ಅಪ್ಪ ನೀನೆ ನನ್ನ ಹೀರೋ: ಹ್ಯಾಪಿ ಫಾದರ್ಸ್ ಡೇ

By: ಸುಮಾ ಮುದ್ದಾಪುರ
Subscribe to Oneindia Kannada

ನಾನು ಶಾಲೆಗೆ ಸೇರಿದ ಮೊದಲನೇ ದಿನದ ನೆನಪು ನನ್ನಲ್ಲಿ ಇನ್ನೂ ಹಾಗೇ ಅಚ್ಚಳಿಯದೇ ಉಳಿದಿದೆ. ಮೊದಲ ದಿನ ನಾನು ಶಾಲೆಗೆ ಹೋಗಬೇಕಾದ್ರೆ ನನ್ನಮ್ಮ ನನ್ನ ತುಂಬಾ ಅಂದವಾಗಿ ಸಿಂಗರಿಸಿದ್ರು.

ಪ್ರತಿ ದಿನ ನನ್ನ ತಂದೆ ಬೆಳಗ್ಗೆ ಒಬ್ರೇ ಸ್ನಾನಕ್ಕೆ ಹೋಗ್ತಾ ಇದ್ದೋರು, ಅವತ್ತು ತಮಗಿಂತ ಮೊದ್ಲು ನನಗೆ ಸ್ನಾನ ಮಾಡಿಸಿದ್ರು. ಆಮೇಲೆ ನನ್ನಮ್ಮ ನನ್ನ ಎತ್ತಿಕೊಂಡು ಮೈ ಒರೆಸಿ, ಹೊಸ ಬಟ್ಟೆ ಹಾಕಿ, ಪಾಂಡ್ಸ್ ಪೌಡರ್ ಹಚ್ಚಿ, ಹಣೆಗೊಂದು ಸಣ್ಣ ಬೊಟ್ಟು ಇಟ್ಟು ನಾನು ಮುಂದಾಗಿ ಕಾಣುವಂತೆ ಮಾಡಿದ್ರು.

ಆಮೇಲೆ ಅಪ್ಪಾ ಸ್ನಾನ ಮಾಡಿ, ತಿಂಡಿ (ಉಪಹಾರ) ತಿಂದು ಕೆಲಸಕ್ಕೆ ಹೋಗೋಕೆ ಸಜ್ಜಾದ್ರು. ಹಾಗೆಯೇ ಅವರ ಜೊತೆಯಲ್ಲೇ ನನಗೂ ತಿಂಡಿ ತಿನ್ನಿಸಿದ್ರು. ನಂತ್ರ ಅಪ್ಪ ತಂದಿದ್ದ ಹೊಸ ಪಾಠಿಚೀಲಕ್ಕೆ ಒಂದು ಸ್ಲೇಟ್ ಇಟ್ಟು, ಬಳಪ ಹಾಕಿ, ಶಾಲೆ ಬ್ಯಾಗಿನ ರೆಡಿ ಮಾಡಿ ಅಮ್ಮ ಅಪ್ಪನ ಕೈಗೆ ಕೊಡ್ತು.[ಬೆಚ್ಚುವಂತೆ ಮಾಡುತ್ತಿದ್ದ ಅಪ್ಪನ ಬೆಚ್ಚನೆಯ ಪ್ರೀತಿಗೆ ನಮನ]

ಆಗ ನನ್ನಪ್ಪ ಶಾಲೆ ಬ್ಯಾಗು ತೊಗೊಂಡು ನನ್ನನ್ನ ಕರ್ಕೊಂಡು ಸೈಕಲ್ ಹತ್ತಿದ್ರು. ಸೈಕಲ್ ಹಿಂದೆ ಇರೋ ಕ್ಯಾರಿಯರ್ ಮೇಲೆ ನಾನು ಕೂರ್ತಾ ಇರ್ಲಿಲ್ಲ, ಬದಲಿಗೆ ಅಪ್ಪನ ಕೊರಳಿಗೆ ಕೈ ಹಾಕಿ ಜೋತು ಬೀಳುತ್ತಿದ್ದೆ.

ಆದ್ರೆ ಮೊದಲೆಲ್ಲಾ ನಾನು, ಅಪ್ಪ ಸೈಕಲ್ ಮೇಲೆ ಕೂತ್ರೆ ಅವರ ಮುಂದಿರೋ ಉದ್ದನೆಯ ಕಂಬಿಯ ಮೇಲೆ ನಿಂತು ಅವರ ಕುತ್ತಿಗೆಗೆ ಕೈ ಹಾಕಿ ಜೋತು ಬಿದ್ದು ನಿಲ್ತಾ ಇದ್ದೆ.

ಆಮೇಲೆ ಒಬ್ಳು ತಂಗಿ ಹುಟ್ಟಿದ್ಳು, ಅವಳು ನನಗಿಂತ ಚಿಕ್ಕವಳು ಅಂತ ನನಗೆ ಸಮಾಧಾನ ಮಾಡಿ, ನನ್ನ ಹಿಂದೆ ನಿಲ್ಸ್ಕೊತಾ ಇದ್ರು. ಅವಳು ಮುಂದೆ ಕೂರ್ತಾ ಇದ್ಳು. ಅದರಂತೆ ಅವತ್ತು ಕೂಡ ನಾನು ಸೈಕಲ್ ಹಿಂದೆ ನಿಂತೆ.

ನನ್ನ ಶಾಲೆ ಇದ್ದದ್ದು ನನ್ನ ಹಳ್ಳಿಯಿಂದ ಸುಮಾರು 3 ಕಿ.ಮೀ ದೂರದಲ್ಲಿರೋ ಪಟ್ಟಣದಲ್ಲಿ. ನನ್ನ ತಂದೆ ಅಲ್ಲೆ ಕೆಲಸ ಮಾಡ್ತಾ ಇದ್ದದ್ರಿಂದ ನನ್ನ ಅಲ್ಲೇ ಒಂದು ಇಂಗ್ಲೀಷ್ ಮಾಧ್ಯಮದ ಸ್ಕೂಲ್‌ಗೆ ಸೇರಿಸಿದ್ರು.

ಶಾಲೆಗೆ ಹೋಗೋಕೆ ಇನ್ನೂ ಸಮಯ ಇತ್ತು. ಅದಕ್ಕೆ ನನ್ನಪ್ಪ ತಮ್ಮ ಸೇಹ್ನಿತನ ಹೋಟಲ್ ಹತ್ರ ನನ್ನ ಕರ್ಕೊಂಡು ಹೋಗಿ ಅಲ್ಲಿದ್ದವರಿಗೆಲ್ಲ ನನ್ನ ಮಗಳು, ಇವತ್ತು ಸ್ಕೂಲ್‌ಗೆ ಸೇರಿಸ್ತಾ ಇದೀನಿ ಅಂತ ಹೇಳ್ತಾ ಇದ್ರು.

Suma Muddapura

ಒಂಥರಾ ಹೊಸತನ ಫೀಲ್ ಆಗ್ತಾ ಇತ್ತು: ನನಗೆ ಅವರನ್ನೆಲ್ಲಾ ನೋಡಿ ಏನೋ ಒಂಥರಾ ಹೊಸತನ ಫೀಲ್ ಆಗ್ತಾ ಇತ್ತು. ಯಾಕಂದ್ರೆ ನನಗೆ ಬುದ್ಧಿ ತಿಳಿದಾಗಿಂದ್ಲು ನಾನು ಅದೇ ಮೊದಲ ಬಾರಿಗೆ ಅಪ್ಪನ ಜತೆ ಪಟ್ಟಣಕ್ಕೆ ಹೋಗಿದ್ದು, ಅವರನ್ನೇಲ್ಲಾ ನೋಡ್ತಾ ಇರೋದು.

