ಪಟ್ಟು ಬಿಡದೆ ನಾಮಪತ್ರ ಸಲ್ಲಿಸಿದ ಕೆಎಸ್ ಈಶ್ವರಪ್ಪಗೆ ಏಪ್ರಿಲ್ 22 ಡೆಡ್ ಲೈನ್!
ಶಿವಮೊಗ್ಗ, ಏಪ್ರಿಲ್. 20: ಶಿವಮೊಗ್ಗ ಲೋಕಸಭಾ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಏಪ್ರಿಲ್ 19 ರಂದು ಒಟ್ಟು 14 ನಾಮಪತ್ರಗಳು ಸಲ್ಲಿಕೆ ಆಗಿವೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್‍ಕುಮಾರ್, ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದ ಅಭ್ಯರ್ಥಿ ಚಂದ್ರಶೇಖರ್ ಹೆಚ್ ಸಿ ನಾಮಪತ್ರ ಸಲ್ಲಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾಗಿ ಕೆ.ಎಸ್.ಈಶ್ವರಪ್ಪ, ಡಿ.ಎಸ್.ಈಶ್ವರಪ್ಪ, ಪಿ.ಶ್ರೀಪತಿ, ಎಸ್.ಬಾಲಕೃಷ್ಣ ಭಟ್, ರವಿಕುಮಾರ್ ಎನ್, ಪೂಜಾ ಅಣ್ಣಯ್ಯ, ಇಂತಿಯಾಜ್ ಎ.ಅತ್ತಾರ್, ಸಂದೇಶ್ ಶೆಟ್ಟಿ ಎ, ಬಂಡಿ ರಂಗನಾಥ ವೈ.ಆರ್, ಶೇಖರಪ್ಪ ಹೆಚ್, ಹನುಮಂತಪ್ಪ, ಜಿ.ಜಯದೇವ ಸೇರಿದಂತೆ ಒಟ್ಟು 14 ನಾಮಪತ್ರಗಳ ಸಲ್ಲಿಕೆಯಾಗಿದೆ.

ಶಿವಮೊಗ್ಗದಲ್ಲಿ ಒಟ್ಟು 38 ನಾಮಪತ್ರ ಸಲ್ಲಿಕೆ
ಶಿವಮೊಗ್ಗ ಲೋಕಸಭಾ ಮತಕ್ಷೇತ್ರದಲ್ಲಿ ಏಪ್ರಿಲ್ 18 ರಂದು ಒಟ್ಟು 05 ನಾಮಪತ್ರಗಳು ಸಲ್ಲಿಕೆ ಆಗಿವೆ. ಬಿಜೆಪಿ ಪಕ್ಷದಿಂದ ಬಿ.ವೈ.ರಾಘವೇಂದ್ರ ಎರಡು ನಾಮಪತ್ರಗಳು, ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದಿಂದ ಚಂದ್ರಶೇಖರ್ ಹೆಚ್.ಸಿ, ಪಕ್ಷೇತರ ಅಭ್ಯರ್ಥಿಗಳಾಗಿ ಶಿವರುದ್ರಯ್ಯ ಸ್ವಾಮಿ ಹಾಗೂ ಹೆಚ್ ಸುರೇಶ್ ಪೂಜಾರಿ ಸೇರಿದಂತೆ ಇಂದು ಒಟ್ಟು ಐದು ನಾಮಪತ್ರಗಳ ಸಲ್ಲಿಕೆಯಾಗಿದೆ.
ಏಪ್ರಿಲ್ 12 ರಿಂದ ಏಪ್ರಿಲ್ 19 ರ ವರೆಗೆ ಒಟ್ಟು 27 ಅಭ್ಯರ್ಥಿಗಳಿಂದ 38 ನಾಮಪತ್ರಗಳ ಸಲ್ಲಿಕೆಯಾಗಿದೆ. ಏಪ್ರಿಲ್ 20 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 22 ರಂದು ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದ್ದು ಮೇ 7 ರಂದು ಮತದಾನ ನಡೆಯಲಿದೆ.

ಕೆಎಸ್ ಈಶ್ವರಪ್ಪಗೆ ಏಪ್ರಿಲ್ 22 ಡೆಡ್ ಲೈನ್!
ತಮ್ಮ ಮಗ ಕಾಂತೇಶ್‌ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಕ್ಕಿಲ್ಲ ಎಂದು ಬಂಡಾಯ ಎದ್ದಿರುವ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಈ ಬಾರಿ ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದಾರೆ. ಇದು ಕ್ಷೇತ್ರದ ಬಗ್ಗೆ ಭಾರೀ ಕುತೂಹಲ ಕೆರಳುವಂತೆ ಮಾಡಿದೆ.
ಕೆ ಎಸ್ ಈಶ್ವರಪ್ಪ ಅವರನ್ನು ಮನವೊಲಿಸಲು ನಡೆದ ಎಲ್ಲ ಆಪ್ರಯತ್ನಗಳು ಮುಗಿದಿವೆ. ಹೀಗಾಗಿ ಈಗ ನೇರಾನೇರ ವಾಗ್ದಾಳಿಗಳ ಮೂಲಕ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದರ ಜತೆಗೆ ಏಪ್ರಿಲ್ 22 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಅಲ್ಲಿಯವರೆಗೆ ತಮ್ಮ ನಿರ್ಧಾರ ಬದಲಿಸುವಂತೆ ಬಿಜೆಪಿ ಹಿರಿಯ ನಾಯಕನಿಗೆ ಡೆಡ್‌ಲೈನ್ ಕೊಟ್ಟಿದೆ.












Click it and Unblock the Notifications