ಆರ್ಸಿಬಿಗೆ ಬರ್ತಾರಾ ವೈಭವ್ ಸೂರ್ಯವಂಶಿ ತಮ್ಮ ಆಶೀರ್ವಾದ್? ನೆಟ್ಟಿಗರು ಹೇಳೋದೇನು?
Ashirvad Sooryavanshi: ವೈಭವ್ ಸೂರ್ಯವಂಶಿ ಅವರು ಈಗಾಗಲೇ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಇಡೀ ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇದೀಗ ಅವರ ಸಹೋದರ ಆಶೀರ್ವಾದ್ ಕೂಡ ಸ್ಫೋಟಕ ಬ್ಯಾಟಿಂಗ್ನಿಂದ ಗಮನ ಸೆಳೆದಿದ್ದು, ಮುಂದಿನ ಬಾರಿಯ ಐಪಿಎಲ್ ಹರಾಜಿನ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅವರನ್ನು ಖರೀದಿಸಬೇಕು ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿವೆ.
ಭಾರತೀಯ ಕ್ರಿಕೆಟ್ನ ಉದಯೋನ್ಮುಖ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನದ ಬೆನ್ನಲ್ಲೇ, ಇದೀಗ ಅವರ ಕಿರಿಯ ಸಹೋದರ 10 ವರ್ಷದ ಆಶೀರ್ವಾದ್ ಸೂರ್ಯವಂಶಿ ಕ್ರಿಕೆಟ್ ಅಂಗಳದಲ್ಲಿ ಅಬ್ಬರಿಸಲಾರಂಭಿಸಿದ್ದಾರೆ. ಬಿಹಾರದ ಸ್ಥಳೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ಸ್ಫೋಟಕ ಬ್ಯಾಟಿಂಗ್ ಆಡಿದ ಈ ಬಾಲಕ ಕೇವಲ 119 ಎಸೆತಗಳಲ್ಲಿ 168 ರನ್ ಕಲೆಹಾಕಿ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಜೂನಿಯರ್ ಸೂರ್ಯವಂಶಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೇರಿಸಿಕೊಳ್ಳಿ ಎಂಬ ಚರ್ಚೆಗಳು ಜೋರಾಗಿವೆ.

ರನ್ ಮಳೆ ಹರಿಸುತ್ತಿರುವ ವೈಭವ್ ತಮ್ಮ
ಸ್ಥಳೀಯ ಬಿಹಾರ ಕ್ರಿಕೆಟ್ ಸರ್ಕ್ಯೂಟ್ನಲ್ಲಿ ರಿಷವ್ XI ತಂಡವನ್ನು ಪ್ರತಿನಿಧಿಸಿ ಅಭ್ಯಾಸ ಪಂದ್ಯವೊಂದರಲ್ಲಿ ಕಣಕ್ಕಿಳಿದ ಆಶೀರ್ವಾದ್ ಎದುರಾಳಿ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಅವರ ಈ ಸ್ಫೋಟಕ ಇನ್ನಿಂಗ್ಸ್ನಲ್ಲಿ 19 ಬೌಂಡರಿ ಹಾಗೂ 6 ಸಿಕ್ಸರ್ಗಳು ಸೇರಿದ್ದವು. 141.18ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ಆಶೀರ್ವಾದ್, ಅಣ್ಣನಂತೆ ತಾನೂ ಕೂಡ ಭಯವಿಲ್ಲದ ಕ್ರಿಕೆಟ್ ಆಡಬಲ್ಲೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಕೇವಲ 6 ತಿಂಗಳ ಹಿಂದೆಯಷ್ಟೇ ಕ್ರಿಕೆಟ್ ತರಬೇತಿ ಆರಂಭಿಸಿರುವ ಈ ಬಾಲಕ, ಕೆಲವೇ ವಾರಗಳ ಅಂತರದಲ್ಲಿ ಬಾರಿಸುತ್ತಿರುವ ಎರಡನೇ ಶತಕ ಇದಾಗಿದೆ. ಇದಕ್ಕೂ ಮುನ್ನ ತಾಜ್ಪುರ ಕ್ರಿಕೆಟ್ ಅಕಾಡೆಮಿ ಪರ ಆಡಿದ್ದ ಆಶೀರ್ವಾದ್ ಅವರು, 87 ಎಸೆತಗಳಲ್ಲಿ 103 ರನ್ ಗಳಿಸಿ ಮಿಂಚಿದ್ದರು.
