ಬರೀ ಸಂಬಳವಿದ್ದರೆ ಸಾಲದು, ಸ್ವಲ್ಪ ಮನುಷ್ಯತ್ವವೂ ಬೇಕು: ಕಾರ್ಪೊರೇಟ್ ಜಗತ್ತಿನ ಕರಾಳ ಮುಖ ಬಿಚ್ಚಿಟ್ಟ Gen Z ಯುವತಿ
ಇತ್ತೀಚಿನ ದಿನಗಳಲ್ಲಿ 'ಯಶಸ್ಸು' ಎಂದರೆ ಕೇವಲ ಕೈತುಂಬಾ ಸಂಬಳ, ಒಳ್ಳೆಯ ಹುದ್ದೆ, ದೊಡ್ಡ ಬಂಗಲೆ, ಕಾರು ಮತ್ತು ಐಷಾರಾಮಿ ಜೀವನ ಎಂಬ ಭ್ರಮೆ ಹಲವರಲ್ಲಿದೆ. ಆದರೆ, ಇತ್ತೀಚಿನ ಯುವಜನರು ಅಂದರೆ ಜೆನ್ ಝೀ ಪೀಳಿಗೆಯವರು ಈ ನಂಬಿಕೆಯನ್ನು ಬದಲಾಯಿಸುತ್ತಿದೆ. ಕಂಪೆನಿಗಳಲ್ಲಿ ಕೇವಲ ಹಣಕ್ಕಾಗಿ ಯಂತ್ರಗಳಂತೆ ದುಡಿಯುವ ಬದಲು, ಮಾನಸಿಕ ನೆಮ್ಮದಿ, ಕೆಲಸದಲ್ಲಿ ಸಿಗುವ ತೃಪ್ತಿ ಹಾಗೂ ಕೆಲಸದ ಸ್ಥಳದಲ್ಲಿ ಸಿಗುವ ಗೌರವಕ್ಕೆ ಇಂದಿನ ಯುವಜನತೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಇದೇ ವಿಚಾರವಾಗಿ ಯುವ ವೃತ್ತಿಪರ ಯುವತಿಯೊಬ್ಬರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ನಿತ್ಯಾ ಮೆನನ್ ಎಂಬುವವರು ಲಿಂಕ್ಡ್‌ಇನ್‌ನಲ್ಲಿ ತಮ್ಮ ನಾಲ್ಕು ವರ್ಷಗಳ ವೃತ್ತಿಜೀವನದ ಅನುಭವಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸಾಮಾಜಿಕ ಸೇವಾವಲಯ, ಕಾರ್ಪೊರೇಟ್ ವಲಯ ಮತ್ತು ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇವರು, ತಮ್ಮ ಪ್ರತಿಯೊಂದು ವೃತ್ತಿ ಬದಲಾವಣೆಯೂ ತಮಗೆ ಕಲಿಸಿದ ಪಾಠಗಳ ಬಗ್ಗೆ ಮುಕ್ತವಾಗಿ ಬರೆದುಕೊಂಡಿದ್ದಾರೆ. "ಒಳ್ಳೆಯ ಸಂಬಳವಿದ್ದರೆ ಸಾಕು ಎಂಬ ನಂಬಿಕೆಯನ್ನು ನಾನು ಈಗ ಕೈಬಿಟ್ಟಿದ್ದೇನೆ. ದಿನದ ಕೊನೆಯಲ್ಲಿ ಪೂರ್ತಿ ದಿನವನ್ನಾ ಹಿಂತಿರುಗಿ ನೋಡಿದಾಗ, ಇವತ್ತು ನಾವು ಒಂದೊಳ್ಳೆ ಕೆಲಸ ಮಾಡಿದೆ ಎಂಬ ತೃಪ್ತಿ ಸಿಕ್ಕರೆ ಅದೇ ನಿಜವಾದ ಯಶಸ್ಸು" ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ತಮ್ಮ ಹಳೆಯ ವೃತ್ತಿಜೀವನದ ಅನುಭವಗಳನ್ನು ಹಂಚಿಕೊಂಡಿರುವ ನಿತ್ಯಾ, ಆರ್ಥಿಕ ಭದ್ರತೆಯ ಜೊತೆಗೆ ಕಾರ್ಪೊರೇಟ್ ಜಗತ್ತು ಕಲಿಸಿದ ಪಾಠ ಹಂಚಿಕೊಂಡಿದ್ದು, "ಕೆಲವು ಸಂಸ್ಥೆ ಸಹಕಾರಕ್ಕಿಂತ ಸ್ಪರ್ಧೆಗೆ ಹೆಚ್ಚು ಬೆಲೆ ನೀಡುತ್ತೆ. ಅಲ್ಲಿ ಪ್ರಾಮಾಣಿಕತೆಗಿಂತ ಎಷ್ಟೂ ಮೌನವಾಗಿರುತ್ತೇವೆಯೋ ಅಷ್ಟು ಹೆಚ್ಚು ಪುರಸ್ಕಾರ ಸಿಗುತ್ತದೆ. ತಪ್ಪು ನಡೆಯುತ್ತಿದೆ ಎಂದು ಗೊತ್ತಿದ್ದರೂ ಅದನ್ನು ಒಪ್ಪಿಕೊಂಡು ಸುಮ್ಮನಿರುವುದನ್ನೇ 'ವೃತ್ತಿಪರತೆ'ಎಂದು ಕರೆಯಲಾಗುತ್ತದೆ. ಆದರೆ, ಕೆಲಸದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಪ್ರಶ್ನೆ ಮಾಡಿದರೆ ಅವರನ್ನು 'ಅತಿಯಾದ ಆವೇಶದವರು' ಎಂದು ಹೀಯಾಳಿಸಲಾಗುತ್ತದೆ" ಎಂದು ಅವರು ತಮಗಾದ ಕಹಿ ಅನುಭವವನ್ನು ಹೇಳಿದ್ದಾರೆ.
ಜೆನ್ ಝೀ ಉದ್ಯೋಗಿಗಳು ಸೋಮಾರಿಗಳಲ್ಲ, ಬದಲಿಗೆ ಬದಲಾವಣೆ ಹರಿಕಾರರು
ಇತ್ತೀಚಿನ ದಿನಗಳಲ್ಲಿ 'ಜೆನ್ ಜಿ' ಯುವಕರನ್ನು ಸೋಮಾರಿಗಳು, ಶ್ರಮ ಹಾಕಿ ಕೆಲಸ ಮಾಡಲು ಇಷ್ಟಪಡಲ್ಲ ಹೀಗೆ ಏನೇನೋ ಹೇಳಿ ಟೀಕಿಸುವುದು ಸಾಮಾನ್ಯವಾಗಿದೆ. ಆದರೆ ನಿತ್ಯಾ ಇದನ್ನಾ ಪ್ರಶ್ನಿಸಿದ್ದಾರೆ. ಉದ್ಯೋಗದ ಹೆಸರಿನಲ್ಲಿ ನಡೆಯುವ ಶೋಷಣೆ, ಮಿತಿಮೀರಿದ ಕೆಲಸ ಮತ್ತು ಕಣ್ಣುಮುಚ್ಚಿ ತೋರುವ ನಿಷ್ಠೆಯನ್ನು ಈ ಪೀಳಿಗೆ ವಿರೋಧಿಸುತ್ತಿದೆ. ಅಲ್ಲದೇ "ವೃತ್ತಿ ಮತ್ತು ವೈಯಕ್ತಿಕ ಬದುಕಿನ ನಡುವೆ ಒಂದು ಸರಿಯಾದ ಬೌಂಡರಿ ಹಾಕಿಕೊಳ್ಳುವುದು ಸೋಮಾರಿತನವಲ್ಲ. ಗೌರವ ಎಂಬುದು ಕೇವಲ ವರ್ಷಗಟ್ಟಲೆ ಓವರ್‌ಟೈಮ್ ಕೆಲಸ ಮಾಡಿ ನಂತರ ಪಡೆಯಬೇಕಾದ ಭಿಕ್ಷೆಯಲ್ಲ" ಎಂದಿದ್ದಾರೆ.

ತಮ್ಮ ಶಿಕ್ಷಣ ಕ್ಷೇತ್ರದಲ್ಲಿನ ಪ್ರಸ್ತುತ ಕೆಲಸವು ಅವರ ದೃಷ್ಟಿಕೋನವನ್ನು ಹೇಗೆ ಬದಲಾಯಿಸಿತು ಎಂಬುದನ್ನು ವಿವರಿಸಿದ ನಿತ್ಯಾ, ಪ್ರತಿಯೊಬ್ಬ ವ್ಯಕ್ತಿಗೂ ಬೆಲೆ ಕೊಡುವುದು ಮತ್ತು ಅವರು ಹೇಳುವುದನ್ನ ಕೇಳುವುದು ಎಷ್ಟು ಮುಖ್ಯ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ. "ಜನರು ಕೆಲಸ ಕಷ್ಟವಾಗಿದೆ ಎಂದು ಒಂದು ಸಂಸ್ಥೆಯನ್ನ ಬಿಟ್ಟು ಹೋಗುವುದಿಲ್ಲ. ಬದಲಾಗಿ, ಕೆಲಸದ ಸ್ಥಳದಲ್ಲಿ ತಮ್ಮನ್ನು ಮನುಷ್ಯರಂತೆ ನಡೆಸಿಕೊಳ್ಳುತ್ತಿಲ್ಲ ಎಂದೆನಿಸಿದಾಗ ಮಾತ್ರ ಕೆಲಸ ಬಿಡುತ್ತಾರೆ. ನಿಮ್ಮ ಸಂಸ್ಥೆಯ ಗುರಿಯ ಮೇಲೆ ಜನರಿಗೆ ಕಾಳಜಿ ಇರಬೇಕೆಂದರೆ, ಮೊದಲು ನೀವು ನಿಮ್ಮ ಜನರ ಅಂದರೆ ಉದ್ಯೋಗಿಗಳ ಬಗ್ಗೆ ಕಾಳಜಿ ವಹಿಸಲು ಕಲಿಯಿರಿ" ಎಂಬ ಸಂದೇಶವನ್ನು ಆಡಳಿತ ಮಂಡಳಿಗಳಿಗೆ ರವಾನಿಸಿದ್ದಾರೆ.
ನಿತ್ಯಾ ಅವರ ಈ ಪೋಸ್ಟ್‌ಗೆ ನೆಟ್ಟಿಗರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅನೇಕ ಬಳಕೆದಾರರು, ಎಷ್ಟೇ ದೊಡ್ಡ ಹೆಚ್ಚಿನ ಸಂಬಳ ನೀಡಿದರೂ ಕೆಲಸದ ಸ್ಥಳದಲ್ಲಿ ಗೌರವ ಮತ್ತು ಮನುಷ್ಯತ್ವ ಇಲ್ಲದಿದ್ದರೆ ಆ ಉದ್ಯೋಗಕ್ಕೆ ಅರ್ಥವೇ ಇಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ಉದ್ಯೋಗಿಗಳನ್ನು ಗೌರವದಿಂದ ನೋಡಿಕೊಂಡರೆ ಅವರು ಕಂಪನಿಯನ್ನು ಉತ್ತುಂಗಕ್ಕೇರಿಸುತ್ತಾರೆ ಎಂಬ ತಮ್ಮ ಎರಡು ದಶಕಗಳ ಬ್ಯುಸಿನೆಸ್ ಅನುಭವವನ್ನು ಹಂಚಿಕೊಂಡಿದ್ದಾರೆ.


Click it and Unblock the Notifications
