Eshwarappa: ಮೋದಿ, ಅಮಿತ್ ಶಾ ಯಾರೇ ಹೇಳಿದರೂ ನಾಮಪತ್ರ ಹಿಂಪಡೆಯುವುದಿಲ್ಲ ಎಂದ ಕೆಎಸ್ ಈಶ್ವರಪ್ಪ
ಶಿವಮೊಗ್ಗ, ಏಪ್ರಿಲ್. 14: ರಾಜ್ಯ ಬಿಜೆಪಿಯ ವಿರುದ್ಧ ಬಂಡಾಯ ಎದ್ದಿರುವ ಕೆ ಎಸ್ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ವಾಪಸ್ ಪಡೆಯುತ್ತಾರೆ ಎಂಬ ವದಂತಿಗಳು ಕೇಳಿಬರುತ್ತಿವೆ. ಇದಕ್ಕೆ ಕೆ ಎಸ್ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ ಎಂದು ಮಾಜಿ ಸಚಿವ, ಬಿಜೆಪಿ ಬಂಡಾಯ ನಾಯಕ ಕೆ ಈಶ್ವರಪ್ಪ ಘಂಟಾಘೋಷವಾಗಿ ಹೇಳಿದ್ದಾರೆ. ಶಿವಮೊಗ್ಗದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಈಶ್ವರಪ್ಪ ನಾಮಪತ್ರ ಸಲ್ಲಿಸಿದ್ದು, ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧವೇ ನನ್ನ ಹೋರಾಟ ಎಂದು ಒತ್ತಿ ಹೇಳಿದ್ದಾರೆ.

ಕೆ ಎಸ್ ಈಶ್ವರಪ್ಪ ಅವರು ನಾಮಪತ್ರ ಹಿಂಪಡೆಯುತ್ತಿರುವ ಬಗ್ಗೆ ಕೆಲವು ಊಹಾಪೋಹಗಳು ಕೇಳಿ ಬಂದ ನಂತರ," ನನ್ನ ಬೆನ್ನಿಗೆ ನಿಂತಿರುವ ಜನರಿಗೆ ನಾನು ಎಂದಿಗೂ ದ್ರೋಹ ಮಾಡುವುದಿಲ್ಲ. ನಾನು ನಾಮಪತ್ರ ಹಿಂಪಡೆದಿರುವ ಬಗ್ಗೆ ಬಂದಿರುವ ವರದಿಗಳು ನಿಜವಲ್ಲ ಮತ್ತು ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಈಗಾಗಲೇ ಶಿವಮೊಗ್ಗ ಜನರಿಂದ ಸಾಕಷ್ಟು ಬೆಂಬಲ ವ್ಯಕ್ತವಾಗುತ್ತಿದೆ" ಎಂದು ತಿಳಿಸಿದ್ದಾರೆ.
ಬಿವೈ ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ
ನಾಮಪತ್ರ ಹಿಂಡೆಯುವ ಬಗ್ಗೆ ಹಬ್ಬಿರುವ ವದಂತಿಗೆ ಬಿವೈ ವಿಜಯೇಂದ್ರ ಕಾರಣ ಎಂದಿರುವ ಈಶ್ವರಪ್ಪ "ರಾಜ್ಯ ಬಿಜೆಪಿಯ ಮಾನ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಅವರೆ, ಅಪಪ್ರಚಾರ ಮಾಡಿ ರಾಷ್ಟ್ರಭಕ್ತರಲ್ಲಿ ಗೊಂದಲ ಮೂಡಿಸುವುದನ್ನು ನಿಲ್ಲಿಸಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅಥವಾ ಬೇರೆ ಯಾರೇ ಹೇಳಿದರೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.
ರಾಜ್ಯ @BJP4Karnataka ಮಾನ್ಯ ಅಧ್ಯಕ್ಷ @BYVijayendra ಅವರೆ, ಅಪಪ್ರಚಾರ ಮಾಡಿ ರಾಷ್ಟ್ರಭಕ್ತರಲ್ಲಿ ಗೊಂದಲ ಮೂಡಿಸುವುದನ್ನು ನಿಲ್ಲಿಸಿ, @narendramodi @AmitShah ಅಥವಾ ಬೇರೆ ಯಾರೇ ಹೇಳಿದರೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ.
— K S Eshwarappa (Modi Ka Parivar) (@ikseshwarappa) April 14, 2024
ಶಿವಮೊಗ್ಗದಲ್ಲಿ ಗೆದ್ದು ಪ್ರಧಾನಿ ನರೇಂದ್ರ ಮೋದಿ ಬಳಿ ಹೋಗುತ್ತೇನೆ ಎಂದು ನಾಮಪತ್ರ ಸಲ್ಲಿಸುವ ವೇಳೆ ಹಿರಿಯ ನಾಯಕ ಈಶ್ವರಪ್ಪ ಹೇಳಿದ್ದರು. ಮಾತುಕತೆಯ ಎಲ್ಲಾ ಕತೆ ಮುಗಿದಿದೆ. ಈಗ ನೇರ ಸ್ಪರ್ಧೆ ನಡೆಯಲಿದೆ. ಎಲ್ಲ ಮುಖಂಡರು, ಕಾರ್ಯಕರ್ತರು ನನ್ನೊಂದಿಗಿದ್ದಾರೆ. ಶಿವಮೊಗ್ಗದ ಜನರೂ ನನ್ನ ಜೊತೆಗಿದ್ದಾರೆ. ನಾನು ಗೆದ್ದರೆ ಪ್ರಧಾನಿ ನರೇಂದ್ರ ಮೋದಿ ಬಳಿ ಹೋಗುತ್ತೇನೆ ಎಂದು ಹೇಳಿದ್ದರು.

ಹಾವೇರಿ ಲೋಕಸಭಾ ಕ್ಷೇತ್ರದಿಂದ ಕೆಎಸ್ ಈಶ್ವರಪ್ಪ ಅವರ ಪುತ್ರ ಕೆಇ ಕಾಂತೇಶ್‌ಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ನಂತರ, ಈಶ್ವರಪ್ಪ ಪಕ್ಷದ ವಿರುದ್ಧ ಬಂಡಾಯವೆದ್ದರು. ಹಾವೇರಿಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪರ್ಧಿಸಲಿದ್ದಾರೆ. ತಮ್ಮ ಮಗನಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗದಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿಯ ಪ್ರಬಲ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಇಬ್ಬರು ಮಕ್ಕಳಾದ ಬಿ ವೈ ರಾಘವೇಂದ್ರ ಮತ್ತು ಬಿ ವೈ ವಿಜಯೇಂದ್ರ ಅವರೇ ಕಾರಣ ಎಂದು ಆರೋಪಿಸಿದ್ದಾರೆ. ಬಿವೈ ರಾಘವೇಂದ್ರ ಶಿವಮೊಗ್ಗದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದು, ಬಿವೈ ವಿಜಯೇಂದ್ರ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮತ್ತು ಶಿಕಾರಿಪುರ ಶಾಸಕರಾಗಿದ್ದಾರೆ.












Click it and Unblock the Notifications