ಮಾಗಡಿಯಲ್ಲಿ ಯಾರು ಯಾವ ಪಕ್ಷವೋ? ಪಕ್ಷಾಂತರ ಪರ್ವದಲ್ಲಿ ಎಲ್ಲ ಅದಲುಬದಲು
ಮಾಗಡಿ (ರಾಮನಗರ ಜಿಲ್ಲೆ), ಏಪ್ರಿಲ್ 5: ರಾಮನಗರ ಜಿಲ್ಲೆಯಲ್ಲಿನ ವಿಧಾನಸಭಾ ಕ್ಷೇತ್ರಗಳು ಈ ಬಾರಿಯ ಚುನಾವಣೆಯಲ್ಲಿ ಭಾರೀ ಸದ್ದು- ಸುದ್ದಿ ಮಾಡುತ್ತಿವೆ. ಚನ್ನಪಟ್ಟಣದ 'ಬೊಂಬೆಯಾಟ' ಒಂದು ಕಡೆಯಾದರೆ, ಮಾಗಡಿಯಲ್ಲಿ 'ಬಾಲಕೃಷ್ಣ ಸಂಹಾರ'ಕ್ಕೆ ಜೆಡಿಎಸ್ ನ ಸಮರ ತಯಾರಿ ನಡೆಯುತ್ತಿದೆ. ಇದು ಒಂದರ್ಥದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ.
ಮಾಗಡಿ ಕ್ಷೇತ್ರದ ಮಾಜಿ ಶಾಸಕ ಬಾಲಕೃಷ್ಣ ಅವರು ಒಂದು ಕಾಲದಲ್ಲಿ ಜೆಡಿಎಸ್ ನಲ್ಲಿದ್ದವರು. ದೇವೇಗೌಡರ ಕೃಪಾಶೀರ್ವಾದಿಂದಲೇ ಆರಿಸಿ ಬಂದಿದ್ದರು. ಈ ವೇಳೆ ಅವರಿಗೆ ಪೈಪೋಟಿ ನೀಡುತ್ತಿದ್ದವರು ಕಾಂಗ್ರೆಸ್ ನ ಮುಖಂಡ ಎ.ಮಂಜು. ಕಳೆದ ಕೆಲವು ವರ್ಷಗಳಿಂದ ಇವರಿಬ್ಬರು ಆರೋಪ- ಪ್ರತ್ಯಾರೋಪ ಮಾಡುತ್ತಲೇ ಬದ್ಧ ವೈರಿಗಳಾಗಿದ್ದವರು.
ಕ್ಷೇತ್ರ ಪರಿಚಯ: ಮಾಗಡಿಯಲ್ಲಿ ಬಾಲಕೃಷ್ಣ ಓಟಕ್ಕೆ ತಡೆ ಹಾಕುವವರಾರು?
ಈ ಎಲ್ಲ ಪೈಪೋಟಿ ಮಧ್ಯೆ ಯಾವಾಗ ಬಾಲಕೃಷ್ಣ ಅವರು ಜೆಡಿಎಸ್ ಸಖ್ಯ ಕಳೆದುಕೊಂಡು, ಕಾಂಗ್ರೆಸ್ ನತ್ತ ಮುಖ ಮಾಡಿದರೋ ಕಾಂಗ್ರೆಸ್ ನಲ್ಲಿದ್ದ ಎ. ಮಂಜು ಅನಿವಾರ್ಯವಾಗಿ ಜೆಡಿಎಸ್ ನತ್ತ ವಲಸೆ ಬಂದರು. ಆದರೆ ರಾಜಕೀಯ ವೈರಿ ಮಾತ್ರ ಅದೇ ಬಾಲಕೃಷ್ಣ. ಇದೀಗ ಮತ್ತೆ ಬಾಲಕೃಷ್ಣ ವಿರುದ್ಧವೇ ತಮ್ಮ ಸಮರ ಮುಂದುವರಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ಎ.ಮಂಜು ತಂತ್ರಗಾರಿಕೆ ಆರಂಭ
ಈಗಾಗಲೇ ಮಾಗಡಿಯಲ್ಲಿ ಕುಮಾರಪರ್ವ ಹಾಗೂ ಕಾರ್ಯಕರ್ತರ ಸಮಾವೇಶ ನಡೆಸಿ ಜೆಡಿಎಸ್ ಪಕ್ಷ ಯಶಸ್ವಿಯಾಗಿದೆ. ಜತೆಗೆ ಈ ಬಾರಿ ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಎ.ಮಂಜು ಅವರು ದೇವೇಗೌಡರು ಮತ್ತು ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ತಮ್ಮ ಗೆಲುವಿಗೆ ತಂತ್ರಗಳನ್ನು ಹೆಣೆಯಲು ಆರಂಭಿಸಿದ್ದಾರೆ.

ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರ ಪಕ್ಷಾಂತರ ಪರ್ವ
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಶಾಸಕ ಬಾಲಕೃಷ್ಣ ಅವರು ಮಂಜು ಬೆಂಬಲಿಗರನ್ನು ತಮ್ಮತ್ತ ಸೆಳೆಯುತ್ತಿದ್ದರೆ, ಎ.ಮಂಜು ಕಾಂಗ್ರೆಸ್ ನಲ್ಲಿ ಈ ಹಿಂದೆ ತಮ್ಮ ಜತೆಗಿದ್ದ ಬೆಂಬಲಿಗರನ್ನು ಜೆಡಿಎಸ್ ಗೆ ಎಳೆದು ತರುತ್ತಿದ್ದಾರೆ. ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಕಾಂಗ್ರೆಸ್ ನ ಹಿರಿಯ ಮುಖಂಡ- ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜುಟ್ಟನಹಳ್ಳಿ ಜಯರಾಂ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತಟವಾಳ್ ಮಂಜುನಾಥ್, ಜ್ಯೋತಿನಗರದ ಅಣ್ಣಯ್ಯ, ಹಾಲಶೆಟ್ಟಿಹಳ್ಳಿಯ ರೇವಣ್ಣ ಸೇರಿದಂತೆ ಹಲವು ಮುಖಂಡರು ಚನ್ನಪಟ್ಟಣದ ಕೆಂಗಲ್ ಆಂಜನೇಯಸ್ವಾಮಿ ಸನ್ನಿಧಾನದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.

ಜೆಡಿಎಸ್ ನ ಭದ್ರಕೋಟೆ ಮಾಗಡಿ
ಜುಟ್ಟನಹಳ್ಳಿ ಜಯರಾಂ ಮೊದಲಿನಿಂದಲೂ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜುಗೆ ಮಾರ್ಗದರ್ಶಕರಾಗಿದ್ದು, ಅವರೀಗ ಕಾಂಗ್ರೆಸ್ ಗೆ ಸೇರಿದ್ದರಿಂದ ಆನೆಬಲ ಬಂದಂತಾಗಿದೆ. ಇಷ್ಟಕ್ಕೂ ಮಾಗಡಿ ಕ್ಷೇತ್ರ ಜೆಡಿಎಸ್ ನ ಭದ್ರಕೋಟೆಯಾಗಿದೆ. ಈಗ ಬಾಲಕೃಷ್ಣ ಅವರು ಕಾಂಗ್ರೆಸ್ ಗೆ ಸೇರಿದ್ದರಿಂದ ಈ ಬಾರಿಯ ಚುನಾವಣೆ ಒಂದಷ್ಟು ಮಹತ್ವ ಪಡೆದುಕೊಂಡಿದೆ.
'ಜೆಡಿಎಸ್ ಏನು 120 ಸ್ಥಾನ ಗೆಲ್ಲುತ್ತಾ? 30 ರಿಂದ 40 ಗೆಲ್ಲಬಹುದು'

ದೇವೇಗೌಡರ ವರ್ಚಸ್ಸು ಕೆಲಸ ಮಾಡುತ್ತದಾ?
ಮತದಾರರು ಪಕ್ಷ ನೋಡಿ, ವ್ಯಕ್ತಿಯನ್ನು ನೋಡಿ ಮತಹಾಕುತ್ತಾರಾ? ದೇವೇಗೌಡರ ವರ್ಚಸ್ಸು ಕೆಲಸ ಮಾಡುತ್ತಾ ಮುಂತಾದ ಪ್ರಶ್ನೆಗಳು ಕ್ಷೇತ್ರದಲ್ಲಿ ಉದ್ಭವಿಸಿದ್ದು, ಎಲ್ಲವನ್ನೂ ಕ್ಷೇತ್ರದ ಜನರು ಕುತೂಹಲದಿಂದ ನೋಡುತ್ತಿದ್ದಾರೆ. ಮತದಾನದ ವೇಳೆ ಜನರ ಒಲವು ಯಾರ ಕಡೆಗೋ? ಮುಂದೇನಾಗುತ್ತೋ ಕಾದು ನೋಡಬೇಕಿದೆ.
ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !