೂನೆ ವಿತರಣೆ ಮಾಡುತ್ತಿದ್ದಾರೆ. ಎಸ್‌ಐಆರ್ ನಲ್ಲಿ ಅಕ್ರಮ ನಡೆಯುತ್ತಿವೆ ಎಂಬ ಆರೋಪ ಬೆನ್ನಲ್ಲೆ ಇದೀಗ ಮಾಜಿ ಸಚಿವ HK ಪಾಟೀಲ್ ಅವರ ಹೆಸರಿನಲ್ಲಿ ನಕಲಿ ಮತದಾರ ಪಟ್ಟಿ ಬಗ್ಗೆ ಒಂದಷ್ಟು ಗೊಂದಲಗಳು ಸೃಷ್ಟಿಯಾಗಿವೆ. ಈ ಕುರಿತು ಮಾಜಿ ಸಿಎಂ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರು ಚುನವಣಾ ಅಧಿಕಾರಿಗಳ ತನಿಖೆಗೆ ಆಗ್ರಹಿಸಿದ್ದಾರೆ.
ಮಾಧ್ಯಮ ಹೇಳಿಕೆ ನೀಡಿರುವ ಬೊಮ್ಮಾಯಿ ಅವರು, ಮತದಾರರ ಪಟ್ಟಿಯಲ್ಲಿನ ಲೋಪದೋಷಗಳ ಕುರಿತು ತಮ್ಮ ಹೇಳಿಕೆ ಸಮರ್ಥಿಸಿಕೊಂಡರು. ಪಾಟೀಲರ ಹೆಸರಿನ ಮತದಾರರ ಚೀಟಿ ಕುರಿತು ಚುನಾವಣಾ ಅಧಿಕಾರಿಯೇ ತೀವ್ರಗತಿಯಲ್ಲಿ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಈ ವಿಷಯದಲ್ಲಿ ತಾವು ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದಾಖಲೆ ಆಧಾರದಲ್ಲೇ ಮಾತನಾಡಿದ್ದೇನೆ
ಮತಪಟ್ಟಿ (ವೋಟರ್ ಲಿಸ್ಟ್) ಯಲ್ಲಿರುವ ಅಧಿಕೃತ ದಾಖಲೆಗಳನ್ನು ಅನುಗುಣವಾಗಿಯೇ ನಿನ್ನೆ ಎಚ್.ಕೆ. ಪಾಟೀಲ್ ಅವರ ಹೆಸರಿನಲ್ಲಿ ಮೂರು ಮತಗಳಿರುವ ಕುರಿತು ಹೇಳಿಕೆ ನೀಡಲಾಗಿತ್ತು. ಒಂದೇ ಕ್ಷೇತ್ರದಲ್ಲಿ, ಒಂದೇ ಊರಿನಲ್ಲಿ ಹಾಗೂ ಪಕ್ಕದ ಊರಿನಲ್ಲಿ ವ್ಯಕ್ತಿಯ ಹೆಸರು ಮತ್ತು ತಂದೆಯ ಹೆಸರು ಒಂದೇ ತರ ಇರುವುದರಿಂದ ಪಕ್ಷದ ಮುಖಂಡರು ಸಂಶಯ ವ್ಯಕ್ತಪಡಿಸಿದ್ದರು. ಆ ಮಾಹಿತಿಯ ಆಧಾರದ ಮೇಲೆಯೇ ಈ ವಿಷಯವನ್ನು ಪ್ರಸ್ತಾಪಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಈ ಗೊಂದಲಕ್ಕೆ ಸಂಬಂಧಿಸಿದಂತೆ ಎಚ್.ಕೆ. ಪಾಟೀಲ್ ಅವರು ಇಂದು ನೀಡಿರುವ ಸ್ಪಷ್ಟೀಕರಣವನ್ನು ಚುನಾವಣಾ ಅಧಿಕಾರಿಗಳು ಸೂಕ್ತವಾಗಿ ಮತ್ತು ಕೂಲಂಕಷವಾಗಿ ಪರಿಶೀಲಿಸಬೇಕು. ಇದು ಕೇವಲ ಎಚ್.ಕೆ. ಪಾಟೀಲ್ ಅವರಿಗೆ ಮಾತ್ರ ಸೀಮಿತವಾಗಿಲ್ಲ. ಒಂದೇ ಹೆಸರಿನಲ್ಲಿ 4 ರಿಂದ 5 ಮತಗಳಿರುವ ಹಲವಾರು ಪ್ರಕರಣಗಳಿವೆ. ಈಗಾಗಲೇ 3-4 ಉದಾಹರಣೆಗಳನ್ನು ನೀಡಲಾಗಿದೆ. 'ಮ್ಯಾಪಿಂಗ್' ಮಾಡಿದ ನಂತರವೂ ಇಂತಹ ತಪ್ಪುಗಳು ಮರುಕಳಿಸುತ್ತಿರುವುದು ಗಂಭೀರ ವಿಚಾರವಾಗಿದ್ದು, ಮುಖ್ಯ ಚುನಾವಣಾ ಅಧಿಕಾರಿಯೇ ಇದರ ಸಂಪೂರ್ಣ ಪರಿಶೀಲನೆ ನಡೆಸುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಇದು ವೈಯಕ್ತಿಕ ಅಪಾದನೆ ಅಲ್ಲ
"ನನ್ನ ಬಳಿ ಇದ್ದ ಮಾಹಿತಿಯನ್ನಷ್ಟೇ ನಾನು ಬಹಿರಂಗಪಡಿಸಿದ್ದೇನೆ ಹೊರತು, ಎಚ್.ಕೆ. ಪಾಟೀಲ್ ಅವರ ಮೇಲೆ ವೈಯಕ್ತಿಕವಾಗಿ ಯಾವುದೇ ಆಪಾದನೆ ಮಾಡಿಲ್ಲ. ಹೀಗಿರುವಾಗ ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕ್ಷಮೆ ಕೇಳಿ ಎನ್ನುವ ಅವರ ಬೇಡಿಕೆ ಅತ್ಯಂತ ಹಾಸ್ಯಾಸ್ಪದವಾಗಿದೆ ಎಂದು ತಿಳಿಸಿದ್ದಾರೆ.
ಗದಗ ಮತ್ತು ರೋಣ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ದೊಡ್ಡ ಮಟ್ಟದ ಎರಡು ಮೂರು ಕಡೆ ಹೆಸರುಗಳು ಸೇರ್ಪಡೆಯಾಗಿವೆ. ಮ್ಯಾಪಿಂಗ್ ಮಾಡಿದ್ದರೂ ಸಹ ಅನರ್ಹರ ಹೆಸರುಗಳು ಮತ್ತೆ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಉದಾಹರಣೆಯಾಗಿ ಮಾಜಿ ಸಚಿವ ಎಚ್.ಕೆ. ಪಾಟೀಲ್ ಅವರ ಹೆಸರನ್ನೇ ಬೊಮ್ಮಾಯಿ ಮೊನ್ನೆಯಷ್ಟೇ ಪ್ರಸ್ತಾಪಿಸಿದ್ದರು.
ಮೂರು ಬಾರಿ ಮತಪಟ್ಟಿಗಿದೆ ಆಧಾರ!
"ಹುಲಕೋಟಿಯ ಹನುಮಂತಗೌಡ ಕೃಷ್ಣಗೌಡ ಪಾಟೀಲ್ (ಎಚ್.ಕೆ. ಪಾಟೀಲ್) ಅವರ ಹೆಸರೇ ಬೂತ್ ನಂಬರ್ 143 (ಕ್ರಮ ಸಂಖ್ಯೆ 161 ಮತ್ತು 183) ಹಾಗೂ ಬೂತ್ ನಂಬರ್ 153 (ಕ್ರಮ ಸಂಖ್ಯೆ 393) ರಲ್ಲಿ ಮೂರು ಬಾರಿ ದಾಖಲಾಗಿದೆ. ಒಬ್ಬ ಜವಾಬ್ದಾರಿಯುತ ಸಚಿವರ ಹೆಸರೇ ಮತದಾರರ ಪಟ್ಟಿಯಲ್ಲಿ ಮೂರು ಬಾರಿ ಬಂದರೆ, ಇನ್ನು ಸಾಮಾನ್ಯ ಜನರ ಪರಿಸ್ಥಿತಿ ಏನು? ಯಾವ ರೀತಿಯ ಪರಿಷ್ಕರಣೆ ನಡೆಯುತ್ತಿದೆ? ಎಂದು ಅವರು ಪ್ರಶ್ನಿಸಿದರು.
ಚುನಾವಣಾ ಆಯೋಗದಿಂದ ಲಭ್ಯವಾಗಿರುವ ಅಧಿಕೃತ ಪ್ರತಿಯನ್ನು ಮಾಧ್ಯಮಗಳಿಗೆ ಪ್ರದರ್ಶಿಸಿದ ಅವರು, ಇಂತಹ ಲೋಪದೋಷಗಳನ್ನು ಸರಿಪಡಿಸುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದ್ದರೂ ಅವರು ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ, ಎಸ್‌ಐಆರ್‍ನಲ್ಲಿ ಲೋಪ ಕಂಡುಬಂದಿದೆ ಎಂದರು.
ಗದಗ, ರೋಣ : 3804 ನಕಲಿ ವೋಟರ್ ಐಡಿ
ಮತದಾರರ ಪಟ್ಟಿಯಲ್ಲಿ ಒಂದೇ ಹೆಸರಿನ ದ್ವಿಪ್ರತಿ ತ್ರಿಪ್ರತಿ ಹಾಗೂ ನಾಲ್ಕೈದು ಕಡೆ ಒಂದೇ ಹೆಸರಿರುವ ಪ್ರಕರಣಗಳು ದಾಖಲೆಯ ಸಮೇತ ಬೆಳಕಿಗೆ ಬಂದಿವೆ ರೋಣ ಕ್ಷೇತ್ರದಲ್ಲಿ ಒಟ್ಟು 3,804 ಮತಗಳು ನಕಲಿಯಾಗಿವೆ. ಒಬ್ಬನೇ ವ್ಯಕ್ತಿಯ ಹೆಸರು ನಾಲ್ಕರಿಂದ ಐದು ಕಡೆ ಇರುವುದು ಪತ್ತೆಯಾಗಿದೆ. ಗದಗ ಕ್ಷೇತ್ರದಲ್ಲೂ ಸಹ ಇದೇ ರೀತಿಯ 2,305 ಡಬಲ್ ಹಾಗೂ ತ್ರಿಬಲ್ ಮತಗಳು ಪತ್ತೆಯಾಗಿವೆ. ಇವು ಕೇವಲ ನಮಗೆ ಮೇಲ್ನೋಟಕ್ಕೆ ಕಂಡುಬಂದಿರುವ ಅಂಕಿ-ಅಂಶಗಳಾಗಿದ್ದು, ಇನ್ನು ಎಷ್ಟು ಅಕ್ರಮಗಳು ನಡೆದಿವೆಯೋ ಎಂಬುದನ್ನು ಪರಿಶೀಲಿಸಬೇಕಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.













Click it and Unblock the Notifications