MGNREGA: ಪಪ್ಪಾಯ, ಡ್ರ್ಯಾಗನ್ ಫ್ರೂಟ್ ಬೆಳೆದು ಕೈ ತುಂಬಾ ಲಾಭ ಗಳಿಸಿದ ಧಾರವಾಡದ ರೈತರ ಕಥೆ
ಧಾರವಾಡ, ಏಪ್ರಿಲ್.07: ರಾಜ್ಯದಲ್ಲಿ ಮಳೆ ಇಲ್ಲದೆ ಜನ ಕಂಗಾಲಾಗಿದ್ದಾರೆ. ಅದರಲ್ಲೂ ರೈತರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಆದರೆ, ಕೆಲವರು ಮಾತ್ರ ಸರ್ಕಾರದ ಯೋಜನೆಗಳನ್ನು ಉತ್ತಮವಾಗಿ ಬಳಸಿಕೊಂಡು ಬರಗಾಲದಲ್ಲಿಯೂ ಮುಖದಲ್ಲಿ ಮಂದಹಾಸ ಉಳಿಸಿಕೊಂಡಿದ್ದಾರೆ. ಕೈಯಲ್ಲಿ ಕಾಸು ಮಾಡಿದ್ದಾರೆ. ಅವರೇ ಧಾರವಾಡದ ದಯಾನಂದ ಹೊಳೆಹಡಗಲಿ ಮತ್ತು ಅರವಿಂದ ಚವ್ಹಾಣ್.
ಧಾರವಾಡ ತಾಲೂಕಿನ ಮಾದನಭಾವಿ ಗ್ರಾಮ ಪಂಚಾಯತ ವ್ಯಾಪ್ತಿಯ ಮಾದನಭಾವಿ ಗ್ರಾಮದ 28 ವರ್ಷ ವಯಸ್ಸಿನ ದಯಾನಂದ ಹೊಳೆಹಡಗಲಿ ಕೃಷಿಯಲ್ಲಿ ಅಪಾರ ಆಸಕ್ತಿ ಹೊಂದಿರುವವರು. ಈ ಮೊದಲು ತಮ್ಮ ಜಮೀನಿನಲ್ಲಿ ಕಬ್ಬಿನ ಬೇಸಾಯ ಮಾಡುತ್ತಿದ್ದ ಯುವ ರೈತ, ವರ್ಷದಿಂದ ವರ್ಷಕ್ಕೆ ಕಬ್ಬಿನ ಬೆಳೆಯ ಇಳುವರಿ ಕಡಿಮೆಯಾಗುತ್ತಾ ಬರುತ್ತಿರುವುದರಿಂದ ಅವರಿಗೆ ಕಬ್ಬಿನ ಕೃಷಿಯಲ್ಲಿ ಆಸಕ್ತಿ ಕಡಿಮೆಯಾಗಿತ್ತು. ಬಳಿಕ ಪಪ್ಪಾಯ ಬೆಳೆಯತ್ತ ಆಸಕ್ತಿ ಹೊರಳಿತ್ತು.

ಕಬ್ಬಿನ ಬೆಳೆಯಲ್ಲಿ ಇಳುವರಿ ಕಡಿಮೆಯಾಗದ ಕಾರಣ ಪರ್ಯಾಯ ಬೆಳೆ ಬೆಳೆಯಬೇಕೆಂದು ತೀರ್ಮಾನಿಸಿದರು. ಹೀಗಾಗಿ ಒಂದು ದಿನ ಗ್ರಾಮ ಪಂಚಾಯತಿಯಲ್ಲಿ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಭಾಗವಹಿಸಿ, ತೋಟಗಾರಿಕೆ ಇಲಾಖೆ ಸಿಬ್ಬಂದಿಗಳಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಇರುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡರು. ಬಳಿಕ ಪಪ್ಪಾಯಿ ಬೇಸಾಯದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಗ್ರಾಮ ಸಭೆಯಲ್ಲಿ ಆಯ್ಕೆಯಾಗಿ ನವೆಂಬರ್ 2023 ರಲ್ಲಿ 0.6 ಹಕ್ಕರ್ ಪ್ರದೇಶದಲ್ಲಿ ಪಪ್ಪಾಯಿ ಬೆಳೆಯನ್ನು ಬೆಳೆದು 37,604 ಕೂಲಿ ಮೊತ್ತದ ಸೌಲಭ್ಯವನ್ನು ಪಡೆದಿದ್ದಾರೆ. ಜನವರಿ 2024 ರಿಂದ ಮಾರ್ಚ್ 2024 ರ ಅವಧಿಯಲ್ಲಿ ತಿಂಗಳಿಗೆ 2 ಬಾರಿ ಕಟಾವು ಮಾಡಿ 20 ಟನ್ ಇಳುವರಿ ಪಡೆದಿದ್ದಾರೆ. ಮಾರುಕಟ್ಟೆಯ ಬೆಲೆ ಪ್ರತಿ ಕೆ.ಜಿಗೆ 12 ರೂ ರಂತೆ 20 ಟನ್‌ಗೆ ಸುಮಾರು 2,40,000 ಆದಾಯ ಪಡೆದಿದ್ದಾರೆ.

