S.Janaki: ಸರ್ಕಾರಿ ಗೌರವಗಳೊಂದಿಗೆ 'ಗಾನಕೋಗಿಲೆ' ಎಸ್‌.ಜಾನಕಿ ಅಂತ್ಯಸಂಸ್ಕಾರ: ರಾಜ್ಯ ಸರ್ಕಾರ ಆದೇಶ

S.Janaki: ಖ್ಯಾತ ಹಿರಿಯ ಗಾಯಕಿ, ಗಾನಕೋಗಿಲೆ ಅಂತಲೇ ಪ್ರಸಿದ್ಧರಾದ ಎಸ್‌.ಜಾನಕಿ (88 ವರ್ಷ) ಅವರು ಶನಿವಾರ (ಜುಲೈ 11) ಸಂಜೆ ಮೈಸೂರಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇನ್ನೂ ಅವರ ಅಂತ್ಯಸಂಸ್ಕಾರವು ಭಾನುವಾರ (ಜುಲೈ 12) ಸಂಜೆ ಮೈಸೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ ಎಂದು ತಿಳಿದುಬಂದಿದೆ.

ಈ ಖ್ಯಾತ ಗಾಯಕಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಭಾನುವಾರ ಸಂಜೆ ಮೈಸೂರು ತಾಲೂಕಿನ ಕಣಯನಹುಂಡಿ ಗ್ರಾಮದಲ್ಲಿ ಜರುಗಲಿದೆ. ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಮೈಸೂರು ತಾಲೂಕಿನ ಕಣಯನಹುಂಡಿ ಗ್ರಾಮದಲ್ಲಿ ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆಯಲಿವೆ ಎಂದು ತಿಳಿದುಬಂದಿದೆ.

Singer S Janaki Passes Away State Honours Funeral in Mysuru Musical Journey of 48 000 Songs

ಎಸ್.ಜಾನಕಿ ಅವರ ಕುಟುಂಬಸ್ಥರಿಗೆ ಸಿಎಂ ಸಾಂತ್ವನ

ಮೈಸೂರಿನಲ್ಲಿ ನಿಧನರಾಗಿರುವ ಗಾನ ಕೋಗಿಲೆ ಎಸ್.ಜಾನಕಿ ಅವರ ಕುಟುಂಬ ಸದಸ್ಯರಿಗೆ ಸಿಎಂ ಡಿ.ಕೆ.ಶಿವಕುಮಾರ್ ಅವರು ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದರು. ಇನ್ನೂ ಗಾನಕೋಗಿಲೆ ಎಸ್. ಜಾನಕಿ ಅವರ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಅವರು ಮುಖ್ಯಮಂತ್ರಿಗಳು ಸೂಚನೆ ನೀಡಿದರು. ಸರ್ಕಾರದ ಪರವಾಗಿ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ನಿಯೋಜಿಸಲಾಗಿದೆ.

ಖ್ಯಾತ ಗಾಯಕಿ ಎಸ್.ಜಾನಕಿ ಅವರ ಸಾಧನೆಯ ವಿವರ

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಗ್ರಾಮದಲ್ಲಿ 1938ರ ಏಪ್ರಿಲ್ 23ರಂದು ಜನಿಸಿದ ಎಸ್‌.ಜಾನಕಿ ಅವರು, ಕೇವಲ ಮೂರನೇ ವಯಸ್ಸಿನಲ್ಲೇ ಸಂಗೀತ ಕ್ಷೇತ್ರದ ಕಡೆಗೆ ಹೆಜ್ಜೆ ಇರಿಸಿದ್ದರು. 20ನೇ ವಯಸ್ಸಿನಲ್ಲಿ ಚೆನ್ನೈನ ಎಂ.ಎಸ್. ಸ್ಟುಡಿಯೋದಲ್ಲಿ ಸಂಗೀತ ನಿರ್ದೇಶಕ ಆರ್.ಸುದರ್ಶನಂ ಅವರ ಮಾರ್ಗದರ್ಶನದಲ್ಲಿ ಗಾಯಕಿಯಾಗಿ ವೃತ್ತಿಜೀವನ ಆರಂಭಿಸಿದರು. 1957ರಲ್ಲಿ ತಮಿಳಿನ ವಿಧಿಲೋನ್ ವಿಲಾಯಾಟ್ಟು ಚಿತ್ರದ ಮೂಲಕ ಹಿನ್ನೆಲೆ ಗಾಯನಕ್ಕೆ ಎಂಟ್ರಿ ಕೊಟ್ಟರು. ಅದೇ ವರ್ಷ ಆರು ಭಾಷೆಗಳಲ್ಲಿ ಧ್ವನಿಯಾಗುವ ಮೂಲಕ ಅಂದಿನ ಕಾಲಕ್ಕೆ ಅಪರೂಪದ ಸಾಧನೆ ಮಾಡಿದ್ದರು.

