ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

16 ವರ್ಷದ ಬಳಿಕ ಸೇವೆಗೆ, 9 ತಿಂಗಳ ಬಳಿಕ ಮತ್ತೆ ಅಮಾನತು!: ಸಚಿನ್ ವಾಜೆಯ ಕುತೂಹಲಕಾರಿ ಕಥೆ!

|
Google Oneindia Kannada News

ಮುಕೇಶ್ ಅಂಬಾನಿ ಅವರ ಮನೆ ಮುಂದೆ ಫೆ. 25ರಂದು ಬಾಂಬ್ ಪತ್ತೆಯಾದ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ರೋಚಕ ಮಾಹಿತಿಗಳನ್ನು ಹೊರಹಾಕುತ್ತಿದೆ. ಮುಂಬೈ ಅಪರಾಧ ತನಿಖಾ ಘಟಕದ ಮುಖ್ಯಸ್ಥ, ಸಹಾಯಕ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರ ಬಂಧನ ಮತ್ತು ವಿಚಾರಣೆ, ಮಹಾರಾಷ್ಟ್ರದಲ್ಲಿನ ಶಿವಸೇನಾ ನೇತೃತ್ವದ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಮತ್ತೊಂದು ತಿಕ್ಕಾಟಕ್ಕೆ ಕಾರಣವಾಗಿದೆ.

ಬಾಂಬ್ ಪತ್ತೆಯಾದ ಸ್ಕಾರ್ಪಿಯೋ ವಾಹನದ ಮಾಲೀಕರಾಗಿದ್ದ ಮನ್ಸುಖ್ ಹಿರೇನ್ ಅವರ ನಿಗೂಢ ಸಾವಿನ ಹಿಂದೆ ಸಚಿನ್ ವಾಜೆ ಕೈವಾಡ ಇದೆ ಎಂದು ಹಿರೇನ್ ಪತ್ನಿ ಆರೋಪಿಸಿದ್ದರು. ಈಗ ಸಚಿನ್ ಅವರನ್ನು ರಾಷ್ಟ್ರಿಯ ತನಿಖಾ ದಳ ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.

ಅಂಬಾನಿಗೆ ಬೆದರಿಕೆ: ಪೊಲೀಸ್ ಕೇಂದ್ರ ಕಚೇರಿಯಲ್ಲೇ ಇತ್ತು ಸ್ಫೋಟಕ ಪ್ರಕರಣದಲ್ಲಿ ಬಳಸಿದ ಕಾರು!ಅಂಬಾನಿಗೆ ಬೆದರಿಕೆ: ಪೊಲೀಸ್ ಕೇಂದ್ರ ಕಚೇರಿಯಲ್ಲೇ ಇತ್ತು ಸ್ಫೋಟಕ ಪ್ರಕರಣದಲ್ಲಿ ಬಳಸಿದ ಕಾರು!

ಯಾರಿದು ಸಚಿನ್ ವಾಜೆ? ಅವರ ಬಂಧನದಿಂದ ಶಿವಸೇನಾ ಏಕೆ ಗಾಬರಿಗೊಂಡಿದೆ? ಅವರಿಗೂ ಈ ಪ್ರಕರಣಕ್ಕೂ ಸಂಬಂಧವೇನು? ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆಯಾಗುವುದರ ಹಿಂದೆ ಶಿವಸೇನಾ ಪಾತ್ರವೂ ಇದೆಯೇ? ಮುಂತಾದ ಪ್ರಶ್ನೆಗಳಿಗೆ ಉತ್ತರ ಹುಡುಕಿದರೆ ಅನೇಕ ಕುತೂಹಲಕಾರಿ ಸಂಗತಿಗಳು ದೊರಕುತ್ತವೆ. ಅಂದಹಾಗೆ, ಈಗ ಸಿಗುತ್ತಿರುವ ಮಾಹಿತಿ ಇನ್ನೂ ಅಲ್ಪ. ಈ ಪ್ರಕರಣದಲ್ಲಿ ಸಚಿನ್ ವಾಜೆ ಹಿಮದ ರಾಶಿ ಮೇಲಿನ ಸಣ್ಣ ತುಣುಕಷ್ಟೇ. ಇದರ ಹಿಂದೆ ಭಾರಿ ದೊಡ್ಡ ಗುಂಪೇ ಇದೆ ಎಂದು ಎನ್‌ಐಎ ಹೇಳಿದೆ. ಅತ್ತ ಶಿವಸೇನಾ, ಅಂಬಾನಿ ಪ್ರಕರಣವನ್ನು ಬಿಜೆಪಿ ಗುರಾಣಿಯಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ. ಮುಂದೆ ಓದಿ.