ಏನಾದ್ರು ತಿಂತೀಯಾ ಅಂತ ಅಪ್ಪ ಕೇಳ್ತು ನಾನು ಬೇಡ ಅಂದೆ. ಆದ್ರು ಕೂಡ ಅಂಕಲ್ಸ್ ಇಡ್ಲಿ ವಡೆ ಹಾಕಿ ಕೊಟ್ರು ನಾನು ಬೇಡ ಅಂತ ಹಠ ಮಾಡ್ದೆ. ಆಗ ಅಪ್ಪನೇ ಅವರಿಗೆ ಬೇಡ ಬಿಡು ಅಂತ ಹೇಳಿ ತಮ್ಮ ಕೈ ಗಡಿಯಾರ ನೋಡ್ಕೊಂಡ್ರು. ಅರೆ ಟೈಂ ಆಯ್ತು ಬಾರೋ ಕಂದ ಅಂತ ನನ್ನ ಕರ್ಕೊಂಡು ಮತ್ತೆ ಸೈಕಲ್ ಹತ್ತಿ ನನ್ನ ಶಾಲೆ ಹತ್ರ ಕರ್ಕೊಂಡು ಹೋದ್ರು.[ಅಪ್ಪನ್ನ ಒಂದೇ ದಿನ ನೆನೆಯುವ ದೊಡ್ಡು ಸ್ಟುಪಿಡ್ಡುಗಳು!]

ನಾವು ಶಾಲೆ ಹತ್ರ ಹೋಗುವಷ್ಟರಲ್ಲಿ ಎಲ್ಲಾ ಮಕ್ಕಳು ಹೊರಗಡೆ ಪ್ರಾರ್ಥನೆ ಮಾಡ್ತಾ ಇದ್ರು. ನಾನು ಅವರನ್ನೆಲ್ಲಾ ಕಣ್ ಕಣ್ ಬಿಟ್ಕೊಂಡು ಆಶ್ಚರ್ಯವಾಗಿ ನೋಡ್ತಾ ಇದ್ದೆ. ಎಲ್ಲರು ಕ್ಲಾಸ್ ರೂಂ ಒಳಗೆ ಹೋದ ನಂತ್ರ ಅಪ್ಪ ನನ್ನನ್ನು ಶಾಲೆಯ ಕೊಠಡಿಯೊಳಕ್ಕೆ ಕರೆದುಕೊಂಡು ಹೋಗಿ ಅಲ್ಲಿದ್ದ ಟೀಚರ್‌ಗೆ ಹೇಳಿ ನನ್ನ ಅಲ್ಲೇ ಕೂರಿಸಿ ಹೊರಟ್ರು.

ಎಲ್ಲಾ ಹೊಸ ಮುಖಗಳೇ: ನನಗೆ ಅಲ್ಲಿ ಯಾರು ಗೊತ್ತಿಲ್ಲ, ಎಲ್ಲಾ ಹೊಸ ಮುಖಗಳೇ. ಅವರನ್ನೇಲ್ಲಾ ನೋಡಿ ಅಪ್ಪಾ ಬಿಟ್ಟು ಹೋಗ್ತಾ ಇರೋದನ್ನ ನೋಡಿ ಏನೋ ಒಂಥರಾ ತಳಮಳ ಆಗ್ತಾ ಇದೆ. ಆದ್ರೆ ಕಣ್ಣಲ್ಲಿ ನೀರು ಮಾತ್ರ ಬರ್ತಾ ಇಲ್ಲ.