ಕನ್ನಡ ಚಿತ್ರರಂಗದೊಂದಿಗೆ ಜಾನಕಿ ಅವರಿಗೆ ಅವಿನಾಭಾವ ನಂಟಿದೆ. 1957ರಲ್ಲಿಯೇ ಮೊದಲ ಬಾರಿಗೆ ಕನ್ನಡದಲ್ಲಿ ಹಾಡಿದ ಅವರು, 1970 ಮತ್ತು 80ರ ದಶಕದಲ್ಲಿ ಕನ್ನಡ ಚಿತ್ರರಂಗದ ನಂಬರ್ ಒನ್ ಗಾಯಕಿಯಾಗಿ ಮುಂಚೂಣಿಯಲ್ಲಿದ್ದರು. ಜಿ.ಕೆ.ವೆಂಕಟೇಶ್, ರಾಜನ್-ನಾಗೇಂದ್ರ, ಹಂಸಲೇಖ ಸೇರಿದಂತೆ ಕನ್ನಡದ ಪ್ರಸಿದ್ಧ ಸಂಗೀತ ನಿರ್ದೇಶಕರೆಲ್ಲರೂ ತಮ್ಮ ಅತ್ಯುತ್ತಮ ಸಂಯೋಜನೆಗಳನ್ನು ಇವರಿಗಾಗಿಯೇ ಮೀಸಲಿಡುತ್ತಿದ್ದರು.

ವರನಟ ಡಾ.ರಾಜ್‌ಕುಮಾರ್ ಅವರೊಂದಿಗೆ ಅತಿ ಹೆಚ್ಚು ಹಾಡುಗಳನ್ನು ಹಾಡಿದ ಹೆಗ್ಗಳಿಕೆ ಇವರದ್ದಾಗಿದೆ. 'ಮಹಿಷಾಸುರ ಮರ್ದಿನಿ' ಚಿತ್ರದ 'ತುಂಬಿತು ಮನವಾ', 'ಯುಗ ಯುಗಾದಿ ಕಳೆದರೂ', 'ನೋಡು ಬಾ ನೋಡು ಬಾ ನಮ್ಮೂರ', 'ಯಾವ ಜನ್ಮದ ಮೈತ್ರಿ' ಸೇರಿದಂತೆ ಇವರು ಹಾಡಿದ ನೂರಾರು ಗೀತೆಗಳು ಇಂದಿಗೂ ಕನ್ನಡಿಗರ ಮನದಲ್ಲಿ ನೆನಪಾಗಿ ಉಳಿದಿವೆ.

ಸಣ್ಣ ಮಗುವಿನ ಸ್ವರದಿಂದ ಹಿಡಿದು ಭಕ್ತಿಗೀತೆಗಳವರೆಗೆ ಎಲ್ಲ ಬಗೆಯ ಭಾವನೆಗಳನ್ನು ಸುಲಭವಾಗಿ ವ್ಯಕ್ತಪಡಿಸುತ್ತಿದ್ದ ಇವರ ಸ್ವರ ವೈವಿಧ್ಯತೆಗೆ ಯಾರೂ ಸಾಟಿಯಿಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಒಟ್ಟು 17ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 48,000ಕ್ಕೂ ಅಧಿಕ ಹಾಡುಗಳನ್ನು ಹಾಡುವ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಹಾಡುಗಳನ್ನು ಹಾಡಿದ ಗಾಯಕಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಕೇವಲ ದಕ್ಷಿಣ ಭಾರತಕ್ಕೆ ಸೀಮಿತವಾಗದ ಇವರ ಪ್ರತಿಭೆ, ಬಾಲಿವುಡ್‌ನ ಬಪ್ಪಿ ಲಹರಿ ಹಾಗೂ ಕಿಶೋರ್ ಕುಮಾರ್ ಅವರೊಂದಿಗೂ ಕೆಲಸ ಮಾಡುವಂತೆ ಮಾಡಿತು. ನಂತರದ ದಿನಗಳಲ್ಲಿ ಎ.ಆರ್.ರೆಹಮಾನ್ ಅವರ ಸಂಗೀತ ನಿರ್ದೇಶನದಲ್ಲೂ ಜಾನಕಿ ಅವರು ಹಿಟ್ ಗೀತೆಗಳನ್ನು ನೀಡಿದ ಕೀರ್ತಗೆ ಪಾತ್ರರಾಗಿದ್ದಾರೆ.

ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ ಹಾಗೂ 28ಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಜಾನಕಿ ಅವರಿಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೆ ಮೈಸೂರು ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಇನ್ನೂ 2013ರಲ್ಲಿ ಕೇಂದ್ರ ಸರ್ಕಾರ ಘೋಷಿಸಿದ ಪದ್ಮಭೂಷಣ ಪ್ರಶಸ್ತಿಯನ್ನು ನಿರಾಕರಿಸುವ ಮೂಲಕ ಸುದ್ದಿಯಾಗಿದ್ದರು. ಪ್ರಶಸ್ತಿಗಳ ಆಯ್ಕೆಯಲ್ಲಿ ದಕ್ಷಿಣ ಭಾರತದ ಕಲಾವಿದರ ಮೇಲಾಗುವ ತಾರತಮ್ಯವನ್ನು ಖಂಡಿಸಿ ಹಾಗೂ ತಡವಾಗಿ ಬಂದ ಗೌರವ ತಮಗೆ ಬೇಡವೆಂದು ನಿರಾಕರಿಸಿದ ಅವರ ನಡೆ ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಆದರೆ ಅವರ ಈ ಸ್ವಾಭಿಮಾನದ ನಡೆಗೆ ಇಡೀ ಭಾರತೀಯ ಚಿತ್ರರಂಗವೇ ಫಿದಾ ಆಗಿತ್ತು. ಇದೀಗ ಅವರು ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದು, ಚಿತ್ರರಂಗ ಕಂಬನಿ ಮಿಡಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+