Rameshwaram Cafe blast: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಮೊದಲ ಬಂಧನ
ಬೆಂಗಳೂರು, ಮಾರ್ಚ್ 13: ಬೆಂಗಳೂರು ರಾಮೇಶ್ವರಂ ಕೆಫೆ ಐಇಡಿ ಸ್ಫೋಟ ಪ್ರಕರಣದ ಪ್ರಮುಖ ಶಂಕಿತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ ಎಂದು ವರದಿಯಾಗಿದೆ. ಎನ್‌ಐಎ ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದ್ದು, ಶಂಕಿತ ಆರೋಪಿಯನ್ನು ಶಬ್ಬೀರ್ ಎಂದು ಗುರುತಿಸಲಾಗಿದ್ದು, ಬಳ್ಳಾರಿ ಜಿಲ್ಲೆಯಿಂದ ವಶಕ್ಕೆ ಪಡೆಯಲಾಗಿದೆ ಎಂದು ವರದಿ ಮಾಡಿದೆ.
ಎನ್‌ಐಎ ಅಧಿಕಾರಿಗಳು ಶಂಕಿತನನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಸ್ಫೋಟದ ಸ್ಥಳಕ್ಕೆ ಎನ್‌ಐಎ ತಂಡ ಭೇಟಿ ನೀಡಿದ ನಂತರ ಪ್ರಕರಣವನ್ನು ಮಾರ್ಚ್ 3 ರಂದು ಎನ್‌ಐಎಗೆ ಹಸ್ತಾಂತರಿಸಲಾಯಿತು. ಈ ತಿಂಗಳ ಆರಂಭದಲ್ಲಿ ನಗರದ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿ 10 ಮಂದಿ ಗಾಯಗೊಂಡಿದ್ದರು.

ಆರೋಪಿ ಶಬ್ಬೀರ್ ಸ್ಫೋಟದ ದಿನದಂದು ಕೆಫೆಯ ಬಳಿಯ ಭದ್ರತಾ ಕ್ಯಾಮೆರಾದ ದೃಶ್ಯಾವಳಿಗಳಲ್ಲಿ ಕಂಡುಬಂದ ಪ್ರಮುಖ ಶಂಕಿತನ ಸಹಚರ ಎನ್ನಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಾಂಬರ್‌ನ ಮಾಹಿತಿ ನೀಡುವವರಿಗೆ 10 ಲಕ್ಷ ಬಹುಮಾನ
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಬಾಂಬರ್‌ನ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಘೋಷಿಸಿದೆ. ಮಾಹಿತಿದಾರರ ಗುರುತಿನ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗುವುದು ಎಂದು ಸಂಸ್ಥೆ ಪ್ರತಿಪಾದಿಸಿದೆ.
ಬೆಂಗಳೂರಿನ ಜನಪ್ರಿಯ ಉಪಹಾರ ಗೃಹವಾದ ರಾಮೇಶ್ವರಂ ಕೆಫೆಯಲ್ಲಿ ಬ್ಯಾಗ್ ಇಟ್ಟ ವ್ಯಕ್ತಿಯನ್ನು ಸಿಸಿಟಿವಿ ಕ್ಯಾಮೆರಾ ದೃಶ್ಯಗಳಿಂದ ಸೆರೆಹಿಡಿದ ಬಾಂಬರ್‌ನ ಚಿತ್ರವನ್ನು ಸಹ ಸಂಸ್ಥೆ ಬಿಡುಗಡೆ ಮಾಡಿದೆ. ಎನ್ಐಎ ಬಿಡುಗಡೆ ಮಾಡಿರುವ ಚಿತ್ರದಲ್ಲಿ ಬಾಂಬರ್ ಕ್ಯಾಪ್, ಕಪ್ಪು ಪ್ಯಾಂಟ್ ಮತ್ತು ಕಪ್ಪು ಬೂಟುಗಳನ್ನು ಧರಿಸಿರುವುದು ಕಂಡುಬಂದಿದೆ.
"ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಬಾಂಬ್ ದಾಳಿ ನಡೆಸಿದವರ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿದೆ. ಮಾಹಿತಿದಾರರ ಗುರುತನ್ನು ಗೌಪ್ಯವಾಗಿಡಲಾಗುವುದು" ಎಂದು ಟ್ವಿಟ್ಟರ್ ಪೋಸ್ಟ್‌ನಲ್ಲಿ ಎನ್‌ಐಎ ತಿಳಿಸಿದೆ.
ಮಾರ್ಚ್ 1 ರಂದು ಮಧ್ಯಾಹ್ನ ಜನಜಂಗುಳಿ ಜಾಸ್ತಿ ಇರುವ ಸಮಯದಲ್ಲಿಯೇ ಸ್ಫೋಟ ಸಂಭವಿಸಿದ್ದು, ಪೊಲೀಸರು ಕೆಫೆಯೊಳಗೆ ಬ್ಯಾಗ್ ಇಟ್ಟುಕೊಂಡು ಸಿಸಿಟಿವಿ ಕ್ಯಾಮೆರಾ ದೃಶ್ಯಗಳಲ್ಲಿ ಸೆರೆ ಸಿಕ್ಕ ಶಂಕಿತನನ್ನು ಪತ್ತೆ ಹಚ್ಚಿದ್ದಾರೆ. ಸ್ಫೋಟವನ್ನು ನಡೆಸಲು ಟೈಮರ್ ಹೊಂದಿದ್ದ ಐಇಡಿ ಸಾಧನವನ್ನು ಬಳಸಲಾಗಿದೆ ಎಂದು ಪೊಲೀಸ್ ತನಿಖೆ ಸೂಚಿಸಿದೆ.












Click it and Unblock the Notifications