ಆಫ್ರಿಕಾದ 8,000 ಕಿಲೋಮೀಟರ್ ಉದ್ದದ ಹಸಿರು ಗೋಡೆ: ಮರಳುಗಾಡನ್ನು ವನವಾಗಿಸಲು ಜಗತ್ತಿನ ಅತಿ ದೊಡ್ಡ ಪರಿಸರ ಕ್ರಾಂತಿ
ಜಾಗತಿಕ ಹವಾಮಾನ ವೈಪರೀತ್ಯ ಮತ್ತು ಮರಭೂಮಿಕರಣದ ವಿರುದ್ಧ ಜಗತ್ತಿನ ಇತಿಹಾಸದಲ್ಲೇ ಹಿಂದೆಂದೂ ಕಂಡಿರದ ಅತ್ಯಂತ ಬೃಹತ್ ಪರಿಸರ ಸಂರಕ್ಷಣಾ ಯೋಜನೆಯೊಂದು ಆಫ್ರಿಕಾ ಖಂಡದಲ್ಲಿ ಜಾರಿಯಾಗುತ್ತಿದೆ. ಸೆನೆಗಲ್‌ನ ಅಟ್ಲಾಂಟಿಕ್ ಕರಾವಳಿಯಿಂದ ಹಿಡಿದು ಕೆಂಪು ಸಮುದ್ರದ ಜಿಬೂಟಿಯವರೆಗೆ ಸುಮಾರು 8,000 ಕಿಲೋಮೀಟರ್ ಉದ್ದಕ್ಕೂ ಹರಡಲಿರುವ ಈ ಯೋಜನೆಗೆ 'ದ ಗ್ರೇಟ್ ಗ್ರೀನ್ ವಾಲ್' (The Great Green Wall) ಎಂದು ಹೆಸರಿಡಲಾಗಿದೆ.
ಸಹಾರಾ ಮರುಭೂಮಿಯ ಗಡಿಯಲ್ಲಿರುವ 'ಸಾಹೇಲ್' (Sahel) ಎಂಬ ಅರೆ-ಶುಷ್ಕ ಪ್ರದೇಶದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ ಇದು ಕೇವಲ ಮರಗಳನ್ನು ನೆಡುವ ಸಾಧಾರಣ ಅಭಿಯಾನವಲ್ಲ. ಬದಲಿಗೆ, ಕ್ಷೀಣಿಸುತ್ತಿರುವ ಭೂಮಿಯನ್ನು ಮರುಪೂರಣ ಮಾಡುವುದು, ಆಹಾರ ಭದ್ರತೆಯನ್ನು ಬಲಪಡಿಸುವುದು, ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಹವಾಮಾನ ವೈಪರೀತ್ಯದಿಂದ ತತ್ತರಿಸುತ್ತಿರುವ ಸ್ಥಳೀಯ ಸಮುದಾಯಗಳಿಗೆ ಹೊಸ ಬದುಕು ನೀಡುವುದು ಇದರ ಉದ್ದೇಶ.

ಏನಿದು ಆಫ್ರಿಕಾದ 'ಹಸಿರು ಗೋಡೆ' ಮತ್ತು ಇದರ ಹಿನ್ನೆಲೆ?
