ಸ್ಯಾಂಡಲ್‌ವುಡ್‌ಗೆ ಸಿ.ಪಿ.ಯೋಗೇಶ್ವರ್ ಪುತ್ರ ಧ್ಯಾನ್ ಎಂಟ್ರಿ: ಸಿಎಂ ಡಿ.ಕೆ.ಶಿವಕುಮಾರ್ ಸಾಥ್
ಚನ್ನಪಟ್ಟಣದ ರಾಜಕೀಯ ಅಖಾಡದಲ್ಲಿ ಸದಾ ಸಕ್ರಿಯರಾಗಿರುವ ಶಾಸಕ ಹಾಗೂ ಹಿರಿಯ ನಟ ಸಿ.ಪಿ.ಯೋಗೇಶ್ವರ್ ಅವರ ಕುಟುಂಬದಿಂದ ಮತ್ತೊಬ್ಬ ಕುಡಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದೆ. ಯೋಗೇಶ್ವರ್ ಅವರ ಪುತ್ರ ಧ್ಯಾನ್ ಯೋಗೇಶ್ವರ್ ಸ್ಯಾಂಡಲ್‌ವುಡ್‌ಗೆ ನಾಯಕ ನಟನಾಗಿ ಅದ್ಧೂರಿ ಎಂಟ್ರಿ ಕೊಡುತ್ತಿದ್ದು, ಇವರ ಚೊಚ್ಚಲ ಚಿತ್ರದ ಮುಹೂರ್ತ ಸಮಾರಂಭಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.
ಹಿಂದೆ ರಾಜಕೀಯವಾಗಿ ಎದುರಾಳಿಗಳಾಗಿದ್ದ ಸಿ.ಪಿ. ಯೋಗೇಶ್ವರ್ ಮತ್ತು ಡಿ.ಕೆ. ಶಿವಕುಮಾರ್, ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಳಿಕ ಈಗ ಒಂದೇ ಪಕ್ಷದಲ್ಲಿ ಅತ್ಯಂತ ಆಪ್ತರಾಗಿ ಗುರುತಿಸಿಕೊಂಡಿದ್ದಾರೆ. ಚನ್ನಪಟ್ಟಣದ ಉಪಚುನಾವಣೆ ಹಾಗೂ ಪಕ್ಷದ ಬೆಳವಣಿಗೆಯಿಂದ ಹಿಡಿದು ಸರ್ಕಾರದವರೆಗೆ ಜೊತೆಯಾಗಿ ಸಾಗುತ್ತಿರುವ ಈ ನಾಯಕರು, ಈಗ ಸಿನಿಮಾ ವೇದಿಕೆಯಲ್ಲೂ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಧ್ಯಾನ್ ಯೋಗೇಶ್ವರ್ ಅವರ "ಕರ್ಣಾಟಬಲಂ" ಚಿತ್ರದ ಮೊದಲ ದೃಶ್ಯದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಅಧಿಕೃತವಾಗಿ ಚಾಲನೆ ನೀಡಿ, ಯುವ ನಟನಿಗೆ ಶುಭ ಹಾರೈಸಿದರು.

ಈ ಸಮಾರಂಭದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, "ಚನ್ನಪಟ್ಟಣದ ಶಾಸಕರು ಹಾಗೂ ನಟರಾದ ಸಿ.ಪಿ.ಯೋಗೇಶ್ವರ್ ಅವರು ಹಾಗೂ ಅವರ ಪುತ್ರ ಧ್ಯಾನ್ ಯೋಗೇಶ್ವರ್ ಅವರ ಚಲನಚಿತ್ರದ ಮುಹೂರ್ತ ಸಮಾರಂಭದಲ್ಲಿ ಪಾಲ್ಗೊಂಡು, ಚಿತ್ರತಂಡಕ್ಕೆ ಶುಭಹಾರೈಸಿದೆ" ಎಂದು ಬರೆದುಕೊಂಡಿದ್ದಾರೆ.
ತಂದೆಯ ಹಾದಿಯಲ್ಲೇ ಸಾಗಿದ ಮಗ
ಸಿ.ಪಿ.ಯೋಗೇಶ್ವರ್ ಅವರು ರಾಜಕೀಯದಲ್ಲಿ ಉತ್ತುಂಗಕ್ಕೇರುವ ಮುನ್ನ ಸ್ಯಾಂಡಲ್‌ವುಡ್‌ನಲ್ಲಿ 'ಸೈನಿಕ' ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕ ನಟನಾಗಿ ಪ್ರೇಕ್ಷಕರನ್ನು ರಂಜಿಸಿದ್ದರು. ಇದೀಗ ಅವರ ಪುತ್ರ ಧ್ಯಾನ್ ಯೋಗೇಶ್ವರ್ ಸಹ ತಂದೆಯಂತೆಯೇ ಚಿತ್ರರಂಗದ ಮೂಲಕ ತಮ್ಮ ವೃತ್ತಿಜೀವನ ಆರಂಭಿಸುತ್ತಿದ್ದಾರೆ. ಈ ಮುಹೂರ್ತದ ಮೂಲಕ ಧ್ಯಾನ್ ಅವರ ಸಿನಿ ಪಯಣ ಅಧಿಕೃತವಾಗಿ ಆರಂಭವಾಗಿದ್ದು, ಸ್ಯಾಂಡಲ್‌ವುಡ್‌ನ ತಾರೆಯೊಬ್ಬರ ಉದಯಕ್ಕೆ ವೇದಿಕೆ ಸಿದ್ಧವಾದಂತಾಗಿದೆ.
ಅದ್ದೂರಿಯಾಗಿ ನಡೆದ ಈ ಮುಹೂರ್ತ ಸಮಾರಂಭದಲ್ಲಿ ಕೇವಲ ಮುಖ್ಯಮಂತ್ರಿಗಳು ಮಾತ್ರವಲ್ಲದೆ, ಚಿತ್ರರಂಗದವರು, ಖ್ಯಾತ ನಿರ್ದೇಶಕರು, ನಿರ್ಮಾಪಕರು ಹಾಗೂ ಹಲವು ಜನಪ್ರತಿನಿಧಿಗಳು ಭಾಗವಹಿಸಿದ್ದರು. ಸಿನಿಮಾದ ತಾರಾಗಣದ ವಿವರಗಳನ್ನು ಚಿತ್ರತಂಡ ಸದ್ಯದಲ್ಲೇ ಅಧಿಕೃತವಾಗಿ ಪ್ರಕಟಿಸಲಿದೆ. ರಾಜಕೀಯ ಮತ್ತು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಲಾಂಚ್ ಆಗಿರುವ ಧ್ಯಾನ್ ಯೋಗೇಶ್ವರ್ ಅವರ ಈ ಚಿತ್ರದ ಮೇಲೆ ಸದ್ಯ ಗಾಂಧಿನಗರದಲ್ಲಿ ಭಾರಿ ಕುತೂಹಲ ಮೂಡಿದೆ.












Click it and Unblock the Notifications