ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂಎಲ್‌ಸಿ ಚುನಾವಣೆ: ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ನೀತಿ ಸಂಹಿತೆ ಜಾರಿ

|
Google Oneindia Kannada News

ಶಿವಮೊಗ್ಗ, ನವೆಂಬರ್ 10: ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರ ದ್ವಿತೀಯ ವಾರ್ಷಿಕ ಚುನಾವಣೆಯಲ್ಲಿ ಸಾರ್ವತ್ರಿಕ ಮತದಾನ ರೀತಿಯಲ್ಲಿ ಮಾದರಿ ನೀತಿ ಸಂಹಿತೆ ಅನ್ವಯವಾಗಲಿದ್ದು, ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸೂಚನೆ ನೀಡಿದರು.

ಬುಧವಾರ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಧಾನ ಪರಿಷತ್ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನೀತಿ ಸಂಹಿತೆ ತಕ್ಷಣದಿಂದ ಜಾರಿಗೆ ಬಂದಿದ್ದು, ಡಿಸೆಂಬರ್ 16ರವರೆಗೆ ಜಾರಿಯಲ್ಲಿರುತ್ತದೆ ಎಂದು ಹೇಳಿದರು.

ಮಾದರಿ ನೀತಿ ಸಂಹಿತೆ ಜನಪ್ರತಿನಿಧಿಗಳಿಗೆ ಮಾತ್ರವಲ್ಲದೆ ಅಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ನೀತಿ ಸಂಹಿತೆಗೆ ಯಾವುದೇ ಧಕ್ಕೆಯಾಗದಂತೆ ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಿಸಬೇಕು. ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸಲು ನೋಡಲ್ ಅಧಿಕಾರಿಗಳು ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಹೇಳಿದರು.

Karnataka MLC Election: Model Code of Conduct Enforcement Like The General Election In Shivamogga

ಮತದಾರರ ವಿವರ:
ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು ಮತದಾನದ ಹಕ್ಕು ಹೊಂದಿರುತ್ತಾರೆ. ಮತದಾರರ ಪಟ್ಟಿಯ ಪರಿಶೀಲನೆ ಕಾರ್ಯವನ್ನು ನಿಗದಿತ ನಮೂನೆಯಲ್ಲಿ ಕೈಗೊಂಡು ಅರ್ಹ ಮತದಾರರ ವಿವರಗಳನ್ನು ತಕ್ಷಣ ಸಲ್ಲಿಸಬೇಕು ಎಂದು ಅವರು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ 7 ತಾಲೂಕು ಹಾಗೂ ದಾವಣಗೆರೆ ಜಿಲ್ಲೆಯ 3 ತಾಲೂಕುಗಳು ಪ್ರಸ್ತುತ ವಿಧಾನ ಪರಿಷತ್ ಚುನಾವಣೆಯ ವ್ಯಾಪ್ತಿಯಲ್ಲಿದ್ದು, ಒಟ್ಟು 4129 ಮತದಾರರು ಇದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ 23 ಪುರಸಭೆ ಸದಸ್ಯರು ಹಾಗೂ 732 ಗ್ರಾಮ ಪಂಚಾಯತ್ ಸದಸ್ಯರು, ಹೊನ್ನಾಳಿ ತಾಲೂಕಿನ 18 ಪುರಸಭೆ ಹಾಗೂ 323 ಗ್ರಾ.ಪಂ. ಸದಸ್ಯರು, ನ್ಯಾಮತಿ ತಾಲೂಕಿನ 190 ಗ್ರಾ.ಪಂ ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಈ ಮೂರು ತಾಲೂಕುಗಳಲ್ಲಿ ಒಟ್ಟು 41 ಪುರಸಭೆ ಸದಸ್ಯರು ಹಾಗೂ 1245 ಗ್ರಾ.ಪಂ. ಸದಸ್ಯರು ಸೇರಿದಂತೆ 1286 ಮತದಾರರು ಇದ್ದಾರೆ.

ಶಿವಮೊಗ್ಗ ತಾಲೂಕಿನಲ್ಲಿ ಮಹಾನಗರ ಪಾಲಿಕೆಯ 35 ಸದಸ್ಯರು ಹಾಗೂ 456 ಗ್ರಾ.ಪಂ ಸದಸ್ಯರು, ಭದ್ರಾವತಿ ತಾಲೂಕಿನ ನಗರಸಭೆಯ 35 ಸದಸ್ಯರು, 441 ಗ್ರಾ.ಪಂ ಸದಸ್ಯರು, ಸಾಗರ ತಾಲೂಕಿನ 31 ನಗರ ಸಭೆ ಸದಸ್ಯರು, 11 ಪಟ್ಟಣ ಪಂಚಾಯತ್ ಸದಸ್ಯರು, 368 ಗ್ರಾ.ಪಂ ಸದಸ್ಯರಿದ್ದಾರೆ.

