ಪಕ್ಷೇತರ ಅಭ್ಯರ್ಥಿ ಕೆ. ಎಸ್. ಈಶ್ವರಪ್ಪ ಮುಂದಿರುವ ಸವಾಲುಗಳು
ಶಿವಮೊಗ್ಗ, ಏಪ್ರಿಲ್ 23: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ಅಂತಿಮಗೊಂಡಿದೆ. ಮೇ 7ರಂದು ಮತದಾನ ನಡೆಯಲಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ. ಎದುರಾಳಿ ಕಾಂಗ್ರೆಸ್‌ನಿಂದ ಗೀತಾ ಶಿವರಾಜ್ ಕುಮಾರ್. ಪಕ್ಷೇತರ ಅಭ್ಯರ್ಥಿ ಕೆ. ಎಸ್. ಈಶ್ವರಪ್ಪ ಕಣದಲ್ಲಿ ಉಳಿಯುವ ಮೂಲಕ ಚುನಾವಣಾ ಕಣ ರಂಗೇರಿಸಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೆ. ಎಸ್. ಈಶ್ವರಪ್ಪ ಪುತ್ರ ಕಾಂತೇಶ್ ಕೈ ತಪ್ಪಿತ್ತು. ಇದರಿಂದ ಅಸಮಾಧಾನಗೊಂಡ ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯವ ಘೋಷಣೆ ಮಾಡಿದರು. ನಾಮಪತ್ರ ಸಲ್ಲಿಕೆ ಮಾಡಿ ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.

ಚುನಾವಣಾ ಆಯೋಗದಿಂದ ಕಬ್ಬಿನ ಜಲ್ಲೆ ಹೊಂದಿರುವ ರೈತನ ಗುರುತು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಕಾರಣ ಕೆ. ಎಸ್. ಈಶ್ವರಪ್ಪರನ್ನು ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ. ಶಿವಮೊಗ್ಗದಲ್ಲಿ ಈಶ್ವರಪ್ಪ ಹಾದಿ ಸುಲಭವಾಗಿ ಏನೂ ಇಲ್ಲ. ಅವರ ಮುಂದೆ ಸವಾಲುಗಳು ಇವೆ.
ಈಶ್ವರಪ್ಪ ಮುಂದಿರುವ ಸವಾಲುಗಳು: ಶಿವಮೊಗ್ಗ ಬಿಜೆಪಿ ಭದ್ರಕೋಟೆ. ಹಿಂದುತ್ವದ ಹೆಸರಿನಲ್ಲಿ ಚುನಾವಣೆಗೆ ನಿಂತಿರುವ ಈಶ್ವರಪ್ಪ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮತ್ತು ಹಾಲಿ ಸಂಸದ ಬಿ. ವೈ. ರಾಘವೇಂದ್ರ ಎದುರು ಹಾಕಿಕೊಂಡಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ, ಯಡಿಯೂರಪ್ಪ ಕುಟುಂಬ, ಬಿಜೆಪಿ ಎದುರು ಹಾಕಿಕೊಂಡು ಗೆಲ್ಲುವುದು ಸುಲಭದ ಮಾತಲ್ಲ. 2019ರಲ್ಲಿ ಬಿ. ವೈ. ರಾಘವೇಂದ್ರ 2,23,360 ಮತಗಳ ಅಂತರದಿಂದ ಗೆದ್ದಿದ್ದಾರೆ. ರಾಘವೇಂದ್ರ ಸೋಲಿಸುತ್ತೇನೆ ಎಂದು ಹೇಳುವ ಈಶ್ವರಪ್ಪ ಯಾವ ಸಮುದಾಯದ ಬೆಂಬಲ ಪಡೆಯಲಿದ್ದಾರೆ? ಎಂಬುದು ಎಲ್ಲರ ಪ್ರಶ್ನೆಯಾಗಿದೆ.
ಈಶ್ವರಪ್ಪ ಶಿವಮೊಗ್ಗ ನಗರದ ಶಾಸಕರಾಗಿದ್ದವರು. ಶಿವಮೊಗ್ಗ ಗ್ರಾಮಾಂತರದಲ್ಲಿಯೂ ಪ್ರಭಾವ ಹೊಂದಿದ್ದಾರೆ. ಆದರೆ ಭದ್ರಾವತಿ, ಶಿಕಾರಿಪುರ, ಸೊರಬ, ತೀರ್ಥಹಳ್ಳಿ, ಬೈಂದೂರು ಮತ್ತು ಸಾಗರದಲ್ಲಿ ಈಶ್ವರಪ್ಪಗೆ ಯಾರು ಬೆಂಬಲ ನೀಡುತ್ತಾರೆ? ಎಂಬುದು ಅವರ ಮುಂದಿರುವ ಪ್ರಮುಖ ಸವಾಲು.
