Jowar Update: ಜೋಳ ಖರೀದಿ ಕೇಂದ್ರ ಆರಂಭಿಸಲು ರೈತರ ಆಗ್ರಹ
ಬೆಂಗಳೂರು, ಮಾರ್ಚ್ 20: ರಾಜ್ಯದ ರೈತರಲ್ಲಿ ಮೂಡಿದ್ದ ಮಂದಹಾಸವನ್ನು ಜೋಳದ ಬೆಲೆ ದಿಢೀರ್ ಕುಸಿತವು ಕಿತ್ತುಕೊಂಡಿದೆ. ಒಂದೆಡೆ ಬರಗಾಲ ಆವರಿಸಿದ್ದರೆ, ಮತ್ತೊಂದೆಡೆ ಪರಿಹಾರ ಸಿಗದೇ ರೈತರು ಒದ್ದಾಡುತ್ತಿದ್ದಾರೆ. ಇದೀಗ ಕೈಗೆ ಬಂದ ಜೋಳ ಖರೀದಿಗೆ ಕೇಂದ್ರ ಇಲ್ಲದಾಗಿದೆ. ಶೀಘ್ರವೇ ಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಪ್ರತಿಭಟನೆ ಮೂಲಕ ರೈತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಹೌದು, ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯ ತಾಲ್ಲೂಕುಗಳಲ್ಲಿ ಜೋಳ ಖರೀದಿ ಕೇಂದ್ರ ಆರಂಭಿಸಬೇಕು ಹಾಗೂ ಬರ ಪರಿಹಾರ ವಿತರಣೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ಮಾಡಿದರು. ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಿದರು.

ಸಮರ್ಪಕವಾಗಿ ಜೋಳ ಖರೀದಿಸುತ್ತಿಲ್ಲ
ಈ ಭಾಗದಲ್ಲಿ ವ್ಯಾಪಕ ಬರಗಾಲ ಬಿದ್ದಿದೆ. ಸರ್ಕಾರದಿಂದ ಸೂಕ್ತ ಪರಿಹಾರವು ರೈತರಿಗೆ ಸಿಗದೇ ಅವರು ಆತಂಕದಲ್ಲಿದ್ದಾರೆ. ಜೋಳ ಈ ಬಾರಿ ರೈತರ ಕೈಹಿಡಿಯಲಿದೆ. ಆದಾಯ ಹೆಚ್ಚಾಗಲಿದೆ ಎಂದುಕೊಂಡಿದ್ದೇವೆ. ಜೋಳದ ಬೆಲೆ 8000 ರೂ.ನಿಂದ 2500 ರೂ.ವರೆಗೆ ಇಳಿಕೆ ಆಗಿದೆ. ಹಾಲಿ ಜೋಳ ಖರೀದಿ ಕೆಲಸವಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಇದೆಲ್ಲ ಗಮನಿಸಿ ರಾಜ್ಯ ಸರ್ಕಾರವು ಮುಂದಿನ ಒಂದು ವಾರದೊಳಗೆ ಜೋಳ ಖರೀದಿ ಕೇಂದ್ರವನ್ನು ಪ್ರಾರಂಭಿಸಬೇಕು. ರೈತರಿಂದ ಜೋಳ ಖರೀದಿ ಮಾಡಿ ರೈತರ ಖಾತೆಗೆ ಹಣ ಜಮಾ ಮಾಡಬೇಕು. ಈಗಾಗಲೇ ಜಿಲ್ಲೆಯ ಕೆಲವು ಪಟ್ಟಣಗಳಲ್ಲಿ ಮುಂಗಾರು ಖರೀದಿ ಕೇಂದ್ರವನ್ನು ಆರಂಭಿಸಿದ್ದರೂ ಸಹಿತ ಸಮರ್ಪಕ ಜೋಳ ಖರೀದಿಯೇ ಆಗುತ್ತಿಲ್ಲ. ಸರ್ಕಾರ ರೈತರ ಸ್ಥಿತಿ ಅರಿತುಕೊಂಡು ವಿಳಂಬ ಮಾಡದೇ ಖರೀದಿ ಕೇಂದ್ರ ತೆರೆದು ಜೋಳ ಖರೀದಿಸಬೇಕು ಎಂದರು.

