ಭದ್ರಾ ಡ್ಯಾಂನಿಂದ ನದಿಗೆ ನೀರು ಬೇಡ, ಸಿಎಂಗೆ ಪತ್ರ
ಶಿವಮೊಗ್ಗ, ಏಪ್ರಿಲ್ 22: ರಾಜ್ಯದಲ್ಲಿ ಬೇಸಿಗೆಯ ತಾಪದಿಂದ ಕುಡಿಯುವ ನೀರಿನ ತೊಂದರೆ ಉಂಟಾಗಿದೆ. ಡ್ಯಾಂಗಳಲ್ಲಿ ಸಂಗ್ರಹ ಇರುವ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಬೇಕು ಎಂದು ತೀರ್ಮಾನಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಸುರಿದ ಮಳೆ ಸ್ವಲ್ಪ ಸಮಾಧಾನ ತಂದರೂ ಸಹ ಕುಡಿಯುವ ನೀರಿನ ತೊಂದರೆ ಬಗೆಹರಿದಿಲ್ಲ.
ಲಕ್ಕವಳ್ಳಿಯಲ್ಲಿರುವ ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಬಾರದು ಎಂದು ಮುಖ್ಯಮಂತ್ರಿಗಳಿಗೆ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ ಮಾಡಲಾಗಿದೆ. ಈಗಾಗಲೇ ಗದಗ, ಹಾವೇರಿ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಭದ್ರಾ ಡ್ಯಾಂನಿಂದ ನದಿಗೆ ನೀರು ಹರಿಸಲಾಗಿದೆ.

ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹೆಚ್. ಆರ್. ಬಸವರಾಜಪ್ಪ ನೇತೃತ್ವದ ನಿಯೋಗ ಶಿವಮೊಗ್ಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಕೆ ಮಾಡಿದ್ದು, ಭದ್ರಾ ಡ್ಯಾಂ ನೀರನ್ನು ನದಿಗೆ ಹರಿಸಬಾರದು ಎಂದು ಮನವಿ ಮಾಡಿದೆ.
ಮನವಿ ಮಾಡಿರುವುದು ಏಕೆ?; ಲಕ್ಕವಳ್ಳಿಯಲ್ಲಿರುವ ಭದ್ರಾ ಡ್ಯಾಂ 2023ರ ಮುಂಗಾರು ಅವಧಿಯಲ್ಲಿ ಮಳೆಯ ಕೊರೆತೆ ಕಾರಣ ಭರ್ತಿಯಾಗಿಲ್ಲ. ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳು ಮಾತ್ರವಲ್ಲದೇ ಗದಗ, ಹಾವೇರಿ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಸಹ ಭದ್ರಾ ನದಿ ನೀರು ಆಧಾರವಾಗಿದೆ.
ಭದ್ರಾ ಡ್ಯಾಂನಲ್ಲಿ ಪ್ರಸ್ತುತ ಸುಮಾರು 17.5 ಟಿಎಂಸಿ ನೀರಿನ ಸಂಗ್ರಹವಿದೆ. ಇದರಲ್ಲಿ 13 ಟಿಎಂಸಿ ಡೆಡ್ ಸ್ಟೋರೇಜ್, ಇದನ್ನು ಬಳಕೆ ಮಾಡಲು ಬರುವುದಿಲ್ಲ. ಇನ್ನೂ ಜೂನ್ ತನಕ ಕುಡಿಯುವ ನೀರಿಗಾಗಿ 1.5 ಟಿಎಂಸಿ ನೀರನ್ನು ಹರಿಸಬೇಕಿದೆ.
ಬಾಕಿ ಉಳಿಯುವ 3 ಟಿಎಂಸಿ ನೀರನ್ನು ನಾಲೆಯ ಮೂಲಕ ಅಡಿಕೆ ಮತ್ತು ತೆಂಗು ಬೆಳೆಗಳನ್ನು ಉಳಿಸಲು ಹರಿಸಬೇಕು ಎಂದು ರೈತ ಸಂಘ ಮತ್ತು ಹಸಿರು ಸೇನೆ ಮುಖ್ಯಮಂತ್ರಿಗಳಿಗೆ ಮಾಡಿದ ಮನವಿಯಲ್ಲಿ ಉಲ್ಲೇಖ ಮಾಡಿದೆ.
ಈಗಾಗಲೇ ಭದ್ರಾ ಡ್ಯಾಂನಿಂದ ಮಾರ್ಚ್ 29ರಿಂದ ಏಪ್ರಿಲ್ 6ರ ತನಕ 10 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ. ಕರ್ನಾಟಕ ನೀರಾವರಿ ನಿಗಮದ ಸೂಚನೆಯಂತೆ ಬರಗಾಲದ ಹಿನ್ನಲೆಯಲ್ಲಿ ತುಂಗಭದ್ರಾ ನದಿ ಪಾತ್ರದ ಗ್ರಾಮ-ಪಟ್ಟಣಗಳಲ್ಲಿ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ನೀರು ಹರಿಸಲಾಗಿದೆ.
ಪ್ರಸ್ತುತ ಗದಗ ಮತ್ತು ಬೆಟಗೇರಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಭದ್ರಾ ನದಿಗೆ ನೀರು ಹರಿಸಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್. ಕೆ. ಪಾಟೀಲ್ ನೀರಾವರಿ ಇಲಾಖೆಗೆ ಪತ್ರವನ್ನು ಬರೆದಿದ್ದಾರೆ.
ಆದ್ದರಿಂದ ರೈತ ಸಂಘ ಮತ್ತು ಹಸಿರು ಸೇನೆ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದು ನದಿಗೆ ನೀರು ಹರಿಸಬಾರದು ಎಂದು ಮನವಿ ಸಲ್ಲಿಕೆ ಮಾಡಿದೆ. ಈ ಮೊದಲು ಒಮ್ಮೆ ನೀರು ಹರಿಸಿದರೆ ಮೂರು ತಿಂಗಳು ಬಳಕೆ ಮಾಡುತ್ತಿದ್ದರು. ಈಗಾಗಲೇ ನದಿಗೆ ನೀರು ಹರಿಸಲಾಗಿದೆ. ಮತ್ತೆ ಹರಿಸಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಭದ್ರಾ ಡ್ಯಾಂನಿಂದ ಈಗಾಗಲೇ ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರ ಮತ್ತು ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಕೆ ಮಾಡಲು ಅನುಕೂಲವಾಗುವಂತೆ ಭದ್ರಾ ನದಿಗೆ ನೀರು ಹರಿಸಲಾಗಿತ್ತು.
ನದಿಯಲ್ಲಿ ನೀರು ಕಡಿಮೆಯಾದ ಕಾರಣ ರಾಣೆಬೆನ್ನೂರು ನಗರಕ್ಕೆ ಮತ್ತು ಗ್ರಾಮಗಳಿಗೆ ಕುಡಿಯುವ ನೀರಿನ ಪೂರೈಕೆಯು ಸ್ಥಗಿತಗೊಳ್ಳುವ ಪರಿಸ್ಥಿತಿ ಉಂಟಾಗಿತ್ತು. ಆದ್ದರಿಂದ ತುಂಗಭದ್ರಾ ನದಿ ನೀರನ್ನು ಅವಲಂಬಿಸಿರುವ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರನ್ನು ಪೂರೈಸಲು ಅನುಕೂಲವಾಗುವಂತೆ ನದಿಗೆ ನೀರು ಬಿಡಲಾಗಿತ್ತು.












Click it and Unblock the Notifications