ಬೆಂಗಳೂರಿನಲ್ಲಿ ಒಬ್ಬಂಟಿ ಯುವತಿ ಇದ್ದ ಮನೆಗೆ ನುಗ್ಗಿ ಪ್ಯಾಂಟ್ ಬಿಚ್ಚಿದ ಫ್ಲಿಪ್‌ಕಾರ್ಟ್ ಡೆಲಿವರಿ ಬಾಯ್, ವಿಡಿಯೋ ವೈರಲ್
ಬೆಂಗಳೂರು, ಜುಲೈ 12: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದಲ್ಲ ಒಂದು ವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಲಿರುತ್ತವೆ. ಆದರೆ ಇದೀಗ ಫ್ಲಿಪ್ ಕಾರ್ಟ್ ಸಂಸ್ಥೆಯ ಡೆಲಿವರಿ ಬಾಯ್ ಒಬ್ಬ ಯುವತಿಯೊಬ್ಬಳಿಗೆ ಕಿರುಕುಳ ನೀಡಿದ ಆಘಾತಕಾರಿ ಘಟನೆ ನಗರದ ಫ್ಲ್ಯಾಟ್‌ವೊಂದಲ್ಲಿ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಆಕ್ರೋಶಗಳು ಭುಗಿಲೆದ್ದಿವೆ. ಅಷ್ಟಕ್ಕೂ ಆಗಿದ್ದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಂಗಳೂರಿನಲ್ಲಿ ಆನ್‌ಲೈನ್ ಡೆಲಿವರಿ ಬಾಯ್ ಒಬ್ಬನಿಂದ ಯುವತಿಯೊಬ್ಬಳಿಗೆ ಕಿರುಕುಳ ನಡೆದಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಕುರಿತು ಸಂತ್ರಸ್ತ ಯುವತಿ ವಿಡಿಯೋ ಮಾಡಿ ತನಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮನೆಯೊಳಗೆ ನುಗ್ಗಿದ ಕಾರ್ಟ್ ಡೆಲಿವರಿ ಬಾಯ್
ಬೆಂಗಳೂರಿನ ಫ್ಲ್ಯಾಟ್‌ವೊಂದಲ್ಲಿ ವಾಸವಿರುವ ಯುವತಿಗೆ ಪಾರ್ಸೆಲ್ ನೀಡಲು ಫ್ಲಿಪ್ ಕಾರ್ಟ್ ಸಂಸ್ಥೆಯ ಡೆಲಿವರಿ ಬಾಯ್ ಬಂದಿದ್ದ. ಪಾರ್ಸೆಲ್ ತಲುಪಿಸಿದ ನಂತರ ಆತ ತುರ್ತಾಗಿ ತನಗೆ ಶೌಚಾಲಯ ಬಳಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾನೆ. ಆದರೆ ಯುವತಿ ಅದಕ್ಕೆ ಸ್ಪಷ್ಟವಾಗಿ ಆಗುವುದಿಲ್ಲ ನಿರಾಕರಿಸಿದ್ದಾರೆ.
ಯುವತಿಯ ನಿರಾಕರಣೆಯ ಹೊರತಾಗಿಯೂ ಆ ಡೆಲಿವರಿ ಬಾಯ್ ಬಲವಂತವಾಗಿ ಫ್ಲ್ಯಾಟ್‌ನೊಳಗೆ ನುಗ್ಗಿದ್ದಾನೆ. ಅಷ್ಟಕ್ಕೇ ಸುಮ್ಮನಾಗದೆ ಶೌಚಾಲಯ ಬಳಸಿ ಹೊರಬಂದ ನಂತರ ಯುವತಿಯ ಮುಂದೆ ಅಸಭ್ಯವಾಗಿ ನಡೆದುಕೊಂಡು ತನ್ನ ಖಾಸಗಿ ಅಂಗಗಳನ್ನು ಪ್ರದರ್ಶಿಸಿದ್ದಾನೆ. ಈ ವರ್ತನೆಯಿಂದ ಆಘಾತಕ್ಕೆ ಒಳಗಾದ ಯುವತಿ ಭಯಪಡದೇ ತಕ್ಷಣ ತನ್ನ ಮೊಬೈಲ್ ಕ್ಯಾಮೆರಾವನ್ನು ಆನ್ ಮಾಡಿ ಆತನ ಕೃತ್ಯವನ್ನು ರೆಕಾರ್ಡ್ ಮಾಡಲು ಮುಂದಾಗಿದ್ದಾರೆ. ಆಗ ಅವನು ಅಲ್ಲಿಂದ ಕಳ್ಳನಂತೆ ಕಾಲ್ಕಿತ್ತಿರುವ ದೃಶ್ಯ ಸೆರೆಯಾಗಿದೆ.
ವಿಡಿಯೋದಲ್ಲಿ ಏನಿದೆ? ಯುವತಿ ಹೇಳಿದ್ದೇನು?