ಮುಕೇಶ್ ಅಂಬಾನಿ ಮನೆ ಸಮೀಪ ಸ್ಫೋಟಕ ಕೇಸ್; ಸಚಿನ್ ಅರೆಸ್ಟ್ಮುಕೇಶ್ ಅಂಬಾನಿ ಮನೆ ಸಮೀಪ ಸ್ಫೋಟಕ ಕೇಸ್; ಸಚಿನ್ ಅರೆಸ್ಟ್

ಮತ್ತೊಮ್ಮೆ ಅಮಾನತು

ಮತ್ತೊಮ್ಮೆ ಅಮಾನತು

ಪ್ರಸ್ತುತ ಎನ್‌ಐಎ ಬಂಧನದಲ್ಲಿರುವ ಸಚಿನ್ ವಾಜೆ ಅವರನ್ನು ಸೇವೆಗೆ ತೆಗೆದುಕೊಂಡ ಒಂಬತ್ತು ತಿಂಗಳಲ್ಲಿಯೇ ಮುಂಬೈ ಪೊಲೀಸರ ವಿಶೇಷ ಘಟಕವು ಸೋಮವಾರ ಮತ್ತೊಮ್ಮೆ ಅಮಾನತು ಮಾಡಿದೆ. 16 ವರ್ಷದ ಬಳಿಕ ವಾಜೆ ಕಳೆದ ವರ್ಷವಷ್ಟೇ ಪೊಲೀಸ್ ಇಲಾಖೆಗೆ ಮರಳಿದ್ದರು.

'ಎನ್‌ಕೌಂಟರ್ ಸ್ಪೆಷಲಿಸ್ಟ್' ವಾಜೆ

'ಎನ್‌ಕೌಂಟರ್ ಸ್ಪೆಷಲಿಸ್ಟ್' ವಾಜೆ

49 ವರ್ಷ ವಯಸ್ಸಿನ ಸಚಿನ್ ಹಿಂದೂರಾವ್ ವಾಜೆ ಮುಂಬೈ ಪೊಲೀಸ್ ಇಲಾಖೆಯ ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್. ಮಹಾರಾಷ್ಟ್ರದಲ್ಲಿ ಬಹು ಖ್ಯಾತರಾಗಿದ್ದ 'ಎನ್‌ಕೌಂಟರ್ ಸ್ಪೆಷಲಿಸ್ಟ್'ಗಳಾದ ದಯಾನಾಯಕ್, ಪ್ರದೀಪ್ ಶರ್ಮಾ ಅವರೊಂದಿಗೆ ಎನ್‌ಕೌಂಟರ್ ಸ್ಪೆಷಲಿಸ್ಟ್ ಆಗಿ ವಾಜೆ ಕೂಡ ಗುರುತಿಸಿಕೊಂಡಿದ್ದರು.

ವಾಜೆ ಪೊಲೀಸ್ ಬದುಕು

ವಾಜೆ ಪೊಲೀಸ್ ಬದುಕು

1990ರಲ್ಲಿ ಮಹಾರಾಷ್ಟ್ರ ಪೊಲೀಸ್ ಇಲಾಖೆಯನ್ನು ಸೇರಿಕೊಂಡಿದ್ದ ಸಚಿನ್ ವಾಜೆ ಅವರಿಗೆ ಮೊದಲು ಸಿಕ್ಕಿದ್ದೇ ಮಾವೊವಾದಿಗಳ ಹಿಡಿತಕ್ಕೆ ನಲುಗಿದ್ದ ಗಡ್ಚಿರೋಲಿ ಪ್ರದೇಶದ ಹೊಣೆ. ಎರಡು ವರ್ಷದ ಬಳಿಕ ಥಾಣೆ ನಗರ ಪೊಲೀಸ್ ವಿಭಾಗಕ್ಕೆ ವರ್ಗವಾದರು. ಅಲ್ಲಿ ಉತ್ತಮ ಅಪರಾಧ ತನಿಖಾಧಿಕಾರಿ ಎಂಬ ಹೆಸರು ಬಂದಿತ್ತು. ನಂತರ ಥಾಣೆ ಪೊಲೀಸ್ ಅಪರಾಧ ಘಟಕದ ವಿಶೇಷ ದಳಕ್ಕೆ ನೇಮಕವಾದರು. 'ಎನ್‌ಕೌಂಟರ್ ಸ್ಪೆಷಲಿಸ್ಟ್' ಎಂಬ ಖ್ಯಾತಿ ಬಂದಿದ್ದು ಅಲ್ಲಿಯೇ.

ಕಸ್ಟಡಿಯಲ್ಲಿ ಯೂನಸ್ ಹತ್ಯೆ

ಕಸ್ಟಡಿಯಲ್ಲಿ ಯೂನಸ್ ಹತ್ಯೆ

2000ನೇ ಇಸವಿಯಲ್ಲಿ ಮುಂಬೈ ಪೊಲೀಸ್ ಕ್ರೈಂ ಬ್ರ್ಯಾಂಚ್‌ನ ಪೊವಾಯಿ ಘಟಕಕ್ಕೆ ವರ್ಗವಾದರು. ಅಲ್ಲಿಂದ ವಾಜೆ ಗತಿ ಬದಲಾಯಿತು. 2002ರ ಡಿಸೆಂಬರ್ 2ರ ಘಾಟ್ಕೋಪರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿ ಖವಾಜಾ ಯೂನಸ್ ಎಂಬಾತನನ್ನು ಇತರೆ ಮೂವರು ಪೊಲೀಸರೊಂದಿಗೆ ಸೇರಿಕೊಂಡು ಹತ್ಯೆ ಮಾಡಿದ ಆರೋಪ ವಾಜೆ ಮೇಲೆ ಬಂದಿತು.

ವಾಜೆ ಅಮಾನತು

ವಾಜೆ ಅಮಾನತು

27 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಯೂನಸ್‌ನನ್ನು ಮುಂಬೈ ಪೊಲೀಸ್ ಅಪರಾಧ ದಳ ಬಂಧಿಸಿತ್ತು. ಬಳಿಕ ಆತ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಮೃತಪಟ್ಟಿದ್ದಾನೆ ಎಂದು ಪ್ರಕಟಿಸಲಾಯಿತು. ರಾಜ್ಯ ಅಪರಾಧ ತನಿಖಾ ಇಲಾಖೆಯು (ಸಿಐಡಿ) ವಾಜೆ ಹಾಗೂ ಇತರೆ ಮೂವರು ಅಧಿಕಾರಿಗಳಾದ ರಾಜೇಂದ್ರ ತಿವಾರಿ, ರಾಜಾರಾಮ್ ನಿಕಂ ಮತ್ತು ಸುನೀಲ್ ದೇಸಾಯಿ ವಿರುದ್ಧ ಯೂನಸ್ ಕೊಲೆ ಹಾಗೂ ಸಾಕ್ಷ್ಯ ನಾಶ ಪ್ರಕರಣದಲ್ಲಿ 2004ರ ಮಾರ್ಚ್ 3ರಂದು ಆರೋಪ ಹೊರಿಸಲಾಯಿತು. ಅಂದಿನಿಂದ ವಾಜೆ ಅಮಾನತಿಗೆ ಒಳಗಾದರು.