ಬ್ಯಾಂಕ್‌ಗಳಿಂದ ಸಾಲ ವಸೂಲಾತಿ ಬೇಡ
ಹಿಂಗಾರು ಜೋಳ ಖರೀದಿ ಕೇಂದ್ರ ಆರಂಭಿಸುವ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ರಾಯಚೂರಿನಲ್ಲಿ ಬರಗಾಲ ಇದ್ದರೂ ಸಹಿತ ಬ್ಯಾಂಕ್ ಅಧಿಕಾರಿಗಳಿಗೆ ಸಾಲ ವಸೂಲಾತಿಗೆ ಒತ್ತಾಯಿಸುತ್ತಿದ್ದಾರೆ. ಬೇರೆ ಮೂಲಗಳಿಂದ (ವಿಧವಾ, ವೃದ್ಧಾಪ್ಯ ವೇತನ) ರೈತರ ಬ್ಯಾಂಕ್ ಖಾತೆಗೆ ಹಣ ಜಮೆ ಆದರೂ ಸಹಿತ ಅದನ್ನು ಕಡಿತ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗದಂತೆ ಸರ್ಕಾರ ಬ್ಯಾಂಕ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಡಬೇಕು ಎಂದು ಒತ್ತಾಯಿಸಿದರು.
ಅಕ್ರಮ ತಡೆಯಿರಿ: ಪರಿಹಾರ ಹಾಕಿ
ರೈತರಿಗಾಗಿ ಜಾರಿಗೆ ತಂದ ಫಸಲ್ ಭೀಮಾ ಯೋಜನೆಯಡಿ ಭಾರೀ ಭ್ರಷ್ಟಾಚಾರ ನಡೆದಿದೆ. ತನಿಖೆ ಕೈಗೊಂಡು ಅರ್ಹ ರೈತರಿಗೆ ಪರಿಹಾರ ದೊರಕುವಂತೆ ಮಾಡಬೇಕು. ಶೀಘ್ರವೇ ಜೋಳ ಖರೀದಿ ಕೇಂದ್ರ ಆರಂಭಿಸಿ ರೈತರಿಂದ ಜೋಳ ಖರೀದಿಸಬೇಕು. ಜೊತೆಗೆ ಸರ್ಕಾರ ತ್ವರಿತವಾಗಿ ರೈತರಿಗೆ ಬರ ಪರಿಹಾರ ನೀಡಬೇಕು ಎಂದು ಪ್ರತಿಭಟನಾ ನಿರತ ರೈತರು ಮನವಿ ಮಾಡಿದರು.
ಮುಂಗಾರು ಮಳೆ ಕೈಕೊಟ್ಟರು ಸಹಿತ ಹಿಂಗಾರು ಆರಂಭದಲ್ಲಿ ಜಿಲ್ಲೆಯಲ್ಲಿ ಈ ಬಾರಿ ರೈತರ ಕೈ ಹಿಡಿಯಲಿದೆ ಎಂಬ ನಿರೀಕ್ಷೆ ಮೂಡಿತ್ತು. ಕಾರಣ ಜೋಳದ ಬೆಲೆ ಗರಿಷ್ಠ 8000ರೂ.ವರೆಗೆ ಸಿಗಲಿದೆ ಎಂದು ಹೇಳಲಾಗಿತ್ತು. ಬೆಲೆಯು ಹಾಗೆಯೇ ಇತ್ತು. ಆದರೆ ಹಿಂಗಾರು ಕೈಕೊಟ್ಟ ಪರಿಣಾಮ, ಇಳುವರಿ ಸರಿಯಾಗಿ ಬಂದಿಲ್ಲ. ಜೋಳದ ಬೆಲೆ ಸದ್ಯ ದಿಢೀರನೇ ಕುಸಿದಿದೆ. ರೈತರಿಗೆ ನಿರಾಸೆಯಾಗಿದೆ.












Click it and Unblock the Notifications