Sri Ramulu wife: ಗಂಡ ಶ್ರೀರಾಮುಲು ಬಿಜೆಪಿ ಅಭ್ಯರ್ಥಿ, ಪತ್ನಿ ಭಾಗ್ಯಲಕ್ಷ್ಮೀ ಪಕ್ಷೇತರ ಅಭ್ಯರ್ಥಿ, ಏನಿದು ಟ್ವಿಸ್ಟ್!?
ಬಳ್ಳಾರಿ, ಏಪ್ರಿಲ್. 13: ಎರಡನೇ ಹಂತದಲ್ಲಿ ನಡೆಯಲಿರುವ ಬಳ್ಳಾರಿ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಮೊದಲ ದಿನ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಚ್ಚರಿ ಎಂದರೆ ಬಿಜೆಪಿ ಅಭ್ಯರ್ಥಿಯಾಗಿ ಬಿ. ಶ್ರೀರಾಮುಲು ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ರಾಮುಲು ಪತ್ನಿ ಭಾಗ್ಯಲಕ್ಷ್ಮೀ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಒಂದು ವೇಳೆ ತಾಂತ್ರಿಕ ಕಾರಣಕ್ಕೆ ನಾಮಪತ್ರ ತಿರಸ್ಕಾರವಾಗಬಹುದು ಎಂದು ಶ್ರೀರಾಮುಲು ಪತ್ನಿ ಭಾಗ್ಯಲಕ್ಷ್ಮಿ ನಾಮಪತ್ರ ಸಲ್ಲಿಸಿದ್ದಾರೆ. ಹಿಂದೆಯೂ ಇದೇ ಮಾದರಿಯಲ್ಲಿ ಹಲವಾರು ಕಡೆಗಳಲ್ಲಿ ನಡೆದಿದ್ದು ರಾಮುಲು ನಾಮಪತ್ರ ಅಂಗೀಕಾರಗೊಂಡರೆ ಅವರ ಪತ್ನಿ ತಮ್ಮ ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎನ್ನಲಾಗಿದೆ.

ಶ್ರೀರಾಮುಲು ಪತ್ನಿ ಆಸ್ತಿ ವಿವರ ಇಲ್ಲಿದೆ
ಶ್ರೀರಾಮುಲು ಅವರ ಪತ್ನಿ ಭಾಗ್ಯಲಕ್ಷ್ಮೀ ಅವರ ಒಟ್ಟು ಆಸ್ತಿಯ ಮೌಲ್ಯ 22.57 ಕೋಟಿ ರೂಪಾಯಿ. ಇದರಲ್ಲಿ ನಗದು 2.50 ಲಕ್ಷ ರೂ. ಒಟ್ಟು ಚರಾಸ್ತಿ 2.28 ಕೋಟಿ ರೂಪಾಯಿಯಿದೆ. ಸ್ಥಿರಾಸ್ತಿ 20.29 ಕೋಟಿ ರೂಪಾಯಿ. ಭಾಗ್ಯಲಕ್ಷ್ಮೀ ಬಳಿ ವಾಹನ ಇಲ್ಲ. ಚಿನ್ನ 2.33 ಕೆಜಿಯಿದೆ. ಬೆಳ್ಳಿ ಇಲ್ಲ. ಇವರ ಹೆಸರಲ್ಲಿ ಸಾಲವು ಇಲ್ಲ. ಇನ್ನು, ಶ್ರೀ ರಾಮುಲು ಸಹೋದರಿ ಜೆ ಶಾಂತ ವೈ ಎಸ್ ಆರ್ ಸಿಪಿ ಪಕ್ಷವನ್ನು ಸೇರಿದ್ದು ಈ ಬಾರಿ ಹಿಂದೂಪುರ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಮೊದಲ ದಿನ 4 ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ
ನಾಮಪತ್ರ ಸಲ್ಲಿಕೆಯ ಮೊದಲನೇ ದಿನವಾದ ಶುಕ್ರವಾರದಂದು, ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಎ.ದೇವದಾಸ್ ಅವರು 2 ನಾಮಪತ್ರ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ತುಕಾರಾಂ ಅವರು 3 ನಾಮಪತ್ರ, ಬಿಜೆಪಿ ಅಭ್ಯರ್ಥಿ ಶ್ರೀರಾಮಲು ಅವರು 3 ನಾಮಪತ್ರ ಮತ್ತು ಪಕ್ಷೇತರ ಅಭ್ಯರ್ಥಿ ಭಾಗ್ಯಲಕ್ಷ್ಮಿ ಅವರು 2 ನಾಮಪತ್ರ ಸೇರಿ ಒಟ್ಟು ನಾಲ್ವರು ಅಭ್ಯರ್ಥಿಗಳಿಂದ 10 ನಾಮಪತ್ರ ಸಲ್ಲಿಕೆಯಾಗಿವೆ.

ನಾಮಪತ್ರ ಸಲ್ಲಿಸಲು ಏಪ್ರಿಲ್ 19 ಕೊನೆ ದಿನವಾಗಿದ್ದು, ಏಪ್ರಿಲ್ 20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 22 ರಂದು ನಾಮಪತ್ರ ವಾಪಸ್ಸು ಪಡೆಯಲು ಕೊನೆಯ ದಿನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.












Click it and Unblock the Notifications