ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಳು ಸುತ್ತಿನ ಕೋಟೆಯ ಬಾಗಿಲು ಕೆಡವಿದ್ದು ಯಾರು?

By Rohini Bellary
|
Google Oneindia Kannada News

Kote Anjaneya temple entrance demolished in Ballery
ಬಳ್ಳಾರಿ, ಜು. 6 : ವಿಜಯನಗರ ಸಾಮ್ರಾಜ್ಯಕ್ಕಿಂತಲೂ ಹಳೆಯದಾದ ಇತಿಹಾಸ ಹೊಂದಿರುವ ಬಳ್ಳಾರಿಯ ಏಕಶಿಲಾಬೆಟ್ಟದ ಏಳು ಸುತ್ತಿನ ಕೋಟೆಯ ಒಂದು ಸುತ್ತಿನ ಕೋಟೆಯ ತಲಬಾಗಿಲ ಚೌಕಟ್ಟು ಮತ್ತು ಚೌಕಟ್ಟಿನ ಮೇಲ್ಭಾಗದ ಕಟ್ಟಡ ಮಂಗಳವಾರ ರಾತ್ರಿ ಬಿದ್ದಿರುವುದು ರೆಡ್ಡಿ ಮತ್ತು ಮುಂಡ್ಲೂರು ಕುಟುಂಬಗಳ ಜಗಳಕ್ಕೆ ಕಾರಣವಾಗಿದೆ.

ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಇರುವ ಈ ಬಾಗಿಲ ಹಲಗೆಗಳನ್ನು ಈಗಾಗಲೇ ಬೇರೆ ಸ್ಥಳಕ್ಕೆ ರವಾನೆ ಮಾಡಲಾಗಿದೆ. ಭಾರೀ ವಾಹನಗಳು ಸಂಚರಿಸಲು ಸಾಧ್ಯವಾಗದ, ಏಕ ಮುಖ ಸಂಚಾರಕ್ಕೆ ಮಾತ್ರ ಅವಕಾಶ ಇರುವ ಈ ಬಾಗಿಲಲ್ಲಿ ಸದಾ ವಾಹನಗಳ ದಟ್ಟಣೆ, ಜನದಟ್ಟಣೆ ಇರುತ್ತದೆ.

ಆದರೆ, ಈ ಬಾಗಿಲು ಸುಭದ್ರ ಸ್ಥಿತಿಯಲ್ಲಿತ್ತು. ಕಳೆದ ನವೆಂಬರ್‌ನಲ್ಲಿ ಬಿದ್ದ ಭಾರೀ ಮಳೆಗೆ 3-5 ಅಡಿ ಎತ್ತರದಲ್ಲಿ ನೀರು ಅತ್ಯಂತ ರಭಸವಾಗಿ ಹರಿದಿದ್ದರೂ ಕೂಡ ಬಾಗಿಲು ಭದ್ರವಾಗಿತ್ತು. ಬಾಗಿಲು ಬೀಳುವ ಸ್ಥಿತಿಯಲ್ಲಿಯೂ ಇರಲಿಲ್ಲ. ಈ ಕೋಟೆ ಬಾಗಿಲ ಅಕ್ಕಪಕ್ಕದಲ್ಲಿ ಹತ್ತಾರು ಮನೆಗಳಿವೆ. ಕೋಟೆಯ ಗೋಡೆಯ ಇಕ್ಕೆಲಗಳಲ್ಲಿ ಸಾವಿರಾರು ಮನೆಗಳಿವೆ.

ಈ ಬಾಗಿಲು ತನ್ನಷ್ಟಕ್ಕೆ ತಾನೇ ಕುಸಿದು ಬೀಳಲು ಸಾಧ್ಯವೇ ಇಲ್ಲ. ಆಕಸ್ಮಿಕ ಈ ಬಾಗಿಲು ಕುಸಿದರೂ ಏಕಾಏಕಿ ಕುಸಿಯಲು ಸಾಧ್ಯವಿಲ್ಲ. ಸಣ್ಣ ಪ್ರಮಾಣದ ಕುಸಿತವೂ ಕೂಡ ಸಾರ್ವಜನಿಕರ ತೀವ್ರ ಗಮನಕ್ಕೆ ಕೂಡಲೇ ಬರುತ್ತದೆ. ವಸ್ತುಸ್ಥಿತಿ ಹೀಗಿರುವಾಗ ಈ ಕೋಟೆ ಬಾಗಿಲು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಏಕಾಏಕಿ ಬಿದ್ದ ಉದಾಹರಣೆಯೇ ಇಲ್ಲ.