ಸುಮ್ಮನೆ ನನ್ನ ಬಿಟ್ಟು ಹೋಗ್ತಾ ಇದ್ದ ಅಪ್ಪನನ್ನ ನೋಡಿ ಕೊಠಡಿಯ ಬಾಗಿಲ ಬಳಿ ಬಂದು ನಿಂತು ನೋಡ್ತಾ ಇದ್ದೆ. ಕೊಂಚ ದೂರ ಹೋಗ್ತಾ ಇದ್ದ ಹಾಗೆ ನನ್ನಪ್ಪ ಮತ್ತೆ ಹಿಂತಿರುಗಿ ನನ್ನ ನೋಡಿದ್ರು. ನಾನು ಹಾಗೇ ನಿಂತಿರೋದನ್ನ ನೋಡಿ ವಾಪಸ್ ಬಂದು ಯಾಕೋ ಇಲ್ಲಿ ನಿಂತಿದ್ದೀಯಾ ಒಳಗೆ ಹೋಗು.

ಶಾಲೇಲಿ ಟೀಚರ್ ಇದಾರೆ. ಅವ್ರು ನಿನಗೆ ಒದೋದು-ಬರೆಯೋದು ಹೇಳಿಕೊಡ್ತಾರೆ. ಬೇಜಾರ್ ಮಾಡ್ಕೊಬೇಡ. ನಾನು ಮಧ್ಯಾಹ್ನಕ್ಕೆಲ್ಲ ಬಂದ್ಬಿಡ್ತೀನಿ. ಈಗ ಹೋಗಿ ಅಲ್ಲಿ ಕೂತ್ಗೋ ಅಂತ ಹೇಳಿ ಮತ್ತೆ ಅಲ್ಲೇ ನನ್ನ ಕೂರಿಸಿ, ಜೇಬಲ್ಲಿದ್ದ ಚಾಕೋಲೇಟ್ ಕೊಟ್ಟು ಟೀಚರ್ ಹೇಳಿದ ಹಾಗೆ ಕೇಳು ಅಂತೇಳಿ ಹೊದ್ರು.

ನನಗೆ ಆಗ ಏನೋ ಒಂಥರಾ ಸಮಾಧಾನ. ಅಬ್ಬಾ, ಅಪ್ಪ ಮತ್ತೆ ಬರ್ತಾರೆ. ಬಂದು ನನ್ನ ಮನೆಗೆ ಕರ್ಕೊಂಡು ಹೊಗ್ತಾರೆ ಅಂತ. ಅಪ್ಪ ಹೋದ್ರು. ರೂಂನಲ್ಲಿದ್ದ ಕೆಲವೊಂದಿಷ್ಟು ಮಕ್ಳು ಅಳ್ತಾ ಇದ್ರು, ಇನ್ನೂ ಕೆಲವೊಂದಿಷ್ಟು ಆಟ ಆಡ್ತಾ ಇದ್ರು. ಆ ಕಡೆ ಟೀಚರ್ ಸುಮ್ನೆ ಕೂತಿದ್ರು. ನಾನು ಅದೇ ಬಾಗಿಲ ಬಳಿ ಕೂತು ಅಪ್ಪ ಮತ್ತೆ ಬರ್ತಾರೆ ಅಂತ ಹೊರಗಡೆನೇ ನೋಡ್ತಾ ಇದ್ದೆ.

ಹೆಂಗೋ ಹಾಗೂ ಹೀಗೂ ಮಧ್ಯಾಹ್ನ ಆಯ್ತು. ಸಮಯ ಆಗ್ತಾ ಆಗ್ತಾ ಆ ರೂಂನಲ್ಲಿ ನನಗೆ ಅನಾಥ ಪ್ರಜ್ಞೆ ಕಾಡೋಕೆ ಶುರುವಾಯ್ತು. ಅಲ್ಲಿ ನನ್ನಪ್ಪ ಇಲ್ಲ, ಅಮ್ಮ ಇಲ್ಲ, ತಂಗಿನೂ ಇಲ್ಲ.