ಆಫ್ರಿಕಾ ಒಕ್ಕೂಟವು (African Union) ಸಹಾರಾ ಮರುಭೂಮಿಯ ವಿಸ್ತರಣೆಯನ್ನು ತಡೆಯಲು ಮತ್ತು ಸಾಹೇಲ್ ಪ್ರದೇಶದ ಪರಿಸರ ಸವಾಲುಗಳನ್ನು ಎದುರಿಸಲು 2007ರಲ್ಲಿ ಈ ದೀರ್ಘಕಾಲದ ಬೃಹತ್ ಯೋಜನೆಗೆ ಚಾಲನೆ ನೀಡಿತು. ಆರಂಭದಲ್ಲಿ, ಖಂಡದ ಇಡೀ ಅಗಲಕ್ಕೂ ಸುಮಾರು 8,000 ಕಿಲೋಮೀಟರ್ ಉದ್ದ ಮತ್ತು 15 ಕಿಲೋಮೀಟರ್ ಅಗಲದ ಸರಣಿ ಮರಗಳ ದಟ್ಟವಾದ ಬೆಲ್ಟ್ ಒಂದನ್ನು ನಿರ್ಮಿಸುವುದು ಮೂಲ ಯೋಜನೆಯಾಗಿತ್ತು. ಆದರೆ ನಂತರದಲ್ಲಿ ಕೇವಲ ಒಂದು ಸಾಲಿನಲ್ಲಿ ಮರಗಳನ್ನು ನೆಡುವುದಕ್ಕಿಂತ ಹೆಚ್ಚಾಗಿ ಇಡೀ ಪರಿಸರ ವ್ಯವಸ್ಥೆಯನ್ನೇ ಪುನಶ್ಚೇತನಗೊಳಿಸುವುದು ಹೆಚ್ಚು ಪರಿಣಾಮಕಾರಿ ಎಂದು ವಿಜ್ಞಾನಿಗಳು ಮತ್ತು ಪರಿಸರವಾದಿಗಳು ಅರಿತುಕೊಂಡರು. ಹಾಗಾಗಿ ಇಂದು ಈ ಯೋಜನೆಯು ಸ್ಥಳೀಯ ವಾತಾವರಣಕ್ಕೆ ಅನುಗುಣವಾಗಿ ಕಾಡುಗಳು, ಹುಲ್ಲುಗಾವಲುಗಳು, ಜೌಗು ಪ್ರದೇಶಗಳು ಮತ್ತು ಕೃಷಿ ಭೂಮಿಯನ್ನು ಮರುಜೀವಗೊಳಿಸುವತ್ತ ಗಮನ ಹರಿಸಿದೆ.
ಆಫ್ರಿಕಾಕ್ಕೆ ಈ ಹಸಿರು ಗೋಡೆಯ ಅಗತ್ಯವೇಕೆ ಇತ್ತು?
ಕಳೆದ ಹಲವು ದಶಕಗಳಿಂದ ಸಾಹೇಲ್ ಪ್ರದೇಶವು ತೀವ್ರ ಬರಗಾಲ, ಮರುಭೂಮಿಕರಣ ಮತ್ತು ಭೂಕುಸಿತದಂತಹ ಭೀಕರ ಹವಾಮಾನ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಇಲ್ಲಿನ ಕೋಟ್ಯಂತರ ಜನರ ಬದುಕು ಕೇವಲ ಕೃಷಿ ಮತ್ತು ಪಶುಸಂಗೋಪನೆಯನ್ನೇ ಅವಲಂಬಿಸಿದೆ. ಆದರೆ, ನಿರಂತರವಾಗಿ ಫಲವತ್ತಾದ ಭೂಮಿ ಒಣಗುತ್ತಿರುವುದು ಮತ್ತು ಮಳೆಯ ಅನಿಶ್ಚಿತತೆಯಿಂದಾಗಿ ಬೆಳೆ ಇಳುವರಿ ಕುಸಿದು, ಆಹಾರದ ಅಭಾವ ಸೃಷ್ಟಿಯಾಗಿದೆ. ಇದು ಜನರನ್ನು ಬಡತನಕ್ಕೆ ದೂಡಿದೆ.
