Rameshwaram Cafe Blast: ರಾಮೇಶ್ವರಂ ಕೆಫೆ ಸ್ಫೋಟ; ಶಂಕಿತ ಉಗ್ರ ತನಿಖಾ ಸಂಸ್ಥೆ ವಶಕ್ಕೆ
ಬೆಂಗಳೂರು, ಮಾರ್ಚ್ 08: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಜೈಲಿನಲ್ಲಿರುವ ಶಂಕಿತ ಉಗ್ರನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದೆ. ಮಾರ್ಚ್ 1 ರಂದು ಜನಪ್ರಿಯ ರೆಸ್ಟೋರೆಂಟ್ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿತ್ತು.
ಡಿಸೆಂಬರ್ 18, 2023 ರಂದು ಬಂಧಿಸಲ್ಪಟ್ಟ ಬಳ್ಳಾರಿಯ ಬಟ್ಟೆ ವ್ಯಾಪಾರಿ 26 ವರ್ಷದ ಮಿನ್ಹಾಜ್ ಅಲಿಯಾಸ್ ಮೊಹಮ್ಮದ್ ಸುಲೈಮಾನ್ ಎಂಬುವವರನ್ನು ಎನ್‌ಐಎ ಅಧಿಕಾರಿಗಳು ವಿಶೇಷ ನ್ಯಾಯಾಲಯದಿಂದ ಬಾಡಿ ವಾರಂಟ್ ಪಡೆದು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ರಾಮೇಶ್ವರಂ ಕೆಫೆ ಸ್ಫೋಟದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಶಂಕಿತ ಬಾಂಬರ್ ತುಮಕೂರಿನ ಕಡೆಗೆ ಬಸ್‌ನಲ್ಲಿ ಪ್ರಯಾಣಿಸಿ ನಂತರ ಬಟ್ಟೆ ಬದಲಾಯಿಸಿದ್ದನ್ನು ತೋರಿಸುವ ಕೆಲವು ಸುಳಿವುಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ ನೀಡಿದದ್ರು. ಅದೇ ದಿನವೇ ಎನ್‌ಐಎ ದಿನವೇ ಮೊಹಮ್ಮದ್ ಸುಲೈಮಾನ್ ಅವರನ್ನು ವಶಕ್ಕೆ ಪಡೆದಿದೆ. ತುಮಕೂರಿನಿಂದ ಬಸ್ ನಲ್ಲಿ ಬಳ್ಳಾರಿಗೆ ತೆರಳಿರುವ ಶಂಕೆ ವ್ಯಕ್ತವಾಗಿದೆ.
ಮೊಹಮ್ಮದ್ ಸುಲೈಮಾನ್ ಉತ್ತರ ಕರ್ನಾಟಕದ ಬಳ್ಳಾರಿ ಮೂಲದ ಐಸಿಸ್ ಘಟಕದ ಮುಖ್ಯಸ್ಥನಾಗಿದ್ದಾನೆ ಎಂದು ಎನ್ಐಎ ಶಂಕಿಸಿದೆ. ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗಳನ್ನು ನಡೆಸಲು ಸಂಚು ರೂಪಿಸಿದ್ದಕ್ಕಾಗಿ ಡಿಸೆಂಬರ್‌ನಲ್ಲಿ ಎನ್‌ಐಎ ದಾಳಿಯ ನಂತರ ಆತನನ್ನು ಬಂಧಿಸಲಾಗಿತ್ತು. ಇವರ ವಿರುದ್ಧ ಡಿಸೆಂಬರ್ 14, 2023 ರಂದು, ಎನ್ಐಎ "ಐಎಸ್ಐಎಸ್-ಪ್ರೇರಿತ ಬಳ್ಳಾರಿ ಮಾಡ್ಯೂಲ್" ವಿರುದ್ಧ ಪ್ರಕರಣವನ್ನು ದಾಖಲಿಸಿದೆ.