ಡ್ಯಾಗನ್ ಫ್ರೂಟ್ ಬೆಳೆದು ಲಾಭ ಕಂಡ ಅರವಿಂದ ಚವ್ಹಾಣ
ಧಾರವಾಡ ತಾಲೂಕಿನ ಹಂಗರಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಬ್ಬನಮರಡಿ ಗ್ರಾಮದ 35 ವರ್ಷದ ಅರವಿಂದ ಚವ್ಹಾಣ್ ಅವರಿಗೆ ಕೃಷಿಯೇ ಜೀವನಾಧಾರ. ಸತತವಾಗಿ 10 ವರ್ಷಗಳಿಂದ ಅವರು ತಮ್ಮ ಜಮೀನಿನಲ್ಲಿ ಮೆಕ್ಕೆ ಜೋಳದ ಬೇಸಾಯ ಮಾಡಿಕೊಂಡು ಬಂದಿದ್ದಾರೆ. ಆದರೆ, ಮೆಕ್ಕೆ ಜೋಳದ ಆದಾಯದಲ್ಲಿ ಜೀವನ ಸಾಗಿಸುವುದು ತುಂಬಾ ಕಷ್ಟವಾಯಿತು. ತದನಂತರ ಅವರು ಲಾಭದಾಯಕವಾದ ಬೆಳೆ ಬೆಳೆಯುವ ಬಗ್ಗೆ ಚಿಂತಿಸುತ್ತಿದ್ದರು.
ಹೀಗಿರುವಾಗ ಒಂದು ದಿನ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ತೋಟಗಾರಿಕೆ ಬೆಳೆಗಳ ಬಗ್ಗೆ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಮಾಹಿತಿ ಪಡೆದುಕೊಂಡು ಡ್ಯಾಗನ್ ಫ್ರೂಟ್ ಬೆಳೆ ಬೆಳೆಯಲು ಆಸಕ್ತಿ ತೋರಿದ್ದಾರೆ. ತೋಟಗಾರಿಕೆ ಇಲಾಖೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅರ್ಜಿ ಸಲ್ಲಿಸಿ ಮೇ 2022 ರಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿದ್ದಾರೆ.
ತಮ್ಮ ಹೊಲದಲ್ಲಿ ಒಟ್ಟು 924 ಸಸಿಗಳನ್ನು ನೆಡುವುದರ ಮೂಲಕ 0.3 ಹೆಕ್ಟರ್ ಪ್ರದೇಶದಲ್ಲಿ ಡ್ಯಾಗನ್ ಫ್ರೂಟ್ ಬೆಳೆಯನ್ನು ಬೆಳೆಯಲು ಆರಂಭಿಸಿದರು. ಇದರಿಂದ ನರೇಗಾ ಯೋಜನೆಯ ಅಡಿಯಲ್ಲಿ 37, 080 ರೂಪಾಯಿ ಕೂಲಿ ಮೊತ್ತದ ಸೌಲಭ್ಯ ಪಡೆದಿರುತ್ತಾರೆ. ಈ ಬೆಳೆಯು ವರ್ಷದಲ್ಲಿ 4 ರಿಂದ 5 ತಿಂಗಳ ವರೆಗೆ ಇಳುವರಿಯನ್ನು ನೀಡುತ್ತದೆ. ನರೇಗಾ ಯೋಜನೆಯ ಫಲಾನುಭವಿ ಆಗಿರುವ ಅರವಿಂದ ಚವ್ಹಾಣ್ ಇಲ್ಲಿಯವರೆಗೆ ಸುಮಾರು 50 ಕ್ವಿಂಟಾಲ್ ಇಳುವರಿಯನ್ನು ಪಡೆದು ಮಾರುಕಟ್ಟೆ ಬೆಲೆ ಕೆಜಿ ಗೆ 170 ರೂಪಾಯಿಯಂತೆ ಸುಮಾರು 8,50,000 ರೂಪಾಯಿ ಆದಾಯ ಪಡೆದಿದ್ದಾರೆ.












Click it and Unblock the Notifications