Ballari Lok Sabha constituency: ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ 1951 ರಿಂದ ಇಲ್ಲಿವರೆಗೆ ನಡೆದಿರೋದು ಏನು?

ಬಳ್ಳಾರಿ, ಏಪ್ರಿಲ್.06: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ 1951-52 ರಿಂದ 2019 ವರೆಗಿನ ಲೋಕಸಭಾ ಚುನಾವಣಾ ಇತಿಹಾಸವನ್ನು ಗಮನಿಸಿದಾಗ ಚುನಾವಣೆಯಿಂದ ಚುನಾವಣೆಗೆ ಜಿದ್ದಾ ಜಿದ್ದಿನ ಸ್ಪರ್ಧೆ ನಡೆದಿದೆ. ಇದೀಗ ಮತ್ತೊಮ್ಮೆ ಲೋಕಸಭೆಗೆ ಚುನಾವಣೆಗೆ ಕ್ಷೇತ್ರ ಸಿದ್ಧವಾಗುತ್ತಿದ್ದು, ಚುನಾವಣಾ ಕಣವೂ ಕೂಡ ರಂಗೇರುತ್ತಿದೆ.

ಬಳ್ಳಾರಿ ಲೋಕಸಭಾ ಕ್ಷೇತ್ರವು ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ, ವಿಜಯನಗರ, ಕಂಪ್ಲಿ, ಬಳ್ಳಾರಿ ಗ್ರಾಮೀಣ, ಬಳ್ಳಾರಿ ನಗರ, ಸಂಡೂರು, ಹಾಗೂ ಕೂಡ್ಲಿಗಿ ಸೇರಿದಂತೆ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರ ಕೊಪ್ಪಳ ಲೋಕಸಭಾ ವ್ಯಾಪ್ತಿಗೆ ಸೇರಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸದ್ಯ ಪುರುಷ ಮತದಾರರು 9,20,022, ಮಹಿಳಾ ಮತದಾರರು 9,45,053, ಇತರೆ 266 ಮಂದಿ ಸೇರಿ ಒಟ್ಟು 18,65,341 ಮತದಾರರಿದ್ದಾರೆ.

Lok Sabha Election 2024 Ballari Lok Sabha constituency election details

ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣಾ ಇತಿಹಾಸ

ಸ್ವಾತಂತ್ರ್ಯ ನಂತರ 1951-52 ರಲ್ಲಿ ದೇಶದಲ್ಲಿ ಜರುಗಿದ ಮೊದಲ ಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ (ಈ ಕ್ಷೇತ್ರವು ಮದ್ರಾಸ್ ಪ್ರಾಂತ್ಯ ವ್ಯಾಪ್ತಿಗೊಳಪಟ್ಟಿದ್ದು, ಬಳ್ಳಾರಿ, ರಾಯದುರ್ಗ, ಕೂಡ್ಲಿಗಿ, ಹೊಸಪೇಟೆ, ಹರಪನಹಳ್ಳಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಹೊಂದಿತ್ತು) ನಡೆದ ಪ್ರಥಮ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಟಿ.ಸುಬ್ರಮಣ್ಯಂ ಅವರು, ಪಕ್ಷೇತರ ಅಭ್ಯರ್ಥಿ ವೈ.ಮಹಾಬಳೇಶ್ವರಪ್ಪ ಅವರನ್ನು 30,361 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದರು.

1957 ರಲ್ಲಿ ನಡೆದ ಎರಡನೇ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮತ್ತೆ ಸ್ಪರ್ಧಿಸಿದ್ದ ಟಿ.ಸುಬ್ರಮಣ್ಯಂ ಅವರು ಪಕ್ಷೇತರ ಅಭ್ಯರ್ಥಿ ವೈ.ಮಹಾಬಳೇಶ್ವರಪ್ಪ ಅವರಿಗಿಂತ 26,288 ಹೆಚ್ಚು ಮತಗಳನ್ನು ಪಡೆದು ಪುನಃ ವಿಜಯಿಯಾದರು.

Lok Sabha Election 2024 Ballari Lok Sabha constituency election details

1962 ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಟಿ.ಸುಬ್ರಮಣ್ಯಂ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ, ಸ್ವತಂತ್ರ (ಎಸ್‍ಡಬ್ಲ್ಯೂಎ) ಪಕ್ಷದ ಅಭ್ಯರ್ಥಿಯಾದ ಜೆ.ಮಹ್ಮದ್ ಇಮಾಮ್ ಅವರನ್ನು 11,317 ಮತಗಳ ಅಂತರದಿಂದ ಪರಾಭವಗೊಳಿಸಿ ಸತತ ಹ್ಯಾಟ್ರಿಕ್ ಗೆಲುವು ಪಡೆದರು.

1967 ರ ಚುನಾವಣೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ವಿ.ಕೆ.ಆರ್.ವಿ.ರಾವ್ ಅವರು, ಸ್ವತಂತ್ರ (ಎಸ್‍ಡಬ್ಲ್ಯೂಎ) ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೈ.ಮಹಾಬಳೇಶ್ವರಪ್ಪ ಅವರನ್ನು 24,380 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾದರು.

1971 ರ ಚುನಾವಣೆಯಲ್ಲಿ ಕಾಂಗ್ರೆಸ್ (ಜಗಜೀವನರಾಂ ಗ್ರೂಪ್) ಪಕ್ಷದಿಂದ ವಿ.ಕೆ.ಆರ್.ವಿ.ರಾವ್, ಸ್ವತಂತ್ರ ಪಕ್ಷ (ಎಸ್‍ಡಬ್ಲ್ಯುಎ) ದಿಂದ ವೈ.ಮಹಾಬಳೇಶ್ವರಪ್ಪ, ಪಕ್ಷೇತರ ಅಭ್ಯರ್ಥಿಗಳಾಗಿ ಎಸ್.ಗುರುನಾಥ ಮತ್ತು ಎ.ಎನ್.ಗಂಗಪ್ಪ ಸ್ವಾಮಿ ಅವರು ಸ್ವರ್ಧಿಸಿದ್ದು, ವಿ.ಕೆ.ಆರ್.ವಿ.ರಾವ್ ಅವರು ವೈ.ಮಹಾಬಳೇಶ್ವರಪ್ಪ ಅವರಿಗಿಂತ 1,52,860 ಹೆಚ್ಚು ಮತ ಗಳಿಸಿ ಆಯ್ಕೆಯಾದರು.

1977 ರ ಲೋಕಸಭಾ ಚುನಾವಣೆಯಲ್ಲಿ ಕೆ.ಎಸ್.ವೀರಭದ್ರಪ್ಪ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ಅವರು ಭಾರತೀಯ ಲೋಕದಳ ಪಕ್ಷದ ಅಭ್ಯರ್ಥಿ ಎನ್.ತಿಪ್ಪಣ್ಣ ಅವರಿಗಿಂತ 1,45,544 ಹೆಚ್ಚು ಮತಗಳನ್ನು ಪಡೆದಿದ್ದರು.

1980 ರ ಚುನಾವಣೆಯಲ್ಲಿ ಕಾಂಗ್ರೆಸ್ (ಇಂದಿರಾ) ಪಕ್ಷದ ಅಭ್ಯರ್ಥಿಯಾಗಿ ಆರ್.ವೈ.ಘೋರ್ಪಡೆ ಅವರು, ಕಾಂಗ್ರೆಸ್ (ಅರಸು) ಪಕ್ಷದ ಅಭ್ಯರ್ಥಿ ಎಂ.ವೈ.ಘೋರ್ಪಡೆ ಅವರನ್ನು 1,36,037 ಮತಗಳಿಂದ ಸೋಲಿಸಿದ್ದರು. ಈ ಚುನಾವಣೆಯಲ್ಲಿ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎನ್.ರಾಚಯ್ಯ ಮೂರನೇಯ ಸ್ಥಾನ ಪಡೆದಿದ್ದರು.

1984 ರಲ್ಲಿ ನಡೆದ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಮಹಿಳಾ ಅಭ್ಯರ್ಥಿಯಾಗಿ ಬಸವರಾಜೇಶ್ವರಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಜನತಾ ಪಾರ್ಟಿ ಅಭ್ಯರ್ಥಿ ಎಂ.ಪಿ.ಪ್ರಕಾಶ ಅವರನ್ನು 72,286 ಮತಗಳಿಂದ ಸೋಲಿಸಿದ್ದರು.

1989 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜೇಶ್ವರಿ ಅವರು ತಮ್ಮ ಪ್ರತಿಸ್ಪರ್ಧಿಯಾದ ಜನತಾದಳ ಪಕ್ಷದ ಅಭ್ಯರ್ಥಿ ಎನ್.ತಿಪ್ಪಣ್ಣ ಅವರನ್ನು 76,085 ಮತಗಳ ಬೃಹತ್ ಅಂತರದಿಂದ ಸೋಲಿಸಿ ಎರಡನೆ ಬಾರಿ ಸಂಸತ್ ಸದಸ್ಯರಾದರು.

1991 ರ ಚುನಾವಣೆಯಲ್ಲಿ ಮತ್ತೆ ಬಸವರಾಜೇಶ್ವರಿ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ತಮ್ಮ ಪ್ರತಿಸ್ಪರ್ಧಿ ಜನತಾದಳ ಪಕ್ಷದ ವೈ.ನೆಟ್ಟಕಲ್ಲಪ್ಪ ಅವರನ್ನು 65,981 ಮತಗಳ ಅಂತರದಿಂದ ಸೋಲಿಸಿ ಸತತ ಮೂರನೇ ಬಾರಿಗೆ ಆಯ್ಕೆಯಾದರು.

