ಈ ಬಿಸಿಲಿನಲ್ಲಿ ನಿರ್ಜಲೀಕರಣದಿಂದ ನವಜಾತ ಶಿಶುಗಳನ್ನು ರಕ್ಷಿಸುವುದು ಹೇಗೆ?
ಬಳ್ಳಾರಿ, ಏಪ್ರಿಲ್. 01: ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಮಳೆಯಿಲ್ಲದೆ ಜನ ಆಕಾಶದತ್ತ ಮುಖ ಮಾಡಿ ನಿಂತಿದ್ದಾರೆ. ಇದೇ ವೇಳೆ ಸೂರ್ಯ ಇನ್ನಿಲ್ಲದಂತೆ ಸುಡುತ್ತಿದ್ದಾನೆ. ಈ ಸಮಯದಲ್ಲಿ ಎಳೆಯ ಮಕ್ಕಳನ್ನು ಬಿಸಿಲಿನಿಂದ ಕಾಯುವುದು ಮೊದಲ ಆದ್ಯತೆಯಾಗಬೇಕು. ಇನ್ನು, ಉತ್ತರ ಕರ್ನಾಟಕದಲ್ಲಿ ನವಜಾತ ಶಿಶುಗಳನ್ನು ನಿರ್ಜಲೀಕರಣದಿಂದ ಕಾಪಾಡುವುದು ಮುಖ್ಯ.
ಬಳ್ಳಾರಿ ಜಿಲ್ಲೆಯಲ್ಲಿ ವಿಪರೀತ ಬಿಸಿಲು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಬಿಸಿಲಿನ ತಾಪಮಾನದಿಂದ ಮಕ್ಕಳಲ್ಲಿ ಉಂಟಾಗುವ ನಿರ್ಜಲೀಕರಣ ತಡೆಯಲು ತಾಯಂದಿರು ನವಜಾತ ಶಿಶು ಮಕ್ಕಳಿಗೆ ಹೆಚ್ಚು-ಹೆಚ್ಚು ಎದೆ ಹಾಲುಣಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ. ರಮೇಶ್ ಬಾಬು ತಿಳಿಸಿದ್ದಾರೆ.

ಸಾಮಾನ್ಯವಾಗಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಬಳ್ಳಾರಿ ಸೇರಿದಂತೆ ರಾಜ್ಯದ ಬಹಳಷ್ಟು ಜಿಲ್ಲೆಗಳಲ್ಲಿ ಸಹ 40 ಡಿಗ್ರಿ ಮೇಲ್ಪಟ್ಟು ಬಿಸಿಲು ಕಂಡುಬರುತ್ತಿದ್ದು, ಸಾರ್ವಜನಿಕರು ಮಧ್ಯಾಹ್ನ 1 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮನೆಯಲ್ಲಿಯೇ ಇರಬೇಕು. ಒಂದು ವೇಳೆ ಮನೆಯಿಂದ ಹೊರಗೆ ಬರುವ ಅಗತ್ಯವಿದ್ದರೆ ಮಾತ್ರ ಛತ್ರಿ ಹಾಗೂ ನೀರಿನ ಬಾಟೆಲ್‍ನೊಂದಿಗೆ ಬರುವಂತೆ ಸಾರ್ವಜನಿಕರಲ್ಲಿ ವೈದ್ಯರು ವಿನಂತಿಸಿದ್ದಾರೆ.
ಸದ್ಯ ಬಳ್ಳಾರಿ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನದಿಂದ ಅಥವಾ ಬಿಸಿ ಗಾಳಿಯಿಂದ ಆರೋಗ್ಯದಲ್ಲಿ ಏರುಪೇರಾಗಿ ಯಾವುದೇ ಮಗು ದಾಖಲಾಗಿರುವುದಿಲ್ಲ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಹೆರಿಗೆಯಾಗುವ ಅದರಲ್ಲೂ ಮೊದಲ ಮಗುವಿಗೆ ಜನನ ನೀಡುವ ತಾಯಿಗೆ ತನ್ನ ನವಜಾತ ಶಿಶುವಿಗೆ ಹೆರಿಗೆ ನಂತರದಲ್ಲಿ ನಿಯಮಿತವಾಗಿ ಹಾಲುಣಿಸುವ ಅಭ್ಯಾಸವು ಗೊತ್ತಿಲ್ಲದೆ ಕೆಲವು ನವಜಾತ ಶಿಶುವುಗಳಲ್ಲಿ ನಿರ್ಜಲೀಕರಣ ಕಂಡುಬರುವ ಸಾಧ್ಯತೆಗಳಿವೆ.

ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆಯಾಗಿದಲ್ಲಿ ಇಂತಹ ಸಾಧ್ಯತೆಗಳು ಹೆಚ್ಚು. ಅಂತಹ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಚೊಚ್ಚಲು ಹೆರಿಗೆಯಾದ ಬಾಣಂತಿಯರು ಹೆರಿಗೆ ನಂತರದಲ್ಲಿ ಪ್ರತಿ ಒಂದರಿಂದ 2 ಗಂಟೆಯೊಳಗಡೆ ಶಿಶುವಿಗೆ ತಪ್ಪದೇ ಎದೆ ಹಾಲುಣಿಸಬೇಕು. ತಾಯಿಯ ಎದೆ ಹಾಲಿನಲ್ಲಿ ಶೇಕಡಾ 70 ರಷ್ಟು ನೀರಿನ ಅಂಶವಿರುವುದರಿಂದ ಮಗುವಿಗೆ ಉಂಟಾಗಬಹುದಾದ ನಿರ್ಜಲೀಕರಣವನ್ನು ತಡೆಗಟ್ಟುತ್ತದೆ. 6 ತಿಂಗಳವರೆಗೆ ಮಗುವಿಗೆ ತಾಯಿಯ ಎದೆಹಾಲನ್ನು ಮಾತ್ರ ಕೊಡಬೇಕು ಎಂದಿದ್ದಾರೆ.
ಮಗುವಿಗೆ ಬಿಸಿಲಿನ ತಾಪಮಾನದಿಂದ ರಕ್ಷಿಸಲು ತೆಳುವಾದ ಹತ್ತಿಬಟ್ಟೆಯನ್ನು ಮಾತ್ರ ಹಾಕಬೇಕು. 2 ರಿಂದ 3 ಬಟ್ಟೆಗಳನ್ನು ಅಥವಾ ಹೊದಿಕೆಯನ್ನು ಮಕ್ಕಳ ಮೇಲೆ ಹಾಕಬಾರದು. ಮುಂಜಾಗೃತ ಕ್ರಮವಾಗಿ ಮಕ್ಕಳು ಮತ್ತು ವಯಸ್ಕರರಿಗೆ ಕಂಡುಬರಬಹುದಾದ ಅಪಾಯಕಾರಿ ಲಕ್ಷಣಗಳೇನಾದರು ಕಂಡು ಬಂದರೇ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಬರಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ. ರಮೇಶ್ ಬಾಬು ಹೇಳಿದ್ದಾರೆ.
ಮಕ್ಕಳಲ್ಲಿ ಕಾಣಿಸುವ ಸಾಮಾನ್ಯ ಅಪಾಯದ ಚಿಹ್ನೆಗಳು ಏನು?
ಮಕ್ಕಳು ಆಹಾರ ಸೇವಿಸಲು ನಿರಾಕರಿಸುವುದು, ಕನಿಷ್ಠ ಮೂತ್ರ ವಿಸರ್ಜನೆ, ಬಾಯಿ ಒಣಗುವಿಕೆ, ಅಲಸ್ಯ, ಮೂರ್ಛೆ ಹೋಗುವುದು, ದೇಹದ ಯಾವುದೇ ಭಾಗದಲ್ಲಿ ರಕ್ತಸ್ರಾವ ವಯಸ್ಕರಲ್ಲಿ ಅರೆಪ್ರಜ್ಞಾವಸ್ಥೆ, ಪ್ರಜ್ಞೆ ತಪ್ಪುವುದು, ಸಿಡಿಮಿಡಿಗೊಳ್ಳುವುದು, ಗಾಬರಿಗೊಳ್ಳುವುದು, ಅತಿಯಾದ ತಲೆನೋವು, ಚರ್ಮವು ಬಿಸಿ ಹಾಗೂ ಕೆಂಪಾದ ಒಣಚರ್ಮ, ಆತಂಕ, ತಲೆಸುತ್ತುವಿಕೆ, ಮಾಂಸಖಂಡಗಳಲ್ಲಿ ಸುಸ್ತು ಅಥವಾ ಸೆಳೆತ, ವಾಕರಿಕೆ ಮತ್ತು ವಾಂತಿ ಕಂಡುಬರಬಹುದು.
ಇನ್ನು ಬಿಸಿಲಿನಿಂದ ಶಾಖಾಘಾತಕ್ಕೆ ಒಳಗಾದವರನ್ನು ನೆರಳಿರುವೆಡೆಗೆ ಸ್ಥಳಾಂತರಿಸಬೇಕು. ವ್ಯಕ್ತಿಯ ವಸ್ತ್ರಗಳನ್ನು ಸಡಿಲಗೊಳಿಸಿ, ಅಂಗಾತ ಮಲಗಿಸಿ, ಕಾಲುಗಳನ್ನು ಎತ್ತರಿಸಬೇಕು. ಸಾಮಾನ್ಯ ನೀರಿನಿಂದ ದೇಹವನ್ನು ಒರೆಸಬೇಕು. ಬಳಿಕ ಹತ್ತಿರದ ವೈದ್ಯರನ್ನು ಕರೆಸಬೇಕು ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications