ಸಲುಗೆಯಿಂದ ಹಾಗೆ ಮಾತನಾಡಿರಬಹುದು; ಸಚಿವರ ಸಮರ್ಥಿಸಿಕೊಂಡ ಸಂಸದ ಮುನಿಸ್ವಾಮಿ
ಕೋಲಾರ, ಮೇ 21: ಕೋಲಾರದಲ್ಲಿ ಮನವಿ ನೀಡಲು ಬಂದ ರೈತ ಮಹಿಳೆಗೆ ಅಸಭ್ಯ ಶಬ್ದದಿಂದ ನಿಂದಿಸಿದ ಕಾನೂನು ಸಚಿವ ಮಾಧುಸ್ವಾಮಿ ನಡೆಯನ್ನು ಖಂಡಿಸಿ, ರಾಜೀನಾಮೆಗೆ ಒತ್ತಾಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಕುರಿತು ಸಂಸದ ಮುನಿಸ್ವಾಮಿ ಕಿಡಿಕಾರಿದ್ದಾರೆ.
"ಕಾಂಗ್ರೆಸ್ ನವರ ವಿರುದ್ಧ ನಾವು ಪ್ರತಿಭಟನೆ ಮಾಡಿದಾಗ ಎಷ್ಟು ಜನ ರಾಜೀನಾಮೆ ಕೊಟ್ಟಿದ್ದಾರೆ? ನಮ್ಮ ಹೆಣ್ಣು ಮಗಳು ಅನ್ನೋ ಸಲುಗೆಯಿಂದ ಮಾಧುಸ್ವಾಮಿ ಹಾಗೆ ಮಾತನಾಡಿರಬಹುದು. ನ್ಯಾಯವಾಗಿ ಮಾತನಾಡಮ್ಮ ಅಂತ ನಾವು ಆ ಹೆಣ್ಣು ಮಗಳಿಗೆ ಹೇಳಿದ್ವಿ" ಎಂದು ಕಿಡಿಕಾರಿದ್ದಾರೆ.
ಕೋಲಾರದಲ್ಲಿ ರೈತ ಮಹಿಳೆಗೆ ಅವಾಜ್ ಹಾಕಿದ ಸಚಿವ ಮಾಧುಸ್ವಾಮಿ
"ಸಮಸ್ಯೆ ಸರಿ ಮಾಡುತ್ತೇವೆ ಎಂದು ಹೇಳುತ್ತಿದ್ದರೂ ಕೇಳದೇ, ಸಚಿವರಿಗೆ ಕೋಪ ಬರುವ ಹಾಗೆ ಆಕೆ ಮಾತನಾಡಿದ್ದಾರೆ. ನನಗೆ ಹೇಳಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು. ಆದರೆಇದುವರೆಗೂ ಒತ್ತುವರಿ ಸಮಸ್ಯೆ ಕುರಿತು ನನ್ನ ಗಮನಕ್ಕೆ ತಂದಿಲ್ಲ. ಕೇವಲ ಪ್ರಚಾರಕ್ಕಾಗಿ ಏನೋ ಮಾಡೋದಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ಸಮಸ್ಯೆ ಕೇಳಿದ್ದಾರಲ್ಲ, ಅವರು ಸತ್ಯ ಹರಿಶ್ಚಂದ್ರರಾಗಿದ್ರೆ ಇವೆಲ್ಲಾ ಮಾಡಲಿ ಎಂದು ಹೇಳಿ, ಸಚಿವ ಮಾಧುಸ್ವಾಮಿ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.