SIR: ಬೆಂಗಳೂರಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ: ಜಿಬಿಎ ಮುಖ್ಯ ಆಯುಕ್ತರಿಂದ ಮಹತ್ವದ ಮಾಹಿತಿ
SIR: ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆ ವ್ಯಾಪ್ತಿಯಲ್ಲೂ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ನಡೆದಿದೆ. ಇದೀಗ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಜೂನ್ 30ರಿಂದ ಆರಂಭಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ಕಾರ್ಯವು ಜುಲೈ 29ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ನಮ್ಮ ಮತಗಟ್ಟೆ ಮಟ್ಟದ ಅಧಿಕಾರಿಗಳು (BLOs) ಪ್ರತಿ ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು (Enumeration Forms) ವಿತರಿಸುತ್ತಿದ್ದಾರೆ. ಜೊತೆಗೆ, ನಾಗರಿಕರು ಸಮರ್ಪಕವಾಗಿ ಭರ್ತಿ ಮಾಡಿ ಸಹಿ ಮಾಡಿದ ನಮೂನೆಗಳನ್ನು ಸಂಗ್ರಹಿಸುತ್ತಿದ್ದಾರೆ. ಹೆಚ್ಚಿನ ನಾಗರಿಕರನ್ನು ತಲುಪುವ ಉದ್ದೇಶದಿಂದ, ಶನಿವಾರ ಹಾಗೂ ಭಾನುವಾರದ ದಿನಗಳಲ್ಲಿಯೂ ಮನೆ-ಮನೆಗೆ ಭೇಟಿ ನೀಡುವಂತೆ BLO ಗಳಿಗೆ ನಿರ್ದೇಶನ ನೀಡಲಾಗಿದೆ.

ಆದ್ದರಿಂದ, ಎಲ್ಲಾ ನಾಗರಿಕರು ಸರಿಯಾದ ಮಾಹಿತಿಯನ್ನು ನೀಡಿ, ಗಣತಿ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ, ಸಹಿ ಮಾಡಿ ಸಂಬಂಧಿತ BLO ಅವರಿಗೆ ಸಲ್ಲಿಸುವ ಮೂಲಕ ಈ ಮಹತ್ವದ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವಂತೆ ವಿನಂತಿಸಿಕೊಳ್ಳುತ್ತೇನೆ. ಗಣತಿ ನಮೂನೆಗಳನ್ನು ವಿತರಿಸುವ ಹಾಗೂ ಸಂಗ್ರಹಿಸುವ ಅಧಿಕಾರ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ (BLOs) ಮಾತ್ರ ಇದೆ. ಗಣತಿ ನಮೂನೆಗಳನ್ನು ಸಂಗ್ರಹಿಸಲು /ಸ್ವೀಕರಿಸಲು ಬೇರೆ ಯಾವುದೇ ವ್ಯಕ್ತಿಗೆ ಅಧಿಕಾರ ನೀಡಲಾಗಿಲ್ಲ. ನಿಮ್ಮ ಸಹಕಾರವು ನಿಖರ, ಸಮಗ್ರ ಹಾಗೂ ಎಲ್ಲರನ್ನು ಒಳಗೊಂಡ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಅತ್ಯಂತ ಅಗತ್ಯವಾಗಿದೆ ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ತಿಳಿಸಿದ್ದಾರೆ.