ಆಗ್ಲೇ ಕಣ್ಣಲ್ಲಿ ಸ್ವಲ್ಪ ನೀರು ಬಂದು ಅಳೋಕೆ ಶುರು ಮಾಡ್ತಾ ಇದ್ದೆ, ಅಷ್ಟ್ರಲ್ಲಿ ಶಾಲೆ ಗೇಟಿನ ಹತ್ರ ನನ್ನಪ್ಪ ಸೈಕಲ್ ಹಿಡ್ಕೊಂಡು ಪ್ರತ್ಯಕ್ಷ ಆಗೇ ಬಿಟ್ಟ. ನನಗಾಗ ಫುಲ್ ಖುಷಿ. ಆಗ ನನಗೆ ಯಾವುದೋ ಕೂಪದಲ್ಲಿ ಸಿಲುಕಿದ್ದ ನನ್ನ ಕಾಪಾಡೋಕೆ ಬಂದ ಸೂಪರ್ ಮ್ಯಾನ್ ಥರ ಕಂಡ್ರು ನನ್ನಪ್ಪ.

ಅಪ್ಪ ಬಂದ ಕೂಡಲೇ ಓಡಿ ಹೋಗಿ ಅವರನ್ನ ಹಿಡ್ಕೊಂಡೆ. ಅವ್ರು ನನ್ನ ಕರ್ಕೊಂಡು ಮನೆ ಕಡೆ ನಡೆದ್ರು...

ಹೀಗೆ ನನ್ನ ವಿದ್ಯಾಭ್ಯಾಸ ಶುರುವಾಯ್ತು. ಇಂದು ನಾನು ಚೆನ್ನಾಗಿ ಓದಿಕೊಂಡು, ನನ್ನ ಕಾಲ ಮೇಲೆ ನಾನು ನಿಂತಿದ್ದೀನಿ ಅಂದ್ರೆ ಅದಕ್ಕೆ ನನ್ನಪ್ಪನೇ ಕಾರಣ.

ನೋವು-ನಲಿವುಗಳ ಜೊತೆ
ಸುಖ-ದುಖಃಗಳ ಜೊತೆ
ಕಷ್ಟ-ನಷ್ಟಗಳ ಜೊತೆ
ನಾನಿರುವೆ ನಿನ್ನೊಂದಿಗೆ

ಹೆದರಿದರೆ ಹೆದರಿಸುವರು
ಹೆದರಿಸಿದರೆ ಹೆದರುವರು
ಹೆದರದಿರು ಮುನ್ನುಗ್ಗು
ನಾನಿರುವೆ ನಿನ್ನೊಂದಿಗೆ

ನೀನೆ ಒಂದು ಶಕ್ತಿ
ನೀನೆ ಒಂದು ಯುಕ್ತಿ
ನಿನ್ನಲ್ಲಿದೆ ಸ್ಥೈರ್ಯ
ಮುನ್ನುಗು
ನಾನಿರುವೆ ನಿನ್ನೊಂದಿಗೆ

ಹೀಗೆ ಸದಾ ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳಿ, ನನ್ನ ತಪ್ಪನ್ನ ಅವರ ಬೆನ್ನಿಗೆ ಹಾಕಿಕೊಂಡು ನನ್ನ ಏಳಿಗೆಯನ್ನು ಬಯಸಿ ಇವತ್ತಿಗೂ ನನ್ನ ಪುಟ್ಟ ಮಗುವಂತೆ ಕಾಣ್ತಿರೋ ನನ್ನಪ್ಪನಿಗೆ ಅಪ್ಪಂದಿರ ದಿನದ ಹಾರ್ದಿಕ ಶುಭಾಶಯಗಳು.

ಅಪ್ಪಾ ಯು ಆರ್ ಮೈ ಹೀರೋ...ಹ್ಯಾಪಿ ಫಾದರ್ಸ್ ಡೇ ಅಪ್ಪಾ...

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Appa your are my Hero : Fathers Day Special article by Suma Muddapura. She reacalls her memory about first day of school, new environment and fear about the school and how her father helped her to overcome this feel.
Please Wait while comments are loading...