ಬಳ್ಳಾರಿ ವಿಮಾನ ನಿಲ್ದಾಣದ ಕನಸಿಗೆ ಮತ್ತೆ ರೆಕ್ಕೆ ಕಟ್ಟಿದ ಸರ್ಕಾರ
ಬಳ್ಳಾರಿ, ಮಾರ್ಚ್ 04: ಕರ್ನಾಟಕ ಸರ್ಕಾರ ಬಳ್ಳಾರಿ ವಿಮಾನ ನಿಲ್ದಾಣದ ಕನಸಿಗೆ ಮತ್ತೆ ರೆಕ್ಕೆ ಕಟ್ಟಿದೆ. ಸುಮಾರು 13 ವರ್ಷಗಳು ಕಳೆದರೂ ಸಹ ಇನ್ನೂ ಶ್ರೀ ಕೃಷ್ಣದೇವರಾಯ ವಿಮಾನ ನಿಲ್ದಾಣ ಕೆಲಸ ಅಂತಿಮಗೊಳ್ಳುತ್ತಿಲ್ಲ.
ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ಮೂಲಕ ಬಳ್ಳಾರಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲು ಮುಂದಾಗಿದೆ. ಏರ್‌ಬಸ್ 320 ಮಾದರಿಯ ವಿಮಾನ ಇಳಿಯುವ ಮಾದರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ.

ಕೆಎಸ್ಐಐಡಿಸಿ ಶೀಘ್ರದಲ್ಲೇ ವಿಮಾನ ನಿಲ್ದಾಣದ ಮಾಸ್ಟರ್ ಪ್ಲಾನ್, ಡಿಪಿಆರ್, ಇಐಎ ಸ್ಟಡಿ ವರದಿಯನ್ನು ತಯಾರು ಮಾಡಲು ಟೆಂಡರ್ ಕರೆಯಲಿದೆ. ಈ ಮೂಲಕ ಬಳ್ಳಾರಿ ವಿಮಾನ ನಿಲ್ದಾಣದ ಕನಸಿಗೆ ಮತ್ತೆ ರೆಕ್ಕೆ ಬರುತ್ತಿದೆ.
ಒಟ್ಟು 3 ಹಂತಗಳು: ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಒಟ್ಟು ಮೂರು ಹಂತದಲ್ಲಿ ಬಳ್ಳಾರಿ ವಿಮಾನ ನಿಲ್ದಾಣದ ಪ್ರಾಥಮಿಕ ಕಾರ್ಯಗಳನ್ನು ಕೈಗೊಳ್ಳಲಿದೆ.
ಫೇಸ್-1ರಲ್ಲಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವುದು. ಡಿಪಿಆರ್, ವಿವರವಾದ ಡಿಸೈನ್, ತಾಂತ್ರಿಕ ಅಂಶಗಳು, ಬಿಡ್ ದಾಖಲೆಗಳು, ವಿವಿಧ ಇಲಾಖೆಗಳಿಗೆ ಅನುಮತಿಗಾಗಿ ಬೇಕಾಗುವ ದಾಖಲೆಗಳನ್ನು ಸಿದ್ಧಪಡಿಸಬೇಕಿದೆ.
ಫೇಸ್-2ರಲ್ಲಿ ಇಐಎ, ಇಎಂಪಿ, ಎಸ್‌ಐಎ ಸೇರಿದಂತೆ ವಿವಿಧ ಮಾದರಿಯ ವರದಿ ಮತ್ತು ವಿಮಾನ ನಿಲ್ದಾಣಕ್ಕೆ ಅನುಮತಿ ಪಡೆಯಲು ಕೇಂದ್ರ ಸರ್ಕಾರದ ಇಲಾಖೆಗಳ ಅನುಮತಿ ಪಡೆಯುವ ವರದಿಗಳನ್ನು ತಯಾರು ಮಾಡಬೇಕಿದೆ.
ಫೇಸ್-3ರಲ್ಲಿ ಪಿಸಿಎನ್ ರಿಪೋರ್ಟ್, ನಿಲ್ದಾಣದ ವೆಚ್ಚ, ಸಮೀಕ್ಷೆಯ ವರದಿ, ಎಂಒಯು, ಎಐಎಸ್, ಮೆಟಲಾಜಿಕಲ್ ಮತ್ತು ಭದ್ರತಾ ವ್ಯವಸ್ಥೆ ಮಾಡುವ ಕುರಿತು ವರದಿಗಳನ್ನು ತಯಾರು ಮಾಡಲಾಗುತ್ತದೆ.