ಕಾಯಂ ಪ್ರಮಾಣ ಪತ್ರ: ಸರ್ಕಾರ ಹೇಳಿದ್ದೇನು
ಇನ್ನು ಈವರೆಗೆ ಕೇಂದ್ರ ಸರ್ಕಾರ ಯಾವುದೇ ಪ್ರಮಾಣಪತ್ರಗಳನ್ನು ನೀಡಿಲ್ಲ. ಜಾತಿ ಪ್ರಮಾಣಪತ್ರವನ್ನು ಕೂಡ ರಾಜ್ಯ ಸರ್ಕಾರವೇ ನೀಡಿದೆ. ನಾವು ಆಧಾರ್ ಕಾರ್ಡ್ ಮತ್ತು ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಖಾಯಂ ನಿವಾಸ ಪ್ರಮಾಣಪತ್ರ ನೀಡುತ್ತೇವೆ. ಅದರಲ್ಲಿ ತಪ್ಪೇನಿದೆ ಎಂದು ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ಪ್ರಶ್ನೆ ಮಾಡಿದ್ದಾರೆ. ಎಲ್ಲದರಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ಸುಮಾರು 50 ರಿಂದ 60 ಸಾವಿರ ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣಪತ್ರ ಇಲ್ಲದೆ ಸಿಇಟಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಮಸ್ಯೆಯಾಗಿದೆ. ಈಗ ನಾವು ಖಾಯಂ ಪ್ರಮಾಣ ಪತ್ರದಲ್ಲಿ ಜಾತಿಯನ್ನು ಉಲ್ಲೇಖಿಸಿದರೆ ಪರೀಕ್ಷೆ ಬರೆಯುವ ಮಕ್ಕಳಿಗೆ ಅನುಕೂಲವಾಗುತ್ತದೆ. ಬಿಜೆಪಿಗರು ಎಲ್ಲವನ್ನೂ ರಾಜಕೀಯ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದಿದ್ದಾರೆ.
ಬಾಂಗ್ಲಾದೇಶದವರಿಗೂ ಖಾಯಂ ನಿವೇಶನ ಪತ್ರ ನೀಡಲಾಗುತ್ತಿದೆ ಎಂಬ ಬಿಜೆಪಿ ಆರೋಪ ಸತ್ಯಕ್ಕೆ ದೂರವಾದದ್ದು. ಬಾಂಗ್ಲಾದೇಶದ ಪ್ರಶ್ನೆಯೇ ಇಲ್ಲಿ ಬರುವುದಿಲ್ಲ. ಇದು ರಾಷ್ಟ್ರೀಯ ಸಮಸ್ಯೆ. ರಾಜ್ಯ ಸರ್ಕಾರ ಬಾಂಗ್ಲಾದೇಶವರಿಗೆ ಪೌರತ್ವ ಕೊಡಲು ಆಗುತ್ತದೆಯೇ? ಒಂದು ವೇಳೆ ಬಾಂಗ್ಲಾದೇಶದವರು ನಮ್ಮ ದೇಶದವರನ್ನು ಮದುವೆಯಾದರೆ, ಆಗ ಅದಕ್ಕೊಂದು ನಿಬಂಧನೆಯಿದೆ. ಅದು ಬಿಟ್ಟು ಬಾಂಗ್ಲಾದೇಶದವರಿಗಾಗಲಿ ಅಥವಾ ಬೇರೆ ದೇಶದವರಿಗಾಗಲಿ ಪೌರತ್ವವನ್ನು ರಾಜ್ಯ ಸರ್ಕಾರ ಕೊಡಲು ಆಗುವುದಿಲ್ಲ ಎಂದು ಈ ವೇಳೆ ಸ್ವಷ್ಟಪಡಿಸಿದರು.
ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿರುವಾಗಲೇ ಜಿಬಿಎ ಚುನಾವಣೆ ಮಾಡಬಹುದು. ಆದರೆ ಚುನಾವಣಾ ಆಯೋಗ ಅದಕ್ಕೆ ಅನುಮತಿ ನೀಡುವುದಿಲ್ಲ. ವಿಶೇಷ ಅನುಮತಿ ನೀಡಿದರೆ ನಾವು ಚುನಾವಣೆಯನ್ನು ಮಾಡಲು ಸಿದ್ಧರಿದ್ದೇವೆ ಎಂದೂ ಹೇಳಿದ್ದಾರೆ.













Click it and Unblock the Notifications