ಈ ಯೋಜನೆಯು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಮೂಲಕ ಮತ್ತು ನೀರಿನ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಕೃಷಿ ಭೂಮಿಯನ್ನು ಮತ್ತೆ ಹಸನುಗೊಳಿಸಲು ಯತ್ನಿಸುತ್ತಿದೆ. ಇದು ಜೈವಿಕ ವೈವಿಧ್ಯತೆಯನ್ನು ಹೆಚ್ಚಿಸುವುದಲ್ಲದೆ, ಬದುಕಲು ದಾರಿಯಿಲ್ಲದೆ ಜನರು ತಮ್ಮ ಹುಟ್ಟೂರನ್ನು ತೊರೆದು ಬೇರೆಡೆಗೆ ವಲಸೆ ಹೋಗುವುದನ್ನು ತಪ್ಪಿಸಲಿದೆ. ಹೆಸರೇ ಸೂಚಿಸುವಂತೆ 'ದ ಗ್ರೇಟ್ ಗ್ರೀನ್ ವಾಲ್' ಅಂದರೆ ಯಾವುದೋ ಒಂದು ಕಡೆ ಕಡಿದುಹೋಗದ ಸರಣಿ ಮರಗಳ ಗೋಡೆಯಲ್ಲ. ಬದಲಿಗೆ ಇದು ಆಯಾ ಪ್ರದೇಶದ ಪರಿಸರ ವ್ಯವಸ್ಥೆಗೆ ತಕ್ಕಂತೆ ರೂಪಿಸಲಾದ ವಿವಿಧ ಪುನಶ್ಚೇತನ ಯೋಜನೆಗಳ ಒಕ್ಕೂಟ. ಕೆಲವು ಕಡೆಗಳಲ್ಲಿ ಸ್ಥಳೀಯ ತಳಿಗಳ ಮರಗಳನ್ನು ನೆಡಲಾಗುತ್ತಿದೆ. ಇನ್ನು ಕೆಲವು ಕಡೆಗಳಲ್ಲಿ ರೈತರೇ ಸ್ವತಃ ನೈಸರ್ಗಿಕವಾಗಿ ಬೆಳೆಯುವ ಸಸ್ಯವರ್ಗವನ್ನು ರಕ್ಷಿಸುತ್ತಿದ್ದಾರೆ, ಹುಲ್ಲುಗಾವಲುಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ, ಮಳೆನೀರು ಕೊಯ್ಲು ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ
ಈ ಯೋಜನೆಯ ಪ್ರಮಾಣ ಎಷ್ಟು ಬೃಹತ್ ಆಗಿದೆಯೆಂದರೆ, ಇದರ ಸಂಖ್ಯೆಗಳೇ ಅದಕ್ಕೆ ಸಾಕ್ಷಿ ನುಡಿಯುತ್ತವೆ. 100 ಮಿಲಿಯನ್ ಹೆಕ್ಟೇರ್ ಒಣಗಿದ ಮತ್ತು ಹಾನಿಗೊಳಗಾದ ಭೂಮಿಯನ್ನು ಮರುಪೂರಣ ಮಾಡುವುದು (ಇದು ಇಡೀ ಈಜಿಪ್ಟ್ ದೇಶದ ವಿಸ್ತೀರ್ಣಕ್ಕೆ ಸಮನಾಗಿದೆ). ವಾತಾವರಣದಿಂದ 250 ಮಿಲಿಯನ್ ಟನ್ ಕಾರ್ಬನ್ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವುದು. ಆಫ್ರಿಕಾದಾದ್ಯಂತ ಯುವಜನರಿಗಾಗಿ 10 ಮಿಲಿಯನ್ (1 ಕೋಟಿ) ಹಸಿರು ಉದ್ಯೋಗಗಳನ್ನು ಸೃಷ್ಟಿಸುವುದು. ಸಾಹೇಲ್ ಪ್ರಾಂತ್ಯದ ಕೋಟ್ಯಂತರ ಜನರ ಆಹಾರ ಭದ್ರತೆ ಮತ್ತು ಜೀವನಮಟ್ಟವನ್ನು ಸುಧಾರಿಸುವುದು ಇದರ ಉದ್ದೇಶ.
