ಭಾರತದ ಅತ್ಯಂತ ದುಬಾರಿ ಮಾಲ್ ತೆರೆಯಲಿದ್ದಾರೆ ಮುಕೇಶ್ ಅಂಬಾನಿ, ಎಲ್ಲಿ ಗೊತ್ತಾ?
ನವದೆಹಲಿ, ಅಕ್ಟೋಬರ್ 16: ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ, ಬಿಲಿಯನೇರ್ ಮುಖೇಶ್ ಅಂಬಾನಿ ಅವರು ಜಿಯೋ ನಂತರ ತಮ್ಮ ಮುಂದಿನ ದೊಡ್ಡ ಯೋಜನೆಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದ್ದಾರೆ.
ಅವರು ಭಾರತದ ಅತಿದೊಡ್ಡ ಐಷಾರಾಮಿ ಮಾಲ್ ಪ್ರಾರಂಭಿಸಲಿದ್ದು, ಇದು ಸೆಲೆಕ್ಟ್ ಸಿಟಿವಾಕ್ ಮತ್ತು ಡಿಎಲ್‌ಎಫ್ ಎಂಪೋರಿಯೊವನ್ನು ಹಿಂದಿಕ್ಕಲು ಸಿದ್ಧವಾಗಿದೆ. ಈ ಹೊಸ ಮಾಲ್ ಅನ್ನು ಜಿಯೋ ವರ್ಲ್ಡ್ ಪ್ಲಾಜಾ ಎಂದು ಕರೆಯಲಾಗುವುದು ಎಂದು ತಿಳಿಸಲಾಗಿದೆ.

ಜಿಯೋ ವರ್ಲ್ಡ್ ಪ್ಲಾಜಾ ಮುಂಬೈನ ಐಷಾರಾಮಿ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC) ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ. ಇದು ರಿಲಯನ್ಸ್ ಮತ್ತು ಅಂಬಾನಿ ಕುಟುಂಬದ ಪ್ರಾಬಲ್ಯ ಹೊಂದಿರುವ ನಗರ ಅಭಿವೃದ್ಧಿ ಸ್ಥಳವಾಗಿದೆ. ಅವರು ಈಗಾಗಲೇ ಈ ಪ್ರದೇಶದಲ್ಲಿ ಜಿಯೋ ವರ್ಲ್ಡ್ ಡ್ರೈವ್ ಮತ್ತು ಸೆಂಟರ್ ಅನ್ನು ಸ್ಥಾಪಿಸಿದ್ದಾರೆ.
ಈಗ ಮುಖೇಶ್ ಅಂಬಾನಿ ತಮ್ಮ ಮೆಗಾ ಮಾಲ್ ಜಿಯೋ ವರ್ಲ್ಡ್ ಪ್ಲಾಜಾ ಮೂಲಕ ಭಾರತದಲ್ಲಿ 5 ಬಿಲಿಯನ್ ಡಾಲರ್ ಐಷಾರಾಮಿ ಚಿಲ್ಲರೆ ಉದ್ಯಮದಲ್ಲಿ ಹೂಡಿಕೆ ಮಾಡಲು ಸಿದ್ಧರಾಗಿದ್ದಾರೆ. ನೂರಾರು ಅಂತಾರಾಷ್ಟ್ರೀಯ ಐಷಾರಾಮಿ ಮಳಿಗೆಗಳನ್ನು ವಿವಿಧೆಡೆ ತೆರೆಯಲು ಸಜ್ಜಾಗಲಾಗುತ್ತಿದೆ. ಅವರಲ್ಲಿ ಕೆಲವರು ಮೊದಲ ಬಾರಿಗೆ ತಮ್ಮ ವ್ಯಾಪಾರವನ್ನು ಭಾರತಕ್ಕೆ ತರುತ್ತಿದ್ದಾರೆ. ಈ ನಡುವೆ ಮುಕೇಶ್ ಅಂಬಾನಿ ಕೂಡ ಈಗ ಮಾಲ್‌ಗಳ ಸರಣಿ ಆರಂಭಿಸಲು ಮುಂದಾಗಿದ್ದಾರೆ.
