ಎಂಎಸ್‌ಪಿ ಅಡಿ ರಾಗಿ, ಜೋಳ ಖರೀದಿ: ರೈತರಿಗೆ ಮಾಹಿತಿ
ಬೆಂಗಳೂರು, ಮಾರ್ಚ್ 24: 2023-24ನೇ ಸಾಲಿನಲ್ಲಿ ಬೆಳೆದ ರಾಗಿ ಮತ್ತು ಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ನೇರವಾಗಿ ಖರೀದಿಸಲು ದಿನಾಂಕ ಘೋಷಣೆ ಮಾಡಲಾಗಿದೆ. ರೈತರು ಎಂಎಸ್‌ಪಿ ಅಡಿ ಬೆಳೆಯನ್ನು ಮಾರಾಟ ಮಾಡಲು ಮೊದಲು ನೋಂದಣಿ ಮಾಡಿಸಬೇಕಿದೆ.
ಬಳ್ಳಾರಿ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಈ ಕುರಿತು ತೀರ್ಮಾನಿಸಿದೆ. ರಾಜ್ಯದಲ್ಲಿ ಇನ್ನು 3 ಲಕ್ಷ ಮೆಟ್ರಿಕ್ ಟನ್ ಜೋಳವನ್ನು ಹಾಗೂ 5,99,392 ಮೆಟ್ರಿಲ್ ಟನ್ ರಾಗಿಯನ್ನು ರೈತರಿಂದ ಖರೀದಿಸಲು ಸರ್ಕಾರ ಮುಂದಾಗಿದೆ.

ಖರೀದಿ ಪ್ರಕ್ರಿಯೆಯಲ್ಲಿ ಖರೀದಿ ಮಿತಿಯು ಪ್ರತಿ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 20 ಕ್ವಿಂಟಾಲ್ ಮಿತಿ ಇದ್ದು, ಬಳ್ಳಾರಿ ಜಿಲ್ಲೆಯ ರೈತರು ಮಾರಾಟಕ್ಕೆ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿಯ ಅಧ್ಯಕ್ಷರೂ ಆದ ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
ನೋಂದಣಿ ಮತ್ತು ಖರೀದಿ ಅವಧಿ: 2023-24ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಬಳ್ಳಾರಿ ಜಿಲ್ಲೆಯಲ್ಲಿ ಖರೀದಿಸಲು ತೀರ್ಮಾನಿಸಿರುವ ಕೃಷಿ ಉತ್ಪನ್ನ, ರೈತರ ನೋಂದಣಿ, ಖರೀದಿ ಪ್ರಾರಂಭದ ದಿನದ ವಿವರಗಳನ್ನು ಜಿಲ್ಲಾಡಳಿತ ರೈತರ ಉಪಯೋಗಕ್ಕಾಗಿ ಪ್ರಕಟಿಸಿದೆ.
ಮುಂಗಾರು/ ಹಿಂಗಾರು ಋತುವಿನ ಖರೀದಿಸುವ ಕೃಷಿ ಉತ್ಪನ್ನಗಳಲ್ಲಿ ರಾಗಿ, ಜೋಳ ಸೇರಿವೆ.
ಮುಂಗಾರು/ ಹಿಂಗಾರು ಋತುವಿನ ರೈತರ ನೋಂದಣಿ ಅವಧಿಯೂ ಮಾರ್ಚ್ 31ರವರೆಗೆ ಆಗಿರುತ್ತದೆ. ಖರೀದಿ ಪ್ರಾರಂಭ ಮತ್ತು ಮುಕ್ತಾಯದ ದಿನಾಂಕ ಏಪ್ರಿಲ್ 1 ರಿಂದ ಜೂನ್ 30 ರವರೆಗೆ ಎಂದು ತಿಳಿಸಲಾಗಿದೆ.
2023-24 ನೇ ಸಾಲಿನ ಬೆಂಬಲ ಬೆಲೆ ಯೋಜನೆ ಕಾರ್ಯಾಚರಣೆಯನ್ನು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ, ಇವರನ್ನು ಖರೀದಿ ಏಜೆನ್ಸಿಯಾಗಿ ನೇಮಿಸಿದೆ. ಕೇಂದ್ರ ಸರ್ಕಾರವು ನಿಗದಿಪಡಿಸಿದ ಗುರಿ ತಲುಪದೇ ಇರುವುದರಿಂದ ರಾಗಿ, ಜೋಳ ಖರೀದಿಯನ್ನು ಜೂನ್ 30ರ ವರೆಗೆ ವಿಸ್ತರಿಸಿ ಆದೇಶಿಸಲಾಗಿದೆ.
ರಾಗಿ ಮತ್ತು ಜೋಳ ಮಾತ್ರವಲ್ಲ. 2023-24ನೇ ಸಾಲಿನ ಋತುವಿನಲ್ಲಿ ಬೆಳೆದ ಬಿಳಿ ಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿ ಮಾಡಲಾಗುತ್ತದೆ. ಇದಕ್ಕೆ ಬೆಂಬಲ ಬೆಲೆಯನ್ನು ಈಗಾಗಲೇ ಘೋಷಣೆ ಮಾಡಲಾಗಿದೆ.
ರೈತರಿಂದ ಖರೀದಿ ಮಾಡುವ ಮಾಲ್ದಂಡಿ ಬಿಳಿ ಜೋಳಕ್ಕೆ ರೂ.3,225 (ಪ್ರತಿ ಕ್ವಿಂಟಾಲ್‍ಗೆ) ಮತ್ತು ಹೈಬ್ರಿಡ್ ಬಿಳಿ ಜೋಳಕ್ಕೆ ರೂ. 3,180 (ಪ್ರತಿ ಕ್ವಿಂಟಾಲ್‍ಗೆ) ಬೆಲೆ ನಿಗದಿ ಮಾಡಲಾಗಿದೆ. ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ, ಬೆಂಗಳೂರು. ಇವರು ಖರೀದಿಸುವ ಏಜೆನ್ಸಿ.
ಹಿಂಗಾರು ಋತುವಿನ ರೈತರ ನೋಂದಣಿ ಈಗಾಗಲೇ ಪ್ರಾರಂಭವಾಗಿದೆ. ಹಿಂಗಾರು ಋತುವಿನ ಖರೀದಿ ಪ್ರಾರಂಭ ಮತ್ತು ಮುಕ್ತಾಯದ ದಿನವು ಏಪ್ರಿಲ್ 1 ರಿಂದ ಮೇ 31ರ ವರೆಗೆ ಇರುತ್ತದೆ. ಬಿಳಿ ಜೋಳ ಮಾರಾಟ ಮಾಡಲು ಬಯಸುವ ರೈತರು ಬಳ್ಳಾರಿ ಜಿಲ್ಲೆಯಲ್ಲಿ ತೆರೆದಿರುವ ಖರೀದಿ ಕೇಂದ್ರದ ಬಗ್ಗೆ ಮಾಹಿತಿಗಾಗಿ ಬಳ್ಳಾರಿ ತಾಲ್ಲೂಕಿನ ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಬಳ್ಳಾರಿ ಘಟಕ-1&2 ರ ನರಸಿಂಹ ಅವರನ್ನು 9900677875, ಕಂಪ್ಲಿಯ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ರಂಗಪ್ಪ ಅವರನ್ನು 9740838910 ಸಂಖ್ಯೆ ಮೂಲಕ ಸಂಪರ್ಕಿಸಬಹುದು.












Click it and Unblock the Notifications