Chili Price: ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ದರ ಕುಸಿತ- ರೈತರಿಗೆ ಲಕ್ಷಾಂತರ ರೂ. ನಷ್ಟದ ಆತಂಕ
ರಾಯಚೂರು ಮಾರ್ಚ್ 20: ಮಳೆ ಕೊರತೆ, ಬರದಿಂದ ತತ್ತರಿಸಿರುವ ರೈತರಿಗೆ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ದರ ಕುಸಿದ ಪರಿಣಾಮ ಗಾಯದ ಮೇಲೆ ಬರೆ ಎಳೆದಂತಾಗಿದೆ. ದೇವದುರ್ಗ ತಾಲೂಕಿನಲ್ಲಿ 12,979 ಹೇಕ್ಟೆರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. ಹಲವು ರೈತರು ಮೆಣಸಿನಕಾಯಿ ಬೆಳೆಗೆ ಮೊರೆಹೋಗಿದ್ದಾರೆ. ಅದರಲ್ಲೂಕೃಷ್ಣಾ ಹಾಗೂ ತುಂಗಭದ್ರಾ ನದಿದಂಡೆಯ ರೈತರು ನೀರಿನ ಲಭ್ಯತೆ ನಂಬಿ ಕೊಂಡು ಚಿಲ್ಲಿ ಬೆಳೆದಿದ್ದಾರೆ.
ತಾಲೂಕಿನ ತಿಂಥಣಿ ಬ್ರಿಡ್ಜ್, ಜಾಲಹಳ್ಳಿ, ಗಬ್ಬೂರು, ಗೂಗಲ್ ಸೇರಿ ನದಿದಂಡೆಯ 40ಕ್ಕೂ ಹೆಚ್ಚು ಹಳ್ಳಿಗಳ ರೈತರು ಮೆಣಸಿನಕಾಯಿ ಬೆಳೆಯುತ್ತಿದ್ದಾರೆ. ಕೃಷಿ ಇಲಾಖೆ ಅಗತ್ಯ ಸಲಹೆ ನೀಡುತ್ತಿರುವ ಕಾರಣ ಭತ್ತದ ಬೆಳೆಗಿಂತ ಚಿಲ್ಲಿ ಬೆಳೆ ರೈತರಿಗೆ ಉತ್ತಮ ಆಯ್ಕೆಯಾಗಿದೆ.

ಈ ಬೆಳೆಯಿಂದ ಅತಿ ನೀರಿನ ಬಳಕೆ ತಡೆಯುವುದು ಅಲ್ಲದೆ, ಖರ್ಚು ಹಾಗೂ ವೆಚ್ಚ ಕಡಿಮೆಯಾಗಲಿದೆ. ಕೂಲಿಕಾರರಿಗೆ ಕೈ ತುಂಬ ಕೆಲಸ ನೀಡುವ ಜತೆಗೆ ಈ ಭಾಗದಲ್ಲಿ ಬಿಸಿಲು ಇರುವ ಕಾರಣ ಗುಣಮಟ್ಟದ ಬೆಲೆ ಬೆಳೆಯಬಹುದು ಎನ್ನುತ್ತಾರೆ ರೈತರು.
ಮಳೆ ಕೊರೆತೆ ನಡುವೆಯೂ ಸಾಲ ಮಾಡಿ ರೈತರು ಮೆಣಸಿನಕಾಯಿ ಬೆಳೆದಿದ್ದಾರೆ. ಆದರೆ ಇಳುವರಿ ಕುಂಠಿತದ ಜತೆಗೆ ಬೆಲೆಯೂ ಕಡಿಮೆಯಾಗಿದೆ. ಕಳೆದ ವರ್ಷ ಗುಣಮಟ್ಟದ ಮೆಣಸಿನಕಾಯಿ ಕ್ವಿಂಟಾಲ್‌ಗೆ 18-20ಸಾವಿರ ರೂ. ಮಾರಾಟವಾಗಿತ್ತು.

ಆದರೆ, ಈ ವರ್ಷ ಕ್ವಿಂಟಾಲ್‌ಗೆ ಕೇವಲ 10-12ಸಾವಿರ ರೂ.ಗೆ ಮಾರಾಟವಾಗುತ್ತಿದೆ. ಜಿಲ್ಲಾದ್ಯಂತ ಶೇ.80 ರಿಂದ 85 ರಷ್ಟು ಭಾಗದಲ್ಲಿ ಮೆಣಸಿನಕಾಯಿ ಬೆಳೆಯಲಾಗಿತ್ತು. ಆದರೆ ಇಳುವರಿ ಕುಂಠಿತದೊಂದಿಗೆ ಬೆಲೆಯೂ ಕುಸಿತವಾಗಿದೆ.
ಬ್ಯಾಡಗಿ ಮಾರುಕಟ್ಟೆಗೆ ಆಂಧ್ರಪ್ರದೇಶದಿಂದ ಮೆಣಸಿನಕಾಯಿ ಬರುತ್ತಿದ್ದು, ರೈತರು ನೀರಾವರಿಯಿಂದ ಅಧಿಕ ಇಳುವರಿ ತೆಗೆಯುತ್ತಾರೆ. ಕ್ವಿಂಟಲ್‌ಗೆ 15- 20 ಸಾವಿರ ರೂ.ಗೆ ಮಾರಾಟವಾದರೂ ಸಾಕು ಲಾಭವಾಗುತ್ತದೆ.

ಸರ್ಕಾರ ಖರೀದಿ ಕೇಂದ್ರ ತೆರೆಯಬೇಕು.ಆದರೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗಿದ್ದರಿಂದ ರೈತರು ಚಿಂತೆ ಮಾಡುವಂತಾಗಿದೆ.
ಮೆಣಸಿನಕಾಯಿ ಬೆಳೆಗೆ ಮುಕ್ತ ಮಾರುಕಟ್ಟೆ ಇರದ ಕಾರಣ ನೈಜ ಬೆಲೆ ಸಿಗುತ್ತಿಲ್ಲ. ಕ್ವಿಂಟಾಲ್‌ಗೆ 10ರಿಂದ 1 ಸಾವಿರ ರೂ. ಬೆಲೆಯಿದೆ. ಪ್ರತಿ ಎಕರೆಗೆ 1ಲಕ್ಷ ರೂ. ಖರ್ಚು ಮಾಡುತ್ತೇವೆ. ಪ್ರತಿ ಎರಕೆಗೆ 18-20 ಕ್ವಿಂಟಾಲ್ ಬೆಳೆ ಬರಲಿದೆ. ಬೆಲೆ ಇಲ್ಲದ ಕಾರಣ ತೊಂದರೆಯಾಗಿದೆ ಎಂದು ರೈತ ಗೋಪಾಲ ಹೇಳಿದರು.












Click it and Unblock the Notifications