ಜಿಯೋ ವರ್ಲ್ಡ್ ಪ್ಲಾಜಾ ತೆರೆಯಲಿರುವ ನಿಖರವಾದ ದಿನಾಂಕವನ್ನು ಘೋಷಿಸಿಲ್ಲ. ಆದರೆ ಭಾರತದಲ್ಲಿ ಹಬ್ಬದ ಋತುವಿನ ಮಧ್ಯದಲ್ಲಿ 2023 ರ ಅಂತ್ಯದ ವೇಳೆಗೆ ಅಥವಾ 2024 ರ ಮೊದಲ ಒಂದೆರಡು ತಿಂಗಳುಗಳಲ್ಲಿ ಜಿಯೋ ವರ್ಲ್ಡ್ ಪ್ಲಾಜಾ ಐಷಾರಾಮಿ ಮಾಲ್ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ. ಜಿಯೋ ವರ್ಲ್ಡ್ ಪ್ಲಾಜಾ ಭಾರತದ ಅತ್ಯಂತ ದುಬಾರಿ ಮಾಲ್ ಆಗಿರಲಿದೆ ಎಂದು ಹೇಳಲಾಗುತ್ತದೆ.
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಬರ್ನಾರ್ಡ್ ಅರ್ನಾಲ್ಟ್ ಒಡೆತನದ ಬ್ರಾಂಡ್ ಲೂಯಿಸ್ ವಿಟಾನ್, ಮುಖೇಶ್ ಅಂಬಾನಿ ಅವರ ಮೆಗಾ ಮಾಲ್‌ನಲ್ಲಿ ತನ್ನ ಮಳಿಗೆಯನ್ನು ತೆರೆಯಲು ಸಿದ್ಧವಾಗಿದೆ. ಇದು ತಿಂಗಳಿಗೆ 40 ಲಕ್ಷ ರೂಪಾಯಿಗಳನ್ನು ಬಾಡಿಗೆಗೆ ಪಾವತಿಸಲಿದೆ. ಜಿಯೋ ವರ್ಲ್ಡ್ ಪ್ಲಾಜಾ ಇಲ್ಲಿಯವರೆಗೆ ಭಾರತದ ಅತಿದೊಡ್ಡ ಎಲ್‌ವಿಎಂಎಚ್ ಸ್ಟೋರ್ ಅನ್ನು ಹೊಂದಿರುತ್ತದೆ.
ಇದಲ್ಲದೆ ಐಷಾರಾಮಿ ಬ್ರಾಂಡ್ ಡಿಯೊರ್ ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ಒಂದು ಮಳಿಗೆಯನ್ನು ಬಾಡಿಗೆಗೆ ಪಡೆಯಲಿದೆ. ಇದು ತಿಂಗಳಿಗೆ ರೂ 21 ಲಕ್ಷ ಬಾಡಿಗೆಯನ್ನು ಪಾವತಿಸಲು ಮತ್ತು ರೂ 1.39 ಕೋಟಿ ಭದ್ರತಾ ಠೇವಣಿ ಪಾವತಿಸಲು ನಿರ್ಧರಿಸಿದೆ. ಆದಾಗ್ಯೂ, ಡಿಯೊರ್ ಮತ್ತು ಎಲ್ವಿ ಹೊಸ ಅಂಬಾನಿ ಮಾಲ್‌ನಲ್ಲಿ ಐಷಾರಾಮಿ ಬ್ರಾಂಡ್‌ಗಳ ದೀರ್ಘ ಪಟ್ಟಿಯ ಪ್ರಾರಂಭವಾಗಿದೆ.
ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ಮಳಿಗೆಗಳನ್ನು ತೆರೆಯಲು ಮುಂದಾಗಿರುವ ಐಷಾರಾಮಿ ಬ್ರಾಂಡ್‌ಗಳೆಂದರೆ - ಲೂಯಿ ವಿಟಾನ್, ಗುಸ್ಸಿ, ಕಾರ್ಟಿಯರ್, ಬರ್ಬೆರಿ, ಬಲ್ಗರಿ, ಡಿಯರ್, ಐಡಬ್ಲ್ಯೂಸಿ ಶಾಫ್‌ಹೌಸೆನ್, ರಿಮೋವಾ, ರಿಚೆಮಾಂಟ್, ಕೆರಿಂಗ್ ಮುಂತಾದವುಗಳು.












Click it and Unblock the Notifications