ಶಿವಸೇನಾದಲ್ಲಿ ಉಳಿದಿಲ್ಲ ಎಂದಿದ್ದ ಠಾಕ್ರೆ

ಶಿವಸೇನಾದಲ್ಲಿ ಉಳಿದಿಲ್ಲ ಎಂದಿದ್ದ ಠಾಕ್ರೆ

2007ರ ನವೆಂಬರ್ 30ರಂದು ರಾಜೀನಾಮೆ ಸಲ್ಲಿಸಿದ ವಾಜೆ, ಮರು ವರ್ಷ ಶಿವಸೇನಾ ಸೇರ್ಪಡೆಯಾದರು. ವಾಜೆ ಅವರು 2008ರವರೆಗೂ ಶಿವಸೇನಾ ಸದಸ್ಯರಾಗಿದ್ದರು. ಅದರ ಬಳಿಕ ಅವರು ತಮ್ಮ ಸದಸ್ಯತ್ವ ನವೀಕರಣ ಮಾಡಿರಲಿಲ್ಲ. ಅಲ್ಲಿಂದ ಶಿವಸೇನಾಕ್ಕೂ ವಾಜೆ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಕೋವಿಡ್ ನೆಪದಲ್ಲಿ ಮತ್ತೆ ಸೇವೆಗೆ ಸೇರ್ಪಡೆ

ಕೋವಿಡ್ ನೆಪದಲ್ಲಿ ಮತ್ತೆ ಸೇವೆಗೆ ಸೇರ್ಪಡೆ

2020ರ ಜೂನ್ 6ರಂದು ಪೊಲೀಸ್ ಪಡೆಗೆ ಸಚಿನ್ ವಾಜೆ ಅವರನ್ನು ಮರಳಿ ಸೇರ್ಪಡೆ ಮಾಡಲಾಯಿತು. ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಮಿತಿ ಮೀರಿ ಹೋಗುತ್ತಿದ್ದು, ಅನೇಕ ಪೊಲೀಸರು ಸಹ ಮೃತಪಟ್ಟಿದ್ದಾರೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮಗಳ ಪಾಲನೆಗೆ ಪೊಲೀಸ್ ಅಧಿಕಾರಿಗಳ ಕೊರತೆ ಇದೆ ಎಂದು ವಾಜೆ ಅವರ ಮರು ಸೇರ್ಪಡೆಗೆ ಕಾರಣ ನೀಡಲಾಯಿತು. ಆದರೆ ವಾಜೆ ಅವರನ್ನು ಮಾತ್ರ ಒಂದು ದಿನವೂ ಕೋವಿಡ್ ಕಾರ್ಯಗಳಿಗೆ ಬಳಸಿಕೊಳ್ಳಲಿಲ್ಲ.

ಹೈ-ಪ್ರೊಫೈಲ್ ಪ್ರಕರಣಗಳು

ಹೈ-ಪ್ರೊಫೈಲ್ ಪ್ರಕರಣಗಳು

ಪೊಲೀಸ್ ಕರ್ತವ್ಯಕ್ಕೆ ಮರಳಿದ ಕೆಲವೇ ದಿನಗಳಲ್ಲಿ ಅವರನ್ನು ಮುಂಬೈ ಅಪರಾಧ ಘಟಕಕ್ಕೆ ಕಳುಹಿಸಲಾಯಿತು. ಅಲ್ಲಿ ಅವರು ಸಿಐಯು ಮುಖ್ಯಸ್ಥನ ಹೊಣೆಗಾರಿಕೆ ವಹಿಸಿಕೊಂಡರು. ಅಲ್ಲಿಂದ ಅವರು ಅನೇಕ ಹೈ-ಪ್ರೊಫೈಲ್ ಪ್ರಕರಣಗಳನ್ನು ನಿಭಾಯಿಸಿದರು. ಇದರಲ್ಲಿ ಟಿಆರ್‌ಪಿ ತಿದ್ದಿದ ಪ್ರಕರಣದಲ್ಲಿ ಬಾರ್ಕ್ ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾ ಬಂಧನ ಪ್ರಕರಣ, ಸಾಮಾಜಿಕ ಜಾಲತಾಣದಲ್ಲಿ ನಕಲಿ ಅನುಯಾಯಿಗಳನ್ನು ಹೊಂದಿದ್ದಕ್ಕಾಗಿ ರಾಪ್ಪರ್ ಬಾದಶಾಹಗೆ ನೋಟಿಸ್ ನೀಡಿದ್ದು, ಸ್ಪೋರ್ಟ್ಸ್ ಕಾರ್‌ಗಳ ಮೇಲೆ ಸಾಲ ನೀಡುವಲ್ಲಿ ಫೋರ್ಜರಿ ಮತ್ತು ವಂಚನೆ ಮಾಡಿದ್ದಕ್ಕಾಗಿ ದಿಲೀಪ್ ಛಾಬ್ರಿಯಾರ ಬಂಧನ ಪ್ರಕರಣದಲ್ಲಿ ವಾಜೆ ಮುಖ್ಯಪಾತ್ರ ವಹಿಸಿದ್ದರು.