ಮಂಗಳವಾರ ರಾತ್ರಿ ಹಲವರು ಬಂದು ಜೆಸಿಬಿ ಯಂತ್ರದಿಂದ ಉದ್ಧೇಶಪೂರ್ವಕವಾಗಿಯೇ ಈ ಬಾಗಿಲನ್ನು ಕೆಡವಿದ್ದಾರೆ. ಒಂದು ನಿರ್ಮಾಣ ಸಂಸ್ಥೆ, ಗಣಿ ಕಂಪನಿಗಳ ಭಾರೀ ವಾಹನಗಳು ಮತ್ತು ಇನ್ನಿತರೆ ವಾಹನಗಳ ಸಂಚಾರಕ್ಕಾಗಿ ಈ ಬಾಗಿಲನ್ನು ಜೆಸಿಬಿ ಮೂಲಕ ಕೆಲ ದುಷ್ಕರ್ಮಿಗಳು ಕೆಡವಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಕುರಿತು ತನಿಖೆ ನಡೆಸಲು ಆಗ್ರಹಿಸಿದ್ದಾರೆ.

ಮಾತಿನ ಚಕಮಕಿ : ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ. ಜನಾರ್ದನ ರೆಡ್ಡಿ, ಕೆಎಂಎಫ್ ಅಧ್ಯಕ್ಷ, ಸ್ಥಳೀಯ ಶಾಸಕ ಜಿ. ಸೋಮಶೇಖರ ರೆಡ್ಡಿ, ರಾಯಚೂರು ಸಂಸದ ಸಣ್ಣ ಫಕ್ಕೀರಪ್ಪ ಮತ್ತು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ, ರೆಡ್ಡಿಗಳ ವೈಯಕ್ತಿಕ ವಿರೋಧಿ ಎಂ. ದಿವಾಕರಬಾಬು ತಮ್ಮ ಬೆಂಬಲಿಗರ ಜೊತೆ ಸ್ಥಳಕ್ಕೆ ಆಗಮಿಸಿ ವಾಗ್ವಾದಕ್ಕೆ ಇಳಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿತು.

ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಜಿ. ಜನಾರ್ದನರೆಡ್ಡಿ "ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಬಾದಾಮಿ, ಐಹೊಳೆ, ಪಟ್ಟದಕಲ್ಲು, ಹಂಪೆ ಸೇರಿ ರಾಜ್ಯದ ಯಾವ ಸ್ಮಾರಕಗಳ ಸಂರಕ್ಷಣೆಗೆ ಆಸಕ್ತಿ ತೋರುತ್ತಿಲ್ಲ. ಈ ಬಾಗಿಲು ಮಂಗಳವಾರ ಬಿದ್ದ ಮಳೆಗೆ ಕುಸಿದು ಬಿದ್ದಿದೆ. ಯಥಾಸ್ಥಿತಿ ದುರಸ್ಥಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ" ಎಂದು ತಿಳಿಸಿದರು.

ದಿವಾಕರಬಾಬು ಅವರು ಪ್ರತ್ಯುತ್ತರವಾಗಿ "ಈ ಘಟನೆ ಉದ್ಧೇಶಪೂರ್ವಕವಾಗಿ ನಡೆದಿದೆ. ರೆಡ್ಡಿಗಳ ಬೆಂಬಲಿಗರಿಂದಲೇ ನಡೆದಿದೆ. ಈ ಕುರಿತು ಪ್ರಾಚ್ಯವಸ್ತು ಸ್ಮಾರಕಗಳ ಹಾಳುಗೆಡವಿದ ಆರೋಪದ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತೇನೆ. ಈ ಹಿಂದೆಯೂ ಕೂಡ ಗಡಿಗೆ ಚೆನ್ನಪ್ಪ ವೃತ್ತದ ಕಂಭವನ್ನು ಹಾಳುಗೆಡವಲಾಗಿದೆ. ಬಳ್ಳಾರಿಯಲ್ಲಿ ಅಭಿವೃದ್ಧಿಯೇ ನಡೆಯುತ್ತಿಲ್ಲ. ಶೋಷಣೆ ಆಗುತ್ತಿದೆ" ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಕೋಪಗೊಂಡ ಶಾಸಕ ಜಿ. ಸೋಮಶೇಖರರೆಡ್ಡಿ - ಎಂ. ದಿವಾಕರಬಾಬು ಮಧ್ಯೆ 'ಅಭಿವೃದ್ಧಿ" ಕುರಿತು ಪರಸ್ಪರ ತೀವ್ರವಾದ ಮಾತಿನ ಚಕಮಕಿ ನಡೆಯಿತು. ಕೆಲ ಅಡಿಗಳ ಅಂತರದಲ್ಲೇ ಮುಖಾಮುಖಿಯಾಗಿ ನಿಂತಿದ್ದ ಈ ಇಬ್ಬರು ವೈಯಕ್ತಿಕ ನಿಂದನೆ, ಪರಸ್ಪರ ಟೀಕೆ - ಆರೋಪ - ಪ್ರತ್ಯಾರೋಪ ನಡೆಸಿದರು. ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಸನ್ನಿವೇಶ ತಿಳಿಗೊಳಿಸಿದರು.

English summary
Who has demolished Kote Anjaneya temple entrance in Bellary. The fort is older than Vijaynagar empire. Diwakar Babu, congress leader has alleged that it is handy work of Reddy brothers. This allegation gave rise to verbal fight between Reddys and Babus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X