Shivamogga: ಗೀತಾ ಶಿವರಾಜ್‌ಕುಮಾರ್ ನಾಮಪತ್ರ ಸಲ್ಲಿಕೆ ವೇಳೆ ಅವಘಡ, ನಾಲ್ವರಿಗೆ ಗಾಯ
ಶಿವಮೊಗ್ಗ, ಏಪ್ರಿಲ್ 15: ದೊಡ್ಮನೆ ಸೊಸೆ, ಬಂಗಾರಪ್ಪನವರ ಪುತ್ರಿ ಗೀತಾ ಶಿವರಾಜ್‌ಕುಮಾರ್ ಈ ಬಾರಿ ಲೋಕಸಭಾ ಚುನಾವಣೆ ಅಖಾಡದಲ್ಲಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗೀತಾ ಶಿವರಾಜ್‌ಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಲಾಗಿದ್ದು, ಈಗಾಗಲೇ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಶತಾಯಗತಾಯ ಈ ಬಾರಿ ಚುನಾವಣೆಯಲ್ಲಿ ಗೆಲ್ಲುವ ಹಠಕ್ಕೆ ಬಿದ್ದಿರುವ ಅವರು ಇಂದು ಸಾವಿರಾರು ಜನ ಬೆಂಬಲಿಗರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ಗೀತಾ ಶಿವರಾಜ್‌ಕುಮಾರ್ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಅವಘಡ ಸಂಭವಿಸಿದೆ. ಸಾವಿರಾರು ಜನರು ಸೇರಿದದ್ದ ಕಾಂಗ್ರೆಸ್ ಮೆರವಣಿಗೆ ವೇಳೆ ಎಲ್ಇಡಿ ಡಿಸ್ಪ್ಲೇ ಬೋರ್ಡ್ ಕುಸಿದು ಬಿದ್ದಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಶಿವಮೊಗ್ಗ ನಗರದ ಗಾಂಧಿ ಬಜಾರ್‌ನಲ್ಲಿ ಗೀತಾ ಶಿವರಾಜ್‌ಕುಮಾರ್ ನೇತೃತ್ವದ ಕಾಂಗ್ರೆಸ್ ಮೆರವಣಿಗೆ ಸಾಗುತ್ತಿದ್ದ ವೇಳೆ ಬೃಹತ್ ಗಾತ್ರದ ಗಾತ್ರದ ಎಲ್ಇಡಿ ಡಿಸ್ಪ್ಲೇ ಬೋರ್ಡ್ ಏಕಾಏಕಿ ಕುಸಿದು ಬಿದ್ದಿದೆ.
ಘಟನೆಯಲ್ಲಿ ಖಾಸಗಿ ನ್ಯೂಸ್ ಚಾನೆಲ್ ವರದಿಗಾರ, ಮಹಿಳೆ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಈ ಪೈಕಿ ಮೆರವಣಿಗೆಗೆ ಬಂದಿದ್ದ ವ್ಯಕ್ತಿಗೆ ತೀವ್ರವಾಗಿ ಪೆಟ್ಟಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಮೆರವಣಿಗೆಗೆ ಆಗಮಿಸಿದ ವ್ಯಕ್ತಿಗೆ ತೀವ್ರವಾಗಿ ಪೆಟ್ಟು ಬಿದ್ದು ತಲೆಯಿಂದ ರಕ್ತ ಸುರಿಯುತ್ತಿದ್ದರೂ, ಕಣ್ಣೆದುರೇ ಅನಾಹುತ ಸಂಭವಿಸಿದರೂ, ಸ್ಥಳೀಯ ಕಾಂಗ್ರೆಸ್ ಮುಖಂಡರು ಕ್ಯಾರೆ ಎನ್ನದೆ ಮೆರೆವಣಿಗೆಯಲ್ಲಿ ಮುಂದೆ ಸಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಇನ್ನು ಗೀತಾ ಶಿವರಾಜ್ ಕುಮಾರ್ ಇಂದು (ಏಪ್ರಿಲ್ 15) ತಮ್ಮ ಅಪಾರ ಬೆಂಬಲರೊಂದಿಗೆ ಮೆರವಣಿಗೆ ಮೂಲಕ ತೆರಳಿ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆಗಮಿಸಿ ಗೀತಾ ಶಿವರಾಜ್ ಕುಮಾರ್ ಅವರ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು.












Click it and Unblock the Notifications