• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಧು ಸದ್ಧರ್ಮ ಸಮಾಜಕ್ಕೆ ಹೆಚ್ ಆರ್ ಬಸವರಾಜಪ್ಪ ನೂತನ ಅಧ್ಯಕ್ಷರು

|
Google Oneindia Kannada News

ಗ್ರಾಮ ಭಾರತದ ಅಭ್ಯುದಯಕ್ಕಾಗಿ ಬಸವ ತತ್ವದಡಿ ಕಾಯಕ ನಿಷ್ಟವಾಗಿರುವ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಸಾಧು ಸದ್ಧರ್ಮ ಸಮಾಜದ ಅಧ್ಯಕ್ಷರನ್ನಾಗಿ ಹಿರಿಯ ರೈತ ಹೋರಾಟಗಾರರಾದ ಹೆಚ್. ಆರ್. ಬಸವರಾಜಪ್ಪ ಆಯ್ಕೆಯಾಗಿದ್ದಾರೆ.

ಶ್ರೀ ಮಠ ಕೃಷಿಕರ ಬದುಕಿನಲ್ಲಿ ಭರವಸೆ ತುಂಬುವ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಕಾಯಕದಲ್ಲಿ ತೊಡಗಿರುವುದು ಎಲ್ಲರಿಗೂ ತಿಳಿದ ಸಂಗತಿ. ಗ್ರಾಮ ಭಾರತ ಹಾಗೂ ರೈತ ಕುಲದ ಶ್ರೇಯ ಬಯಸುವ ಮಠ ನಾಲ್ಕು ದಶಕಗಳಿಗೂ ಮೀರಿ ರೈತ ಚಳುವಳಿಯಲ್ಲಿ ಹೋರಾಟ ಮಾಡಿದ ಹೆಚ್. ಆರ್ ಬಸವರಾಜಪ್ಪರನ್ನು ತನ್ನ ಸಮಾಜದ ಅಧ್ಯಕ್ಷರನ್ನಾಗಿ ಮಾಡಿರುವುದೂ ಶ್ರೀ ಮಠಕ್ಕೆ ರೈತ ಕುಲದ ಮೇಲಿರುವ ಬದ್ಧತೆಯನ್ನು ತೋರುತ್ತದೆ.

ಸಮಾಜದಲ್ಲಿ ಕೋಟಿ ಕೋಟಿ ಒಡೆಯರು, ಉದ್ಯಮಿಗಳು, ರಾಜಕಾರಣಿಗಳು ಇದ್ದಾಗ್ಯೂ ಶ್ರೀ ಮಠದ ಚಿತ್ತ ರೈತನತ್ತ ಹೊರಳಿದ್ದು ವಿಶೇಷವೂ ಹಾಗೂ ಶ್ಲಾಘನೀಯವೂ ಆದ ನಡೆಯಾಗಿದೆ. ಹಾಗಾಗಿ ಗ್ರಾಮೀಣ ಕರ್ನಾಟಕದ ಪರವಾಗಿ ಸಿರಿಗೆರೆ ಮಠಕ್ಕೆ ಅಭಿನಂದನೆಗಳು ಸಲ್ಲಬೇಕು.

ಬಸವರಾಜಪ್ಪ ಮಾತು; ನಾನು ಸಾಧು ಸದ್ದರ್ಮ ಸಮಾಜದ ಅಧ್ಯಕ್ಷನಾಗಿ ಆಯ್ಕೆಯಾಗಿರುವುದಕ್ಕೆ ಕೆಲವು ಟೀಕೆ, ಸಲಹೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದನ್ನು ಗಮನಿಸಿದೆ. ಸಾರ್ವಜನಿಕ ಬದುಕಿನಲ್ಲಿ ಸಲಹೆ, ಸೂಚನೆ, ಟೀಕೆ, ಗದಾಪ್ರಹಾರ ಇವೆಲ್ಲವೂ ಸಾಮಾನ್ಯ. ಅದು ಹಾಗೆಯೇ ಇರಬೇಕು ಕೂಡಾ. ಅದೇ ಪ್ರಜಾಪ್ರಭುತ್ವದ ಗುಣ. ಆ ಬಗ್ಗೆ ನನಗೆ ಗೌರವವಿದೆ.