ಚುನಾವಣೆಯಲ್ಲಿ ಈಶ್ವರಪ್ಪ ಕುರುಬ ಸಮುದಾಯದ ಬೆಂಬಲ ಪಡೆದರೆ ಅದು ಕಾಂಗ್ರೆಸ್‌ಗೆ ಹೊಡೆತ ನೀಡಲಿದೆ. ಈಡಿಗ ಸಮುದಾಯ ಈಶ್ವರಪ್ಪರನ್ನು ಬೆಂಬಲಿಸದೇ ಕಾಂಗ್ರೆಸ್‌ನ ಗೀತಾ ಶಿವರಾಜ್‌ಕುಮಾರ್ ಬೆಂಬಲಿಸಬಹುದು. ಬ್ರಾಹ್ಮಣರು ನರೇಂದ್ರ ಮೋದಿ, ಬಿಜೆಪಿ ಬಿಟ್ಟು ಈಶ್ವರಪ್ಪ ಬೆಂಬಲಿಸುತ್ತಾರೆಯೇ?, ಇದಕ್ಕೆ ಈಶ್ವರಪ್ಪ ತಂತ್ರವೇನು?.
ಕೆ. ಎಸ್. ಈಶ್ವರಪ್ಪ ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದಾರೆ. ಪಕ್ಷೇತರ ಅಭ್ಯರ್ಥಿಯಾದ ಅವರಿಗೆ ಶಾಸಕರ ಬೆಂಬಲ ಸಹ ಇಲ್ಲ. ಶಿವಮೊಗ್ಗ ಲೋಕಸಭಾ ವ್ಯಾಪ್ತಿಗೆ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರವೂ ಸೇರುತ್ತದೆ.
ಕ್ಷೇತ್ರದಲ್ಲಿ ಶಿವಮೊಗ್ಗ ನಗರ (ಬಿಜೆಪಿ), ಶಿವಮೊಗ್ಗ ಗ್ರಾಮಾಂತರ (ಜೆಡಿಎಸ್), ಭದ್ರಾವತಿ (ಕಾಂಗ್ರೆಸ್), ಸೊರಬ (ಕಾಂಗ್ರೆಸ್), ಸಾಗರ (ಕಾಂಗ್ರೆಸ್), ತೀರ್ಥಹಳ್ಳಿ (ಬಿಜೆಪಿ), ಶಿಕಾರಿಪುರ (ಬಿಜೆಪಿ), ಬೈಂದೂರು (ಬಿಜೆಪಿ) ಶಾಸಕರು ಇದ್ದಾರೆ. ಶಾಸಕರ ಬೆಂಬಲ ಪಡೆಯುವುದು ಈಶ್ವರಪ್ಪ ಮುಂದಿನ ಬಹುದೊಡ್ಡ ಸವಾಲು.
ಕೆ. ಎಸ್. ಈಶ್ವರಪ್ಪ ಸಂಘ ಪರಿವಾರದ ಮೂಲಕ ಬಂದವರು. ಬಿಜೆಪಿಯ ಮೂಲಕವೇ ರಾಜಕೀಯ ಮಾಡಿಕೊಂಡು ಬಂದವರು. ಬಿ. ಎಸ್. ಯಡಿಯೂರಪ್ಪ ಕೆಜೆಪಿ ಕಟ್ಟಿದಾಗಲೂ ಸಹ ಅವರ ಜೊತೆ ಹೋಗದೆ ಬಿಜೆಪಿಯಲ್ಲೇ ಉಳಿದವರು. ಆದರೆ ಈಗ ಪಕ್ಷದಿಂದ ಉಚ್ಚಾಟನೆಗೊಂಡಿದ್ದಾರೆ.
ಈಗ ಯಡಿಯೂರಪ್ಪ ಮತ್ತು ಅವರ ಮಕ್ಕಳು ಬಿಜೆಪಿ ನಾಯಕರ ವಿರುದ್ಧ ಟೀಕೆಗಳನ್ನು ಮಾಡುತ್ತಾ ಈಶ್ವರಪ್ಪ ಚುನಾವಣಾ ಪ್ರಚಾರವನ್ನು ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಫೋಟೋವನ್ನು ಇಟ್ಟುಕೊಂಡು ಮತವನ್ನು ಕೇಳುತ್ತಿದ್ದಾರೆ. ಈಗ ಸಂಘ ಪರಿವಾರದ ಬೆಂಬಲ ಪಡೆಯುವುದು ಅವರಿಗೆ ಸವಾಲಾಗಿದೆ.












Click it and Unblock the Notifications