ಶಿಕಾರಿಪುರ ತಾಲೂಕಿನ 23 ಪುರಸಭೆ ಸದಸ್ಯರು, 17 ಪಟ್ಟಣ ಪಂಚಾಯತ್ ಸದಸ್ಯರು ಹಾಗೂ 453 ಗ್ರಾ.ಪಂ ಸದಸ್ಯರು, ತೀರ್ಥಹಳ್ಳಿ ತಾಲೂಕಿನ 15 ಪಟ್ಟಣ ಪಂಚಾಯತ್ ಸದಸ್ಯರು ಮತ್ತು 336 ಗ್ರಾಮ ಪಂಚಾಯತ್ ಸದಸ್ಯರು, ಸೊರಬ ತಾಲೂಕಿನ 12 ಪ.ಪಂ ಸದಸ್ಯರು ಮತ್ತು 304 ಗ್ರಾ.ಪಂ ಸದಸ್ಯರು ಹಾಗೂ ಹೊಸನಗರ ತಾಲೂಕಿನ 11 ಪ.ಪಂ ಸದಸ್ಯರು ಹಾಗೂ 295 ಗ್ರಾ.ಪಂ ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ 2653 ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ 2843 ಮತದಾರರು ಇದ್ದಾರೆ. ಒಟ್ಟಾರೆಯಾಗಿ ಚುನಾವಣೆಯಲ್ಲಿ ಗ್ರಾಮ ಪಂಚಾಯತ್‍ನ 3898 ಸದಸ್ಯರು ಸೇರಿದಂತೆ 4129 ಮತದಾರರು ಮತದಾನದ ಅವಕಾಶ ಹೊಂದಿದ್ದಾರೆ.

ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ, ಶಿವಮೊಗ್ಗ ಉಪವಿಭಾಗಾಧಿಕಾರಿ ಜಿ.ಪ್ರಕಾಶ್, ಸಾಗರ ಉಪವಿಭಾಗಾಧಿಕಾರಿ ನಾಗರಾಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

25 ಸ್ಥಾನಗಳ ಪರಿಷತ್ ಚುನಾವಣೆಗೆ ದಿನಾಂಕ ನಿಗದಿ
ಕರ್ನಾಟಕ ರಾಜ್ಯದ ವಿಧಾನ ಪರಿಷತ್‌ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಡಿ.10ರಂದು 25 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅದೇ ತಿಂಗಳ ಡಿ.14ರಂದು ಮತ ಎಣಿಕೆ ನಡೆಯಲಿದೆ.

* 25 ಪರಿಷತ್ ಸದಸ್ಯರ ಅಧಿಕಾರದ ಅವಧಿ ಮುಂದಿನ ಜನವರಿ 5ಕ್ಕೆ ಮುಕ್ತಾಯಗೊಳ್ಳಲಿದೆ.
* ಚುನಾವಣೆ ನವೆಂಬರ್ 16ಕ್ಕೆ ಅಧಿಸೂಚನೆ ಹೊರಡಿಸಲಾಗುವುದು.
* ನವೆಂಬರ್ 23ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ.
* ಡಿಸೆಂಬರ್ 10ರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ.
* ಡಿಸೆಂಬರ್ 14 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
* ಡಿಸೆಂಬರ್ 16ಕ್ಕೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಒಟ್ಟು 25 ವಿಧಾನ ಪರಿಷತ್‌ ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗಲಿದ್ದು, ಇದರಲ್ಲಿ ಕಾಂಗ್ರೆಸ್ 13, ಬಿಜೆಪಿ 6, ಪಕ್ಷೇತರ 1 (ಬಿಜೆಪಿ ಬೆಂಬಲಿತ) ಸ್ಥಾನಗಳಿವೆ.

ಬೀದರ್ 1, ಕಲಬುರಗಿ 1, ವಿಜಯಪುರ 2, ಬೆಳಗಾವಿ 2, ಉತ್ತರ ಕನ್ನಡ 1, ಧಾರವಾಡ 2, ರಾಯಚೂರು 1, ಬಳ್ಳಾರಿ 1, ಚಿತ್ರದುರ್ಗ 1, ಶಿವಮೊಗ್ಗ 1, ದಕ್ಷಿಣ ಕನ್ನಡ 2, ಚಿಕ್ಕಮಗಳೂರು 1, ಹಾಸನ 1, ತುಮಕೂರು 1, ಮಂಡ್ಯ 1, ಬೆಂಗಳೂರು 1, ಬೆಂಗಳೂರು ಗ್ರಾಮಾಂತರ 1, ಕೋಲಾರ 1, ಕೊಡಗು 1, ಮೈಸೂರು 2 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

English summary
The Code of Conduct will be applicable immediately on Karnataka MLC Election, Shivamogga DC KB Shivakumar Said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X