ಇದೀಗ ನನ್ನನ್ನು ಸಾಧು ಸದ್ದರ್ಮ ಸಮಾಜದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿರುವ ಸಿರಿಗೆರೆ ಮಠದ ಇತಿಹಾಸ, ರೈತ ಹೋರಾಟದೊಂದಿಗೆ ಮಠದ ಸಂಬಂಧ, ರೈತಪರ ಕಾಳಜಿಯ ಕೆಲಸಗಳಿಗೆ ಸರ್ಕಾರದೊಂದಿಗೆ ಶ್ರೀಮಠ ವಹಿಸಿದ ವಕಾಲತ್ತು, ಬರ-ನೆರೆಯಂಥ ಸಂದರ್ಭದಲ್ಲಿ ಗ್ರಾಮೀಣ ಜನರ ಬಿಕ್ಕಟ್ಟುಗಳಿಗೆ ಮಠ ಸ್ಪಂದಿಸಿದ ರೀತಿ, ಕೋಮುದ್ವೇಶದಂತಹ ಘಟನೆಗಳಾದಾಗ ವಾತಾವರಣ ತಿಳಿಗೊಳಿಸಲು ಮಠ ಕೈಗೊಂಡ ಕ್ರಮಗಳು ಹೀಗೆ ಹತ್ತಾರು ವಿಷಯಗಳ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳಲು ಇದು ಸಕಾಲ ಎಂದು ಭಾವಿಸಿದ್ದೇನೆ.

ಮಠದ ಇತಿಹಾಸ: ಐತಿಹಾಸಿಕವಾದ ಸಿರಿಗೆರೆ ಮಠದ ಮೊದಲನೇ ಗುರುಗಳು ಹರಿಜನ ಸಮಾಜಕ್ಕೆ ಸೇರಿದ ಮರುಳಸಿದ್ದರು. ಈ ಮಠದಲ್ಲಿ ಬಸತತ್ವಕ್ಕೆ ಆಸ್ಪದವುಂಟೇ ಹೊರತು ಬೇರೆಲ್ಲವೂ ನಗಣ್ಯ. ಆಗಿನಿಂದಲೂ ಮಠವು ಬಸವ ತತ್ವದಲ್ಲಿಯೇ ನಡೆದು ಬಂದಿದೆ. ಎಲ್ಲಾ ಜಾತಿ ಮತದ ಜನರೊಂದಿಗೆ ಸಹಪಂಕ್ತಿ ಭೋಜನ ಮಾಡುವ ಮುಖೇನ ಜಾತಿ ತಾರತಮ್ಯ ಹೋಗಲಾಡಿಸಲು ಅಗ್ರಪಂಕ್ತಿ ಹಾಕಿಕೊಟ್ಟ ಮಠವಿದು.

ಈಗಲೂ ಎಲ್ಲಾ ಜಾತಿಯ ಸಾವಿರಾರು ವಿದ್ಯಾರ್ಥಿಗಳಿಗೆ ತ್ರಿವಿದ ದಾಸೋಹವನ್ನು ನಡೆಸಿಕೊಂಡು ಬಂದಿದೆ. ಅಲ್ಲದೆ ಪ್ರತಿ ವರ್ಷ ಅಂತರ್ಜಾತಿ ವಿವಾಹ ಸೇರಿದಂತೆ ಸಾಮೂಹಿಕ ವಿವಾಹ ಮಾಡುತ್ತಿರುವುದು ಶ್ರೀಮಠದ ಸಾಮಾಜಿಕ ಕಳಕಳಿಯನ್ನು ತೋರುತ್ತದೆ. ರೈತ ಸಂಘವೂ ಆರಂಭದಿಂದಲೂ ಸರಳವಿವಾಹ ಹಾಗೂ ಅಂತಾರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಿಕೊಂಡು ಬಂದಿದೆ.

