ಅಡಿಕೆ & ತೆಂಗಿನ ತೋಟಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಮಂಡ್ಯ: ತೆಂಗು, ಬಾಳೆ ಮತ್ತು ಅಡಿಕೆ ಮರಗಳಿಂದ ಕೂಡಿದ್ದ ತೋಟಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಸಾತೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪ್ರಗತಿಪರ ರೈತ ಕುಮಾರಸ್ವಾಮಿ ಜಮೀನಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಪರಿಣಾಮವಾಗಿ ಬೆಳೆದು ನಿಂತಿದ್ದ ಗಿಡ ಮರಗಳು, ಹನಿ ನೀರಾವರಿ ಪೈಪ್‌ಗಳು ಸುಟ್ಟು ಭಸ್ಮವಾಗಿ ಲಕ್ಷಾಂತರ ಮೌಲ್ಯದ ಹಾನಿಯಾಗಿದೆ. ಶನಿವಾರ ಮಧ್ಯಾಹ್ನ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

ಗ್ರಾಮದ ಹೊರವಲಯದ 1ಕಿ.ಮೀ. ದೂರದಲ್ಲಿರುವ ರೈತ ಕುಮಾರಸ್ವಾಮಿ ಅವರ ತೋಟಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಕೆಲವೇ ಸಮಯದಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ತೋಟವನ್ನು ಆವರಿಸಿಕೊಂಡಿದೆ.
ಗಿಡ, ಮರ ಹಾಗೂ ಹನಿ ನೀರಾವರಿ ಪೈಪ್‌ಗಳು ಸುಟ್ಟು ಹೋಗಿವೆ. ಸಂಜೆ ವೇಳೆಗೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕುಮಾರಸ್ವಾಮಿ ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ಎಲ್ಲವೂ ನಾಶವಾಗಿದೆ.
ತಮಗಿರುವ ಒಂದೂ ಮುಕ್ಕಾಲು ಎಕರೆ ಕೃಷಿ ಜಮೀನಿನಲ್ಲಿ 100 ತೆಂಗಿನ ಮರಗಳಿವೆ. ಇದಲ್ಲದೆ 1ಸಾವಿರ ಬಾಳೆ ಗಿಡ ಹಾಗೂ 200 ಅಡಿಕೆ ಮರಗಳನ್ನು ಬೆಳೆಸಿದ್ದೆ. ಬೇಸಾಯಕ್ಕೆಂದು 2.5 ಲಕ್ಷ ರೂ. ಖರ್ಚು ಮಾಡಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಪ್ರಕರಣ ದಾಖಲು
ಬರಗಾಲದ ನಡುವೆಯೂ ಬೋರ್‌ವೆಲ್‌ನಲ್ಲಿ ನೀರಿನ ಕೊರತೆ ಇರಲಿಲ್ಲ. ಪ್ರತಿದಿನ ಹನಿ ನೀರಾವರಿ ಪದ್ಧತಿ ಮೂಲಕ ನೀರು ಹಾಯಿಸುತ್ತಿದ್ದರಿಂದ ಗಿಡ ಮತ್ತು ಮರಗಳು ಕೂಡ ಚೆನ್ನಾಗಿ ಬೆಳೆಯುತ್ತಿದ್ದವು. ಉಳುಮೆ ಮಾಡುವ ಬದಲು ಕಳೆ ಸಹಿತ ಗಿಡಗಳನ್ನು ಭೂಮಿಯಲ್ಲಿಯೇ ಕೊಳೆಸಿ ಗೊಬ್ಬರ ಮಾಡುತ್ತಿದ್ದೆ. ಶನಿವಾರ ಮಧ್ಯಾಹ್ನ ಯಾರೋ ದುಷ್ಕರ್ಮಿಗಳು ತೋಟಕ್ಕೆ ಬೆಂಕಿ ಹಾಕಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕೃಷಿಯಲ್ಲಿ ಹೊಸ ವಿಧಾನ ಅಳವಡಿಸಿಕೊಂಡಿದ್ದ ನಾನು ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಗೆ ತೆರಳಿ ರೈತರಿಗೆ ಸೂಕ್ತ ಸಲಹೆ ನೀಡುತ್ತಿದ್ದೆ. ನಮ್ಮ ಜಮೀನಿಗೆ ಬಂದವರಿಗೂ ಅಗತ್ಯ ಮಾಹಿತಿ ಕೊಡುತ್ತಿದ್ದೆ. ನಮ್ಮ ಪಾಡಿಗೆ ಕೃಷಿ ಮಾಡಿಕೊಂಡು ನೆಮ್ಮದಿ ಜೀವನ ಕಟ್ಟಿಕೊಂಡಿರುವ ನಮ್ಮ ಕುಟುಂಬಕ್ಕೆ ಈ ಬೆಂಕಿ ಅವಘಡದಿಂದ ದಿಕ್ಕು ತೋಚದಂತಾಗಿದೆ ಎಂದಿದ್ದಾರೆ.
ನಮ್ಮ ಮೇಲೆ ಯಾರಿಗೆ ದ್ವೇಷವಿದೆಯೋ ಗೊತ್ತಿಲ್ಲ. ಕಳೆದ ವರ್ಷವೂ ಇದೇ ರೀತಿ ಬೆಂಕಿ ಹಾಕಿದ್ದರು. ಆದರೆ ತಕ್ಷಣ ಎಚ್ಚೆತ್ತುಕೊಂಡಿದ್ದರಿಂದ ಹೆಚ್ಚು ಹಾನಿಯಾಗಿರಲಿಲ್ಲ. ಈಗ ಎಲ್ಲವೂ ನಾಶವಾಗಿರುವುದೆ. ಕಿಡಿಗೇಡಿಗಳು ನಮ್ಮ ತೋಟಕ್ಕೆ ಬೆಂಕಿ ಹಾಕಿರುವ ಕುರಿತು ಭಾನುವಾರ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.












Click it and Unblock the Notifications