ಬೆಂಗಳೂರಿನ ಪ್ಯಾಲೇಸ್ ರೋಡ್‌ನಲ್ಲಿ ಹೆಡೆಬಿಚ್ಚಿ ನಿಂತ ನಾಗರಹಾವು; ಅರ್ಧಗಂಟೆ ಟ್ರಾಫಿಕ್ ಜಾಮ್ ಮಾಡಿದ ಕೋಬ್ರಾ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್‌ಗೆ ಸಿಲುಕುವುದು ಇಲ್ಲಿನ ಜನರಿಗೆ ಹೊಸದೇನಲ್ಲ. ಐಟಿ ಉದ್ಯೋಗಿಗಳ ದುಬಾರಿ ಕಾರುಗಳಿಂದ ಹಿಡಿದು ಬಿಎಂಟಿಸಿ ಬಸ್‌ಗಳವರೆಗೆ ಎಲ್ಲವೂ ಇಲ್ಲಿನ ಟ್ರಾಫಿಕ್‌ಗೆ ಕಾರಣವಾಗುತ್ತವೆ. ಆದರೆ, ನಗರದ ಪ್ರಮುಖ ರಸ್ತೆಯೊಂದರಲ್ಲಿ ಐಷಾರಾಮಿ ಕಾರುಗಳ ಬದಲಿಗೆ ಸಾಕ್ಷಾತ್ ನಾಗರಹಾವೊಂದು (Cobra) ಬರೋಬ್ಬರಿ ಅರ್ಧ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಸೃಷ್ಟಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.
ರಸ್ತೆ ಮಧ್ಯೆ 'ನಾಗಣ್ಣನ' ಎಂಟ್ರಿ
ನಗರದ ಬ್ಯುಸಿ ರಸ್ತೆಗಳಲ್ಲೊಂದಾದ ಪ್ಯಾಲೇಸ್ ರೋಡ್‌ನಲ್ಲಿ (Palace Road) ಈ ಹೈಡ್ರಾಮಾ ನಡೆದಿದೆ. ಮಂಗಳವಾರ ಸಂಜೆಯ ಪೀಕ್ ಅವರ್‌ನಲ್ಲಿ ವಾಹನಗಳು ಸಾಲಾಗಿ ಚಲಿಸುತ್ತಿದ್ದಾಗ, ಎಲ್ಲಿಂದಲೋ ಬಂದ ಭಾರಿ ಗಾತ್ರದ ನಾಗರಹಾವೊಂದು ರಸ್ತೆಯ ಮಧ್ಯಭಾಗದಲ್ಲೇ ಬಂದು ಕೆಲಕಾಲ ಆತಂಕ ಸೃಷ್ಟಿಸಿದೆ. ಅಷ್ಟಕ್ಕೇ ನಿಲ್ಲದ ಆ ಹಾವು, ಅಲ್ಲಿ ವಾಹನಗಳ ಸಂಚಾರವಿದ್ರೂ ತನ್ನ ಹೆಡೆ ಬಿಚ್ಚಿ ಸಖತ್ ಸ್ಟೈಲ್‌ನಲ್ಲಿ ಪೋಸ್ ನೀಡಿದೆ. ಇದನ್ನು ನೋಡಿದರೆ, ನಾಗಣ್ಣ ಸಂಜೆ ಹೊತ್ತು ರಸ್ತೆ ಮಧ್ಯೆ 30 ನಿಮಿಷಗಳ ಕಾಲ 'ಧ್ಯಾನ' ಮಾಡಲು ಕುಳಿತಿದ್ದನೇನೋ ಎನ್ನುವಂತಿತ್ತು.

ರಸ್ತೆ ಮಧ್ಯೆ ಹೆಡೆಬಿಚ್ಚಿ ನಿಂತ ಹಾವನ್ನು ನೋಡಿ ಗಾಬರಿಯಾದ ವಾಹನ ಸವಾರರು ತಕ್ಷಣವೇ ಬ್ರೇಕ್ ಹಾಕಿ ಗಾಡಿಗಳನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ಪ್ಯಾಲೇಸ್ ರೋಡ್‌ನಲ್ಲಿ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲಾಗಿ ನಿಂತು ಟ್ರಾಫಿಕ್ ಜಾಮ್ ಉಂಟಾಗಿದೆ. ಕಾರು, ಬೈಕುಗಳ ಹಾರ್ನ್ ಸೌಂಡ್ ಜೋರಾಗುತ್ತಿದ್ದರೂ, ನಾಗಣ್ಣ ಮಾತ್ರ ಕದಲದೇ ಜಬರ್ದಸ್ತ್ ಆಗಿ ಅಲ್ಲೇ ನಿಂತಿತ್ತು. "ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸೃಷ್ಟಿಸಲು ವಾಹನಗಳೇ ಇರಬೇಕಾಗಿಲ್ಲ, ಕೇವಲ ಹಾವು ಹೆಡೆ ಎತ್ತಿದರೆ ಸಾಕು" ಎಂದು ನೆಟ್ಟಿಗರು ಈ ದೃಶ್ಯ ನೋಡಿ ತಮಾಷೆ ಮಾಡುತ್ತಿದ್ದಾರೆ.
Bengaluru traffic met its newest VIP yesterday
— Nagarjun Dwarakanath (@nagarjund) July 8, 2026
A Cobra on Palace Road.
Seems like the snake decided the middle of the road was the perfect spot for a 30-minute evening meditation session, complete with hood fully open and zero concern for traffic rules.