ಯುವತಿ ಮೊಬೈಲ್ ಕ್ಯಾಮೆರಾದಲ್ಲಿ ಆತನನ್ನು ಪ್ರಶ್ನಿಸುತ್ತಾ, 'ನೀನು ನನ್ನ ಬಗ್ಗೆ ಏನು ಅಂದುಕೊಂಡಿದ್ದೀಯಾ? ನಾನು ನಿನಗೆ ಒಳಗೆ ಬರಲು ಅನುಮತಿ ನೀಡಿರಲಿಲ್ಲ. ಆದರೂ ನೀನು ಈ ರೀತಿ ಮಾಡಿದ್ದೀಯಾ? ನಿನ್ನ ವಿರುದ್ಧ ನಾನು ಪೊಲೀಸ್ ದೂರು ನೀಡುತ್ತೇನೆ,' ಎಂದು ಜೋರಾಗಿ ಚೀರಾಡುತ್ತಾ ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಯುವತಿ ವಿಡಿಯೋ ಮಾಡುತ್ತಿರುವುದನ್ನು ಕಂಡು ಹೆದರಿದ ಡೆಲಿವರಿ ಬಾಯ್ ಕ್ಷಮೆ ಕೇಳುತ್ತಾ ಅಲ್ಲಿಂದ ಕಳ್ಳನಂತೆ ಓಡಿಹೋಗಿರುವ ಘಟನೆ ನಡೆದಿದೆ.
ಅಳಲು ತೋಡಿಕೊಂಡ ಯುವತಿ
ವಿಡಿಯೋದ ಮುಂದಿನ ಭಾಗದಲ್ಲಿ ಯುವತಿ ತನಗಾದ ಮಾನಸಿಕ ಆಘಾತವನ್ನು ನೆನೆದು ಕಣ್ಣೀರಿಟ್ಟಿದ್ದಾರೆ. 'ನಾನು ಮನೆಯಲ್ಲಿ ಒಬ್ಬಳೇ ಇರುತ್ತೇನೆ, ನನ್ನ ಸುರಕ್ಷತೆಯ ದೃಷ್ಟಿಯಿಂದ ನಾನು ಯಾರನ್ನೂ ಮನೆಗೆ ಸೇರಿಸುವುದಿಲ್ಲ. ಆತ ತುಂಬಾ ಬಲವಂತ ಮಾಡಿದಾಗ ಶೌಚಾಲಯಕ್ಕೆ ಹೋಗಲು ಬಿಟ್ಟೆ. ಆದರೆ ಅವನು ಇಂತಹ ನೀಚ ಕೃತ್ಯ ಎಸಗುತ್ತಾನೆ ಎಂದು ಭಾವಿಸಿರಲಿಲ್ಲ,' ಎಂದು ಅಳಲು ತೋಡಿಕೊಂಡಿದ್ದಾರೆ.
ಮುಂದುವರೆದು ಮಾತನಾಡಿರುವ ಅವರು 'ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚುತ್ತಿವೆ. ಅದಕ್ಕಾಗಿಯೇ ನಾನು ಮುಜಾಗ್ರತಾ ಕ್ರಮವಾಗಿ ಮೊಬೈಲ್ ಕ್ಯಾಮೆರಾ ಆನ್ ಮಾಡಿಕೊಂಡೆ. ಹೆಣ್ಣುಮಕ್ಕಳು ತಮ್ಮ ಸ್ವಂತ ಮನೆಯಲ್ಲೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದರೆ ನಾವು ಇನ್ನೆಲ್ಲಿಗೆ ಹೋಗಬೇಕು?,' ಎಂದು ತೀವ್ರ ಕಣ್ಣೀರಿಡುತ್ತಾ ಆತಂಕ ವ್ಯಕ್ತಪಡಿಸಿದ್ದಾರೆ.
A disturbing incident occurred in which a @Flipkart delivery boy forced his way into a woman's washroom and then showed his private parts to her.
— Sree Harsha (@AapathBandhava) July 11, 2026
What the heck? Women aren't even safe in their own homes.
Strict action needed. pic.twitter.com/NVRDIvnEbd
ಅಲ್ಲದೆ 'ಇಂತಹ ಆನ್‌ಲೈನ್ ಡೆಲಿವರಿ ಕಂಪನಿಗಳು ತಮ್ಮ ಸಿಬ್ಬಂದಿಯನ್ನು ಕೆಲಸಕ್ಕೆ ತೆಗೆದುಕೊಳ್ಳುವ ಮುನ್ನ ಅವರ ಹಿನ್ನೆಲೆಯನ್ನು ಸರಿಯಾಗಿ ಪರಿಶೀಲಿಸುವುದಿಲ್ಲವೇ,' ಅಂತಲೂ ಯುವತಿ ಪ್ರಶ್ನಿಸಿದ್ದಾರೆ. ಇನ್ನೂ ಈ ಘಟನೆ ನಗರದಲ್ಲಿ ಎಲ್ಲಿ ನಡೆದಿದೆ ಎನ್ನುವ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ದೃಶ್ಯವು ಒಂಟಿಯಾಗಿ ವಾಸಿಸುವ ಮಹಿಳೆಯರಲ್ಲಿ ಆತಂಕ ಮೂಡಿಸಿದೆ. ಮತ್ತೊಂದೆಡೆ ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಅದರಲ್ಲೂ ಒಂಟಿಯಾಗಿ ವಾಸ ಮಾಡುವಂತಹವರು ಅಪರಿಚಿತರನ್ನು ಮನೆಯ ಒಳಗಡೆ ಸೇರಿಸುವುದಿಲ್ಲ. ಆದರೆ ಇವರು ಹೇಗೆ ಅವನಿಗೆ ಒಳಗಡೆ ಬರಲು ಅನುಮತಿ ನೀಡಿದರು ಎನ್ನುವ ಪ್ರಶ್ನೆಗಳು ಕೂಡ ಎದ್ದಿವೆ.


Click it and Unblock the Notifications