ಅರ್ನಬ್ ಗೋಸ್ವಾಮಿ ಪ್ರಕರಣ

ಅರ್ನಬ್ ಗೋಸ್ವಾಮಿ ಪ್ರಕರಣ

ಜತೆಗೆ ಕಂಗನಾ ರನೌತ್ ಮತ್ತು ಹೃತಿಕ್ ರೋಷನ್ ನಡುವಿನ ನಕಲಿ ಇ-ಮೇಲ್ ಪ್ರಕರಣದ ತನಿಖೆಯನ್ನು ವಾಜೆ ನಡೆಸುತ್ತಿದ್ದಾರೆ. ಮುಖ್ಯವಾಗಿ ವಿನ್ಯಾಸಗಾರ ಅನ್ವಯ್ ನಾಯ್ಕ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಪತ್ರಕರ್ತ ಅರ್ನಬ್ ಗೋಸ್ವಾಮಿಯನ್ನು ಬಂಧಿಸಿದ ಪೊಲೀಸ್ ತಂಡದಲ್ಲಿಯೂ ವಾಜೆ ಭಾಗಿಯಾಗಿದ್ದರು. ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆಯಾದ ವಾರದ ಬಳಿಕ ಅವರನ್ನು ಸಿಐಯುದಿಂದ ಮುಂಬೈ ಪೊಲೀಸ್ ವಿಭಾಗದ ಸಿಟಿಜನ್ ಫೆಸಿಲಿಟೇಷನ್ ಸೆಂಟರ್‌ಗೆ ವರ್ಗಾವಣೆ ಮಾಡಲಾಗಿತ್ತು.

ಫೋನ್ ಸಂಭಾಷಣೆ ಆಲಿಸುವ ಸಾಫ್ಟ್‌ವೇರ್

ಫೋನ್ ಸಂಭಾಷಣೆ ಆಲಿಸುವ ಸಾಫ್ಟ್‌ವೇರ್

ಸಚಿನ್ ವಾಜೆ ಎರಡು ಪುಸ್ತಕಗಳನ್ನೂ ಬರೆದಿದ್ದಾರೆ. ಒಂದು ಶೀನಾ ಬೋರಾ ಕೊಲೆ ಪ್ರಕರಣದ ಬಗ್ಗೆ. ಮತ್ತೊಂದು ಪುಸ್ತಕ 26/11ರ ಮುಂಬೈ ದಾಳಿಯ ಪ್ರಮುಖ ಸಂಚುಕೋರ ಡೇವಿಡ್ ಹೆಡ್ಲಿಯ ಕುರಿತಾಗಿದೆ. 2010ರಲ್ಲಿ 'ಲಾಯ್ ಭರಿ' ಎಂಬ ಸಾಮಾಜಿಕ ನೆಟ್ವರ್ಕ್ ತಾಣವನ್ನು ಆರಂಭಿಸಿದ್ದರು. ಜತೆಗೆ ಜನರ ಫೋನ್ ಸಂಭಾಷಣೆಗಳನ್ನು ಕೇಳುವ ಮತ್ತು ಅವರ ಸಂದೇಶಗಳನ್ನು ಪರಿಶೀಲಿಸಲು ಸಾಧ್ಯವಾಗುವಂತಹ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ್ದರು ಎಂದೂ ಹೇಳಲಾಗಿದೆ.

English summary
Mukesh Ambani Bomb Scare: Encounter Sepcialist Sachin Vaze suspended again on March 15, after returned to Mumbai police last year. Who is Sachin Vaze? details in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X