ಅತ್ಯಂತ ಜಿದ್ದಾಜಿದ್ದಿಯಿಂದ ಹಾಗೂ ಕುತೂಹಲದಿಂದ ಕೂಡಿದ್ದ 1996 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಕೆ.ಸಿ. ಕೊಂಡಯ್ಯ ಅವರು ತಮ್ಮ ಪ್ರತಿಸ್ಪರ್ಧಿ ಜನತಾದಳ ಪಕ್ಷದಿಂದ ಸ್ಪರ್ಧಿಸಿದ ಎನ್.ತಿಪ್ಪಣ್ಣ ಅವರನ್ನು ಕೇವಲ 4,519 ಮತಗಳ ಅಂತರದಿಂದ ಸೋಲಿಸಿದ್ದರು.

1998 ರಲ್ಲಿ ಜರುಗಿದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಅವರು ಲೋಕಶಕ್ತಿ ಪಕ್ಷದ ಅಭ್ಯರ್ಥಿ ಎನ್.ತಿಪ್ಪಣ್ಣ ಅವರನ್ನು 63,738 ಮತಗಳಿಂದ ಸೋಲಿಸಿ ಎರಡನೇ ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು.

1999 ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರವು ಇಡೀ ದೇಶದ ಗಮನ ಸೆಳೆದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸೋನಿಯಾ ಗಾಂಧಿ ಹಾಗೂ ಬಿಜೆಪಿಯಿಂದ ಸುಷ್ಮಾ ಸ್ವರಾಜ್ ಸ್ಪರ್ಧಿಸಿದ್ದರು. ಸೋನಿಯಾ ಗಾಂಧಿಯವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ಸುಷ್ಮಾ ಸ್ವರಾಜ್ ಅವರನ್ನು 56,100 ಮತಗಳ ಅಂತರದಿಂದ ಸೋಲಿಸಿದ್ದರು.

ಸೋನಿಯಾಗಾಂಧಿ ಬಳ್ಳಾರಿ ಕ್ಷೇತ್ರದ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣದಿಂದ ತೆರವಾದ ಸ್ಥಾನಕ್ಕೆ 2000 ರಲ್ಲಿ ಉಪ ಚುನಾವಣೆ ಜರುಗಿತು. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೆ.ಬಸವನಗೌಡ 96,020 ಮತ ಹೆಚ್ಚು ಪಡೆದು ಗೆದ್ದರಯ.

2004 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಕರುಣಾಕರ ರೆಡ್ಡಿ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಅವರಿಗಿಂತ 31,676 ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದರು. 2009 ರಲ್ಲಿ ಜರುಗಿದ ಚುನಾವಣೆಯಲ್ಲಿ ಬಿಜೆಪಿ ಅಭ್ಯಥಿಯಾಗಿ ಸ್ಪರ್ಧಿಸಿದ ಜೆ.ಶಾಂತಾ ಅವರು, ಕಾಂಗ್ರೆಸ್‌ನ ಎನ್.ವೈ.ಹನುಮಂತಪ್ಪ ಅವರಿಗಿಂತ ಕೇವಲ 2243 ಹೆಚ್ಚು ಮತಗಳನ್ನು ಪಡೆದು ಗೆದ್ದರು.

2014 ರ ಚುನಾವಣೆಯಲ್ಲಿ ಬಿಜೆಪಿಯ ಬಿ.ಶ್ರೀರಾಮುಲು ಅವರು, ಕಾಂಗ್ರೆಸ್ ಪಕ್ಷದ ಎನ್.ವೈ.ಹನುಮಂತಪ್ಪ ಅವರನ್ನು 85,144 ಮತಗಳ ಅಂತರದಿಂದ ಸೋಲಿಸಿದರು. 2018 ರಲ್ಲಿ ಜರುಗಿದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ವಿ.ಎಸ್.ಉಗ್ರಪ್ಪ, ಬಿಜೆಪಿ ಪಕ್ಷದ ಜೆ. ಶಾಂತಾ ಅವರನ್ನು 2,43,161 ಭಾರಿ ಮತಗಳ ಅಂತರದಿಂದ ಸೋಲಿಸಿದ್ದರು.

2019 ರ ಚುನಾವಣೆಯಲ್ಲಿ ಬಿಜೆಪಿಯ ವೈ.ದೇವೆಂದ್ರಪ್ಪ ಅವರು, ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ ಅವರಿಗಿಂತ 55,707 ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಈ ಬಾರಿಯೂ ಚುನಾವಣೆ ಜಿದ್ದಾಜಿದ್ದಿನಿಂದ ಕೂಡಿದೆ. ಕಾಂಗ್ರೆಸ್‌ನಿಂದ ಇ ತುಕರಾಂ ಮತ್ತು ಬಿಜೆಪಿಯಿಂದ ಮಾಜಿ ಸಚಿವ ಶ್ರೀರಾಮುಲು ಕಣಕ್ಕೆ ಇಳಿದಿದ್ದಾರೆ. ಮೇ 07 ರಂದು ಮತದಾನ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+