Chardham Yatra Guidelines 2024: ಚಾರ್‌ಧಾಮ್ ಯಾತ್ರೆಗೆ ಹೋಗುವಾಗ ಈ ವಸ್ತುಗಳನ್ನು ಬ್ಯಾಗ್ ಅಲ್ಲಿ ಇಟ್ಟುಕೊಳ್ಳಿ....
ಉತ್ತರಖಂಡದ ಚಾರ್‌ಧಾಮ್ ಯಾತ್ರೆ ಮೇ 10ರಿಂದ ಪ್ರಾರಂಭವಾಗುತ್ತಿದೆ. ಚಾರ್‌ಧಾಮ್‌ಗೆ ಭೇಟಿ ನೀಡುವ ಯಾತ್ರಾರ್ಥಿಗಳ ನೋಂದಣಿ ಪ್ರಕ್ರಿಯೆ ಕೂಡ ಮುಂದುವರೆದಿದೆ. ಚಾರ್‌ಧಾಮ್ ಯಾತ್ರೆಗೆ ಹೋಗುವ ಭಕ್ತರು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬೇಕು. ಹೀಗೆ ನೋಂದಣಿ ಮಾಡಿಕೊಳ್ಳುವ ಭಕ್ತರಿಗೆ ಕೆಲ ಪ್ರಮುಖ ಸಲಹೆಗಳನ್ನು ನೀಡಲಾಗಿದೆ. ಚಾರ್‌ಧಾಮ್ ಯಾತ್ರೆಗೆ ತೆರಳುವ ಭಕ್ತರು ಯಾವೆಲ್ಲಾ ನಿಯಮ ಪಾಲಿಸಬೇಕು ಎಂದು ತಿಳಿಯೋಣ.
ಮೇ 10ರಂದು ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿಯ ದೇವಸ್ಥಾನಗಳ ಬಾಗಿಲುಗಳು ತೆರೆಯಲಿವೆ. ಜೊತೆಗೆ ಮೇ 12ರಂದು ಬದರಿನಾಥ ಧಾಮದ ಬಾಗಿಲು ತೆರೆಯಲಾಗುತ್ತದೆ. ಈ ಬಾರಿ ಚಾರ್‌ಧಾಮ್‌ಗೆ ಭೇಟಿ ನೀಡುವವರ ಸಂಖ್ಯೆ ದಾಖಲೆ ಮಟ್ಟ ತಲುಪಲಿದೆ ಎಂದು ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆ ಮತ್ತು ಸರ್ಕಾರ ಭವಿಷ್ಯ ನುಡಿದಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ 56 ಲಕ್ಷಕ್ಕೂ ಹೆಚ್ಚು ಭಕ್ತರು ಚಾರ್ಧಾಮ್ ಯಾತ್ರೆಗೆ ಭೇಟಿ ನೀಡಿದ್ದರು. ಈಗ ಚಾರ್‌ಧಾಮ್‌ಗೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆ ಇದಕ್ಕೂ ಹೆಚ್ಚಾಗುವ ನಿರೀಕ್ಷೆ ಇದೆ.
ಹೀಗಾಗಿ ಯಾತ್ರಾರ್ಥಿಗಳಿಗೆ ಮಾರ್ಗಸೂಚಿಗಳನ್ನು ನೀಡಲಾಗಿದೆ. ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ ಒಂಬತ್ತು ಭಾಷೆಗಳಲ್ಲಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಚಾರ್‌ಧಾಮ್‌ಗೆ ಭೇಟಿ ನೀಡಲು ತೆರಳುವ ಭಕ್ತರು ಸಂಪೂರ್ಣ ಸಿದ್ಧತೆಯೊಂದಿಗೆ ಬರುವಂತೆ ಆರೋಗ್ಯ ಇಲಾಖೆಯಿಂದ ಈ ಮಾರ್ಗಸೂಚಿ ನೀಡಲಾಗಿದೆ. ಹಾಗಾದರೆ ಯಾತ್ರಾರ್ಥಿಗಳಿರುವ ಮಾರ್ಗಸೂಚಿಗಳು ಯಾವವು?
ಯಾತ್ರಾರ್ಥಿಗಳು ಪ್ರತಿ 2 ಗಂಟೆಗಳ ನಂತರ 10 ನಿಮಿಷಗಳ ವಿಶ್ರಾಂತಿ..