ಆರ್ಸಿಬಿ ಅಭಿಮಾನಿಗಳ ಲೆಕ್ಕಾಚಾರವೇನು?
ಐಪಿಎಲ್ನ ಮುಂದಿನ ಮೆಗಾ ಹರಾಜು 2027ರ ಐಪಿಎಲ್ ಟೂರ್ನಿಗೂ ಮುನ್ನ ನಡೆಯಲಿದೆ. ಬಿಸಿಸಿಐ ನಿಯಮಾವಳಿಗಳ ಪ್ರಕಾರ ಪ್ರತಿ ಮೂರು ವರ್ಷಗಳಿಗೊಮ್ಮೆ ಮೆಗಾ ಹರಾಜು ನಡೆಯುವುದರಿಂದ 2025-2027ರ ಸೈಕಲ್ ಮುಗಿದ ನಂತರ 2027ರ ಕೊನೆಯಲ್ಲಿ ಅಥವಾ 2028ರ ಆರಂಭದಲ್ಲಿ ಮುಂದಿನ ಮೆಗಾ ಹರಾಜು ನಿಗದಿಯಾಗುವ ನಿರೀಕ್ಷೆಯಿದೆ. ಆಶೀರ್ವಾದ್ ಸೂರ್ಯವಂಶಿ ಅವರ ಈ ಬ್ಯಾಟಿಂಗ್ ವಿಡಿಯೋಗಳು ಮತ್ತು ರನ್ ಬೇಟೆಯ ಸುದ್ದಿ ವೈರಲ್ ಆಗುತ್ತಿದ್ದಂತೆ, ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಾಗೂ ಆರ್ಸಿಬಿ ಅಭಿಮಾನಿಗಳು ಭವಿಷ್ಯದ ಲೆಕ್ಕಾಚಾರ ಆರಂಭಿಸಿದ್ದಾರೆ.
ನೆಟ್ಟಿಗರು ಹೇಳೋದೇನು?
'ಮುಂದಿನ ಮೆಗಾ ಹರಾಜಿನ ವೇಳೆಗೆ ಈ ಅದ್ಭುತ ಪ್ರತಿಭೆಯನ್ನು ಆರ್ಸಿಬಿ ಫ್ರಾಂಚೈಸಿ ಕೊಂಡುಕೊಳ್ಳಬೇಕು,' ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದ ಮೂಲಜ ಮನವಿ ಮಾಡಿಕೊಂಡಿದ್ದಾರೆ. ಅಣ್ಣ ವೈಭವ್ ಸೂರ್ಯವಂಶಿ ಈಗಾಗಲೇ ಐಪಿಎಲ್ ಹಾಗೂ ದೇಶಿ ಕ್ರಿಕೆಟ್ನಲ್ಲಿ ದೊಡ್ಡ ಹೆಸರು ಮಾಡಿದ್ದರೆ, ಇದೀಗ ತಮ್ಮ ಆಶೀರ್ವಾದ್ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲೇ ಇಬ್ಬರೂ ಸಹೋದರರು ರನ್ ಮಳೆ ಹರಿಸುತ್ತಿರುವುದು ಭಾರತೀಯ ಕ್ರಿಕೆಟ್ನ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಉತ್ತಮ ಬೆಳವಣಿಗೆಯಾಗಿದೆ. ಸದ್ಯ ಈ 10 ವರ್ಷದ ಬಾಲಕನ ಬ್ಯಾಟಿಂಗ್ ವೈಖರಿ ಮತ್ತು ಕೆಲ ಆರ್ಸಿಬಿ ಫ್ಯಾನ್ಸ್ ಹಂಚಿಕೊಳ್ಳುತ್ತಿರುವ ಪೋಸ್ಟ್ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗುತ್ತಿವೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಒಂದು ವೇಳೆ ಅವರು ಐಪಿಎಲ್ ಹರಾಜಿಗೆ ಬಂದರೆ ಯಾವ ತಂಡ ಕೊಂಡುಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ.












Click it and Unblock the Notifications