1990ರ ದಶಕದಲ್ಲಿ ರೈತ ಸಂಘ ಮಧ್ಯಪಾನ ನಿಷೇಧ ಆಂದೋಲನವನ್ನು ಕೈಗೆತ್ತಿಕೊಂಡಾಗ ಈಗಿನ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೆಚ್‌. ಎಸ್. ರುದ್ರಪ್ಪ, ಎನ್. ಡಿ. ಸುಂದರೇಶ್ ಮತ್ತು ನಮ್ಮ ಜೊತೆ ಪಾದಯಾತ್ರೆಗಳಲ್ಲಿ ಭಾಗವಹಿಸಿದ್ದಾರೆ. ಬೃಹತ್ ಸಭೆಗಳ ಮೂಲಕ ರೈತ ಸಂಘಟನೆಯಿಂದ ಒಟ್ಟಿಗೆ ಜನಜಾಗೃತಿ ಮಾಡಿದ್ದೆವು.

ಬರಗಾಲ ಸಂದರ್ಭದಲ್ಲಿ ಬಾಬಾಗೌಡ ಪಾಟೀಲ್ ಮತ್ತು ಪ್ರೊ. ಎಂ. ಡಿ ನಂಜುಂಡಸ್ವಾಮಿಯವರು ಶಾಸಕರಾಗಿದ್ದಾಗ ಮೇವು, ದವಸ ಧಾನ್ಯಗಳನ್ನ ಸಂಗ್ರಹಣೆ ಮಾಡಿದ್ದಲ್ಲದೆ, ಸಂಗ್ರಹವಾದ ವಸ್ತುಗಳನ್ನು ಹಂಚಿಕೆ ಮಾಡಲು ರೈತ ಸಂಘಕ್ಕೆ ಜವಾಬ್ದಾರಿವಹಿಸಿದ್ದರು.

ರೈತರು ಅತಿವೃಷ್ಟಿ, ಅನಾವೃಷ್ಟಿ ಪರಿಹಾರಕ್ಕಾಗಿ ಪ್ರತಿ ಬಾರಿ ಅರ್ಜಿ ಸಲ್ಲಿಸಬೇಕಾಗಿತ್ತು. ಇದನ್ನು ಮನಗಂಡ ಶ್ರೀಗಳು ಸಂಬಧಪಟ್ಟ ಮಂತ್ರಿ ಹಾಗೂ ಅಧಿಕಾರಗಳೊಂದಿಗೆ ಮಾತನಾಡಿ ರೈತರ ಬಗ್ಗೆ ವಕಾಲತ್ತು ವಹಿಸಿ ಆನ್‌ಲೈನ್ ಬರ ಪರಿಹಾರ ಅಪ್ಲಿಕೇಶನ್ ತಯಾರು ಮಾಡಿಸಿದ ಪರಿಣಾಮ 2016ನೇ ಇಸವಿಯಲ್ಲಿ ಬರಗಾಲಕ್ಕೆ ಸರ್ಕಾರ ಕೊಡುವ 1670ಕೋಟಿ ರೂಪಾಯಿ ನೇರವಾಗಿ ರೈತರ ಖಾತೆಗೆ ಅರ್ಜಿ ಸಲ್ಲಿಸದೆ ಜಮೆಯಾಗಿದೆ. ಈಗಲೂ ಪರಿಹಾರ ಆನ್‌ಲೈನ್ ಮೂಲಕವೇ ಜಮೆಯಾಗುತ್ತಿದೆ.

ಬಯಲು ಸೀಮೆಯ ಪ್ರದೇಶಕ್ಕೆ ಬಹಳಷ್ಟು ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರದ ಮೇಲೆ ಒತ್ತಡ ತಂದವರೂ ಇದೇ ಶ್ರೀಗಳು. ರೈತರ ಆಶಾಕಿರಣವಾದ ಯಶಸ್ವಿನಿ ಯೋಜನೆಯು ಸ್ಥಗಿತಗೊಂಡಿತ್ತು. ಆ ಬಗ್ಗೆ ಮುಖ್ಯಮಂತ್ರಿ ಬವರಾಜ ಬೊಮ್ಮಯಿಯವರ ಮನವೊಲಿಸಿ ಮತ್ತೆ ಜಾರಿಗೊಳಿಸಿದ್ದೂ ಕೂಡಾ ಇದೇ ಶ್ರೀಗಳು. ಹೀಗೆ ರೈತ ಚಳುವಳಿಯ ಕಾಳಜಿಯ ಕೆಲಸಗಳನ್ನು ಶ್ರೀಗಳ ಮೂಲಕ ಮಾಡಿಸಿರುವ ಅನೇಕ ಉದಾಹರಣೆಗಳಿವೆ.