*ಕೇದಾರನಾಥ ಮತ್ತು ಯಮುನೋತ್ರಿ ಧಾಮವನ್ನು ಕಾಲ್ನಡಿಗೆಯಲ್ಲಿ ಹತ್ತುವಾಗ ಪ್ರತಿ ಒಂದರಿಂದ ಎರಡು ಗಂಟೆಗಳ ನಂತರ 5 ರಿಂದ 10 ನಿಮಿಷಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ಮಾರ್ಗಸೂಚಿಯಲ್ಲಿ ಭಕ್ತರಿಗೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.

*ಜೊತೆಗೆ ಚಾರ್‌ಧಾಮ್‌ಗೆ ಭೇಟಿ ನೀಡುವ ಯಾತ್ರಾರ್ಥಿಗಳು ತಮ್ಮೊಂದಿಗೆ ಬೆಚ್ಚಗಿನ ಬಟ್ಟೆಗಳನ್ನು ಇಟ್ಟುಕೊಳ್ಳಬೇಕು ಮತ್ತು ಮಳೆಯಿಂದ ರಕ್ಷಿಸಲು ರೈನ್‌ಕೋಟ್ ಮತ್ತು ಛತ್ರಿಯನ್ನು ತರಬೇಕು.
*ಇದರೊಂದಿಗೆ ಯಾತ್ರಾರ್ಥಿಗಳು ತಮ್ಮ ಆರೋಗ್ಯವನ್ನು ಪರೀಕ್ಷಿಸಲು ಪಲ್ಸ್ ಆಕ್ಸಿಮೀಟರ್ ಮತ್ತು ಥರ್ಮಾಮೀಟರ್ ಅನ್ನು ತಮ್ಮೊಂದಿಗೆ ಇರಿಸಿಕೊಳ್ಳಲು ಸೂಚಿಸಲಾಗಿದೆ.
*ಹೃದ್ರೋಗ, ಅಧಿಕ ರಕ್ತದೊತ್ತಡ, ಅಸ್ತಮಾ, ಮಧುಮೇಹದಿಂದ ಬಳಲುತ್ತಿರುವ ಭಕ್ತರು ಅಗತ್ಯ ಔಷಧಗಳನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು ಹಾಗೂ ವೈದ್ಯರ ಸಂಖ್ಯೆಯನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು.
*ಯಾತ್ರೆಯ ಸಮಯದಲ್ಲಿ ಯಾವುದೇ ಯಾತ್ರಿಕರಿಗೆ ಎದೆನೋವು, ಉಸಿರಾಟದ ತೊಂದರೆ, ತಲೆತಿರುಗುವಿಕೆ ಮತ್ತು ವಾಂತಿ ಕಾಣಿಸಿಕೊಂಡರೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ವೈದ್ಯಕೀಯ ಕೇಂದ್ರಗಳಿಗೆ ಸಂಪರ್ಕಿಸಿ.
*ಆರೋಗ್ಯ ಇಲಾಖೆಯು ಮಾರ್ಗಸೂಚಿಯಲ್ಲಿ ಪ್ರಯಾಣಿಕರಿಗೆ ಕನಿಷ್ಠ ಏಳು ದಿನಗಳ ಕಾಲ ಚಾರ್‌ಧಾಮ್ ಯಾತ್ರೆಯನ್ನು ಯೋಜಿಸಲು ಕೇಳಿದೆ. ಯಾತ್ರಾರ್ಥಿಗಳ ಆರೋಗ್ಯ ಸೌಲಭ್ಯಗಳಿಗಾಗಿ ಯಾತ್ರೆಯ ಮಾರ್ಗದಲ್ಲಿ 50 ಸ್ಕ್ರೀನಿಂಗ್ ಪಾಯಿಂಟ್‌ಗಳನ್ನು ಮಾಡಲಾಗಿದೆ. ವೈದ್ಯಕೀಯ ಪರಿಹಾರ ಕೇಂದ್ರದಲ್ಲಿ ಔಷಧಿಗಳ ದಾಸ್ತಾನು, ಆಮ್ಲಜನಕ ಸಿಲಿಂಡರ್‌ಗಳು ಮತ್ತು ಇತರ ಅಗತ್ಯ ಉಪಕರಣಗಳು ಲಭ್ಯವಿರುತ್ತವೆ.












Click it and Unblock the Notifications