ಇನ್ನು, ಗೃಹ ಸಚಿವ ಪರಮೇಶ್ವರ ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಂಕಿತ ವ್ಯಕ್ತಿ ಬಸ್‌ನಲ್ಲಿ ಇಲ್ಲಿಗೆ ಪ್ರಯಾಣಿಸಿರುವ ಬಗ್ಗೆ ಸುಳಿವು ಸಿಕ್ಕಿದೆ. ತನಿಖಾಧಿಕಾರಿಗಳು ವಿಡಿಯೋ ತುಣುಕನ್ನು ಪರಿಶೀಲಿಸಿದ್ದಾರೆ. ಕೆಲವು ಸುಳಿವುಗಳನ್ನು ಕಂಡುಕೊಂಡಿದ್ದಾರೆ. ತುಮಕೂರಿನಿಂದ ಬಳ್ಳಾರಿಗೆ ಹೋಗುವ ಮಾರ್ಗವನ್ನು ಪರಿಶೀಲಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು.

ಬಳಿಕ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಘಟನೆಯ ನಂತರ, ಶಂಕಿತ ವ್ಯಕ್ತಿ ತನ್ನ ಬಟ್ಟೆಯನ್ನು ಬದಲಾಯಿಸಿಕೊಂಡು ಬಸ್‌ನಲ್ಲಿ ಪ್ರಯಾಣಿಸಿದ್ದಾನೆ ಎಂಬ ವಿಶ್ವಾಸಾರ್ಹ ಸುಳಿವು ಸಿಕ್ಕಿದೆ. ಪ್ರಕರಣದ ಎಲ್ಲಾ ವಿವರಗಳನ್ನು ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ. ಶೀಘ್ರವೇ ಆರೋಪಿಯನ್ನು ಹಿಡಿಯಲಾಗುವುದು" ಎಂದಿದ್ದರು. ಇದಾದ ನಂತರ ಜೈಲಿನಲ್ಲಿದ್ದ ಮೊಹಮ್ಮದ್ ಸುಲೈಮಾನ್ ಅವರನ್ನು ತನಿಖಾ ಸಂಸ್ಥೆ ವಶಕ್ಕೆ ಪಡೆದಿದೆ.
ರಾಮೇಶ್ವರಂ ಕೆಫೆ ಸ್ಫೋಟ
ಮಾರ್ಚ್ 1 ರಂದು ಬೆಂಗಳೂರಿನ ಬ್ರೂಕ್‌ಫೀಲ್ಡ್ ಪ್ರದೇಶದ ಜನಪ್ರಿಯ ರೆಸ್ಟೋರೆಂಟ್ ರಾಮೇಶ್ವರಂ ಕೆಫೆಯಲ್ಲಿ ಐಇಡಿ ಸ್ಫೋಟ ಸಂಭವಿಸಿದ್ದು, 10 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖಾಧಿಕಾರಿಗಳು ಅಪರಾಧದ ಸ್ಥಳದ ಸುತ್ತಲೂ 9v ಬ್ಯಾಟರಿ, ಟೈಮರ್ ಮತ್ತು ಕೆಲವು ನಟ್ ಮತ್ತು ಬೋಲ್ಟ್‌ಗಳನ್ನು ಪತ್ತೆ ಹಚ್ಚಿದ್ದರು.
ಶಿವರಾತ್ರಿಯಂದು ರಾಮೇಶ್ವರಂ ಕೆಫೆ ಪುನರಾರಂಭ
ಸ್ಫೋಟದಿಂದ ತತ್ತರಿಸಿದ್ದ ರಾಮೇಶ್ವರಂ ಕೆಫೆ ಒಂದು ವಾರದ ನಂತರ ಮಾರ್ಚ್ 8 ರ ಶುಕ್ರವಾರ ಸಂಜೆ 6 ಗಂಟೆಗೆ ಮತ್ತೆ ಪುನರಾರಂಭಕ್ಕೆ ಸಿದ್ಧವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ರಾಜ್ಯ ಗೃಹ ಸಚಿವ ಜಿ ಪರಮೇಶ್ವರ ಕೂಡ ಪಾಲ್ಗೊಳ್ಳುವ ನಿರೀಕ್ಷೆಯಿದೆ.












Click it and Unblock the Notifications