ಪ್ರಸ್ತುತ ಈ ಯೋಜನೆಗೆ 20 ಕ್ಕೂ ಹೆಚ್ಚು ಆಫ್ರಿಕನ್ ದೇಶಗಳು ಸೇರಿದಂತೆ ಅಂತರರಾಷ್ಟ್ರೀಯ ಸಂಸ್ಥೆಗಳು, ಜಾಗತಿಕ ಅಭಿವೃದ್ಧಿ ಬ್ಯಾಂಕುಗಳು ಮತ್ತು ಪರಿಸರ ಒಕ್ಕೂಟಗಳು ಬೆಂಬಲವಾಗಿ ನಿಂತಿವೆ. ಯೋಜನೆ ಪೂರ್ಣಗೊಳ್ಳಲು ಇನ್ನೂ ದೀರ್ಘಕಾಲದ ಅಗತ್ಯವಿದ್ದರೂ, ಈಗಾಗಲೇ ಹಲವಾರು ದೇಶಗಳಲ್ಲಿ ಪ್ರಗತಿ ಕಂಡುಬಂದಿದೆ. ಸೆನೆಗಲ್ ದೇಶವು ಈಗಾಗಲೇ ಕೋಟ್ಯಂತರ ಮರಗಳನ್ನು ನೆಟ್ಟು ದೊಡ್ಡ ಪ್ರಮಾಣದ ಭೂಮಿಯನ್ನು ಹಸಿರಾಗಿಸಿದೆ. ಇತ್ತ ಇಥಿಯೋಪಿಯಾ ದೇಶವು ಲಕ್ಷಾಂತರ ಹೆಕ್ಟೇರ್ ಹಾನಿಗೊಳಗಾದ ಭೂಮಿಯನ್ನು ಪುನಶ್ಚೇತನಗೊಳಿಸಿದೆ. ನೈಜೀರಿಯಾ, ನೈಜರ್ ಸೇರಿದಂತೆ ಹಲವು ದೇಶಗಳು ಸುಸ್ಥಿರ ಭೂ ನಿರ್ವಹಣೆಯನ್ನು ವಿಸ್ತರಿಸಿವೆ.
ಜಗತ್ತನ್ನು ವಿಭಜಿಸಲು ಗೋಡೆಗಳನ್ನು ಕಟ್ಟುವ ಈ ಕಾಲದಲ್ಲಿ, ಆಫ್ರಿಕಾದ ಈ 'ಹಸಿರು ಗೋಡೆ' ಮಾತ್ರ ಪ್ರಕೃತಿಯನ್ನು ಜೋಡಿಸಲು, ಪರಿಸರವನ್ನು ಉಳಿಸಲು ಮತ್ತು ಮಾನವ ಸಮುದಾಯವನ್ನು ಬಲಪಡಿಸಲು ನಿರ್ಮಾಣವಾಗುತ್ತಿದೆ. ಈ ಯೋಜನೆಯ ವಿಶೇಷತೆಯೆಂದರೆ ಇಲ್ಲಿ ಕೇವಲ ಸರ್ಕಾರಗಳು ಮಾತ್ರ ಕೆಲಸ ಮಾಡುತ್ತಿಲ್ಲ, ಯಾರ ಬದುಕು ಈ ಭೂಮಿಯ ಮೇಲೆ ಅವಲಂಬಿತವಾಗಿದೆಯೋ ಅದೇ ಸ್ಥಳೀಯ ಬಡ ರೈತರು ಮತ್ತು ಜನರು ಈ ಕೆಲಸವನ್ನು ಮಾಡುತ್ತಿದ್ದಾರೆ. ಆಫ್ರಿಕಾದ ಈ ಯತ್ನವು ಇಡೀ ಜಗತ್ತಿನ ಒಣ ಹವೆ ಹೊಂದಿರುವ ಪ್ರಾಂತ್ಯಗಳಿಗೆ ಒಂದು ಅತ್ಯುತ್ತಮ ಮಾದರಿಯಾಗಿದೆ.












Click it and Unblock the Notifications