ದಾವಣಗೆರೆಯಲ್ಲಿ ಕೋಮು ಗಲಭೆಯ ಸಂದರ್ಭದಲ್ಲಿ ಪಾದಯಾತ್ರೆ ಮಾಡಿ ವಾತಾವರಣ ತಿಳಿಗೊಳಿಸುವ ಕೆಲಸ ಮಾಡಿದ್ದಾರೆ. ಪ್ರವಾಹದ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ಹಳ್ಳಿಗಳಿಗೆ ನೊಂದವರಿಗೆ ದವಸ-ಧಾನ್ಯ, ಬಟ್ಟೆ, ಪಾತ್ರೆ ನೀಡತಕ್ಕಂತ ಮತ್ತು ಕೊವಿಡ್ ಸಂದರ್ಭದಲ್ಲಿ ಆಸ್ಪತ್ರೆಯ ಒಳರೋಗಿಗಳಿಗೆ ಮತ್ತು ಅವರ ಜೊತೆ ಇರುವವರಿಗೆ ಆಹಾರ ಒದಗಿಸುವ ಕೆಲಸವನ್ನೂ ಶ್ರೀಮಠ ಮಾಡಿದೆ.

ಬಸವಣ್ಣನವರ ತತ್ವಗಳನ್ನು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುವುದಲ್ಲದೇ, ವಚನಗಳನ್ನ 5ಭಾಷೆಗಳಲ್ಲಿ ತಂತ್ರಾಂಶಕ್ಕೆ ಒಳಪಡಿಸಿ ಮೊಬೈಲ್‌ನಲ್ಲೇ ಬೆರಳ ತುದಿಯಲ್ಲಿ ಎಲ್ಲರಿಗೂ ದೊರಕುವಂತೆ ಮಾಡಿದ್ದಾರೆ. ಬಸವಣ್ಣನವರ ವಿಚಾರದ ಹಿನ್ನೆಲೆಯಲ್ಲಿ ಎಲ್ಲಾ ಜಾತಿ ಧರ್ಮಗಳನ್ನು ಒಳಗೊಂಡು ರೂಪುಗೊಂಡ ಮಠ ಮತ್ತು ಸಮಾಜ ಇದಾಗಿದೆ.

ಇನ್ನು ನನ್ನ ಮನದ ಮಾತು; ನಾನು ಈ ಹುದ್ದೆಯನ್ನು ಆಸೆ ಪಟ್ಟವನೂ ಅಲ್ಲ. ನಿರೀಕ್ಷೆ ಮಾಡಿದವನೂ ಅಲ್ಲ. ಅನಿರೀಕ್ಷಿತ ವಾಗಿ ಸುಮಾರು 50ಕ್ಕೂ ಹೆಚ್ಚು ತಾಲ್ಲೂಕುಗಳ ಪ್ರತಿನಿಧಿಗಳು ಸೇರಿ ಆಯ್ಕೆ ಮಾಡಿದ್ದಾರೆ. ಆಯ್ಕೆ ಮಾಡಿರುವ ಎಲ್ಲರೂ ರೈತ ಕುಟುಂಬದವರೇ ಆಗಿದ್ದಾರೆ. ಈ ಎಲ್ಲಾ ತಾಲ್ಲೂಕುಗಳಲ್ಲಿ ರೈತ ಸಂಘವನ್ನು ಬಲಪಡಿಸಲು ಈಗ ನನಗೆ ಒದಗಿಬಂದಿರುವ ಜವಾಬ್ಧಾರಿ ಬಹುದೊಡ್ಡ ಅವಕಾಶವಾಗಿ ನನಗೆ ಗೋಚರಿಸುತ್ತಿದೆ.

Recommended Video

   Basavaraj Bommai ರಾಷ್ಟ್ರಪತಿ ಚುನಾವಣೆ ಮತದಾನದ ನಂತರ ಹೇಳಿದ್ದೇನು *Karnataka | OneIndia Kannada
   English summary
   Basavarajappa H. R. appointed as new president of Sadhu Saddarma Samaja.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X