ಪೊಲೀಸರ ಭರ್ಜರಿ ಭೇಟೆ: ಕೋಟಿಗಟ್ಟಲೆ ಕಂತೆ ಕಂತೆ ಹಣ, ಚಿನ್ನಾಭರಣ ಜಪ್ತಿ, ವಿವರ
ಬಳ್ಳಾರಿ, ಏಪ್ರಿಲ್ 08: ಸದ್ಯ ಲೋಕಸಭಾ ಚುನಾವಣೆ ಚಟುವಟಿಕೆಗಳು ಗರಿಗೆದ್ದರಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ಈ ವೇಳೆ ಕರ್ನಾಟಕ ಪೊಲೀಸರು ನಡೆಸಿದ ಪ್ರಮುಖ ದಾಳಿಯಲ್ಲಿ ಕೋಟ್ಯಂತರ ರೂಪಾಯಿ ಕಂತೆ ಕಂತೆ ಹಣ, ಕೇಜಿ ಗಟ್ಟಲೆ ಚಿನ್ನಾಭರಣಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಲೋಕಸಭಾ ಚುನಾವಣೆಗೂ ಮೊದಲು ಕರ್ನಾಟಕ ಪೊಲೀಸರು ಹವಾಲಾ ಸಂಪರ್ಕಿತ ವ್ಯಕ್ತಿಯ ಬಳ್ಳಾರಿ ಪಟ್ಟಣದ ಮನೆಯ ಮೇಲೆ ಭಾನುವಾರ ದಾಳಿ ನಡೆಸಿದ್ದಾರೆ. ಇತ್ತೀಚಿನ ದಾಳಿ ಪೈಕಿ ಇದು ಪ್ರಮುಖ ದಾಳಿ ಎನ್ನಲಾಗಿದೆ. ದಾಳಿಯಲ್ಲಿ ಬರೋಬ್ಬರಿ 5.60 ಕೋಟಿ ರೂಪಾಯಿ ಕಂತೆ ಕಂತೆ ನಗದು ಹಣ. 3 ಕೆಜಿ ಚಿನ್ನ, 103 ಕೆಜಿ ಬೆಳ್ಳಿ ಆಭರಣಗಳು ಪತ್ತೆಯಾಗಿವೆ.

ಒಟ್ಟು ₹ 7.60 ಕೋಟಿ ಜಪ್ತಿ
ಇದರೊಂದಿಗೆ 68 ಬೆಳ್ಳಿಯ ತುಂಡುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ನಗದು, ಚಿನ್ನಾಭರಣ ಜಪ್ತಿಮಾಡಿಕೊಂಡು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟು ₹ 7.60 ಕೋಟಿ ವಸೂಲಾತಿಯಾಗಿದೆ. ಆರೋಪಿ ಬಳ್ಳಾರಿ ಪಟ್ಟಣದಲ್ಲಿ ಜ್ಯೂವೆಲ್ಲರಿ ಅಂಗಡಿ ನಡೆಸುತ್ತಿದ್ದ ನರೇಶ್ ಎಂಬಾತನ ಮನೆಯಲ್ಲಿ ಅಪಾರ ನಗದು, ಚಿನ್ನಾಭರಣ ಪತ್ತೆಯಾಗಿದೆ ಎಂದು ದಾಳಿ ನಡೆಸಿದ ಪೊಲೀಸರು ಮಾಹಿತಿ ನೀಡಿದ್ದಾರೆ.
ತನಿಖಾ ವರದಿ ಐಟಿ ಇಲಾಖೆಗೆ
ಪೊಲೀಸರು ವಶಕ್ಕೆ ಪಡೆದ ಜ್ಯುವೆಲ್ಲರಿ ಮಾಲೀಕ ನರೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇದರೊಂದಿಗೆ ಪೊಲೀಸರು ಯಾರೆಲ್ಲ ಈ ಹವಾಲಾ ಸಂರ್ಪಕ ಹೊಂದಿರುವ ಸಾಧ್ಯತೆ ಇದೆಯೋ ಅವರೆಲ್ಲನ್ನು ಶಂಕಿಸಿದ್ದಾರೆ. ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 98 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ತನಿಖೆ ಬಳಿಕ ಇಷ್ಟು ಹಣದ ಎಲ್ಲಿಂದ ಬಂತು, ಕಾರಣಗಳು, ಹಣದ ಹಿಂದೆ ಏನೆಲ್ಲ ಇದೆ ಎಂಬ ಅಂಶಗಳನ್ನು ಆದಾಯ ತೆರಿಗೆ ಇಲಾಖೆಗೆ ರವಾನಿಸಲಾಗುವುದು ಎಂದು ಬಳ್ಳಾರಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡ್ರಂಕ್ ಆಂಡ್ ಡ್ರೈವ್ ತಪಾಸಣೆ
ಲೋಕಸಭಾ ಚುನಾವಣೆ ಇರುವ ಕಾರಣ ಬೆಂಗಳೂರು, ಬಳ್ಳಾರಿ ಸೇರಿದಂತೆ ರಾಜ್ಯಾದ್ಯಂತ ಚೆಕ್‌ಪೋಸ್ಟ್ ತೆರೆಯಲಾಗಿದೆ. ಇಲ್ಲಿ ಅಕ್ರಮ, ಪೂರಕ ದಾಖಲೆಗಳು ಇಲ್ಲದ ನಗದು, ವಸ್ತುಗಳು, ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗುತ್ತಿದೆ. ಇದರೊಂದಿಗೆ ಇತ್ತೀಚೆಗಷ್ಟೆ ಇದೇ ಚೆಕ್‌ಪೋಸ್ಟ್‌ಗಳಲ್ಲಿ ಡ್ರಂಕ್ ಆಂಡ್ ಡ್ರೈವ್ ತಪಾಸಣೆ ಸಹ ಆರಂಭಿಸಲಾಗಿದೆ.












Click it and Unblock the Notifications