ಬಳ್ಳಾರಿ ಸಮೀಪದ ಚಾಗನೂರಿನಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲು ಚೆನ್ನೈ ಮೂಲದ 'ಮಾರ್ಗ್' ಕಂಪನಿ ಜೊತೆ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಆದರೆ ಕಾಮಗಾರಿ ಆರಂಭವಾಗದ ಕಾರಣ ಒಪ್ಪಂದವನ್ನು ರದ್ದುಗೊಳಿಸಿತ್ತು. ಅಲ್ಲದೇ ಕಾರ್ಯಕ್ಷಮತೆಗೆ ಕಂಪನಿ ನೀಡಿದ್ದ ಭದ್ರತೆಯ 4 ಕೋಟಿ ಗ್ಯಾರಂಟಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.
ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಬಿಲ್ಡ್ ಆಪರೇಟ್ ಮತ್ತು ಟ್ರಾನ್ಸ್‌ಫರ್ ಆಧಾರದಲ್ಲಿ ಬಳ್ಳಾರಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲು ಮುಂದಾಗಿದೆ. ಇದಕ್ಕಿಂತ ನಿಧಾನವಾಗಿ ಆರಂಭವಾದ ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ಪೂರ್ಣಗೊಂಡು ವಿಮಾನ ಸಂಚಾರ ಆರಂಭವಾಗಿದೆ. ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದೆ.
2010ರಲ್ಲಿಯೇ ಮಾರ್ಗ್ ಕಂಪನಿ ಜೊತೆ ಕರ್ನಾಟಕ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. 987 ಎಕರೆ ಭೂಮಿಯಲ್ಲಿ 330 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದು ಯೋಜನೆಯಾಗಿತ್ತು. ಆದರೆ ಕಾಮಗಾರಿಗೆ ವೇಗ ಸಿಗಲೇ ಇಲ್ಲ.
ಆಗ ಸರ್ಕಾರ ಕಂಪನಿ ವಿರುದ್ಧ ಅಸಮಾಧಾನಗೊಂಡಿತು. ತಜ್ಞರನ್ನು ಕಳಿಸಿ ವರದಿ ತರಿಸಿಕೊಂಡು ಕಾಮಗಾರಿ ಎಷ್ಟಾಗಿದೆ ಎಂದು ಮಾಹಿತಿ ಪಡೆಯಿತು. ಬಳಿಕ ಒಪ್ಪಂದವನ್ನೇ ರದ್ದುಗೊಳಿಸಿ ಆದೇಶಿಸಿತ್ತು. ಆಗ ಬಳ್ಳಾರಿ ವಿಮಾನ ನಿಲ್ದಾಣದ ಕನಸಿಗೆ ತಡೆ ಬಿತ್ತು.
ಈಗ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಯೋಜನೆ ಡಿಪಿಆರ್ ಸಿದ್ಧಪಡಿಸಲಿದೆ. ಬಳಿಕ ಅಂದಾಜು ವೆಚ್ಚ ಸೇರಿ ಇತರ ವಿವರಗಳ ವರದಿಯನ್ನು ಸಚಿವ ಸಂಪುಟದ ಮುಂದೆ ಮಂಡಿಸಲಾಗುತ್ತದೆ. ಒಪ್ಪಿಗೆ ಸಿಕ್ಕ ಬಳಿಕ ಕಾಮಗಾರಿಗೆ ಚಾಲನೆ ಸಿಗಲಿದೆ.
ಬಳ್ಳಾರಿಯಲ್ಲಿ ಜಿಂದಾಲ್‌ನ ವಿಮಾನ ನಿಲ್ದಾಣವಿದೆ. ಆದರೆ ಅದು ಗಣ್ಯರ ವಿಮಾನಗಳಿಗೆ ಮಾತ್ರ. ಸಾಮಾನ್ಯ ವಿಮಾನಗಳ ಹಾರಾಟಕ್ಕೆ ಮಾತ್ರ ಇನ್ನೂ ಅವಕಾಶ ಸಿಕ್ಕಿಲ್ಲ.












Click it and Unblock the Notifications