Police finally… pic.twitter.com/4EgatP2Lnz
ಪೊಲೀಸರಿಂದ ವಿಐಪಿ ಕ್ಲಿಯರೆನ್ಸ್
ರಸ್ತೆಯಲ್ಲಿ ಹಾವಿನಿಂದಾಗಿ ಟ್ರಾಫಿಕ್ ಆಗಿರುವ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಂಚಾರ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ನಂತರ ಉರಗ ತಜ್ಞರ ನೆರವು ಅಥವಾ ಸುರಕ್ಷಿತ ಕ್ರಮಗಳ ಮೂಲಕ ಆ ಅನಿರೀಕ್ಷಿತ 'ರೋಡ್ ಬ್ಲಾಕ್' ನಾಗಣ್ಣನನ್ನು ಅತ್ಯಂತ ಗೌರವಯುತವಾಗಿ ರಸ್ತೆಯಿಂದ ಪಕ್ಕಕ್ಕೆ ಸರಿಸಿ, ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಅದರ ನಂತರವಷ್ಟೇ ಪ್ಯಾಲೇಸ್ ರೋಡ್‌ನಲ್ಲಿ ವಾಹನ ಸಂಚಾರ ಎಂದಿನಂತೆ ಸುಗಮವಾಗಿದೆ. ಇಂತಹ ವಿಚಿತ್ರ ಘಟನೆಗಳು ಕೇವಲ ನಮ್ಮ ಬೆಂಗಳೂರಿನಿಂದ ಮಾತ್ರ ಸಾಧ್ಯ" ಎಂದು ಸಾರ್ವಜನಿಕರು ಸೋಷಿಯಲ್ ಮೀಡಿಯಾದಲ್ಲಿ ಈ ಘಟನೆಯನ್ನು ಸಖತ್ ವೈರಲ್ ಮಾಡುತ್ತಿದ್ದಾರೆ.
ಬೆಂಗಳೂರಲ್ಲಿ ಹಾವುಗಳು ಹೆಚ್ಚಾಗಿ ರಸ್ತೆಗೆ ಬರಲು ಕಾರಣವೇನು?
ಬೆಂಗಳೂರು ವೇಗವಾಗಿ ಬೆಳೆಯುತ್ತಿದ್ದರೂ ನಗರದಲ್ಲಿ ಇಂದಿಗೂ ದೊಡ್ಡ ದೊಡ್ಡ ಹೆರಿಟೇಜ್ ಪಾರ್ಕ್‌ಗಳು (ಕಬ್ಬನ್ ಪಾರ್ಕ್, ಲಾಲ್‌ಬಾಗ್), ಅರಮನೆ ಮೈದಾನದ ಹಸಿರು ವಲಯ ಹಾಗೂ ರಾಜಕಾಲುವೆಗಳಿವೆ. ಪ್ಯಾಲೇಸ್ ರೋಡ್ ಸುತ್ತಮುತ್ತ ದಟ್ಟವಾದ ಮರಗಳು ಮತ್ತು ಬೆಂಗಳೂರು ಅರಮನೆಯ ವಿಶಾಲವಾದ ಮೈದಾನ ಇರುವುದರಿಂದ ಇಲ್ಲಿ ಹಾವುಗಳ ವಾಸಸ್ಥಾನ ಹೆಚ್ಚು. ಮಳೆಗಾಲದಲ್ಲಿ ಅಥವಾ ವಿಪರೀತ ಸೆಖೆಯಾದಾಗ ಇವು ತಂಪಾದ ಆಶ್ರಯ ಹುಡುಕುತ್ತಾ ಅಥವಾ ಸಣ್ಣಪುಟ್ಟ ಕೀಟ, ಕಪ್ಪೆಗಳ ಬೇಟೆಗೆ ಹೊರಟಾಗ ಅಪ್ಪಿತಪ್ಪಿ ರಸ್ತೆ ದಾಟಲು ಬಂದು ಹೀಗೆ ಸಿಲುಕಿಕೊಳ್ಳುತ್ತವೆ.
ರಸ್ತೆಯಲ್ಲಿ ಹಾವು ಕಂಡರೆ ಸಾರ್ವಜನಿಕರು ಏನು ಮಾಡಬೇಕು?
ಬೆಂಗಳೂರು ವನ್ಯಜೀವಿ ವಿಭಾಗ ಮತ್ತು ಜಿಬಿಎ ಇಂತಹ ತುರ್ತು ಸಂದರ್ಭಗಳಿಗಾಗಿ ಕೆಲವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ನೀಡಿದೆ. ಹಾವನ್ನು ತಾವೇ ಓಡಿಸಲು ಹೋಗಿ ಅಥವಾ ಅದರ ಅತ್ಯಂತ ಹತ್ತಿರ ಹೋಗಿ ಸೆಲ್ಫಿ, ವಿಡಿಯೋ ಮಾಡಲು ಹೋಗಬಾರದು. ರೊಚ್ಚಿಗೆದ್ದರೆ ಕೋಬ್ರಾಗಳು ತಕ್ಷಣ ದಾಳಿ ಮಾಡುತ್ತವೆ. ನಗರದ ಯಾವುದೇ ರಸ್ತೆ ಅಥವಾ ವಸತಿ ಪ್ರದೇಶದಲ್ಲಿ ಹಾವುಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ ಬಿಬಿಎಂಪಿ ಅರಣ್ಯ ಕೋಶದ ಸಹಾಯವಾಣಿ ಸಂಖ್ಯೆ (080-22221188) ಅಥವಾ ವನ್ಯಜೀವಿ ರಕ್ಷಕರಿಗೆ ಕರೆ ಮಾಡಿ ಮಾಹಿತಿ ನೀಡಬಹುದು. ತಜ್ಞರು ಬಂದು ಹಾವಿಗೆ ಯಾವುದೇ ಗಾಯವಾಗದಂತೆ ರಕ್ಷಿಸಿ ಕಾಡಿಗೆ ಬಿಡುತ್ತಾರೆ.













Click it and Unblock the Notifications