ತುಂಗಭದ್ರಾ ನದಿಗೆ ಭದ್ರಾ ಡ್ಯಾಂನಿಂದ 9 ದಿನ ನೀರು ಬಿಡುಗಡೆ
ಶಿವಮೊಗ್ಗ, ಮಾರ್ಚ್ 27: ಕರ್ನಾಟಕ ನೀರಾವರಿ ನಿಗಮ ನಿಯಮಿತ ಅಧೀಕ್ಷಕ ಇಂಜಿನಿಯರ್ ಕಚೇರಿ ಭದ್ರಾ ಯೋಜನಾ ವೃತ್ತ ಭದ್ರಾ ನದಿ ಮೂಲಕ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ನದಿಗೆ ನೀರು ಹರಿಸಲು ವೇಳಾಪಟ್ಟಿಯನ್ನು ಘೋಷಣೆ ಮಾಡಿದೆ.
ಸದಸ್ಯ ಕಾರ್ಯದರ್ಶಿಗಳು, ಭದ್ರಾ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಮಿತಿ ಹಾಗೂ ಅಧೀಕ್ಷಕ ಅಭಿಯಂತರರು, ಭದ್ರಾ ಯೋಜನಾ ವೃತ್ತ, ಬಿ. ಆರ್. ಪ್ರಾಜೆಕ್ಟ್ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

ಈ ಆದೇಶ ಭದ್ರಾ ಜಲಾಶಯದಿಂದ ಬೃಹತ್/ ಮಧ್ಯಮ ನೀರಾವರಿ ಜಲಾಶಯಗಳಲ್ಲಿರುವ ನೀರನ್ನು ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಭಾವವಿರುವುದರಿಂದ ವಿವಿಧ ಕುಡಿಯುವ ನೀರಿನ ಯೋಜನೆಗಳಿಗೆ ಭದ್ರಾ ನದಿಯ ಮೂಲಕ ನೀರು ಹರಿಸುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.
ಪ್ರಾದೇಶಿಕ ಆಯುಕ್ತರು, ಮೈಸೂರು, ವಿಭಾಗ ಮೈಸೂರು ಇವರ ಅಧ್ಯಕ್ಷತೆಯಲ್ಲಿ ದಿನಾಂಕ 21/3/2024ರಂದು ನಡೆದ ಕುಡಿಯುವ ನೀರಿನ ಸಭೆಯ ನಡವಳಿಗಳು ಉಲ್ಲೇಖಿಸಿ ಈ ಆದೇಶ ಹೊರಡಿಸಲಾಗಿದೆ.
2023-24 ನೇ ಸಾಲಿನಲ್ಲಿ ಭದ್ರಾ ಜಲಾಶಯದಿಂದ ಬೃಹತ್/ ಮಧ್ಯಮ ನೀರಾವರಿ ಜಲಾಶಯಗಳಲ್ಲಿರುವ ನೀರನ್ನು ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಭಾವವಿರುವುದರಿಂದ ವಿವಿಧ ಕುಡಿಯುವ ನೀರಿನ ಯೋಜನೆಗಳಿಗೆ ಭದ್ರಾ ನದಿಯ ಮೂಲಕ ದಿನಾಂಕ 29/03/2024 ರಿಂದ 06/04/2024ರವರೆಗೆ ನೀರನ್ನು ನದಿಗೆ ಹರಿಸಲಾಗುತ್ತದೆ ಎಂದು ಹೇಳಿದೆ.
ಎಷ್ಟು ನೀರು ಹರಿಸಲಾಗುತ್ತದೆ?; ಮಾರ್ಚ್ 29ರ ರಾತ್ರಿಯಿಂದ ಏಪ್ರಿಲ್ 6ರ ರಾತ್ರಿಯ ತನಕ 23,200 ಕ್ಯೂಸೆಕ್ ನೀರು (2.00 ಟಿಎಂಸಿ) ನೀರನ್ನು ಹರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಈ ಸಮಯದಲ್ಲಿ ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದಾಗಲಿ, ದನಕರುಗಳನ್ನು ನದಿಗೆ ಇಳಿಸುವುದಾಗಲಿ ಇತ್ಯಾದಿ ಚಟುವಟಿಕೆಗಾಗಿ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಅಲ್ಲದೇ ಮೇಲೆ ತಿಳಿಸಿದ ಅವಧಿಯಲ್ಲಿ ರೈತಬಾಂಧವರು ನದಿ ದಂಡೆಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಪಂಪ್‌ಸೆಟ್‌ಗಳಿಂದ ನೀರೆತ್ತುವುದನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಕೋರಲಾಗಿದೆ.
ನೀರು ಹರಿಸುವ ವಿವರಗಳು
* 30/3/2024 : 3 ಸಾವಿರ ಕ್ಯೂಸೆಕ್
* 31/3/2024: 3 ಸಾವಿರ ಕ್ಯುಸೆಕ್
* 1/4/2024: 3 ಸಾವಿರ ಕ್ಯುಸೆಕ್
* 2/4/2024: 3 ಸಾವಿರ ಕ್ಯುಸಕ್
* 3/4/2024: 3 ಸಾವಿರ ಕ್ಯುಸೆಕ್
* 4/4/2024 :3 ಸಾವಿರ ಕ್ಯುಸೆಕ್
* 5/4/2024: 3 ಸಾವಿರ ಕ್ಯುಸೆಕ್
* 6/4/2024: 2,200 ಕ್ಯುಸೆಕ್
ಜನವರಿಯಲ್ಲಿ ಭದ್ರಾ ಅಚ್ಚುಕಟ್ಟು ಅಭಿವೃದ್ದಿ ಪ್ರಾಧಿಕಾರ ಕಚೇರಿಯಲ್ಲಿ 2023-24ನೇ ಸಾಲಿನ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆ ನಡೆದಿತ್ತು. ಆಗ ಭದ್ರಾ ಜಲಾಶಯದ ಎಡದಂಡ ನಾಲೆಗೆ ಜನವರಿ 10 ರಿಂದ ಮತ್ತು ಬಲದಂಡ ನಾಲೆ ಜನವರಿ 20ರಿಂದ ನೀರು ಹರಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದರು. ಬಳಿಕ ಫೆಬ್ರವರಿ ತಿಂಗಳಿನಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆ, ಜಾತ್ರಾ ಮಹೋತ್ಸವದ ಉದ್ದೇಶದಿಂದ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಹರಿಸಲಾಗಿತ್ತು.
2023ನೇ ಸಾಲಿನಲ್ಲಿ ಮಳೆ ಕೊರತೆಯ ಕಾರಣ ಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಉಂಟಾಗಿದೆ. ಪ್ರಸ್ತುತ ಜಲಾಶಯದಲ್ಲಿ ಇರುವ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈಗ ಮಾರ್ಚ್ ಅಂತ್ಯದ ವೇಳೆಗೆ ನದಿಯಲ್ಲಿ ನೀರಿನ ಮಟ್ಟ ಕುಸಿತವಾಗಿದೆ. ಆದ್ದರಿಂದ ನದಿಗೆ ನೀರು ನೀರು ಹರಿಸುವ ಮೂಲಕ ಕುಡಿಯುವ ನೀರಿನ ಯೋಜನೆಗಳಿಗೆ ನೀರೆತ್ತಲು ಅನುಕೂಲ ಮಾಡಿಕೊಡಲಾಗುತ್ತಿದೆ.
ದಾವಣಗೆರೆ, ಶಿವಮೊಗ್ಗ ಜಿಲ್ಲಾಧಿಕಾರಿಗಳು ಮುಂಬರುವ ಮಾನ್ಸೂನ್ ಮಳೆಗಾಲ ಸ್ವಲ್ಪ ವಿಳಂಬವಾದರೂ ಅಲ್ಲಿಯವರೆಗೆ ಕುಡಿಯುವ ನೀರು ನೀಡಲು ಅನುಕೂಲವಾಗುವಂತೆ ನೀರು ವಿತರಣೆಯ ಯೋಜನೆ ರೂಪಿಸಿದ್ದಾರೆ. ಆದರೆ ಹಾವೇರಿ ಭಾಗದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿರುವ ಕಾರಣ ಈಗ ನದಿಗೆ ನೀರು ಹರಿಸಲಾಗುತ್ತಿದೆ.












Click it and Unblock the Notifications